ಯಾರೇ ಗೆದ್ದರೂ ಕೂದಲೆಳೆ ಅಂತರದಿಂದ ಗೆಲವು: ಯೋಗೇಶ್ವರ್

KannadaprabhaNewsNetwork |  
Published : Nov 15, 2024, 12:35 AM IST
ಪೊಟೋ೧೪ಸಿಪಿಟಿ೧: ನಗರದಲ್ಲಿನ ತಮ್ಮ ನಿವಾಸದಲ್ಲಿ ಸಿ.ಪಿ.ಯೋಗೇಶ್ವರ್ ಸುದ್ದಿಗಾರರೊಂದಿಗೆ ಮಾತನಾಡಿದರು. | Kannada Prabha

ಸಾರಾಂಶ

ಸಚಿವ ಜಮೀರ್ ಅಹ್ಮದ್ ಹೇಳಿಕೆಯಿಂದ ಮುಸ್ಲಿಂ ಮತಗಳ ಕ್ರೋಡೀಕರಣ ಒಂದುಕಡೆ ಆದರೆ ಇನ್ನೊಂದು ಸಮುದಾಯದಿಂದ ಹೊಡೆತ ಬಿದ್ದಿದೆ. ಅದರಿಂದ ಸ್ವಲ್ಪ ಆಘಾತ ಆಗಿದೆ. ನಿರಾಶದಾಯಕ ವಿಚಾರ ಏನಿಲ್ಲ. ಯಾರೇ ಗೆದ್ದರೂ ಕೂದಲೆಳೆ ಅಂತರದಿಂದ ಗೆಲ್ಲುತ್ತಾರೆ .

ಕನ್ನಡಪ್ರಭ ವಾರ್ತೆ ಚನ್ನಪಟ್ಟಣ

ನನ್ನ ರಾಜಕೀಯ ಜೀವನದ ದೊಡ್ಡ ಚುನಾವಣೆ ಇದು. ಇದು ಇಷ್ಟೊಂದು ತೀವ್ರತೆ ಪಡೆಯುತ್ತದೆ ಅಂದುಕೊಂಡಿರಲಿಲ್ಲ. ಚುನಾವಣೆ ವೇಳೆ ನೀಡಿದ ಕೆಲವು ಹೇಳಿಕೆಗಳು ಜನರ ಭಾವನೆಗೆ ಘಾಸಿ ಮಾಡಿವೆ. ಸಚಿವ ಜಮೀರ್ ಅಹ್ಮದ್ ಹೇಳಿಕೆಯಿಂದ ಒಂದು ಕಡೆ ಲಾಭ ಆದರೆ, ಒಂದು ಕಡೆ ನಷ್ಟವನ್ನುಂಟು ಮಾಡಿದೆ. ಎರಡು ಕಡೆಯಿಂದಲೂ ಸಮಬಲದ ಹೋರಾಟ ನಡೆದಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ತಿಳಿಸಿದರು.

ನಗರದ ಐದನೇ ಅಡ್ಡರಸ್ತೆಯಲ್ಲಿನ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಜಮೀರ್ ಅಹ್ಮದ್ ಹೇಳಿಕೆಯಿಂದ ಮುಸ್ಲಿಂ ಮತಗಳ ಕ್ರೋಡೀಕರಣ ಒಂದುಕಡೆ ಆದರೆ ಇನ್ನೊಂದು ಸಮುದಾಯದಿಂದ ಹೊಡೆತ ಬಿದ್ದಿದೆ. ಅದರಿಂದ ಸ್ವಲ್ಪ ಆಘಾತ ಆಗಿದೆ. ನಿರಾಶದಾಯಕ ವಿಚಾರ ಏನಿಲ್ಲ. ಯಾರೇ ಗೆದ್ದರೂ ಕೂದಲೆಳೆ ಅಂತರದಿಂದ ಗೆಲ್ಲುತ್ತಾರೆ ಎಂದು ವಿಶ್ಲೇಷಿಸಿದರು.

ಇದು ಕುಮಾರಸ್ವಾಮಿ ಅವರಿಂದ ತೆರವಾದ ಕ್ಷೇತ್ರ, ತಮ್ಮ ಕುಟುಂಬಕ್ಕೆ ಉಳಿಸಿಕೊಳ್ಳಲು ಮುಂದಾದರು. ರಾಜಕೀಯ ದೈತ್ಯ ನಾಯಕ ದೇವೇಗೌಡರ ಹಠ, ಮೊಮ್ಮಗನ ಗೆಲ್ಲಿಸುವ ಶಪಥ ಮಾಡಿದರು. ಕೇಂದ್ರ ಸಚಿವ ಕುಮಾರಸ್ವಾಮಿ ಪುತ್ರನನ್ನು ಗೆಲ್ಲಿಸಿಕೊಂಡು ಕ್ಷೇತ್ರ ಉಳಿಸಿಕೊಳ್ಳಲು ಹೋರಾಟ ಮಾಡಿದ್ರು. ಎರಡೂ ಕಡೆಯೂ ಸಮಬಲದ ಹೋರಾಟ ನಡೆದಿದೆ ಎಂದರು.

ದೇವೇಗೌಡರು ಒಂದು ದೈತ್ಯ ಶಕ್ತಿ. ದೇವೇಗೌಡರು ಹಾಗೂ ಕುಮಾರಸ್ವಾಮಿಗೆ ಬೈದರೆ ಬೇಸರಗೊಳ್ಳುವ ಒಂದು ವರ್ಗವಿದೆ. ಇಬ್ಬರನ್ನು ಮಾತ್ರ ಸಮುದಾಯದ ನಾಯಕ ಎಂದು ಗುರುತಿಸುತ್ತಾರೆ. ದೈತ್ಯ ಶಕ್ತಿ, ಒಕ್ಕಲಿಗರ ಬೆಂಬಲ ಇರೋ ವಂಶದ ಕುಡಿ ನನ್ನ ವಿರುದ್ಧ ಸ್ಪರ್ಧೆ ಮಾಡಿದೆ. ನಮ್ಮನ್ನು ಸಮುದಾಯದ ಲೀಡರ್ ಅಂತ ಯಾವಾಗ ಸ್ವೀಕಾರ ಮಾಡ್ತಾರೋ ಗೊತ್ತಿಲ್ಲ ಎಂದರು.

ಕಳೆದ ಚುನಾವಣೆ ಕಾಂಗ್ರೆಸ್ ಪಡೆದ ಮತ ೧೫ ಸಾವಿರ. ಈಗ ನಾವು ಒಂದು ಲಕ್ಷಕ್ಕಿಂತ ಅಧಿಕ ಮತ ಪಡೆದರೆ ಗೆಲುವು ಸಿಗುತ್ತೆ. ಈವರೆಗೂ ನನ್ನ ಎಲ್ಲಾ ಚುನಾವಣೆಯಲ್ಲೂ ೮೦ರಿಂದ ೯೦ ಸಾವಿರ ಮತಗಳನ್ನು ಪಡೆಯುತ್ತಿದ್ದೆ. ಈಗ ಕಾಂಗ್ರೆಸ್ ಅಭ್ಯರ್ಥಿ ಆಗಿದ್ದೇನೆ.

ಬಿಜೆಪಿ-ಜೆಡಿಎಸ್ ಎರಡರ ಮೈತ್ರಿ ಇಲ್ಲಿ ವರ್ಕ್ ಆಗಬಹುದು. ಹಾಗಾಂತ ಹತಾಶೆ ಇಲ್ಲ, ಸಮಬಲದ ಹೋರಾಟ ಅಷ್ಟೇ ಎಂದರು.

ಐಪಿಎಲ್ ನಂತೆ ನನ್ನ ರಾಜಕೀಯ ಜೀವನ:

ನಾನು ಕಾಂಗ್ರೆಸ್ ಸೇರುವ ಅನಿವಾರ್ಯ ಸ್ಥಿತಿಯನ್ನು ಕುಮಾರಸ್ವಾಮಿ ನಿರ್ಮಾಣ ಮಾಡಿದರು. ನಾನು ಕಟ್ಟಿದ ಬಿಜೆಪಿ ಬಿಟ್ಟು ಕಾಂಗ್ರೆಸ್‌ಗೆ ಸೇರುವ ಪರಿಸ್ಥಿತಿ ಬಂತು. ನಾನು ಹಿಂದೆ ಗೆದ್ದಿದ್ದು ಬಿಟ್ಟರೆ ಇಲ್ಲಿ ಕಾಂಗ್ರೆಸ್ ಗೆ ಅಸ್ತಿತ್ವ ಇರಲಿಲ್ಲ. ಈಗ ಕಡಿಮೆ ಸಮಯದಲ್ಲಿ ನಾನು ಸಂಘಟನೆ ಮಾಡಿದ್ದೇನೆ. ನನ್ನ ರಾಜಕೀಯ ಜೀವನ ಒಂಥರಾ ಐಪಿಎಲ್ ಮ್ಯಾಚ್ ರೀತಿ ಆಗಿದೆ. ಒಂದೊಂದು ಸೀಸನ್ ನಲ್ಲಿ ಒಂದೊಂದು ಟೀಮ್ ನಲ್ಲಿ ಆಟ ಆಡುವಂತಾಗಿದೆ ಎಂದರು.

ಧನ್ಯವಾದ:

ನನ್ನ ಈ ಚುನಾವಣೆಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಸೇರಿ ಹಲವು ಸಚಿವರು, ಕೆಲಸ ಮಾಡಿದ್ದಾರೆ. ಸಾಕಷ್ಟು ಶಾಸಕರು ಜವಾಬ್ದಾರಿ ತೆಗೆದುಕೊಂಡು ಕೆಲಸ ಮಾಡಿದ್ದಾರೆ. ಡಿ.ಕೆ.ಸುರೇಶ್ ವಿಶೇಷವಾಗಿ ಕೆಲಸ ಮಾಡಿದ್ದಾರೆ. ಅದೇ ರೀತಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಸಾಕಷ್ಟು ಶ್ರಮಿಸಿದ್ದಾರೆ. ಎಲ್ಲರಿಗೂ ಧನ್ಯವಾದ ಸಮರ್ಪಿಸುವುದಾಗಿ ತಿಳಿಸಿದರು.

ಈ ಸಮಯದಲ್ಲಿ ಮುಖಂಡ ಮಲುವೇಗೌಡ ಇತರರು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ