ಕಾಂಗ್ರೆಸ್‌ ಅಭ್ಯರ್ಥಿ ಹೀನಾಯ ಸೋಲಿನ ಹೊಣೆ ಯಾರಿಗೆ?

KannadaprabhaNewsNetwork | Published : Jun 6, 2024 12:31 AM

ಸಾರಾಂಶ

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಎಲ್ಲ 8 ವಿಧಾನಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಲೀಡ್ ಪಡೆದಿದೆ. ಕಾಂಗ್ರೆಸ್ ಶಾಸಕರಿರುವ 5 ವಿಧಾನಸಭಾ ಕ್ಷೇತ್ರಗಳಲ್ಲೂ ಮತ ಗಳಿಕೆಯಲ್ಲಿ ಬಿಜೆಪಿಯದ್ದೆ ನಾಗಾಲೋಟ.

ವಸಂತಕುಮಾರ ಕತಗಾಲ

ಕಾರವಾರ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ ವಿರುದ್ಧ ಕಾಂಗ್ರೆಸ್‌ನ ಅಂಜಲಿ ನಿಂಬಾಳ್ಕರ್ ಭಾರೀ ಮತಗಳ ಅಂತರದಿಂದ ಸೋತಿದ್ದಾರೆ. ಆದರೆ ಈ ಸೋಲಿನ ಹೊಣೆ ಹೊರಲು ಕಾಂಗ್ರೆಸ್‌ನಲ್ಲಿ ಯಾರೂ ಸಿದ್ಧರಿಲ್ಲ. ಈಗ ಡಾ. ಅಂಜಲಿ ತಮ್ಮ ಸೋಲಿನ ಹೊಣೆಯನ್ನು ತಾವೇ ಹೊತ್ತುಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಎಲ್ಲ 8 ವಿಧಾನಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಲೀಡ್ ಪಡೆದಿದೆ. ಕಾಂಗ್ರೆಸ್ ಶಾಸಕರಿರುವ 5 ವಿಧಾನಸಭಾ ಕ್ಷೇತ್ರಗಳಲ್ಲೂ ಮತ ಗಳಿಕೆಯಲ್ಲಿ ಬಿಜೆಪಿಯದ್ದೆ ನಾಗಾಲೋಟ. ಯಲ್ಲಾಪುರ ಕ್ಷೇತ್ರದ ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ ಕಾಂಗ್ರೆಸ್‌ನತ್ತ ಮುಖ ಮಾಡಿದ್ದರೂ ಅಲ್ಲೂ ಬಿಜೆಪಿ ಲೀಡ್ ಗಳಿಸಿದೆ. ದೇಶಪಾಂಡೆ ಮಾತ್ರ ಪ್ರತಿಕ್ರಿಯೆ:

ಬಿಜೆಪಿ ಶಾಸಕರಿರುವ ಖಾನಾಪುರ ಹಾಗೂ ಕುಮಟಾದಲ್ಲಿ ಸಹಜವಾಗಿಯೇ ಕಾಗೇರಿ ಮುನ್ನಡೆ ಗಳಿಸಿದ್ದಾರೆ. ಕಾಂಗ್ರೆಸ್‌ನ ಹಿರಿಯ ನಾಯಕ ಆರ್.ವಿ. ದೇಶಪಾಂಡೆ ಮಾತ್ರ ಸೋಲಿನ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಆದರೆ ಉಳಿದ ಯಾವ ಶಾಸಕರಾಗಲಿ, ಮುಖಂಡರಾಗಲಿ ಪ್ರತಿಕ್ರಿಯಿಸುವ ಗೋಜಿಗೂ ಹೋಗಿಲ್ಲ.

ಸೈಲ್‌ ಕ್ಷೇತ್ರದಲ್ಲೆ ಹೆಚ್ಚು ಲೀಡ್‌: ಸತೀಶ ಸೈಲ್ ಶಾಸಕರಾಗಿರುವ ಕಾರವಾರ ಕ್ಷೇತ್ರದಲ್ಲಿ ಕಾಗೇರಿ ಅವರಿಗೆ ಅತಿ ಹೆಚ್ಚು ಲೀಡ್ ಅಂದರೆ 65428 ಮತಗಳು ಬಂದಿವೆ. ವರ್ಷದ ಹಿಂದಷ್ಟೇ ಗೆದ್ದು ಬಂದಿದ್ದ ಸತೀಶ ಸೈಲ್‌ಗೆ ಇದನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ಹೀಗಾಗಿ ಸೋಲಿನ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಹೊಣೆ ಹೊರಲು ಸಿದ್ಧರಿಲ್ಲ: ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಪ್ರತಿನಿಧಿಸುವ ಭಟ್ಕಳ ಕ್ಷೇತ್ರದಲ್ಲಿ 32403 ಮತಗಳ ಮುನ್ನಡೆ ಕಾಗೇರಿ ಅವರಿಗೆ ಲಭಿಸಿದೆ. ಭಾರಿ ಮತಗಳ ಅಂತರದಿಂದ ಗೆದ್ದಿದ್ದ ಮಂಕಾಳು ವೈದ್ಯ ತಮ್ಮ ಪಕ್ಷದ ಲೋಕಸಭಾ ಅಭ್ಯರ್ಥಿಯ ಸೋಲಿನ ಹೊಣೆ ಹೊರಲು ಸಿದ್ಧರಿಲ್ಲ.

ಭೀಮಣ್ಣ ನಾಯ್ಕ ಪ್ರತಿನಿಧಿಸುವ ಶಿರಸಿ ಕ್ಷೇತ್ರದಲ್ಲಿ 39928 ಮತಗಳ ಮುನ್ನಡೆ ಕಾಗೇರಿ ಅವರಿಗೆ ದೊರಕಿದೆ. ಭೀಮಣ್ಣ ನಾಯ್ಕ ಸಹ ಈ ಮುನ್ನಡೆ ಬಗ್ಗೆ ಯಾವುದೇ ಮಾತುಗಳನ್ನಾಡಿಲ್ಲ. ಪ್ರಚಾರ ಕಾರ್ಯದಲ್ಲಿ ಅಂಜಲಿ ನಿಂಬಾಳ್ಕರ್ ಅವರೊಂದಿಗೆ ಮುಂಚೂಣಿಯಲ್ಲಿದ್ದ ಆರ್.ವಿ. ದೇಶಪಾಂಡೆ ಪ್ರತಿನಿಧಿಸುವ ಹಳಿಯಾಳ ಕ್ಷೇತ್ರದಲ್ಲೂ ಕಾಗೇರಿ 28880 ಮತಗಳ ಮುನ್ನಡೆ ಸಾಧಿಸಿದ್ದಾರೆ.

ಮತ ಎಣಿಕೆ ಕೇಂದ್ರಕ್ಕೆ ಬರಲೇ ಇಲ್ಲ: ಎಲ್ಲ 8 ವಿಧಾನಸಭಾ ಕ್ಷೇತ್ರಗಳಲ್ಲೂ ಕಾಗೇರಿ ಭರ್ಜರಿಯಾಗಿಯೇ ಮತಗಳ ಬೇಟೆಯಾಡಿದ್ದಾರೆ. ಚುನಾವಣಾ ಪ್ರಚಾರದಲ್ಲಿ ಅಂಜಲಿ ನಿಂಬಾಳ್ಕರ ಜತೆ ಕಾಣಿಸಿಕೊಂಡ ಕಾಂಗ್ರೆಸ್‌ನ ಯಾವ ಮುಖಂಡರೂ ಮತ ಎಣಿಕೆ ಕೇಂದ್ರದಲ್ಲಿ ಕಾಣಿಸಲೇ ಇಲ್ಲ. ಪಕ್ಷದ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಸಹ ಬರಲಿಲ್ಲ. ಅಂದರೆ ಫಲಿತಾಂಶಕ್ಕೆ ಮುನ್ನವೇ ಕಾಂಗ್ರೆಸ್ ಸೋಲನ್ನು ಒಪ್ಪಿಕೊಂಡಂತೆ ಇತ್ತು.

ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಹಿನ್ನಡೆ ಅನುಭವಿಸಿರುವುದರಿಂದ ಯಾರೊಬ್ಬರತ್ತ ಬೊಟ್ಟು ಮಾಡಲು ಸಾಧ್ಯವಾಗುತ್ತಿಲ್ಲ. ಕಾಂಗ್ರೆಸ್ ಶಾಸಕರು ಇದೇ ಧೈರ್ಯದಲ್ಲಿರುವಂತೆ ಕಂಡುಬರುತ್ತಿದೆ.

ಈಗ ಅಂಜಲಿ ಭಾರಿ ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದಾರೆ. ಆದರೆ ಇಂತಹ ಹೀನಾಯ ಸೋಲು ಯಾಕಾಯಿತು. ಇದರ ಹೊಣೆಯನ್ನು ಹೊರಬೇಕಾದವರು ಯಾರು ಎನ್ನುವ ಪ್ರಶ್ನೆಗಳಿಗೆಲ್ಲ ಇನ್ನೂ ಉತ್ತರವನ್ನು ಕಂಡುಕೊಳ್ಳಬೇಕಾಗಿದೆ.

ಸೋಲಿನಿಂದ ನಿರಾಶೆ: ಎಲ್ಲ ಕ್ಷೇತ್ರಗಳಲ್ಲೂ ಬಿಜೆಪಿಗೆ ಲೀಡ್ ದೊರಕಿರುವುದು ಅಚ್ಚರಿಗೆ ಕಾರಣವಾಗಿದೆ. ಸೋಲಿನಿಂದ ನಿರಾಶರಾಗಿದ್ದೇವೆ. ಮುಂದಿನ ದಿನಗಳಲ್ಲಿ ಸಂಘಟನೆಯನ್ನು ಇನ್ನಷ್ಟು ಬಲಪಡಿಸುತ್ತೇವೆ ಎಂದು ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಸಾಯಿ ಗಾಂವಕರ ತಿಳಿಸಿದರು.

Share this article