ಕಾಂಗ್ರೆಸ್‌ ಕಾರ್ಯಕರ್ತನ ಬಲಿ ಪಡೆದ ಗನ್‌ ಯಾರದ್ದು? ತನಿಖೆ

KannadaprabhaNewsNetwork |  
Published : Jan 03, 2026, 01:15 AM ISTUpdated : Jan 03, 2026, 05:05 AM IST
Ballary

ಸಾರಾಂಶ

ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ನಿವಾಸದ ಮುಂದೆ ಗುರುವಾರ ರಾತ್ರಿ ಗುಂಡೇಟಿಗೆ ಕಾಂಗ್ರೆಸ್‌ ಕಾರ್ಯಕರ್ತನೊಬ್ಬ ಬಲಿಯಾಗಿದ್ದಾನೆ. ಆದರೆ ಆತನನ್ನು ಕೊಂದ ಗುಂಡು ಯಾರದ್ದು ಎಂಬ ಪ್ರಶ್ನೆಗೆ ಈವರೆಗೂ ಉತ್ತರ ಸಿಕ್ಕಿಲ್ಲ

ಐವರು ಬಾಡಿಗಾರ್ಡ್‌ಗಳ ಬಂದೂಕು ಪೊಲೀಸ್‌ ವಶ

ಬಳ್ಳಾರಿ: ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ನಿವಾಸದ ಮುಂದೆ ಗುರುವಾರ ರಾತ್ರಿ ಗುಂಡೇಟಿಗೆ ಕಾಂಗ್ರೆಸ್‌ ಕಾರ್ಯಕರ್ತನೊಬ್ಬ ಬಲಿಯಾಗಿದ್ದಾನೆ. ಆದರೆ ಆತನನ್ನು ಕೊಂದ ಗುಂಡು ಯಾರದ್ದು ಎಂಬ ಪ್ರಶ್ನೆಗೆ ಈವರೆಗೂ ಉತ್ತರ ಸಿಕ್ಕಿಲ್ಲ. ‘ಯುವಕನ ದೇಹದಲ್ಲಿ ದೊರೆತ ಬುಲೆಟ್‌ ಪೊಲೀಸರದ್ದಲ್ಲ’ ಎಂದು ಎಡಿಜಿಪಿ ಹಿತೇಂದ್ರ ಸ್ಪಷ್ಟಪಡಿಸಿದ್ದಾರೆ. ಖಾಸಗಿ ಗನ್‌ಮ್ಯಾನ್‌ಗಳು ಗುಂಡು ಹಾರಿಸಿದ್ದಾರೆ ಎಂಬ ಆರೋಪ ಹಿನ್ನೆಲೆಯಲ್ಲಿ ಐವರು ಬಾಡಿಗಾರ್ಡ್‌ಗಳ ಬಂದೂಕನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಮತ್ತಷ್ಟು ಗನ್‌ಗಳನ್ನು ವಶಕ್ಕೆ ಪಡೆಯಲು ಮುಂದಾಗಿದ್ದಾರೆ. ಬುಲೆಟ್‌ ಅನ್ನು ಲ್ಯಾಬ್‌ಗೂ ಕಳುಹಿಸಿದ್ದಾರೆ.

 ಬಳ್ಳಾರಿ ಬೂದಿಮುಚ್ಚಿದ ಕೆಂಡ: ಬಿಗಿ ಖಾಕಿ ಭದ್ರತೆ

ಗುರುವಾರ ರಾತ್ರಿ ಸಂಭವಿಸಿದ ಗುಂರ್ಪು ಘರ್ಷಣೆ ಬಳಿಕ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ ಎಂದು ಪೊಲೀಸರು ಹೇಳುತ್ತಿದ್ದರೂ ಬಳ್ಳಾರಿಯಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಭದ್ರತೆಗಾಗಿ ಚಿತ್ರದುರ್ಗ, ಕೊಪ್ಪಳ, ವಿಜಯನಗರ ಜಿಲ್ಲೆಗಳಿಂದಲೂ ಪೊಲೀಸರನ್ನು ಕರೆಸಲಾಗಿದೆ. ಕೆಎಸ್‌ಆರ್‌ಪಿಯ 10, ಡಿಎಆರ್‌ನ 12 ತುಕಡಿಗಳನ್ನು ನಿಯೋಜಿಸಲಾಗಿದೆ.--

ಗುಂಡೇಟಿನ ದಾಳಿಗೆ ಬಳ್ಳಾರಿ ಎಸ್ಪಿಯೇ ಬಲಿ!

ಬಳ್ಳಾರಿಯಲ್ಲಿ ಗುರುವಾರ ರಾತ್ರಿ ಗುಂಡಿನ ದಾಳಿ ನಡೆದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪವನ್ ನೆಜ್ಜೂರ್ ಅವರನ್ನು ಸರ್ಕಾರ ಅಮಾನತುಗೊಳಿಸಿದೆ. ಗಮನಾರ್ಹ ಎಂದರೆ, ಗುರುವಾರವಷ್ಟೇ ಅವರು ಎಸ್‌ಪಿಯಾಗಿ ಚಾರ್ಜ್‌ ತೆಗೆದುಕೊಂಡಿದ್ದರು. ಒಂದೇ ದಿನಕ್ಕೆ ಸಸ್ಪೆಂಡ್‌ ಆಗಿದ್ದಾರೆ!

ಭರತ್‌ ರೆಡ್ಡಿಯ ಮೇಲೆ ಸಿಎಂ ಕೆಂಡಾಮಂಡಲ

ಬೆಂಗಳೂರು: ಬಳ್ಳಾರಿ ಘಟನೆಯ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗರಂ ಆಗಿದ್ದಾರೆ. ಬ್ಯಾನರ್‌ ಕಟ್ಟುವ ಸಣ್ಣ ವಿಚಾರಕ್ಕೆ ಇಷ್ಟು ದೊಡ್ಡ ಅನಾಹುತ ಆಗಬೇಕಿತ್ತಾ? ಎಂದು ಕೇಳಿದ್ದಾರೆ. ಅಲ್ಲದೆ, ಭರತ್‌ ರೆಡ್ಡಿ ಜತೆ ದೂರವಾಣಿಯಲ್ಲಿ ಮಾತನಾಡಲು ಒಪ್ಪದೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಭರತ್‌ ಬಂಧಿಸಿ: ಡಿಜಿಪಿಗೆಬಿಜೆಪಿ ನಿಯೋಗ ದೂರು

ಬೆಂಗಳೂರು: ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಕೊಲೆಗೆ ಬಳ್ಳಾರಿ ನಗರ ಶಾಸಕ ನಾರಾ ಭರತ್‌ ರೆಡ್ಡಿ ಹಾಗೂ ಅವರ ಸಹಚರರು ಯತ್ನಿಸಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆ ಹದಗೆಡಲು ಕಾರಣರಾದ ಶಾಸಕ ನಾರಾ ಭರತ್‌ ರೆಡ್ಡಿ ಅವರನ್ನು ಕೂಡಲೇ ಬಂಧಿಸುವಂತೆ ಬಿಜೆಪಿ ನಾಯಕರ ನಿಯೋಗ ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಡಾ। ಎಂ.ಎ.ಸಲೀಂ ಅವರಿಗೆ ಮನವಿ ಮಾಡಿದೆ.

--ಪರಿಸ್ಥಿತಿ ಅವಲೋಕನಕ್ಕೆ  ಕಾಂಗ್ರೆಸ್‌ನಿಂದ ನಿಯೋಗ

ಬೆಂಗಳೂರು: ಬಳ್ಳಾರಿಯಲ್ಲಿ ನಡೆದಿರುವ ಗುಂಪು ಘರ್ಷಣೆ ಹಾಗೂ ಒಬ್ಬ ವ್ಯಕ್ತಿ ಸಾವಿಗೀಡಾಗಿರುವ ಪ್ರಕರಣ ಸಂಬಂಧ ಸ್ಥಳಕ್ಕೆ ತೆರಳಿ ಪರಿಸ್ಥಿತಿ ಅವಲೋಕಿಸಿ ಮಾಹಿತಿ ನೀಡಲು ಕಾಂಗ್ರೆಸ್‌ ಪಕ್ಷ ಆರು ಮುಖಂಡರ ನಿಯೋಗ ಕಳುಹಿಸಿಕೊಟ್ಟಿದೆ.

--ಗಾಲಿ ರೆಡ್ಡಿ, ರಾಮುಲುವಿರುದ್ಧ ಎಫ್‌ಐಆರ್‌ 

ಬಳ್ಳಾರಿ: ಗುಂಡಿನ ದಾಳಿಗೆ ಸಂಬಂಧಿಸಿದಂತೆ ಬಳ್ಳಾರಿ ಪೊಲೀಸರು ಒಟ್ಟು ನಾಲ್ಕು ಪ್ರಕರಣಗಳನ್ನು ದಾಖಲಿಸಿದ್ದಾರೆ. ಶಾಸಕ ಜನಾರ್ದನ ರೆಡ್ಡಿ, ಸೋಮಶೇಖರ ರೆಡ್ಡಿ ಮತ್ತು ಶ್ರೀರಾಮುಲು ಹಾಗೂ ಭರತ್‌ ರೆಡ್ಡಿ ಆಪ್ತ ಸತೀಶ್‌ ರೆಡ್ಡಿ ಅವರನ್ನು ಆರೋಪಿ ಮಾಡಲಾಗಿದೆ.

ಗನ್‌ ಯಾರದ್ದು ಎಂಬ ಬಗ್ಗೆ ತನಿಖೆ 

ಬಳ್ಳಾರಿಯ ಗುಂಪು ಘರ್ಷಣೆ ಕುರಿತು ತನಿಖೆಗೆ ಈಗಾಗಲೇ ಸೂಚಿಸಲಾಗಿದೆ. ಘಟನೆಯಲ್ಲಿ ಬಳಸಲಾದ ಗನ್‌ ಯಾರಿಗೆ ಸೇರಿದ್ದು ಎಂಬುದೂ ಸೇರಿ ಕೂಲಂಕಷವಾಗಿ ತನಿಖೆ ನಡೆಸಿ ವರದಿ ನೀಡುವಂತೆ ತಿಳಿಸಿದ್ದೇನೆ. - ಸಿದ್ದರಾಮಯ್ಯ ಮುಖ್ಯಮಂತ್ರಿ 

ಬ್ಯಾನರ್‌ ವಿಚಾರವನ್ನೇ ದೊಡ್ಡದು ಮಾಡಿದ್ದಾರೆ 

ಬಳ್ಳಾರಿಯಲ್ಲಿ ಶಾಸಕರೇ ಮಟ್ಕಾ ದಂಧೆ ನಡೆಸುತ್ತಿದ್ದಾರೆ. ಜಿಲ್ಲೆಯಲ್ಲಿ ಕಾಂಗ್ರೆಸ್‌ ಜನರ ಪ್ರೀತಿ ಕಳೆದುಕೊಳ್ಳುತ್ತಿದೆ. ಹೀಗಾಗಿ, ಬ್ಯಾನರ್‌ ವಿಚಾರ ಇಟ್ಟುಕೊಂಡು ಇಷ್ಟು ದೊಡ್ಡಮಟ್ಟದ ಗಲಾಟೆ ನಡೆಸಿದ್ದಾರೆ.- ಜನಾರ್ದನ ರೆಡ್ಡಿ, ಮಾಜಿ ಸಚಿವ

ಗಾಲಿ ರೆಡ್ಡಿಯೇ ಟಾರ್ಗೆಟ್‌

ಈ ಗಲಾಟೆ ಪೂರ್ವನಿಯೋಜಿತ. ಗಾಲಿ ಜನಾರ್ದನ ರೆಡ್ಡಿ ಅವರನ್ನೇ ಗುರಿಯಾಗಿಸಿಕೊಂಡು ಕೃತ್ಯ ನಡೆಸಲಾಗಿದೆ. ಸಿನಿಮಾ ಶೈಲಿಯಲ್ಲಿ ಫೈರಿಂಗ್ ಮಾಡಿದ್ದಾರೆ.- ಬಿ.ಶ್ರೀರಾಮುಲು, ಮಾಜಿ ಸಚಿವ

 ಶಾಂತಿ ಭಂಗ ಆಗಿದ್ದರೆ ನಾನು ಕ್ಷಮೆ ಕೇಳುವೆ 

ನನ್ನಿಂದ ಸಾರ್ವಜನಿಕರ ಶಾಂತಿಗೆ ಭಂಗವಾಗಿದ್ದರೆ ಕ್ಷಮೆಯಾಚಿಸುತ್ತೇನೆ. ಘಟನೆ ಯಾರಿಂದಲೇ ನಡೆದಿರಲಿ. ತನಿಖೆ ಬಳಿಕ ಸತ್ಯಾಂಶ ಹೊರಬರಲಿದೆ.

ನಾರಾ ಭರತ್ ರೆಡ್ಡಿ, ಶಾಸಕ

ಗಾಲಿ ರೆಡ್ಡಿ ಕೊಲ್ಲಲು ಗುಂಡಿನ ದಾಳಿ

ಜನಾರ್ದನ ರೆಡ್ಡಿ ಹತ್ಯೆಗೆ ಗುಂಡಿನ ದಾಳಿ ನಡೆಸಲಾಗಿದೆ. ಗಲಭೆಗೆ ಕಾರಣರಾದ ನಾರಾ ಭರತ್‌ ರೆಡ್ಡಿಯನ್ನು ಬಂಧಿಸಬೇಕು. ಈ ಘಟನೆ ಸಂಬಂಧ ನ್ಯಾಯಾಂಗ ತನಿಖೆಯಾಗಬೇಕು.

ಆರ್‌.ಅಶೋಕ್‌, ವಿಪಕ್ಷ ನಾಯಕ 

ದ್ವೇಷದ ಕಾಯ್ದೆ ಅಡಿ ಭರತ್‌ರನ್ನು ಬಂಧಿಸಿ

ರಾಜ್ಯದಲ್ಲಿ ದ್ವೇಷ ಭಾಷಣ ಮಸೂದೆ ಕಾಯಿದೆ ಜಾರಿಗೆ ಮುಂದಾಗಿರುವ ಸಿದ್ದರಾಮಯ್ಯ ಅವರು ಈ ಕಾಯಿದೆಯಡಿ ಮೊದಲ ಅಪರಾಧಿಯನ್ನಾಗಿ ಶಾಸಕ ನಾರಾ ಭರತ್ ರೆಡ್ಡಿ ವಿರುದ್ಧ ಕ್ರಮ ಜರುಗಿಸಲಿ.

ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಸಹಕಾರ ಕ್ಷೇತ್ರಕ್ಕೆ ಆರ್ಥಿಕ ಶಿಸ್ತು ಅಗತ್ಯ
ಅಧಿಕಾರಿಗಳು ಜಾತ್ಯತೀತವಾಗಿ ಕೆಲಸ ಮಾಡಿ : ಸಿಎಂ ಸಿದ್ದರಾಮಯ್ಯ