- ವಾರ್ಷಿಕವಾಗಿ ನೀಡುತ್ತಿರುವ ₹6000 ನಿಜವಾದ ರೈತರಿಗೆ ಸಮರ್ಪಕವಾಗಿ ಸಿಗುತ್ತಿಲ್ಲ
- ಪ್ರಧಾನಿ, ಬಿಜೆಪಿಯ ಅನೇಕರು ಅಚ್ಚೇ ದಿನ್ ಆಯೇಗಿ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ- ಹೋರಿ ಬೆದರಿಸುವ ಹಬ್ಬ ಆಚರಣೆ ಸಂಬಂಧ ಪೊಲೀಸ್ ಇಲಾಖೆ ಎದುರು ಪ್ರತಿಭಟಿಸುವ ಅಗತ್ಯವಿತ್ತೆ?
- ಪ್ರತಿಭಟನೆ ನಡೆಸಿದ ಸಂಸದರು, ತಾಲೂಕು ಬಿಜೆಪಿ ಮುಖಂಡರ ವಿರುದ್ಧ ಮೊಕದ್ದಮೆ ದಾಖಲಿಸಬೇಬೇಕು- - - ಕನ್ನಡಪ್ರಭ ವಾರ್ತೆ, ಶಿಕಾರಿಪುರ
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಪಿಎಂ ಕಿಸಾನ್ ಯೋಜನೆಯಲ್ಲಿ ಹೊಸದಾಗಿ ಭೂಮಿ ಖರೀದಿಸಿದ ರೈತರನ್ನು ಕೈ ಬಿಡಲಾಗಿದೆ. ಅಲ್ಲದೇ, ವಾರ್ಷಿಕವಾಗಿ ನೀಡುತ್ತಿರುವ ₹6000 ನಿಜವಾದ ರೈತರಿಗೆ ಸಮರ್ಪಕವಾಗಿ ಸಿಗುತ್ತಿಲ್ಲ ಎಂದು ಪಿಎಲ್‌ಡಿ ಬ್ಯಾಂಕ್ ಮಾಜಿ ನಿರ್ದೇಶಕ ಹಾಗೂ ಸಾಂಪ್ಕೋಸ್ ನಿರ್ದೇಶಕ ಅಂಬಾರಗೊಪ್ಪ ರಾಜಪ್ಪ ಆರೋಪಿಸಿದರು.ಪಟ್ಟಣದ ಸುದ್ದಿಮನೆಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ 2019ರಲ್ಲಿ ಜಾರಿಗೆ ತಂದಿರುವ ಪ್ರಧಾನ ಮಂತ್ರಿ ಕಿಸಾನ್ (ಪಿಎಂ ಕಿಸಾನ್) ಯೋಜನೆಯಲ್ಲಿ ಈ ಅವಧಿಯಲ್ಲಿ ಅರ್ಜಿ ಸಲ್ಲಿಸಿದ ರೈತರಿಗೆ ಅನುಕೂಲವಾಗಿದೆ. ಈ ಯೋಜನೆಯಡಿ ಹಣ ಪಡೆಯುತ್ತಿದ್ದ ರೈತರು ಆಕಸ್ಮಿಕವಾಗಿ ಮರಣ ಹೊಂದಿ, ಅವರ ಪೌತಿಯ ನಂತರ ಖಾತೆ ಬದಲಾವಣೆ ಮಾಡಿಕೊಂಡ ಅವರ ಮಕ್ಕಳು ಮತ್ತು ಇತ್ತೀಚೆಗೆ ಭೂಮಿ ಖರೀದಿಸಿದ ರೈತರು ಪಿಎಂ ಕಿಸಾನ್ ಯೋಜನೆಯಲ್ಲಿ ಅರ್ಜಿ ಸಲ್ಲಿಸಿದವರಿಗೆ ಹಣ ದೊರಕುತ್ತಿಲ್ಲ. ಈ ಹಿಂದೆ ಹಣ ಪಡೆಯುತ್ತಿದ್ದ ತಾಲೂಕಿನ ಅನೇಕ ರೈತರನ್ನು ಕೈ ಬಿಡಲಾಗಿದೆ ಎಂದು ತಿಳಿಸಿದರು.
ಒಂದೂ ಅರ್ಜಿ ಮಾನ್ಯವಾಗಿಲ್ಲ:2019ರಲ್ಲಿ ಅರ್ಜಿ ಸಲ್ಲಿಸಿದವರಿಗೆ ಮಾತ್ರ ಹಣ ಜಮೆ ಆಗುತ್ತಿರುವುದು. ಈಗ 2023, ಒಟ್ಟು 4 ವರ್ಷ ಕಳೆದರೂ ಒಂದೇ ಒಂದು ಅರ್ಜಿ ಮಾನ್ಯವಾಗಿಲ್ಲ. ಈ ಬಗ್ಗೆ ಕೃಷಿ ಇಲಾಖೆ ಅಧಿಕಾರಿಗಳಿಗೆ ವಿಚಾರಿಸಿದರೆ ಅಧಿಕಾರಿಗಳು ಕೇಂದ್ರ ಸರ್ಕಾರ ಈ ಕುರಿತು ಯಾವುದೇ ರೀತಿಯ ಆದೇಶ ನೀಡಿಲ್ಲ ಎಂದು ಅರ್ಜಿ ಸಲ್ಲಿಸಿದ ರೈತರಿಗೆ ಉತ್ತರಿಸುತ್ತಿದ್ದಾರೆ. ದೇಶದ ಪ್ರಧಾನಿ ಸೇರಿದಂತೆ ಬಿಜೆಪಿಯ ಅನೇಕರು ಅಚ್ಚೇ ದಿನ್ ಆಯೇಗಿ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ಇದೇನಾ ಅಚ್ಚೇ ದಿನ್? ಎಂದು ಪ್ರಶ್ನಿಸಿದರು.
ಪ್ರತಿಭಟನೆ ವಿರುದ್ಧ ಮೊಕದ್ದಮೆ ದಾಖಲಿಸಿ:ಕೃಷಿ ಭೂಮಿ ಉಳಿಸಿ ಹೋರಾಟ ಸಮಿತಿ ಅಧ್ಯಕ್ಷ ಡಿ.ಎಸ್. ಈಶ್ವರಪ್ಪ ಮಾತನಾಡಿ, ದೀಪಾವಳಿ ಹಬ್ಬದಲ್ಲಿ ತಾಲೂಕಿನಲ್ಲಿ ಅಲ್ಲದೇ ರಾಜ್ಯದ ಅನೇಕ ಗ್ರಾಮೀಣ ಪ್ರದೇಶಗಳಲ್ಲಿ ಹೋರಿ ಬೆದರಿಸುವ ಹಬ್ಬ ಆಚರಿಸಲಾಗುವುದು. ಇಂಥ ಹಬ್ಬಗಳಲ್ಲಿ ಆಯೋಜಕರು ಜಿಲ್ಲಾಧಿಕಾರಿ ಅಥವಾ ಪೊಲೀಸ್ ಇಲಾಖೆಯಿಂದ ಅನುಮತಿ ಪಡೆಯುವುದು ನಿಯಮ. ಒಂದುವೇಳೆ ಅಲ್ಲಿ ಗಲಾಟೆಯಾಗಲಿ ಅಥವಾ ಇನ್ಯಾವುದೋ ಅಹಿತಕರ ಘಟನೆಗಳಾದರೆ ಪೊಲೀಸ್ ಇಲಾಖೆ ಜವಾಬ್ದಾರಿ. ಇದು ಮನಗಂಡಿರುವ ಸಂಸದರು, ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಅಥವಾ ಜಿಲ್ಲಾಧಿಕಾರಿ ಅಥವಾ ನೆರೆದಿದ್ದ ಹೋರಿ ಹಬ್ಬದ ಆಯೋಜಕರಿಗೆ ಮನವರಿಕೆ ಮಾಡಬಹುದಿತ್ತು. ಅಥವಾ ಸಂಸದರು ತಮ್ಮ ವೈಯಕ್ತಿಕ ಪತ್ರದ ಮೂಲಕ ಅನುಮತಿಗೆ ಮನವಿ ಮಾಡಬಹುದಿತ್ತು. ಅದನ್ನು ಬಿಟ್ಟು ಇತ್ತೀಚೆಗೆ ಪೊಲೀಸ್ ಇಲಾಖೆ ಎದುರು ಪ್ರತಿಭಟಿಸುವ ಅಗತ್ಯವಿತ್ತೆ? ಜಿಲ್ಲೆಯಿಂದ ಮೂರು ಬಾರಿ ಸಂಸದರಾಗಿ, ಒಂದು ಬಾರಿ ತಾಲೂಕಿನ ಶಾಸಕರಾದವರಿಗೆ ಇದು ಶೋಭೆಯಲ್ಲ. ಪೊಲೀಸ್ ಇಲಾಖೆ ಆವರಣದಲ್ಲಿ ನೂರಾರು ಯುವಕರನ್ನು ಒಗ್ಗೂಡಿಸಿಕೊಂಡು ಪ್ರತಿಭಟನೆ ನಡೆಸಿದ ಸಂಸದರು ಹಾಗೂ ತಾಲೂಕು ಬಿಜೆಪಿ ಮುಖಂಡ ಗುರುಮೂರ್ತಿ ವಿರುದ್ಧ ಮೊಕದ್ದಮೆ ದಾಖಲಿಸಬೇಬೇಕು ಎಂದು ಆಗ್ರಹಿಸಿದರು.
ಹಣ ಬಿಡುಗಡೆಯಾಗಿಲ್ಲ:ಗ್ರಾಪಂ ಮಾಜಿ ಸದಸ್ಯ ಹಾಗೂ ಬಗರ್‌ಹುಕುಂ ಸಮಿತಿ ಮಾಜಿ ನಿರ್ದೇಶಕ ಮಾರವಳ್ಳಿ ಉಮೇಶ್ ಮಾತನಾಡಿ, ನರೇಗಾ ಯೋಜನೆಯಡಿ ರಾಜ್ಯದಲ್ಲಿ ಹಣ ಬಿಡುಗಡೆಯಾದರೆ ಕೇಂದ್ರ ಸರ್ಕಾರದಿಂದ ಬರಬೇಕಾದ ಹಣ ಇದುವರೆಗೂ ಬಿಡುಗಡೆಯಾಗಿಲ್ಲ. ರಾಜ್ಯದಲ್ಲಿ ಬರಗಾಲದ ವರದಿಯನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕೇಂದ್ರಕ್ಕೆ ಕಳಿಸಿದ್ದರೂ ಈವರೆಗೂ ಅದರ ಬಗ್ಗೆ ಸ್ಪಂದನೆಗಳಿಲ್ಲ. 2019 ರಲ್ಲಿ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅತಿವೃಷ್ಟಿಯಿಂದ ₹32 ಸಾವಿರ ಕೋಟಿ ನಷ್ಟವಾಗಿತ್ತು. ಆದರೆ ಕೇಂದ್ರ ಸರ್ಕಾರವು ರಾಜ್ಯಕ್ಕೆ ₹1800 ಕೋಟಿ ಮಾತ್ರ ಬಿಡುಗಡೆ ಮಾಡಿತ್ತು. ಇನ್ನುಳಿದ ಹಣ ಇದುವರೆಗೂ ಬಂದಿಲ್ಲ. ಈ ಬಗ್ಗೆ ರಾಜ್ಯದಲ್ಲಿರುವ ಬಿಜೆಪಿಯ 25 ಸಂಸದರು ಪ್ರಧಾನಿ ನರೇಂದ್ರ ಮೋದಿ ಬಳಿ ಮಾತನಾಡುವುದು ಬಿಟ್ಟು, ನಮ್ಮ ಜಿಲ್ಲೆಯ ಸಂಸದರು ಚುನಾವಣೆ ಗಿಮಿಕ್‌ಗಾಗಿ ಅನವಶ್ಯಕವಾಗಿ ಕೆಲ ಯುವಕರನ್ನು ಒಗ್ಗೂಡಿಸಿಕೊಂಡು ಧರಣಿ ಅಥವಾ ಪ್ರತಿಭಟನೆ ನಡೆಸಿರುವುದು ಹಾಸ್ಯಾಸ್ಪದ ಎಂದು ಹೇಳಿದರು.
- - - -21ಕೆಎಸ್.ಕೆಪಿ1: ಪತ್ರಿಕಾಗೋಷ್ಠಿಯಲ್ಲಿ ಕೃಷಿ ಭೂಮಿ ಉಳಿಸಿ ಹೋರಾಟ ಸಮಿತಿ ಅಧ್ಯಕ್ಷ ಈಶ್ವರಪ್ಪ ಮಾತನಾಡಿದರು.