ಸರ್ಕಾರಕ್ಕೆ ಉತ್ತರ ಕನ್ನಡದ ಬಗ್ಗೆ ತಾತ್ಸಾರವೇಕೆ?

KannadaprabhaNewsNetwork |  
Published : Nov 10, 2025, 01:45 AM IST
ಫೋಟೋ ನ.೮ ವೈ.ಎಲ್.ಪಿ. ೦೨ | Kannada Prabha

ಸಾರಾಂಶ

ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಅನುಷ್ಠಾನ ಮಾಡಿದ ಸರ್ಕಾರಕ್ಕೆ ಉತ್ತರ ಕನ್ನಡದ ಬಗ್ಗೆ ತಾತ್ಸಾರವೇಕೆ? ದೇಶಕ್ಕಾಗಿ ತ್ಯಾಗ ಮಾಡಿದ ಜಿಲ್ಲೆ ಎಂಬುದು ತಪ್ಪಾಯಿತೆ.

ಅಣಕು ಯುವ ಸಂಸತ್ತು ಸ್ಪರ್ಧಾ ಕಾರ್ಯಕ್ರಮದಲ್ಲಿ ವಿಪಕ್ಷ ನಾಯಕಿ ಪ್ರಶ್ನೆ

ಕನ್ನಡಪ್ರಭ ವಾರ್ತೆ ಯಲ್ಲಾಪುರ

ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಅನುಷ್ಠಾನ ಮಾಡಿದ ಸರ್ಕಾರಕ್ಕೆ ಉತ್ತರ ಕನ್ನಡದ ಬಗ್ಗೆ ತಾತ್ಸಾರವೇಕೆ? ದೇಶಕ್ಕಾಗಿ ತ್ಯಾಗ ಮಾಡಿದ ಜಿಲ್ಲೆ ಎಂಬುದು ತಪ್ಪಾಯಿತೆ. ಉತ್ತರ ಕನ್ನಡ ಜಿಲ್ಲೆಗೇಕೆ ಮಲತಾಯಿ ಧೋರಣೆ, ಆರ್ಥಿಕ ಶಕ್ತಿ ಮತ್ತು ಅನುಷ್ಠಾನದ ಇಚ್ಛಾಶಕ್ತಿ ಇಲ್ಲದೆ ಹೋದರೆ ಈ ಕೂಡಲೇ ರಾಜಿನಾಮೆ ನೀಡಿ ಮನೆಗೆ ನಡೆಯಿರಿ ಎಂದು ವಿರೋಧ ಪಕ್ಷದ ನಾಯಕಿ ಮುಖ್ಯಮಂತ್ರಿಗೆ ಆಗ್ರಹಿಸಿದರು.

ಪಟ್ಟಣದ ತಾಪಂ ಸಭಾಭವನದಲ್ಲಿ ಶಿಕ್ಷಣ ಇಲಾಖೆ, ಜಿಪಂ ಹಾಗೂ ತಾಲೂಕು ಆಡಳಿತದ ಸಂಯುಕ್ತಾಶ್ರಯದಲ್ಲಿ ನಡೆದ ತಾಲೂಕು ಮಟ್ಟದ ಅಣಕು ಯುವ ಸಂಸತ್ತು ಸ್ಪರ್ಧಾ ಕಾರ್ಯಕ್ರಮದಲ್ಲಿ ವಿರೋಧ ಪಕ್ಷದ ಶಾಸಕಿಯಾಗಿದ್ದ ವಿದ್ಯಾರ್ಥಿನಿ ತನ್ಮಯಿ ಭಟ್ಟ ಮುಖ್ಯಮಂತ್ರಿಯಾಗಿದ್ದ ಪ್ರಣವ ಭಟ್ಟಗೆ ಪ್ರಶ್ನೋತ್ತರ ವೇಳೆಯ ಚುಕ್ಕೆ ಗುರುತಿನ ಪ್ರಶ್ನೆ ಕೇಳಿ ಗಮನ ಸೆಳೆದರು.ಸದನದಲ್ಲಿ ಸ್ವಾರಸ್ಯಕರ ಘಟನೆಗಳು ನಡೆದವು. ಆಡಳಿತ ಪಕ್ಷದ ಗೃಹ ಸಚಿವರ ಬದಲು ಮತ್ತೋರ್ವ ಸಚಿವೆ ಪ್ರಶ್ನೆಯೊಂದಕ್ಕೆ ಉತ್ತರಿಸಲು ಮುಂದಾಗುತ್ತಿದ್ದಂತೆ ಸಿಡಿದೆದ್ದ ವಿರೋಧ ಪಕ್ಷದ ಶಾಸಕಿ ಇಂತಹ ಅಸಮರ್ಥ ಗೃಹ ಸಚಿವರು ಇದ್ದರೇನು ಪ್ರಯೋಜನ ಎಂದು ದಿಕ್ಕಾರ ಕೂಗುತ್ತಲೇ ರಾಜಿನಾಮೆಗೆ ಆಗ್ರಹಿಸಿ ಕಲಾಪ ಬಹಿಷ್ಕರಿಸಿ ಸದನದ ಬಾವಿಗಿಳಿದು ಪ್ರತಿಭಟನೆ ವ್ಯಕ್ತಪಡಿಸಿ ಹೊರನಡೆದರು. ಪ್ರತಿ ಉತ್ತಮ ಪ್ರಶ್ನೆ ಹಾಗೂ ಉತ್ತರಕ್ಕೆ ಶಾಸಕ ಶಾಸಕಿಯರು ಮೇಜುತಟ್ಟಿ ಅಭಿನಂದಿಸಿದ್ದು ನಿಜವಾದ ಸದನದ ನಡಾವಳಿ ಕಂಡುಬರುತ್ತಿತ್ತು.

ತಾಲೂಕಿನ ವಿವಿಧ ಶಾಲೆಗಳ ಒಟ್ಟು ೬೬ ವಿದ್ಯಾರ್ಥಿಗಳು ಯುವ ಸಂಸತ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.ಮೊದಲು ಸಭಾಪತಿಗಳ ಆಯ್ಕೆ ನಡೆಯಿತು. ನಂತರ ಮುಖ್ಯಮಂತ್ರಿ ಮತ್ತು ವಿರೋಧ ಪಕ್ಷದ ನಾಯಕನ ಆಯ್ಕೆ ನಡೆಯಿತು. ವಿವಿಧ ಖಾತೆಗಳಿಗೆ ಸಚಿವರ ಆಯ್ಕೆ, ಇದರಲ್ಲಿ ಉತ್ತಮ ಭಾಗವಹಿಸುವಿಕೆಯೊಂದಿಗೆ ಆಯ್ಕೆಯಾದ ಒಟ್ಟು ೫ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಲಿದ್ದಾರೆ ಎಂದು ಸಂಘಟಕರು ತಿಳಿಸಿದರು.

ನಿರ್ಣಾಯಕರಾಗಿ ರಾಜಾರಾಮ ವೈದ್ಯ, ಶ್ರೀಪಾದ ಹೆಗಡೆ, ರವಿಚಂದ್ರ ನಾಯ್ಕ ಕಾರ್ಯ ನಿರ್ವಹಿಸಿದರು. ಅಂತಿಮವಾಗಿ ಪ್ರಣವ ಗಣಪತಿ ಭಟ್ಟ ಸರ್ಕಾರಿ ಪ್ರೌಢಶಾಲೆ ಬಿಸಗೋಡು, ಪನ್ನಗ ಕೃಷ್ಣಮೂರ್ತಿ ಶಾಸ್ತ್ರಿ ಶ್ರೀರಾಜರಾಜೇಶ್ವರಿ ಪ್ರೌಢಶಾಲೆ ಮಂಚೀಕೇರಿ, ಶ್ರೀಯಾ ಶ್ರೀಧರ ಭಟ್ಟ ಸರ್ಕಾರಿ ಪ್ರೌಢಶಾಲೆ, ಬಿ.ತನ್ಮಯಿ ಮತ್ತು ಶ್ರದ್ಧಾ ಹರಿಜನ ವಿಶ್ವದರ್ಶನ ಕನ್ನಡ ಮಾಧ್ಯಮ ಶಾಲೆ ಯಲ್ಲಾಪುರ ಕ್ರಮವಾಗಿ ಐವರು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದರು.

ಶಾಸಕ ಶಿವರಾಮ ಹೆಬ್ಬಾರ್ ಬಹುಮಾನ ವಿತರಿಸಿದರು. ಸಮಾಜ ವಿಜ್ಞಾನ ಬಳಗದ ಅಧ್ಯಕ್ಷ ಜನಾರ್ಧನ ಗಾಂವ್ಕರ್, ಬಿಆರ್‌ಸಿ ಸಮನ್ವಯಾಧಿಕಾರಿ ಸಂತೋಷ ಜಗಳೂರು, ಶಿಕ್ಷಣ ಸಂಯೋಜಕ ಪ್ರಶಾಂತ ಜಿ.ಎನ್, ಶಿಕ್ಷಕ ಸುಧಾಕರ ನಾಯಕ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಅಜಯ ನಾಯಕ, ಬಿಸಗೋಡ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಶ್ರೀಧರ್ ಹೆಗಡೆ, ಶಿಕ್ಷಕ ಚಿದಾನಂದ ಹಳ್ಳಿ, ಪ್ರಗತಿ ಭರತನಹಳ್ಳಿ ಶಿಕ್ಷಕ, ಪ್ರಕಾಶ್ ಭಟ್ಟ ಪಾಲ್ಗೊಂಡಿದ್ದರು.

PREV

Recommended Stories

ಇಂದು ಹಂಡ್ಲಿ ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ
ಯಯೂದಿ ತತ್ವಗಳಿಗೂ, ಗೀತೆಗೂ ಸಾಮ್ಯತೆ ಇದೆ: ಪ್ರೊ.ಆ್ಯಲನ್‌