ಗೋಬ್ಯಾಕ್‌ ಅಭಿಯಾನದಲ್ಲಿ ಗೆದ್ದಿದ್ಯಾರು-ಸೋತಿದ್ಯಾರು?

KannadaprabhaNewsNetwork | Published : Mar 14, 2024 2:04 AM

ಸಾರಾಂಶ

ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಹಾಲಿ ಸಂಸದೆ ಶೋಭಾ ಕರಂದ್ಲಾಜೆಗೆ ಬೆಂಗಳೂರು ಉತ್ತರ ಟಿಕೆಟ್‌, ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೋಟಾ ಶ್ರೀನಿವಾಸ್ ಪೂಜಾರಿ ಉಡುಪಿ- ಚಿಕ್ಕಮಗಳೂರು ಹುರಿಯಾಳು.

ಆರ್. ತಾರಾನಾಥ್‌

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಲೋಕಸಭಾ ಚುನಾವಣೆ ಸ್ಪರ್ಧಿಗಳ ಬಿಜೆಪಿ ಪಟ್ಟಿ ಪ್ರಕಟವಾಗಿದ್ದು, ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಬೆಂಗಳೂರು ಉತ್ತರ ಕ್ಷೇತ್ರದ ಟಿಕೆಟ್ ಅಂತಿಮಗೊಳಿಸಿದ್ದು, ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಕೋಟಾ ಶ್ರೀನಿವಾಸ್ ಪೂಜಾರಿ ಅವರಿಗೆ ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಟಿಕೆಟ್ ನೀಡಲಾಗಿದೆ.

ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಸತತ ಎರಡು ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಶೋಭಾ ಕರಂದ್ಲಾಜೆ ಅವರಿಗೆ ಈ ಬಾರಿ ಟಿಕೆಟ್ ನೀಡಬಾರದೆಂದು ಅವರದೇ ಪಕ್ಷದ ಕಾರ್ಯಕರ್ತರು, ಮುಖಂಡರು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ನಡೆಸಿದ್ದರು. ಈ ಹೋರಾಟದ ಕೇಂದ್ರ ಬಿಂದು ಚಿಕ್ಕಮಗಳೂರು ಜಿಲ್ಲೆ.

ಇದರ ಸೂತ್ರದಾರರು ಯಾರು ? ಇದನ್ನು ಯಾರು ಹೇಳಿ ಮಾಡಿಸುತ್ತಿದ್ದಾರೆ ? ಎಂಬುದು ಗೊತ್ತಿದೆ ಎಂದು ಶೋಭಾ ಕರಂದ್ಲಾಜೆ ಮಾತ್ರ ಅಲ್ಲ, ಮಾಜಿ ಸಿಎಂ ಯಡಿಯೂರಪ್ಪ ಕೂಡ ಹೇಳಿದ್ದರು. ಆದರೂ ಕೂಡ ಕೊನೆ ಹಂತದವರಿಗೆ ಟಿಕೆಟ್ ರೇಸ್‌ನಲ್ಲಿ ಶೋಭಾ ಕರಂದ್ಲಾಜೆ ಅವರ ಹೆಸರು ಮುನ್ನಲೆಯಲ್ಲಿತ್ತು. ಇನ್ನೆನೂ ಪ್ರಕಟವಾಗಬೇಕು ಎನ್ನುವಷ್ಟರಲ್ಲಿ ಬಿಜೆಪಿ ಮುಖಂಡರು ಚಿಕ್ಕಮಗಳೂರು ಪಕ್ಷದ ಕಚೇರಿಯಲ್ಲಿ ಪ್ರತಿಭಟನೆ ನಡೆಸಿದರು. ಅದು, ಕೇಂದ್ರಕ್ಕೂ ಮುಟ್ಟಿಸುವ ವ್ಯವಸ್ಥಿತವಾದ ಕೆಲಸ ನಡೆಯಿತು.

ಮುನಿಸು:

ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಶೋಭಾ ಕರಂದ್ಲಾಜೆಯವರು ಜಿಲ್ಲೆಯಲ್ಲಿ ಬಿಜೆಪಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳಲಿಲ್ಲ. ಹಾಗಾಗಿ ಅವರು ಈ ಕ್ಷೇತ್ರದಲ್ಲಿ ಇರುವುದೇ ಬೇಡ ಎಂಬುದು ಕೆಲವು ನಾಯಕರ ವಾದ. ಗೋ ಬ್ಯಾಕ್ ಶೋಭಾ, ಬಿಜೆಪಿ ಕಚೇರಿಯಲ್ಲಿ ಶೋಭಾ ವಿರುದ್ಧ ಪ್ರತಿಭಟನೆ ಹುಟ್ಟು ಹಾಕಿರುವ ಹಿಂದೆ ಪಕ್ಷದ ನಾಯಕರೋರ್ವರು ಇರುವುದು ಯಾರೂ ಕೂಡ ಅಲ್ಲಗಳೆಯುವುದಿಲ್ಲ.

ಶೋಭಾ ಅವರಿಗೆ ಟಿಕೆಟ್ ಮಿಸ್ ಆಗಿದೆ, ಗೋ ಬ್ಯಾಕ್ ಶೋಭಾ ಚಳುವಳಿ ಹುಟ್ಟು ಹಾಕಿದವರಿಗೆ ಜಯ ಸಿಕ್ಕಿದಿಯಾ ? ಇಲ್ಲ, ಕಾರಣ, ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್‌, ಡಿ.ಎನ್. ಜೀವರಾಜ್, ಸಿ.ಟಿ. ರವಿ ಇವರುಗಳಲ್ಲಿ ಓರ್ವರಿಗೆ ಈ ಕ್ಷೇತ್ರದ ಟಿಕೆಟ್ ನೀಡಬೇಕೆಂಬ ಬೇಡಿಕೆ ಇತ್ತು. ಟಿಕೆಟ್ ತಪ್ಪಿಸಿರುವುದನ್ನು ಹೊರತುಪಡಿಸಿದರೆ ಯಾರಿಗೆ ಟಿಕೆಟ್ ನೀಡಬೇಕೆಂಬ ಬೇಡಿಕೆ ಈಡೇರಲಿಲ್ಲ. ಟಿಕೆಟ್ ತಪ್ಪಿಸಿ ಗೆದ್ದರು, ಯಾರಿಗೆ ನೀಡಬೇಕೆಂಬ ಬೇಡಿಕೆ ಈಡೇರುವುದರಲ್ಲಿ ಸೋತರು.

ಶೋಭಾ ಗೆದ್ರಾ?:

ಬೆಂಗಳೂರು ಉತ್ತರ ಕ್ಷೇತ್ರದ ಸಂಸದರಾಗಿದ್ದ ಡಿ.ವಿ.ಸದಾನಂದಗೌಡ ಅವರು ಈ ಬಾರಿ ಸ್ಪರ್ಧೆ ಮಾಡುವುದಿಲ್ಲ ಎಂಬ ಗಾಳಿ ಸುದ್ದಿ ಹರಡಿಕೊಂಡಿತ್ತು. ಇಲ್ಲಿ ಸಿ.ಟಿ. ರವಿ ಸ್ಪರ್ಧೆ ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಇದೇ ಕ್ಷೇತ್ರದಲ್ಲಿ ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್ ಕೊಡಿಸುವಲ್ಲಿ ಪಕ್ಷದ ವರಿಷ್ಠರು ಸಕ್ಸಸ್ ಆಗಿದ್ದಾರೆ. ಇಲ್ಲೂ ಕೂಡ ಸಿ.ಟಿ. ರವಿ ಅವರಿಗೆ ಹಿನ್ನಡೆಯಾಗಿದೆ.

ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವ ಆಕಾಂಕ್ಷೆ ಯಾವತ್ತೂ ಕೂಡ ಯಾರ ಬಳಿಯೂ ಕೋಟಾ ಶ್ರೀನಿವಾಸ್ ಪೂಜಾರಿ ಅವರು ವ್ಯಕ್ತಪಡಿಸಿರಲಿಲ್ಲ. ಶೋಭಾ ಕರಂದ್ಲಾಜೆ ಅವರ ಹೆಸರು ಬೆಂಗಳೂರು ಉತ್ತರಕ್ಕೆ ಅಂತಿಮಗೊಳಿಸಿ, ಅದೇ ಕ್ಷಣದಲ್ಲಿ ಬಿಜೆಪಿಯ ರಾಜ್ಯ ನಾಯಕರು ಕೋಟಾ ಶ್ರೀನಿವಾಸ್‌ ಪೂಜಾರಿ ಅವರ ಹೆಸರನ್ನು ಫೈನಲ್ ಮಾಡಿದರು. ಈ ತೀರ್ಮಾನ ಉಡುಪಿ- ಚಿಕ್ಕಮಗಳೂರಿನ ಬಿಜೆಪಿ ನಾಯಕರಿಗೆ ಕಾರ್ಯಕರ್ತರಿಗೆ ಆಶ್ಚರ್ಯ ಮೂಡಿಸಿದೆ.

ಪಕ್ಷದ ಕಾರ್ಯಕರ್ತರ ಹಾಗೂ ಮುಖಂಡರ ನಡುವೆ ವೈಮನಸ್ಸು ಇತ್ತು. ಇಂತಹ ಪರಿಸ್ಥಿತಿಯಲ್ಲಿ ಚುನಾವಣೆಯನ್ನು ಎದುರಿಸುವುದು ಕಷ್ಟವಾಗಿತ್ತು. ಶೋಭಾ ಕರಂದ್ಲಾಜೆ ಅವರಿಗೆ ಬೆಂಗಳೂರು ಉತ್ತರ ಕ್ಷೇತ್ರದ ಟಿಕೆಟ್ ನೀಡಿ, ಇಲ್ಲಿಗೆ ಕೋಟಾ ಶ್ರೀನಿವಾಸ್ ಪೂಜಾರಿ ಅವರಿಗೆ ಟಿಕೆಟ್ ನೀಡಿರುವುದು ಸೂಕ್ತವಾಗಿದೆ. ಈ ವಿಷಯದಲ್ಲಿ ಶೋಭಾ ಕರಂದ್ಲಾಜೆ ಅವರಿಗೆ ಉತ್ತಮವಾಗಿರುವ ಕ್ಷೇತ್ರ ಸಿಕ್ಕಿದೆ ಎಂದು ಹೆಸರು ಹೇಳಲು ಇಚ್ಚಿಸದ ಬಿಜೆಪಿಯ ಮುಖಂಡರು ತಿಳಿಸಿದ್ದಾರೆ.

Share this article