ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದ ಎಂಸಿ ಕಾಲನಿ ಬಿ ಬ್ಲಾಕ್‌ನಲ್ಲಿ ಭಾರತ ಸೇವಾದಳ ಕಚೇರಿ ಹಿಂಭಾಗದಲ್ಲಿ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿನಿಯರ ನಿಲಯವಿದ್ದು, ಸುಮಾರು 150 ವಿದ್ಯಾರ್ಥಿನಿಯರ ಪೈಕಿ ಬಹುತೇಕರು ಬೆಳಿಗ್ಗೆ ತಿಂಡಿ, ಊಟಕ್ಕೆ ಹೊರಗೆ ಹೊಟೇಲ್, ಕ್ಯಾಂಟೀನ್ ಅವಲಂಬಿಸಿರುವುದು ಸರ್ಕಾರಿ ಹಾಸ್ಟೆಲ್‌ನ ಅವ್ಯವಸ್ಥೆಗೆ ಹಿಡಿದ ಕೈಗನ್ನಡಿ.
ನಿತ್ಯ ಬೆಳಿಗ್ಗೆ ತಿಂಡಿ, ಮಧ್ಯಾಹ್ನ ಊಟ, ರಾತ್ರಿ ಊಟಕ್ಕೆ ಏನೆಲ್ಲಾ ಬಡಿಸಬೇಕೆಂಬ ಬಗ್ಗೆ ಸಮಾಜ ಕಲ್ಯಾಣ ಇಲಾಖೆಯ ಮೆನು ಇದೆ. ಆದರೆ, ವಿದ್ಯಾರ್ಥಿನಿಯರಿಗೆ ನೀಡುವ ತಿಂಡಿ, ಊಟವನ್ನು ನಿತ್ಯವೂ ಇದೇ ಹಾಸ್ಟೆಲ್ ನ ಹಿಂಭಾಗದ ಕಾಂಪೌಂಡ್‌ಗೆ ಹೊಂದಿರುವ ಖಾಲಿ ನಿವೇಶನದಲ್ಲಿ ಬಕೆಟ್‌ಗಳಲ್ಲಿ ತುಂಬಿ ತಂದು ಹಾಡಹಗಲೇ ಸುರಿಯುತ್ತಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.ಕಳೆದ 20-25 ದಿನದಿಂದ ಈಚೆಗೆ ಹಾಸ್ಟೆಲ್ ವಿದ್ಯಾರ್ಥಿನಿಯರ ಪೈಕಿ ಕೆಲವರು, ಹಾಸ್ಟೆಲ್ ತಿಂಡಿ, ಊಟದ ಅವ್ಯವಸ್ಥೆಗೆ ರೋಸಿ ಹೋದ ವಿದ್ಯಾರ್ಥಿನಿಯರು ಸಮೀಪದ ಹೊಟೇಲ್ ಅಥವಾ ಕಾಲೇಜು ಕ್ಯಾಂಟೀನ್‌ಗಳ ಅವಲಂಬಿಸಿದ್ದಾರೆ. ಅಲ್ಲದೇ, ನೂರಾರು ಮಕ್ಕಳಿಗೆ ಮಾಡಿದ ತಿಂಡಿ, ಊಟ ತಂದು ಸುರಿಯುತ್ತಿರುವುದು ಸಾಕಷ್ಟು ಅನುಮಾನ, ಪ್ರಶ್ನೆಗಳಿಗೆ ಕಾರಣವಾಗಿದೆ.
ಈ ಸಮಸ್ಯೆ ವಾರ್ಡನ್ ಗಮನಕ್ಕೆ ಇದ್ಯಾವ ವಿಚಾರವೂ ಬರುತ್ತಿಲ್ಲವೇ? ಬಂದರೂ ಯಾಕೆ ಕ್ರಮ ಕೈಗೊಂಡಿಲ್ಲವೆಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಈ ಬಗ್ಗೆ ಜಿಲ್ಲಾಡಳಿತ, ಜಿಪಂ, ಸಮಾಜ ಕಲ್ಯಾಣ ಅಧಿಕಾರಿಗಳು ಖುದ್ದಾಗಿ ಭೇಟಿ ನೀಡಿ, ಪರಿಶೀಲಿಸಬೇಕಿದೆ.
ವಿದ್ಯಾರ್ಥಿನಿಯರು ತಮ್ಮ ಕುಟುಂಬ, ಹೆತ್ತವರ ಸಂಕಷ್ಟದ ಮಧ್ಯೆಯೂ ಕಾಲೇಜು ಶಿಕ್ಷಣಕ್ಕೆಂದು ಹಾಸ್ಟೆಲ್ ಪ್ರವೇಶ ಪಡೆದಿರುತ್ತಾರೆ. ಹಾಸ್ಟೆಲ್‌ನ ಅವ್ಯವಸ್ಥೆ ಬಗ್ಗೆ ಹೇಳಿಕೊಂಡರೆ ತಮ್ಮ ಓದಿಗೆ ತೊಡಕಾಗಬಹುದು, ಹಾಸ್ಟೆಲ್‌ನಲ್ಲಿ ಅವ್ಯವಸ್ಥೆ ಬಗ್ಗೆ ಪ್ರಸ್ತಾಪಿಸಿದರೆ ಸಿಬ್ಬಂದಿ ಕೆಂಗಣ್ಣಿಗೆ ತಾವು ಗುರಿಯಾಗಬಹುದೆಂಬ ಕಾರಣಕ್ಕೆ ಯಾರೂ ಧ್ವನಿ ಎತ್ತದಂತಾಗಿದೆ. ಮೇಲಾಧಿಕಾರಿಗಳು ಹಾಸ್ಟೆಲ್‌ಗೆ ಭೇಟಿ ನೀಡಿ, ಒಬ್ಬೊಬ್ಬರೆ ವಿದ್ಯಾರ್ಥಿನಿಯರನ್ನು ವಿಚಾರಿಸಿದರೆ ವಿದ್ಯಾರ್ಥಿ ನಿಲಯದ ಸಂಕಷ್ಟ, ಸಮಸ್ಯೆ ಗೊತ್ತಾಗುವ ಸಾಧ್ಯತೆಯೂ ಇಲ್ಲದಿಲ್ಲ. ಇದೊಂದೇ ಹಾಸ್ಟೆಲ್ ಅಲ್ಲ, ಬಹುತೇಕ ಕಡೆ ಇದೇ ಸ್ಥಿತಿ ಎನ್ನಲಾಗಿದೆ. ವಿದ್ಯಾರ್ಥಿ ನಿಲಯದ ಮಕ್ಕಳಿಗಾಗಿ ನೀಡುವ ಆಹಾರ ಹೀಗೆ ಹಾಸ್ಟೆಲ್ ಹಿಂಭಾಗ ತಂದು ಸುರಿದು, ರಾಶಿ ಹಾಕುತ್ತಿದ್ದಾರೆ. ಹಳ್ಳಿಗಳಲ್ಲಿ ಕೊಟ್ಟಿಗೆ ಗೊಬ್ಬರಕ್ಕೆ ಹಾಕುವಂತೆ ಬಕೆಟ್‌ನಲ್ಲಿ ತುಂಬಿ ಆಹಾರ ಸುರಿಯುತ್ತಿರುವುದು ಮನಸ್ಸಿಗೆ ನೋವುಂಟು ಮಾಡುತ್ತದೆ. ಅದೆಷ್ಟೋ ಜನ ಅನ್ನವಿಲ್ಲದೇ ಪರದಾಡುತ್ತಾರೆ. ಅಂತಹದ್ದರಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್‌ನಲ್ಲಿ ಹೀಗೆ ಅನ್ನ ವ್ಯರ್ಥವಾಗಿ ಚೆಲ್ಲುತ್ತಿರುವುದು ಮನಸ್ಸಿಗೆ ನೋವುಂಟು ಮಾಡುತ್ತಿದೆ.ಕೆ.ಟಿ.ಗೋಪಾಲಗೌಡ, ರಾಜ್ಯಾಧ್ಯಕ್ಷ, ಕರುನಾಡ ಕನ್ನಡ ಸೇನೆ