ಮುಳಗುಂದ: ಕಳೆದೊಂದು ತಿಂಗಳಿಂದ ಸುರಿಯುತ್ತಿರುವ ಮಳೆ ರೈತರಿಗೆ ಸಂಕಷ್ಟ ನೀಡಿದೆ, ಬಡ ಬೀದಿ ಬದಿ ವ್ಯಾಪಾರಸ್ಥರಿಗೂ ಕಿರಿಕಿರಿ ಉಂಟು ಮಾಡಿದೆ. ಬುಧವಾರ ವಾರದ ಸಂತೆ ನಡೆಯುವ ಎಪಿಎಂಸಿ ಆವರಣ ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ ಆಗದ ಕಾರಣ ಮಳೆಗಾಲದಲ್ಲಿ ಕೃಷಿಕರ, ಬೀದಿ ಬದಿ ವ್ಯಾಪಾರಸ್ಥರ, ಗ್ರಾಹಕರ ಗೋಳು ಕೇಳುವವರು ಯಾರು...? ಎಂಬಂತಾಗಿದೆ.
ಗದಗ ಎಪಿಎಂಸಿ ವತಿಯಿಂದ 2020ರಲ್ಲಿ ಶೆಡ್ ಮತ್ತು ಸಿಸಿ ರಸ್ತೆ, ಚರಂಡಿ ನಿರ್ಮಾಣ ಕಾಮಗಾರಿ ನಡೆದಿದೆ, ಆದರೆ ಅದು ಅವೈಜ್ಞಾನಿಕವಾಗಿದ್ದು, ಮತ್ತಷ್ಟು ಸಮಸ್ಯೆ ಸೃಷ್ಟಿಸಿದೆ. ಪರಿಣಾಮ ವ್ಯಾಪಾರಿಗಳು, ಸಂತೆಗೆ ಬರುವ ಗ್ರಾಹಕರಿಗೆ ಕಿರಿಕಿರಿ ತಪ್ಪದಾಗಿದೆ.
ಎಪಿಎಂಸಿ ಆವರಣ ಮತ್ತು ಗೇಟ್ ಬಳಿ ಮಳೆ ನೀರು ಹೊರ ಸಾಗಿಸಲು ಸೂಕ್ತ ಚರಂಡಿ ಇಲ್ಲದೆ ಇರುವುದರಿಂದ ನೀರು ನಿಂತು ದುರ್ನಾತ, ಸೊಳ್ಳೆ ಉತ್ಪತ್ತಿಯಾಗಿ ವ್ಯಾಪಾರಿಗಳು, ಗ್ರಾಹಕರ ಆರೋಗ್ಯದಲ್ಲಿ ತೊಂದರೆ ಎದುರಾಗುತ್ತಿದೆ. ಹೊರ ಭಾಗದಲ್ಲಿನ ಚರಂಡಿ ವ್ಯವಸ್ಥೆ ಆಗದೆ ಇರುವುದರಿಂದ ಸಮಸ್ಯೆ ಉಂಟಾಗಿದೆ. ಎಪಿಎಂಸಿ ಆವರಣವು ವಿಶಾಲವಾಗಿದ್ದು, ಒಂದು ಭಾಗದಲ್ಲಿ ಎರಡು ಶೆಡ್‌ಗಳಿವೆ, ಇನ್ನೊಂದು ಭಾಗದಲ್ಲಿ ಖಾಲಿ ಜಾಗವಿದ್ದು, ಅಲ್ಲಿಯೂ ಕೂಡಾ ಶೆಡ್ ಹಾಗೂ ಹೊರ ಭಾಗದಲ್ಲಿ ಚರಂಡಿ ನಿರ್ಮಾಣ ಅಗತ್ಯವಿದ್ದು, ಕ್ರಮ ಕೈಗೊಳ್ಳುವಂತೆ ಇಲ್ಲಿನ ರೈತ ಸಂಘ ಮನವಿ ಮಾಡಿತ್ತು, ಆದರೆ ಈ ವರೆಗೂ ಕ್ರಮ ಕೈಗೊಳ್ಳುವಲ್ಲಿ ಗದಗ ಎಪಿಎಂಸಿ ಸಮಿತಿ ನಿರ್ಲಕ್ಷ್ಯವಹಿಸಿದೆ.ಕೃಷಿಕರಿಗೆ, ವ್ಯಾಪಾರಸ್ಥರಿಗೆ ಶೌಚಾಲಯ, ಸಿಸಿ ಕ್ಯಾಮೇರಾ ಅಳವಡಿಕೆ, ವಿದ್ಯುತ್ ವ್ಯವಸ್ಥೆ ಸೇರಿದಂತೆ ಮೂಲ ಸೌಲಭ್ಯಗಳ ಅಭಿವೃದ್ಧಿ ಅಗತ್ಯವಿದ್ದು, ಸಂಬಂಧಿಸಿದ ಗದಗ ಎಂಪಿಎಂಸಿ ಸಮಿತಿ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರ ಆಗ್ರಹವಾಗಿದೆ.
ಕಳೆದ ೫೦ ವರ್ಷಗಳ ಹಿಂದೆಯೇ ಗದಗ ಎಪಿಎಂಸಿಯ ಉಪ ಮಾರುಕಟ್ಟೆ ಪಟ್ಟಣದಲ್ಲಿ ಆರಂಭವಾಗಿದೆ, ಆದರೆ ಅಭಿವೃದ್ಧಿ ಆಗದ ಹಿನ್ನೆಲೆ ಕೃಷಿಕರು, ವ್ಯಾಪಾರಿಗಳಿಗೆ ತೊಂದರೆ ತಪ್ಪದಾಗಿದೆ. ಅಲ್ಪಸ್ವಲ್ಪ ಅಭಿವೃದ್ದಿ ನಡೆದಿದೆ ಆದರೂ ಪೂರ್ಣ ಪ್ರಮಾಣದಲ್ಲಿ ಮಾಡಬೇಕು ಎಂದು ಒತ್ತಾಯಿಸಿ ಮನವಿ ಕೊಟ್ಟಿದ್ದೇವೆ ಎಂದು ರೈತ ಸಂಘದ ಅಧ್ಯಕ್ಷ ದೇವರಾಜ ಸಂಗನಪೇಟಿ ತಿಳಿಸಿದ್ದಾರೆ.ಎಪಿಎಂಸಿಯಲ್ಲಿ ನಡೆಯುವ ವಾರದ ಸಂತೆ ದಿನ ವ್ಯಾಪಾರಸ್ಥರು ಸಾಕಷ್ಟು ಸಂಖ್ಯೆಯಲ್ಲಿ ಸೇರುವುದರಿಂದ ಬಯಲು ಜಾಗದಲ್ಲಿ ಅಂಗಡಿ ಹಚ್ಚುತ್ತಾರೆ, ಮಳೆಗಾಲದಲ್ಲಿ ನೀರು ನಿಲ್ಲುವುದರಿಂದ ವ್ಯಾಪಾರಕ್ಕೆ ತೊಂದರೆ ಆಗುತ್ತಿದೆ. ಚರಂಡಿಗಳಲ್ಲಿ ನೀರು ನಿಂತು ದುರ್ನಾತ ಉಂಟಾಗುತ್ತಿದೆ. ವಿದ್ಯುತ್ ಹಾಗೂ ಸಿಸಿ ಕ್ಯಾಮೇರಾಗಳ ವ್ಯವಸ್ಥೆ ಮಾಡಬೇಕು ಎಂದು ಬೀದಿಬದಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಭೀಮಪ್ಪ ಕೋಳಿ ಒತ್ತಾಯಿಸಿದ್ದಾರೆ.