ಹುಬ್ಬಳ್ಳಿ:
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪಿ ಯಾರೇ ಆಗಿರಲಿ ಅವನಿಗೆ ಕಠಿಣವಾದ ಶಿಕ್ಷೆಯಾಗಲಿ ಎಂದು ನಟ, ನಿರ್ದೇಶಕ ಇಂದ್ರಜಿತ್ ಲಂಕೇಶ ಹೇಳಿದರು.ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಈ ಕೊಲೆಯನ್ನು ಇಡೀ ಚಿತ್ರರಂಗವೇ ಖಂಡಿಸುತ್ತದೆ. ಈಗಾಗಲೇ ಈ ಕೊಲೆ ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆರೋಪಿ ಯಾರು ಎಂದು ಪೊಲೀಸ್ ಆಯುಕ್ತರು ಸ್ಪಷ್ಟಪಡಿಸಿದ ನಂತರ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯದೊರಕಿಸಿಕೊಡಲು ನಾನು ಹೋರಾಟಕ್ಕೆ ಇಳಿಯುತ್ತೇನೆ ಎಂದರು.
ನನ್ನ ಸಹೋದರಿ ಗೌರಿ ಕೊಲೆಗೆ ಈವರೆಗೂ ನ್ಯಾಯ ಸಿಕ್ಕಿಲ್ಲ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಅವರ ಪತ್ನಿಗೂ ಅನ್ಯಾಯವಾಗಿದೆ. ಅವರಿಗೂ ನ್ಯಾಯ ಕೊಡಿಸುವ ಕೆಲಸ ಆಗಬೇಕಿದೆ ಎಂದ ಅವರು,ಸಾಮಾಜಿಕ ಜಾಲತಾಣವು ಉತ್ತಮ ವೇದಿಕೆಯಾಗಿದೆ. ಆದರೆ, ಕೆಲವರು ಇದನ್ನು ದ್ವೇಷ ಹರಡುವ, ತೇಜೋವಧೆ ಮಾಡುವ ಕೆಲಸಕ್ಕೆ ಬಳಕೆ ಮಾಡಿಕೊಳ್ಳುವ ಕಾರ್ಯಕ್ಕೆ ಮುಂದಾಗುತ್ತಿರುವುದು ಸರಿಯಲ್ಲ. ಈ ಕುರಿತು ಸರ್ಕಾರವೂ ಕಠಿಣ ಕ್ರಮ ಕೈಗೊಳ್ಳುವ ಕುರಿತು ಗಂಭೀರವಾಗಿ ಚಿಂತನೆ ನಡೆಸಬೇಕು. ಅಂತಹವರ ವಿರುದ್ಧ ಸೈಬರ್ ಕ್ರೈಂ ಪೊಲೀಸರು ಕಠಿಣ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಇಂತಹ ಪ್ರಕರಣದಲ್ಲಿ ಭಾಗಿಯಾದ ನಟ, ರಾಜಕಾರಣಿ ಯಾರೇ ಆಗಲಿ ಅವರಿಗೆ ರಾಜಮರ್ಯಾದೆ ಕೊಡುವ ಕಾರ್ಯವಾಗಬಾರದು. ಮೃತ ರೇಣಾಕಾಸ್ವಾಮಿ ಪತ್ನಿ 5 ತಿಂಗಳ ಗರ್ಭಿಣಿಯಾಗಿದ್ದು, ಅವರನ್ನು ಹಾಗೂ ಮೃತ ರೇಣುಕಾಸ್ವಾಮಿ ತಂದೆ-ತಾಯಿ ಭೇಟಿಯಾಗಿ ಸಾಂತ್ವನ ಹೇಳುವ ಮೂಲಕ ಅವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡುವೆ ಎಂದರು.ಮಾಧ್ಯಮದವರ ಮೇಲಿನ ಹಲ್ಲೆ ಖಂಡನೀಯ:
ಮಾಧ್ಯಮದವರು ವಾಸ್ತವ ವರದಿ ಮಾಡಿದ್ದರಿಂದಲೇ ರೇಣುಕಾಸ್ವಾಮಿ ಪ್ರಕರಣ ಗಂಭೀರತೆ ಪಡೆದುಕೊಳ್ಳಲು ಸಾಧ್ಯವಾಯಿತು. ಇಲ್ಲದೇ ಇದ್ದರೆ ಇದನ್ನು ಕಸದ ಬುಟ್ಟಿಗೆ ಎಸೆಯುವ ಸಾಧ್ಯತೆ ಹೆಚ್ಚಾಗಿತ್ತು. ಬೆಂಗಳೂರಿನಲ್ಲಿ ಮಾಧ್ಯಮದವರ ಮೇಲೆ ಹಲ್ಲೆ ನಡೆದಿದ್ದು ಖಂಡನೀಯ. ವರದಿ ಮಾಡಲು ಹೋದರೆ ಬೆದರಿಕೆ ಹಾಕುವುದು, ಕೀಳುಮಟ್ಟದ ಭಾಷೆ ಬಳಸುತ್ತಿದ್ದಾರೆ. ಸರ್ಕಾರ ಪತ್ರಕರ್ತರಿಗೆ ಸೂಕ್ತ ರಕ್ಷಣೆ ಕೊಡುವ ಕಾರ್ಯ ಮಾಡಬೇಕಿದೆ ಎಂದರು.ಕಾಲೆಳೆಯುವ ಅವಶ್ಯಕತೆಯಿಲ್ಲ:
ಕೇವಲ ನಾನು ನಿರ್ದೇಶಕನಲ್ಲ, ಓರ್ವ ಪತ್ರಕರ್ತನೂ ಹೌದು. ಕೆಲವು ಮಾಧ್ಯಮಗಳಲ್ಲಿ ದರ್ಶನ್ ಕಾಲೆಳೆದ ಲಂಕೇಶ್, ದರ್ಶನ್‌ಗೆ ಟಾಂಗ್ ಕೊಟ ಇಂದ್ರಜಿತ್ ಅಂತೆಲ್ಲ ಸುದ್ದಿಗಳು ಪ್ರಕಟವಾಗಿವೆ. ನಾನೇಕೆ ಅವರಿಗೆ ಟಾಂಗ್ ಕೊಡಲು ಹೋಗಲಿ. ನಾನು 30 ವರ್ಷಗಳಿಂದ ಪತ್ರಕರ್ತನಾಗಿದ್ದೇನೆ. ದರ್ಶನ್ ಜತೆ ನಾನು ಸಿನಿಮಾ ಮಾಡಿದ್ದೇನೆ. ಅವರೊಂದಿಗೆ ಯಾವುದೇ ವೈಯಕ್ತಿಕ ದ್ವೇಷವಿಲ್ಲ. ಹಿಂದೆ ಯಾರಿಗೋ ಅನ್ಯಾಯವಾದಾಗ ನಾನು ಧ್ವನಿ ಎತ್ತಿದೆ. ಮಾತು ಮಾತು ಬೆಳೆದು ಅದು ದೊಡ್ಡದಾಯಿತು. ಮಾತಿಗೆ ಮಾತು ಬೆಳೆಯಬಾರದಿತ್ತು. ನಾನು ವಿಷಯ ಎತ್ತಿದ್ದಾಗ ಒಂದು ಮಾತನ್ನು ಹೇಳಿದ್ದೆ, ಮುಂದೆ ಅನಾಹುತ ಆಗುತ್ತೆ ಅನ್ನುವ ಮಾತು ಹೇಳಿದ್ದೆ. ನಾನು ಹಿಂದೆ ಸ್ನೇಹಿತನಾಗಿ ಈ ಮಾತು ಹೇಳಿದ್ದೆ. ಆಗಲೇ ಎಚ್ಚೆತ್ತುಕೊಳ್ಳಬೇಕಿತ್ತು. ಆ ಮಾತನ್ನು ಕೇಳಿದ್ದರೆ ಇಂದು ಇಂತಹ ಅನಾಹುತವಾಗುತ್ತಿರಲಿಲ್ಲ ಎಂದರು.