ಗಣಿಜಿಲ್ಲೆ ಬಳ್ಳಾರಿಯ ಕೈ ಪಕ್ಷದ ನೂತನ ಸಾರಥಿ ಯಾರು?

KannadaprabhaNewsNetwork |  
Published : Aug 25, 2026, 02:30 AM IST
ಪಿ.ಗಾದೆಪ್ಪ, ಅಲ್ಲಂ ಪ್ರಶಾಂತ್, ವೆಂಕಟೇಶ್ ಹೆಗಡೆ, ಆಂಜಿನೇಯಲು......ಇದೇ ರೀತಿಯೇ ಫೋಟೋಗಳನ್ನು ತೆಗೆದುಕೊಳ್ಳಿ.  | Kannada Prabha

ಸಾರಾಂಶ

ಜಿಲ್ಲಾ ಕಾಂಗ್ರೆಸ್ ನೂತನ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಗಣಿಜಿಲ್ಲೆಯ ಕೈ ಪಕ್ಷದ ಸಾರಥಿ ಯಾರು ಎಂಬುದು ಶೀಘ್ರವೇ ಘೋಷಣೆಯಾಗುವ ಸಾಧ್ಯತೆಯಿದೆ.

ಮಂಜುನಾಥ ಕೆ.ಎಂ.

ಬಳ್ಳಾರಿ: ಜಿಲ್ಲಾ ಕಾಂಗ್ರೆಸ್ ನೂತನ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಗಣಿಜಿಲ್ಲೆಯ ಕೈ ಪಕ್ಷದ ಸಾರಥಿ ಯಾರು ಎಂಬುದು ಶೀಘ್ರವೇ ಘೋಷಣೆಯಾಗುವ ಸಾಧ್ಯತೆಯಿದೆ. ಜಿಲ್ಲಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳ ಪಟ್ಟಿಯಲ್ಲಿ 15ಕ್ಕೂ ಹೆಚ್ಚು ಮಂದಿ ಹೆಸರು ಕಾಣಿಸಿಕೊಂಡಿದ್ದು, ಪಕ್ಷವನ್ನು ಮುನ್ನಡೆಸುವ ಅವಕಾಶ ಯಾರಿಗೆ ಸಿಗಲಿದೆ ಎಂಬ ಕುತೂಹಲವಿದೆ.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯ ಭಾಗವಾಗಿ ಸುಮಾರು 15 ದಿನಗಳ ಹಿಂದೆ ಬಳ್ಳಾರಿಗೆ ಆಗಮಿಸಿದ್ದ ಎಐಸಿಸಿ ವೀಕ್ಷಕರು ಮೂರು ದಿನಗಳ ಕಾಲ ನಗರದಲ್ಲಿಯೇ ವಾಸ್ತವ್ಯ ಹೂಡಿ ಪಕ್ಷದ ಮುಖಂಡರು, ವಿವಿಧ ಬ್ಲಾಕ್‌ಗಳ ಪದಾಧಿಕಾರಿಗಳು ಹಾಗೂ ಜಿಲ್ಲಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳೊಂದಿಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಿ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಈ ಅಭಿಪ್ರಾಯ ಸಂಗ್ರಹದ ಬಳಿಕ ಆಗಸ್ಟ್‌ 18ರಂದು ದೆಹಲಿಯಲ್ಲಿ ಸಭೆ ನಡೆದಿದ್ದು, ಎಐಸಿಸಿ ಮಟ್ಟದಲ್ಲಿ ಅಂತಿಮ ಅನುಮೋದನೆ ದೊರೆತ ಬಳಿಕ ಹೊಸ ಅಧ್ಯಕ್ಷರು ಯಾರೆಂಬುದು ಸ್ಪಷ್ಟವಾಗಲಿದೆ ಎಂದು ಪಕ್ಷದ ಉನ್ನತ ಮೂಲಗಳು ಕನ್ನಡಪ್ರಭಕ್ಕೆ ತಿಳಿಸಿವೆ.

ಮೀಸಲು ನೀತಿಗೆ ಒತ್ತು

ಈ ಬಾರಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಈ ಹಿಂದಿನಂತಿಲ್ಲ ಎಂಬುದು ವಿಶೇಷ. ಎಲ್ಲ ಜಿಲ್ಲೆಗಳಲ್ಲಿಯೂ ಜಿಲ್ಲಾಧ್ಯಕ್ಷರ ನೇಮಕದಲ್ಲಿ ಸಾಮಾಜಿಕ ಪ್ರಾತಿನಿಧ್ಯಕ್ಕೆ ಒತ್ತು ನೀಡುವ ಉದ್ದೇಶದಿಂದ ಮೀಸಲು ನೀತಿ ಅನುಸರಿಸಲಾಗುತ್ತಿದೆ. ಸಾಮಾನ್ಯ ವರ್ಗ, ಪರಿಶಿಷ್ಟ ಜಾತಿ, ಇತರೆ ಹಿಂದುಳಿದ ವರ್ಗ, ಅಲ್ಪಸಂಖ್ಯಾತ ಹಾಗೂ ಮಹಿಳಾ ಕೋಟಾದಂತಹ ಸಾಮಾಜಿಕ ಸಮೀಕರಣಗಳನ್ನು ಪರಿಗಣಿಸಲಾಗುತ್ತಿದೆ. ಹೀಗಾಗಿ, ಜಿಲ್ಲೆಯಲ್ಲಿ ಯಾರನ್ನು ಆಯ್ಕೆ ಮಾಡಿದರೆ ಪಕ್ಷದ ಸಂಘಟನೆಗೆ ಹೆಚ್ಚಿನ ಬಲ ದೊರೆಯಲಿದೆ ಎಂಬ ಲೆಕ್ಕಾಚಾರವೂ ನಡೆಯುತ್ತಿದೆ. ಮುಂಬರುವ ಜಿಪಂ ಹಾಗೂ ತಾಪಂ ಚುನಾವಣೆ ಗಮನದಲ್ಲಿಟ್ಟುಕೊಂಡು ಗ್ರಾಮೀಣ ಪ್ರದೇಶದಲ್ಲಿ ಪಕ್ಷದ ಸಂಘಟನೆಯನ್ನು ಬಲಪಡಿಸುವ ಸಾಮರ್ಥ್ಯ ಹೊಂದಿರುವ ಮುಖಂಡರಿಗೆ ಆದ್ಯತೆ ದೊರೆಯುವ ಸಾಧ್ಯತೆಯಿದೆ.ಆಕಾಂಕ್ಷಿಗಳ ಪಟ್ಟಿ ದೊಡ್ಡದು ಹಾಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿರುವ ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ ಅವರ ಪುತ್ರ ಅಲ್ಲಂ ಪ್ರಶಾಂತ್ ಮತ್ತೊಂದು ಅವಧಿಗೆ ಮುಂದುವರಿಯುವ ಆಸಕ್ತಿ ವ್ಯಕ್ತಪಡಿಸಿ ಅರ್ಜಿ ಸಲ್ಲಿಸಿದ್ದಾರೆ. ಇವರ ಜೊತೆಗೆ ಬಳ್ಳಾರಿ ಮಹಾನಗರ ಪಾಲಿಕೆ ಮೇಯರ್ ಪಿ. ಗಾದೆಪ್ಪ, ಕೆಪಿಸಿಸಿ ಪ್ರಚಾರ ಸಮಿತಿಯ ರಾಜ್ಯ ಮುಖ್ಯ ಸಂಯೋಜಕ ವೆಂಕಟೇಶ ಹೆಗಡೆ, ಬುಡಾ ಮಾಜಿ ಅಧ್ಯಕ್ಷ ಹುಮಾಯೂನ್ ಖಾನ್, ಎಪಿಎಂಸಿ ಮಾಜಿ ಅಧ್ಯಕ್ಷ ನಾಗರಾಜ್, ಬುಡಾ ಅಧ್ಯಕ್ಷ ಜೆ.ಎಸ್. ಆಂಜಿನೇಯಲು, ಬೋಯಪಾಟಿ ವಿಷ್ಣು, ಶ್ರೀನಿವಾಸ್ ಹಾಗೂ ಪಕ್ಷದ ಮಹಿಳಾ ಘಟಕದ ಅಧ್ಯಕ್ಷೆ ಎಂ.ಎಸ್. ಮಂಜುಳಾ ಸೇರಿದಂತೆ 15ಕ್ಕೂ ಹೆಚ್ಚು ಮಂದಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.

ಪ್ರಮುಖ ಮುಖಂಡರು ಅಧ್ಯಕ್ಷ ಸ್ಥಾನಕ್ಕೆ ಆಸಕ್ತಿ ತೋರಿರುವ ಹಿನ್ನೆಲೆಯಲ್ಲಿ ಆಯ್ಕೆ ಪ್ರಕ್ರಿಯೆ ಪಕ್ಷದ ಹೈಕಮಾಂಡ್‌ಗೆ ಸವಾಲಿನದ್ದಾಗಿದೆ. ಪ್ರಸ್ತುತ ಪಕ್ಷದಲ್ಲಿರುವ ಬಣಗಳು, ಮುಖಂಡರ ನಡುವಿನ ಸಮನ್ವಯ, ಕಾರ್ಯಕರ್ತರೊಂದಿಗೆ ಸಂಪರ್ಕ ಹಾಗೂ ಸಂಘಟನಾ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವ ವಿಚಾರಗಳು ಕೂಡ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸುವ ಸಾಧ್ಯತೆಯಿದೆ.

ಚುನಾವಣೆ ಲೆಕ್ಕಾಚಾರ

ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಕಾಂಗ್ರೆಸ್ ಪಾಲಿಗೆ ಮಹತ್ವದ್ದಾಗಿರುವುದರಿಂದ, ಜಿಲ್ಲಾಧ್ಯಕ್ಷರ ಆಯ್ಕೆಯಲ್ಲಿಯೂ ಚುನಾವಣಾ ಗೆಲುವಿನ ಲೆಕ್ಕಾಚಾರಕ್ಕೆ ಆದ್ಯತೆ ನೀಡಲಾಗುತ್ತಿದೆ. ಬಳ್ಳಾರಿ ನಗರ ಮಾತ್ರವಲ್ಲದೆ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಪಕ್ಷದ ಸಂಘಟನೆಗೆ ಚುರುಕು ನೀಡುವ ಸಾಮರ್ಥ್ಯ ಹೊಂದಿರುವವರನ್ನು ಆಯ್ಕೆ ಮಾಡಬೇಕು ಎಂಬ ಅಭಿಪ್ರಾಯ ಪಕ್ಷದೊಳಗಿದೆ.

ಜಿಲ್ಲಾಧ್ಯಕ್ಷರ ನೇಮಕದ ಬಳಿಕ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು ಸೇರಿದಂತೆ ವಿವಿಧ ಪದಾಧಿಕಾರಿಗಳ ನೇಮಕವೂ ನಡೆಯಲಿದೆ. ಹೀಗಾಗಿ ಜಿಲ್ಲಾಧ್ಯಕ್ಷರ ಆಯ್ಕೆ ಮುಂದಿನ ಹಂತದ ಸಂಘಟನಾತ್ಮಕ ನೇಮಕಾತಿಗಳಿಗೂ ದಿಕ್ಕು ತೋರಿಸಲಿದೆ.

ಈ ನಡುವೆ ಆಕಾಂಕ್ಷಿಗಳು ತಮ್ಮ ತಮ್ಮ ಮಟ್ಟದಲ್ಲಿ ಪಕ್ಷದ ಪ್ರಮುಖ ಮುಖಂಡರ ಬೆಂಬಲ ಪಡೆಯಲು ಪ್ರಯತ್ನ ನಡೆಸುತ್ತಿದ್ದಾರೆ. ಅಂತಿಮವಾಗಿ ಸಾಮಾಜಿಕ ಸಮೀಕರಣ, ಸಂಘಟನಾ ಸಾಮರ್ಥ್ಯ ಹಾಗೂ ಚುನಾವಣಾ ದೃಷ್ಟಿಕೋನವನ್ನು ಪರಿಗಣಿಸಿ ಹೈಕಮಾಂಡ್ ಯಾರಿಗೆ ಮಣೆ ಹಾಕಲಿದೆ ಎಂಬುದೇ ಈಗ ಕುತೂಹಲದ ಪ್ರಶ್ನೆಯಾಗಿದೆ.

ಪಕ್ಷದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನಾನೂ ಅರ್ಜಿ ಸಲ್ಲಿಸಿದ್ದೇನೆ. ಹೈಕಮಾಂಡ್ ತೀರ್ಮಾನದಂತೆ ಎಲ್ಲವೂ ನಡೆಯಲಿದೆ. ಶೀಘ್ರದಲ್ಲಿಯೇ ಜಿಲ್ಲಾಧ್ಯಕ್ಷರು ಯಾರು ಎಂಬುದು ಘೋಷಣೆಯಾಗುವ ಸಾಧ್ಯತೆಯಿದೆ ಎಂದು ಬಳ್ಳಾರಿ ಮಹಾನಗರ ಪಾಲಿಕೆ ಮೇಯರ ಪಿ. ಗಾದೆಪ್ಪ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೆಟ್ರಿಕ್ ನಂತರದ ಬಾಲಕಿಯರ ಹಾಸ್ಟೆಲ್‌ ಪ್ರಾರಂಭಿಸಲು ಆಗ್ರಹಿಸಿ ಪ್ರತಿಭಟನೆ
ಹಗಲು ೭ ತಾಸು ತ್ರಿಫೇಸ್ ವಿದ್ಯುತ್‌ಗೆ ಆಗ್ರಹಿಸಿ ಪ್ರತಿಭಟನೆ