ಗ್ಯಾರಂಟಿಗಾಗಿ ಜನರ ಮೇಲೇಕೆ ಆರ್ಥಿಕ ಹೊರೆ: ಆಪ್ ಪ್ರಶ್ನೆ

KannadaprabhaNewsNetwork |  
Published : Jun 20, 2024, 01:08 AM IST
 19ಕೆಡಿವಿಜಿ2-ದಾವಣಗೆರೆಯಲ್ಲಿ ಬುಧವಾರ ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಕೆ.ಎಸ್.ಶಿವಕುಮಾರಪ್ಪ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಅಗತ್ಯ ವಸ್ತು, ಸೇವೆಗಳ ಬೆಲೆ ಏರಿಕೆಗೆ ಕಾಂಗ್ರೆಸ್ ಸರ್ಕಾರ ಮುನ್ನುಡಿ ಬರೆದು, ಜನರನ್ನು ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ನೂಕಿದೆ

ಕನ್ನಡಪ್ರಭ ವಾರ್ತೆ ದಾವಣಗೆರೆ

ಮುಂದಾಲೋಚನೆಯೇ ಇಲ್ಲದೇ ಗ್ಯಾರಂಟಿ ಘೋಷಣೆ ಮಾಡಿ, ಈಗ ಅವುಗಳಿಗೆ ಹಣ ಹೊಂದಿಸಲಾಗದೇ ಪೆಟ್ರೋಲ್, ಡೀಸೆಲ್ ಸೇರಿ ಎಲ್ಲದರ ಬೆಲೆ ಹೆಚ್ಚಿಸುತ್ತಾ ಜನರ ಗಾಯದ ಮೇಲೆ ಬರೆ ಎಳೆಯುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಕೆ.ಎಸ್‌.ಶಿವಕುಮಾರಪ್ಪ ಆರೋಪಿಸಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪೆಟ್ರೋಲ್‌ಗೆ ₹3, ಡೀಸೆಲ್‌ಗೆ ₹3.50 ಹೆಚ್ಚಿಸುವ ಮೂಲಕ ಎಲ್ಲಾ ವಸ್ತುಗಳ ಬೆಲೆ, ಪ್ರಯಾಣ ದರ ಹೆಚ್ಚಳ ಸೇರಿ ಎಲ್ಲಾ ಅಗತ್ಯ ವಸ್ತು, ಸೇವೆಗಳ ಬೆಲೆ ಏರಿಕೆಗೆ ಕಾಂಗ್ರೆಸ್ ಸರ್ಕಾರ ಮುನ್ನುಡಿ ಬರೆದು, ಜನರನ್ನು ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ನೂಕಿದೆ ಎಂದರು.

ತೈಲ ಬೆಲೆ ಹೆಚ್ಚಳವು ರಾಜ್ಯದ ಬೊಕ್ಕಸ ಖಾಲಿಯಾಗಿರುವುದನ್ನು ಸೂಚಿಸುತ್ತದೆ. ಅಸಮರ್ಪಕ ಗ್ಯಾರಂಟಿ ಯೋಜನೆ ಜಾರಿಗೊಳಿಸಿ, ಸಂಕಷ್ಟಕ್ಕೆ ಸಿಲುಕಿದ ರಾಜ್ಯ ಸರ್ಕಾರ ತೈಲ ಬೆಲೆ ಹೆಚ್ಚಿಸಿ, ಜನರಿಗೆ ಮತ್ತಷ್ಟು ಆರ್ಥಿಕ ಭಾರ ಹೇರಿದೆ. ದೆಹಲಿ ಮುಖ್ಯಮಂತ್ರಿ, ಆಮ್ ಆದ್ಮಿ ನಾಯಕ ಅರವಿಂದ ಕೇಜ್ರಿವಾಲ್‌ರ ಜನಪ್ರಿಯ ಯೋಜನೆ ನಕಲು ಮಾಡಿದ ಸಿದ್ದರಾಮಯ್ಯ ಅಧ್ಯಯನ ರಹಿತವಾಗಿ ತರಾತುರಿಯಲ್ಲಿ ಗ್ಯಾರಂಟಿ, ತಂದು ರಾಜ್ಯವನ್ನು ಆರ್ಥಿಕ ಸಂಕಷ್ಟಕ್ಕೆ ನೂಕಿದ್ದಾರೆ ಎಂದು ಆರೋಪಿಸಿದರು.

ಕೇಜ್ರಿವಾಲ್‌ರ ಯೋಜನೆ ನಕಲು ಮಾಡುವ ಭರದಲ್ಲಿ ಸರಿಯಾಗಿ ಅಧ್ಯಯನವನ್ನೇ ಮಾಡದ ಸಿದ್ದರಾಮಯ್ಯ ಗ್ಯಾರಂಟಿ ಜಾರಿಗೊಳಿಸಿದರು. ನಿರಂತರವಾಗಿ ನಡೆಯುತ್ತಿರುವ ಭ್ರಷ್ಟಾಚಾರ ತಡೆಯುವಲ್ಲಿ ವಿಫಲವಾದ ಕಾಂಗ್ರೆಸ್ ಸರ್ಕಾರವು ರಾಜ್ಯ ಸರ್ಕಾರದ ಬೊಕ್ಕಸ ಖಾಲಿಯಾಗುವುದಕ್ಕೂ ಕಾರಣವಾಗಿದೆ. ಮದ್ಯ, ತೈಲ ದರ ಭಾರೀ ಪ್ರಮಾಣದಲ್ಲಿ ಹೆಚ್ಚಿಸುತ್ತಿದೆ. ಗ್ಯಾರಂಟಿಗಳನ್ನು ಒಂದು ಕೈಯಲ್ಲಿ ಕೊಟ್ಟು, ಮತ್ತೊಂದು ಕೈಯಲ್ಲಿ ಅದರ ದುಪ್ಪಟ್ಟು ಹಣವನ್ನು ಜನರಿಂದ ಕಸಿಯುವ ಕೆಲಸ ಮಾಡುತ್ತಿದೆ ಎಂದು ಟೀಕಿಸಿದರು.

ಸದಾ ಬಡವರು, ಮಧ್ಯಮ ವರ್ಗದವರ ಪರ ಸರ್ಕಾರವೆಂದು ಹೇಳುತ್ತಲೇ ಅದೇ ಜನರ ಬೆನ್ನಿಗೆ ಚೂರಿ ಹಾಕುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ತನ್ನ ಆಡಳಿತ ವೈಪಲ್ಯ ಮರೆಮಾಚಲು, ಗ್ಯಾರಂಟಿಗಳಿಗೆ ಹಣ ಹೊಂದಿಸಲು ಜನ ಸಾಮಾನ್ಯರಿಗೆ ಆರ್ಥಿಕ ಹೊರೆ ಹೇರುತ್ತಿದೆ. ಜನರ ಮೇಲೆ ಸರ್ಕಾರ ಮಾಡುತ್ತಿರುವ ಆರ್ಥಿಕ ನಷ್ಟದ ಹೊರೆ ಹೊರಿಸುವ ಕೆಲಸ ಸರಿಯಲ್ಲ. ಜನರ ಮೇಲೆ ಭಾರ ಹೊರಿಸುವುದಿದ್ದರೆ ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ ಇತ್ಯಾದಿ ಗ್ಯಾರಂಟಿ ಅಲಂಕಾರಕ್ಕೆಂದು ಮಾಡಿದ್ದೀರಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಧೋರಣೆಗೆ ಶಿವಕುಮಾರಪ್ಪ ಪ್ರಶ್ನಿಸಿದರು.

ಪಕ್ಷದ ಮುಖಂಡರಾದ ಆದಿಲ್ ಖಾನ್‌, ರವೀಂದ್ರ, ಸುರೇಶ ಶಿಡ್ಲಪ್ಪ, ಅಜಿತಕುಮಾರ, ಧರ್ಮನಾಯ್ಕ, ಬಸವರಾಜ ಇತರರು ಇದ್ದರು.

PREV

Recommended Stories

ಬೆಂಗಳೂರು : ದೀಪಾವಳಿ ವೇಳೆ ವಾಯುಮಾಲಿನ್ಯ ಹೆಚ್ಚಾಗಲಿಲ್ಲ, ಭಾರೀ ಇಳಿಕೆ!
ಹೊಸೂರಿಗೆ ಮೆಟ್ರೋ ವಿಸ್ತರಣೆ ಅಸಾಧ್ಯ : ರಾಜ್ಯ ಸರ್ಕಾರಕ್ಕೆ ಬಿಎಂಆರ್‌ಸಿಎಲ್‌ ವರದಿ