ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ದೇಶದ ಭವಿಷ್ಯದ ದೃಷ್ಟಿಯಿಂದ ಬಿಜೆಪಿ ಹಾಗೂ ಜೆಡಿಎಸ್ ನಡುವೆ ರಾಷ್ಟ್ರರಾಜಕಾರಣಕ್ಕಾಗಿ ಮೈತ್ರಿ ಮಾಡಿಕೊಳ್ಳಲಾಗಿದೆ. ಚಿತ್ರದುರ್ಗ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಯಾರೇ ಆಗಲಿ ಅವರನ್ನು ಗೆಲ್ಲಿಸಿಕೊಳ್ಳುವ ಜವಾಬ್ದಾರಿಯ ಎಲ್ಲರೂ ನಿರ್ವಹಿಸೋವೆಂದು ವಿಧಾನಪರಿಷತ್ ಸದಸ್ಯ ತಿಪ್ಪೇಸ್ವಾಮಿ ಹೇಳಿದರು.ಲೋಕಸಭೆ ಚುನಾವಣೆ ಹಿನ್ನೆಲೆ ಜಾತ್ಯಾತೀತ ಜನತಾದಳದವತಿಯಿಂದ ಪಕ್ಷದ ಜಿಲ್ಲಾ ಕಚೇರಿಯಲ್ಲಿ ನಡೆದ ಪೂರ್ವ ಸಿದ್ಧತಾ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ದೇಶ ಉಳಿಸಬೇಕೆಂಬ ದೃಷ್ಟಿಯಿಂದ ರಾಷ್ಟ್ರ ಮಟ್ಟದಲ್ಲಿ ನಮ್ಮ ನಾಯಕರಾದ ದೇವೇಗೌಡರು ಮತ್ತು ಕುಮಾರಸ್ವಾಮಿ ನೇತೃತ್ವದಲ್ಲಿ ಬಿಜೆಪಿಯೊಂದಿಗೆ ಮೈತ್ರಿಯಾಗಿದೆ. ಪ್ರತಿಯೊಂದು ಬೂತ್‍ನಲ್ಲಿಯೂ ಸಮಿತಿ ರಚನೆ ಮಾಡುವುದರ ಮೂಲಕ ಪಕ್ಷ ಸಂಘಟಿಸಬೇಕಿದೆ. ಇದಕ್ಕೆ ಈಗಿನಿಂದಲೇ ತಯಾರಿ ನಡೆಸಬೇಕಿದೆ. ಲೋಕಸಭಾ ವ್ಯಾಪ್ತಿಗೆ ಬರುವ 8 ವಿಧಾನಸಭೆಗಳಲ್ಲಿಯೂ ಅಲ್ಲಿನ ಮುಖಂಡರು ಚುರುಕಾಗಬೇಕಿದೆ. ಮಾರ್ಚ ಅಂತ್ಯದೊಳಗೆ ಚುನಾವಣೆ ಘೋಷಣೆಯಾಗುವ ನೀರೀಕ್ಷೆ ಇದೆ. ಮುಂದಿನ ಸಭೆಗೆ ಪಕ್ಷದ ವರಿಷ್ಠರು ಆಗಮಿಸಲಿದ್ದು ಚುನಾವಣಾ ಪ್ರಚಾರ ಕಾರ್ಯ ಪ್ರಾರಂಭವಾಗುತ್ತಿದೆ ಎಂದು ತಿಪ್ಪೇಸ್ವಾಮಿ ತಿಳಿಸಿದರು.
ಚಿತ್ರದುರ್ಗ ಲೋಕಸಭಾ ಉಸ್ತುವಾರಿ, ಮಾಜಿ ಶಾಸಕ ತಿಮ್ಮರಾಯಪ್ಪ ಮಾತನಾಡಿ, ಈ ಹಿಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ನಾವುಗಳು ಅಲ್ಲಗೆಳೆದಿದ್ದೇವೆ. ಆದರೆ ಈಗ ಮೈತ್ರಿಯಾಗಿರುವುದರಿಂದ ಅವರನ್ನು ನಮ್ಮೊಟ್ಟಿಗೆ ಕರೆದೊಯ್ಯಬೇಕಿದೆ. ರಾಜ್ಯದ ಹಲವೆಡೆ ಬಿಜೆಪಿ ಗೆಲುವಿಗೆ ಜೆಡಿಎಸ್ ಸಹಕಾರಿಯಾಗಬೇಕಿದೆ. ಅದೇ ರೀತಿ ಕೆಲವು ಕಡೆ ಜೆಡಿಎಸ್ ಗೆಲವಿಗೆ ಬಿಜೆಪಿ ಕೊಡುಗೆ ನೀಡುತ್ತದೆ. ಯಾವುದೇ ಸಮಯದಲ್ಲಾದರೂ ಜೆಡಿಎಸ್ ವರಿಷ್ಠರು ಪಕ್ಷದ ಮರ್ಯಾದೆ ಹೋಗುವಂತ ಕೆಲಸ ಮಾಡುವುದಿಲ್ಲ. ಬಿಜೆಪಿ ಪಕ್ಷದವರು ನಮ್ಮ ಮುಖಂಡರು ಹಾಗೂ ಕಾರ್ಯಕರ್ತರನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಳ್ಳಬೇಕಿದೆ ಎಂದರು.ಜೆಡಿಎಸ್‍ನ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಕಾಂತರಾಜ್ ಮಾತನಾಡಿ, ಚುನಾವಣೆ ಹಿನ್ನೆಲೆ ಪಕ್ಷ ನೀಡಿದ ಆದೇಶ ಸರಿಯಾದ ರೀತಿಯಲ್ಲಿ ಪಾಲನೆ ಮಾಡಲಾಗುವುದು. ಈ ಹಿಂದೆ ನಾವುಗಳು ಬಿಜೆಪಿಯನ್ನು ತೆಗಳಿದ್ದೇವೆ ಆದರೆ ಈಗ ಮೈತ್ರಿಯಾಗಿರುವುದರಿಂದ ಅವರನ್ನು ಸೇರಿಸಿಕೊಂಡು ಚುನಾವಣೆ ಎದುರಿಸಬೇಕಿದೆ. ನಮ್ಮ ತತ್ವ ಸಿದ್ಧಾಂತ ಎಂದಿಗೂ ಮರೆಯುವುದಿಲ್ಲ. ಕಾರ್ಯಕರ್ತರ ಕಷ್ಟ-ಸುಖಕ್ಕೆ ನಾವು ಸದಾ ಭಾಗಿಯಾಗುತ್ತೇವೆ. ಈ ಹಿಂದೆ ಬಿಜೆಪಿಯವರು ಹಲವಾರು ರೀತಿಯಲ್ಲಿ ಕಷ್ಟ ನೀಡಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷದಿಂದ ಅಭ್ಯರ್ಥಿಯಾದವರು ಯಾವುದೇ ರೀತಿಯಿಂದಲೂ ಸ್ಫಂದಿಸಿಲ್ಲ. ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ 50 ಸಾವಿರ ಇದ್ದ ಮತಗಳನ್ನು 5 ಸಾವಿರಕ್ಕೆ ಇಳಿಸಿದ್ದಾರೆ ಎಂದರು.
ಜಾತ್ಯಾತೀತ ಜನತಾದಳದ ಜಿಲ್ಲಾಧ್ಯಕ್ಷ ಎಂ.ಜಯ್ಯಣ್ಣ ಮಾತನಾಡಿ, ಪಕ್ಷಕ್ಕೆ ಕಾರ್ಯಕರ್ತರೇ ಬೆನ್ನುಲುಗಿದ್ದಾರೆ. ನಮ್ಮ ಕಾರ್ಯಕರ್ತರು ಶಾಸಕರಿಲ್ಲದೆ ನೊಂದಿದ್ದಾರೆ. ಅವರನ್ನು ಸಾಂತ್ವಾನ ಮಾಡಬೇಕಿದೆ. ಈ ಚುನಾವಣೆಯಲ್ಲಿ ಗೆಲುವನ್ನು ಸಾಧಿಸುವುದರ ಮೂಲಕ ಅವರಿಗೆ ಸಂತೋಷವನ್ನು ನೀಡಬೇಕಿದೆ ಎಂದರು.ಹಿರಿಯೂರು ವಿಧಾನಸಭೆ ಪರಾಜಿತ ಅಭ್ಯರ್ಥಿ ರವೀಂದ್ರಪ್ಪ. ಮಾಜಿ ಅಧ್ಯಕ್ಷ ಕಂದಿಕೆರೆ ಯಶೋಧರ, ಕಾರ್ಯಾಧ್ಯಕ್ಷ ಜಿ.ಬಿ.ಶೇಖರ್, ಮಠದಹಟ್ಟಿ ಈರಣ್ಣ, ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಗೋಪಾಲಸ್ವಾಮಿ ನಾಯಕ್, ಪ್ರತಾಪ್ ಜೋಗಿ, ಪರಮೇಶ್ವರಪ್ಪ, ತಿಮ್ಮಣ್ಣ, ದೀಪು, ತಿಪ್ಪೇಸ್ವಾಮಿ, ವೀರಭದ್ರಪ್ಪ, ಗಣೇಶ್, ನಾಗರಾಜು, ಸೂರ್ಯ ಪ್ರಕಾಶ್, ಕಾರ್ಯಕಾರಿ ಸಮಿತಿ ಸದಸ್ಯ ತಿಮ್ಮಾರೆಡ್ಡಿ, ತುಮಕೂರು ಅಧ್ಯಕ್ಷ ಅಂಜನಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು.