ಅಧಿಕಾರಿಗಳೇ ಏಕಪಕ್ಷೀಯ ನಿರ್ಧಾರ ಕೈಗೊಂಡರೆ ಸಭೆ ನಡೆಸುವುದೇಕೆ?: ಪುರಸಭೆ ಸದಸ್ಯರ ಆಕ್ರೋಶ

KannadaprabhaNewsNetwork |  
Published : Jun 19, 2025, 12:34 AM IST
18ಎಸ್‌ವಿಆರ್‌01 | Kannada Prabha

ಸಾರಾಂಶ

ನಾಮನಿರ್ದೇಶಿತ ಸದಸ್ಯ ಲಕ್ಷ್ಮಣ ಕನವಳ್ಳಿ ಮಾತನಾಡಿ, ಪುರಸಭೆಗೆ ಕಾನೂನು ಸಲಹೆಗಾರರ ನೇಮಕ ಮಾಡಿಕೊಳ್ಳಲು ವಿಷಯ ಪ್ರಸ್ತಾವನೆ ಸಲ್ಲಿಸಿದ್ದಿರಿ. ಆದರೆ, ಸದಸ್ಯರ ಗಮನಕ್ಕೆ ಬಾರದೆ ಕಾನೂನು ಸಲಹೆಗಾರರ ನೇಮಕ ಮಾಡಿಕೊಂಡಿದ್ದಿರಿ. ಸಭೆಯ ಒಪ್ಪಿಗೆ ಇಲ್ಲದೆ ಆಯ್ಕೆ ಮಾಡಿಕೊಂಡಿರುವುದು ಎಷ್ಟು ಸರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸವಣೂರು: ಸ್ಥಳೀಯ ಪುರಸಭೆಯಯಲ್ಲಿ ಸದಸ್ಯರಿಗೆ ಮಾಹಿತಿ ನೀಡದೇ ಏಕಪಕ್ಷಿಯ ನಿರ್ಧಾರ ಕೈಗೊಂಡರೆ ಸಭೆ ಏಕೆ ನಡೆಸಬೇಕು ಎಂದು ಕಾಂಗ್ರೆಸ್‌ನ ಹಿರಿಯ ಸದಸ್ಯ ಅಬ್ದುಲ್ ಖಾದರ ಫರಾಶ ಅವರು ಪುರಸಭೆ ಮುಖ್ಯಾಧಿಕಾರಿ ನೀಲಪ್ಪ ಹಾದಿಮನಿ ಅವರನ್ನು ತರಾಟೆಗೆ ತೆಗೆದುಕೊಂಡರು.

ಮಂಗಳವಾರ ಪಟ್ಟಣದ ಪುರಸಭೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮುಖ್ಯಾಧಿಕಾರಿ ನೀಲಪ್ಪ ಹಾದಿಮನಿ ಅವರು ಹಿಂದಿನ ಸಭೆಯ ನಡಾವಳಿಗಳನ್ನು ಓದಿ ಹೇಳಿ ದೃಢೀಕರಿಸುತ್ತಿದ್ದಂತೆ ಸದಸ್ಯ ಫರಾಶ ಅವರು, ಹಿಂದಿನ ಸಭೆಯಲ್ಲಿ ಕಾಮಗಾರಿಗಳ ಕ್ರಿಯಾಯೋಜನೆ ಕುರಿತು ಸರ್ವ ಸದಸ್ಯರ ಜತೆ ಚರ್ಚಿಸುವುದಾಗಿ ಹೇಳಿದ್ದಿರಿ. ಹಾಗೇ ಮಾಡದೇ ಈ ಸಭೆಯಲ್ಲಿ ಹೇಗೆ ಮಂಜೂರಾತಿ ದೃಢೀಕರಿಸಿದ್ದಿರಿ ಎಂದು ಪ್ರಶ್ನಿಸಿದರು.

ಸದಸ್ಯರಿಂದ ಚರ್ಚೆಯಾಗುವ ವಿಷಯಗಳ ಕುರಿತು ರಜಿಸ್ಟರ್‌ನಲ್ಲಿ ರೆಕಾರ್ಡ್ ಮಾಡುವುದಾದರೆ ಸಭೆ ಕರೆಯಿರಿ. ಪುರಸಭೆಯ ಜಮಾ, ಖರ್ಚಿನಲ್ಲಿ ಪ್ರತಿ ತಿಂಗಳಿಗೆ ಮೋಟರ್ ರಿಪೇರಿ ₹2ರಿಂದ ₹3 ಲಕ್ಷ ಖರ್ಚು ತೋರಿಸುತ್ತಿದ್ದಿರಿ. ಶಾಮಿಯಾನಕ್ಕೆ ₹3 ಲಕ್ಷ ಖರ್ಚು ತೋರಿಸಿದ್ದಿರಿ. ಅದು ಹೇಗೆ ಸಾಧ್ಯ? ಇಷ್ಟು ಸೋರಿಕೆಯಾಗಿದೆ ಎಂದರೆ ಜಮಾ, ಖರ್ಚಿಗೆ ನನ್ನ ಸಂಪೂರ್ಣ ವಿರೋಧವಿದೆ ಎಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

ಮುಖ್ಯಾಧಿಕಾರಿ ನೀಲಪ್ಪ ಹಾದಿಮನಿ ಮಾತನಾಡಿ, ಕಾಮಗಾರಿ ಕ್ರಿಯಾಯೋಜನೆ ತಿದ್ದುಪಡಿಗೆ ಅವಕಾಶವಿದೆ. ನಿಮ್ಮ ಸಲಹೆ, ಹೇಳಿಕೆಯನ್ನು ದಾಖಲಿಸುವುದಾಗಿ ಹೇಳಿದರು. ಚುನಾವಣೆ ಸಂದರ್ಭದಲ್ಲಿ ಎಲ್ಲ ಬೂತ್‌ಗಳ ಮುಂದೆ ಶಾಮಿಯಾನ ಹಾಕಿರುವುದಕ್ಕೆ ಖರ್ಚಾಗಿದೆ ಎಂದು ವಿವರಣೆ ನೀಡಿದರು.ನಾಮನಿರ್ದೇಶಿತ ಸದಸ್ಯ ಲಕ್ಷ್ಮಣ ಕನವಳ್ಳಿ ಮಾತನಾಡಿ, ಪುರಸಭೆಗೆ ಕಾನೂನು ಸಲಹೆಗಾರರ ನೇಮಕ ಮಾಡಿಕೊಳ್ಳಲು ವಿಷಯ ಪ್ರಸ್ತಾವನೆ ಸಲ್ಲಿಸಿದ್ದಿರಿ. ಆದರೆ, ಸದಸ್ಯರ ಗಮನಕ್ಕೆ ಬಾರದೆ ಕಾನೂನು ಸಲಹೆಗಾರರ ನೇಮಕ ಮಾಡಿಕೊಂಡಿದ್ದಿರಿ. ಸಭೆಯ ಒಪ್ಪಿಗೆ ಇಲ್ಲದೆ ಆಯ್ಕೆ ಮಾಡಿಕೊಂಡಿರುವುದು ಎಷ್ಟು ಸರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.ಎಸ್‌ಸಿಪಿ ಮತ್ತು ಟಿಎಸ್‌ಪಿ ಅನುದಾನವನ್ನು ದಲಿತರ ಕಾಲನಿಗೆ ಬಳಕೆ ಮಾಡಬೇಕು. ಬೇರೆಡೆ ಬಳಕೆ ಮಾಡಕೂಡದು ಎಂದು ತಾಕಿತು ಮಾಡಿದರು.ಸಭೆಯಲ್ಲಿ ವಿವಿಧ ಕಾಮಗಾರಿಗಳ ಟೆಂಡರ್‌ಗೆ ದರ ಮಂಜೂರಾತಿ ವಿಷಯ ಪ್ರಾಸ್ತಾಪಿಸುತ್ತಿದ್ದಂತೆ ಪುರಸಭೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳಿಗೆ ಸರ್ಕಾರದ ದರಕ್ಕಿಂತ ಕಡಿಮೆ ಪ್ರಮಾಣದ ದರಕ್ಕೆ ಗುತ್ತಿಗೆದಾರರು ಕೆಲಸ ಮಾಡಲು ಮುಂದಾಗುತ್ತಿದ್ದಾರೆ. ಕಾಮಗಾರಿ ಮಾಡುತ್ತಾರೋ ಅಥವಾ ರಸ್ತೆಗೆ ಮಣ್ಣೆರಚಿ ಹೋಗುತ್ತಾರೋ ಎಂದು ಸದಸ್ಯರು ಅಧಿಕಾರಿಗಳನ್ನು ಪ್ರಶ್ನಿಸಿದರು.

ಪುರಸಭೆ ಅಧ್ಯಕ್ಷ ಅಲ್ಲಾವುದ್ದೀನ್ ಮನಿಯಾರ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಉಪಾಧ್ಯಕ್ಷೆ ಖಮರುನ್ನಿಸಾ ಪಟೇಲ್, ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಆರ್. ಕಲ್ಮಠ, ಎಂಜಿನಿಯರ್ ನಾಗರಾಜ ಮಿರ್ಜಿ, ಸದಸ್ಯರು, ಅಧಿಕಾರಿಗಳು ಹಾಗೂ ಇತರರು ಪಾಲ್ಗೊಂಡಿದ್ದರು.

PREV

Recommended Stories

ಸಾಂಬ್ರಾ ವಿಮಾನ ನಿಲ್ದಾಣದವರೆಗೆ ಚತುಷ್ಪಥ ರಸ್ತೆ
ಮುಷ್ಕರಕ್ಕೆ ನೌಕರರಿಂದ ಮಿಶ್ರ ಪ್ರತಿಕ್ರಿಯೆ