ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಕೋಟ್ಯಂತರ ಭಕ್ತರ ಆರಾಧನಾ ಕೇಂದ್ರ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಕ್ಷೇತ್ರದ ಭಕ್ತರನ್ನು ಕೆರಳಿಸಿವೆ. ಮಂಜುನಾಥೇಶ್ವರ ದೇವಸ್ಥಾನ ಹಾಗೂ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿ ಬುಧವಾರ ಬೆಳಗಾವಿಯಲ್ಲಿ ಭಕ್ತರು ಬೀದಿಗಿಳಿದು ಬೃಹತ್ ಪ್ರತಿಭಟನೆ ನಡೆಸಿ, ತೀವ್ರ ಆಕ್ರೋಶ ವ್ಯಕ್ತಪಡಿಸಿದರು.ಶ್ರೀ ಧರ್ಮಸ್ಥಳ ಅಭಿಮಾನಿಗಳ ವೇದಿಕೆ ಹೆಸರಿನಲ್ಲಿ ಪ್ರತಿಭಟನೆ ನಡೆಸಿದ ಭಕ್ತರು ನಗರದ ರಾಣಿ ಚನ್ನಮ್ಮ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ತಮ್ಮ ಆಕ್ರೋಶ ಹೊರ ಹಾಕಿದರು. ಪ್ರತಿಭಟನೆಗೆ ಹಲವು ಸ್ವಾಮೀಜಿಗಳು, ಹಿಂದೂಪರ ಸಂಘಟನೆಗಳು ಸಾಥ್ ಕೊಟ್ಟರು. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗಿಯಾಗಿದ್ದರು. ಅದರಲ್ಲಿ ಕೆಲ ಮುಸ್ಲಿಂ ಮಹಿಳೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಧರ್ಮಸ್ಥಳದ ಪರ ಧ್ವನಿ ಎತ್ತಿದರು. ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದರು.ಧರ್ಮರಕ್ಷಣೆ ನಮ್ಮೆಲ್ಲರ ಹೊಣೆ, ಪೂಜ್ಯರೊಂದಿಗೆ ನಾವಿದ್ದೇವೆ, ಜೈ ಧರ್ಮಸ್ಥಳ, ಜೈ ಮಂಜುನಾಥ ಸ್ವಾಮಿ, ಜೈ ಅಣ್ಣಪ್ಪಸ್ವಾಮಿ ಬರಹದ ಫಲಕಗಳನ್ನು ಪ್ರದರ್ಶಿಸಿದ ಪ್ರತಿಭಟನಾಕಾರರು ಶ್ರೀಕ್ಷೇತ್ರ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರ ಕುಟುಂಬಕ್ಕೆ ಕಳಂಕ, ಒಳ ಸಂಚು ನಡೆದಿದ್ದು, ಷಡ್ಯಂತ್ರ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.ಭಕ್ತ ಮಂಜುನಾಥ ನಾಗೋಜಿ ಮಾಧ್ಯಮಗಳ ಜೊತೆಗೆ ಮಾತನಾಡಿ, ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ 800 ವರ್ಷಗಳ ಇತಿಹಾಸ ಇದೆ. ಪ್ರತಿನಿತ್ಯ ಲಕ್ಷಾಂತರ ಭಕ್ತರು ರಾಜ್ಯ, ಹೊರ ರಾಜ್ಯಗಳ ಲಕ್ಷಾಂತರ ಭಕ್ತರು ಪವಿತ್ರ ಧರ್ಮಸ್ಥಳಕ್ಕೆ ಬಂದು, ಮಂಜುನಾಥ ದೇವರ ಆಶೀರ್ವಾದ ಪಡೆದು, ಪ್ರಸಾದ ಸ್ವೀಕರಿಸುತ್ತಾರೆ. ಇಂತಹ ಸುಕ್ಷೇತ್ರದ ಹೆಸರಿಗೆ ಧಕ್ಕೆ ತರುವ ಕೆಲಸವಾಗುತ್ತಿರುವುದು ಸರಿಯಲ್ಲ. ಆಡು ಮುಟ್ಟದ ಸೊಪ್ಪಿಲ್ಲ, ಕುವೆಂಪು ಕೈಯಾಡಿಸದ ಕೃತಿ ಇಲ್ಲ ಎಂಬ ನಾಣ್ಣುಡಿ ಇದೆ. ಅದೇರೀತಿ ವೀರೇಂದ್ರ ಹೆಗ್ಗಡೆ ಅವರು ಮಾಡದ ಸಾಮಾಜಿಕ ಸೇವೆ ಇಲ್ಲ. ಸಮಾಜಘಾತುಕ ಶಕ್ತಿಗಳು ಯಾವುದೇ ಸಾಕ್ಷ್ಯಾಧಾರಗಳು ಇಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಧರ್ಮಸ್ಥಳದ ಬಗ್ಗೆ ಅಪಪ್ರಚಾರ, ಅವಮಾನ ಮಾಡುತ್ತಿರುವುದು ನಮಗೆ ನೋವು ತಂದಿದೆ. ಹಾಗಾಗಿ, ಅಂಥವರ ವಿರುದ್ಧ ಕಾನೂನು ಪ್ರಕಾರ ಶಿಕ್ಷೆ ಕೊಡಿಸುವ ಕೆಲಸವನ್ನು ಮುಖ್ಯಮಂತ್ರಿಗಳು ಮಾಡಬೇಕು ಎಂದು ಒತ್ತಾಯಿಸಿದರು.ಅನಾಮಿಕ ವ್ಯಕ್ತಿ ಕೊಟ್ಟ ದೂರಿನ ಆಧಾರದ ಮೇಲೆ ರಾಜ್ಯ ಸರ್ಕಾರ ಎಸ್ಐಟಿ ರಚಿಸಿದ್ದು, ತನಿಖೆ ನಡೆಯುತ್ತಿದೆ. ಇನ್ನೂ ಮಧ್ಯಂತರ ವರದಿ ಸಲ್ಲಿಕೆ ಆಗಿಲ್ಲ. ಇಂತಹ ಸಂದರ್ಭದಲ್ಲಿ ಧರ್ಮಸ್ಥಳ ಮತ್ತು ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಹೇಶ ತಿಮರೋಡಿ, ಗಿರೀಶ ಮಟ್ಟಣ್ಣವರ, ಜಯಂತ ಟಿ., ಸಮೀರ್ ಎಂ.ಡಿ. ಅಪಪ್ರಚಾರ ಮಾಡುತ್ತಿರುವುದು ನಮ್ಮೆಲ್ಲ ಭಕ್ತರ ಭಾವನೆಗಳಿಗೆ ಧಕ್ಕೆ ಆಗುತ್ತಿದೆ. ಹಾಗಾಗಿ, ಅಪಪ್ರಚಾರ ಮಾಡುತ್ತಿರುವವರ ಹಿನ್ನೆಲೆ, ಸುಳ್ಳು ಆರೋಪ ಮಾಡಲು ಅವರಿಗೆ ಪ್ರಚೋದನೆ ನೀಡುತ್ತಿರುವವರು, ಈ ತಂಡಕ್ಕೆ ಬರುತ್ತಿರುವ ಹಣಕಾಸಿನ ನೆರವಿನ ಬಗ್ಗೆ ಸೂಕ್ತ ತನಿಖೆ ನಡೆಸಲು ಮತ್ತೊಂದು ಎಸ್ಐಟಿ ತಂಡವನ್ನು ರಚಿಸುವಂತೆ ಮತ್ತೋರ್ವ ಭಕ್ತ ಗಂಗಾಧರ ಸೋನಾರ ಆಗ್ರಹಿಸಿದರು. ಬಳಿಕ ತಮ್ಮ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಜಿಲ್ಲಾಡಳಿತ ಮೂಲಕ ರಾಜ್ಯ ಸರ್ಕಾರಕ್ಕೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು. ಈ ವೇಳೆ ಮುಕ್ತಿಮಠದ ಶಿವಸಿದ್ಧ ಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಶಾಂಡಿಲೇಶ್ವರ ಸ್ವಾಮೀಜಿ, ಭಕ್ತರಾದ ಪ್ರಭಾಕರ ಶೆಟ್ಟಿ, ಮಂಜುನಾಥ ಶೆಟ್ಟಿ, ಪ್ರಕಾಶ ಹೆಗಡೆ, ಮಹಾಂತೇಶ ಒಕ್ಕುಂದ, ಅಭಯ ಅವಲಕ್ಕಿ, ಅನುಶ್ರೀ ಹಿರೇಮಠ, ವಂದನಾ ಟೋಸು, ಗೀತಾ ಹೊಸಮನಿ, ಆಶಾ ಉಪ್ಪಿನ ಸೇರಿದಂತೆ ಮತ್ತಿತರರು ಇದ್ದರು.