ಹಿಂದಿನ ಸರ್ಕಾರ ತಿರಸ್ಕರಿಸಿದ್ದ ವರದಿ ಮತ್ತೆ ತೆರವು ಏಕೆ?

KannadaprabhaNewsNetwork | Published : Nov 28, 2023 12:30 AM

ಸಾರಾಂಶ

ನ್ಯಾ.ಸದಾಶಿವ ಆಯೋಗ ವರದಿಗೆ ಕೈ ಹಾಕದಿರಲು ಬಂಜಾರ, ಭೋವಿ, ಕೊರಚ, ಕೊರಮ ಇತರೆ ಸಮುದಾಯಗಳ ತಾಕೀತು

ನ್ಯಾ.ಸದಾಶಿವ ಆಯೋಗ ವರದಿಗೆ ಕೈ ಹಾಕದಿರಲು ಬಂಜಾರ, ಭೋವಿ, ಕೊರಚ, ಕೊರಮ ಇತರೆ ಸಮುದಾಯಗಳ ತಾಕೀತು

ಕನ್ನಡಪ್ರಭ ವಾರ್ತೆ ದಾವಣಗೆರೆ

ನ್ಯಾ.ಸದಾಶಿವ ಆಯೋಗದ ವರದಿಯನ್ನು ಹಿಂದಿನ ಸರ್ಕಾರ ತಿರಸ್ಕರಿಸಿದ್ದರೂ ಅದನ್ನು ತೆರವುಗೊಳಿಸಿ (ರಿವೋಕ್‌) ಚರ್ಚಿಸುವ ಮೂಲಕ ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಮಂಡಿಸುತ್ತೇವೆನ್ನುವ ಸರ್ಕಾರದ ಹೇಳಿಕೆ ವಿರೋಧಿಸಿ ಮೀಸಲಾತಿ ಸಂರಕ್ಷಣಾ ಒಕ್ಕೂಟ ರಾಜ್ಯ ಘಟಕ, ಜಿಲ್ಲಾ ಹಕ್ಕು ಹೋರಾಟ ಸಮಿತಿಗಳ ನೇತೃತ್ವದಲ್ಲಿ ಪರಿಶಿಷ್ಟ ಜಾತಿಯ ವಿವಿಧ ಸಮುದಾಯಗಳು ನಿರ್ಣಯ ಕೈಗೊಂಡಿವೆ.

ನಗರದ ರೋಟರಿ ಬಾಲಭವನದಲ್ಲಿ ಸೋಮವಾರ ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆದ ಪರಿಶಿಷ್ಟ ಜಾತಿಯ ವಿವಿಧ ಸಮುದಾಯಗಳ ಸಭೆಯಲ್ಲಿ ನ್ಯಾ.ಸದಾಶಿವ ಆಯೋಗದ ವರದಿ ಅವೈಜ್ಞಾನಿಕವೆಂದು ಹಿಂದಿನ ಸರ್ಕಾರ ತಿರಸ್ಕರಿಸಿದ್ದರೂ, ಅದನ್ನು ತೆರವುಗೊಳಿಸಿ, ಚರ್ಚಿಸಲು ಕೈಗೆತ್ತಿಕೊಂಡು, ವಿಧಾನ ಮಂಡಲ ಅಧಿವೇಶನದಲ್ಲಿ ಮಂಡಿಸುವ ಸರ್ಕಾರದ ನಡೆಯ ಒಕ್ಕೊರಲಿನಿಂದ ವಿರೋಧಿಸಲಾಯಿತು.

ಹಿಂದಿನ ಸರ್ಕಾರ ವರದಿ ಒಪ್ಪದೇ, ತಿರಸ್ಕರಿಸಿರುವಾಗ ಈಗಿನ ಸರ್ಕಾರ ಅದನ್ನು ತೆರವುಗೊಳಿಸುವುದಕ್ಕೆ ನಮ್ಮೆಲ್ಲಾ ಸಮುದಾಯಗಳ ವಿರೋಧವಿದೆ. ಈ ಹಿನ್ನೆಲೆಯಲ್ಲಿ ರಾಜ್ಯವ್ಯಾಪಿ ಆಯಾ ಜಿಲ್ಲಾ ಉಸ್ತುವಾರಿ ಸಚಿವರು, ಆಯಾ ಶಾಸಕರು, ಜಿಲ್ಲಾಡಳಿತದ ಮೂಲಕ ಮನವಿ ಸಲ್ಲಿಸಲು, ರಾಜ್ಯಾದ್ಯಂತ ಎಲ್ಲಾ ಶಾಸಕರಿಗೂ ಸದಾಶಿವ ಆಯೋಗದ ವರದಿ ತೆರವಿಗೆ ವಿರೋಧಿಸುವಂತೆ ಮನವಿ ಮಾಡಲು, ಎಲ್ಲಾ ಉಸ್ತುವಾರಿ ಸಚಿವರಿಗೆ ಎಲ್ಲಾ ಸಮುದಾಯಗಳ ನಿಯೋಗ ಮನವಿ ಸಲ್ಲಿಸಲು ನಿರ್ಧರಿಸಲಾಯಿತು.

ಒಂದು ಜಾತಿಗಷ್ಟೇ ಸಚಿವರಲ್ಲ:

ಒಬ್ಬ ಜವಾಬ್ದಾರಿಯುತ ಸಚಿವರಾಗಿ ಮುನಿಯಪ್ಪ ಹೇಳಿಕೆ ಖಂಡಿಸುತ್ತೇವೆ. ವರದಿ ಜಾರಿಗಾಗಿ ಪ್ರಚೋದನಾಕಾರಿ ಹೇಳಿಕೆ ನೀಡಿರುವ ಮುನಿಯಪ್ಪ ತಾವು ಒಂದು ಜಾತಿಗಷ್ಟೇ ಸಚಿವರಲ್ಲ ಎಂಬುದು ಅರಿಯಬೇಕು. ಸಚಿವ ಮುನಿಯಪ್ಪರನ್ನು ಸಂಪುಟದಿಂದ ವಜಾಕ್ಕೆ ಆಗ್ರಹಿಸಿ ರಾಜ್ಯವ್ಯಾಪಿ ಜಿಲ್ಲಾಡಳಿತ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲು ಒಮ್ಮತದ ತೀರ್ಮಾನ ಕೈಗೊಳ್ಳಲಾಯಿತು.

ಈ ವೇಳೆ ಮಾತನಾಡಿದ ಪರಿಶಿಷ್ಟ ಜಾತಿಯ ವಿವಿಧ ಸಮುದಾಯಗಳ ಮುಖಂಡರು, ರಾಜ್ಯ ಸರ್ಕಾರಕ್ಕೆ ನ್ಯಾ.ಸದಾಶಿವ ಆಯೋಗ 101 ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ವಿಂಗಡಿಸಿ, ಶಿಫಾರಸ್ಸು ಮಾಡಿರುವುದು ಅಸಂವಿಧಾನಿಕ, ಅವೈಜ್ಞಾನಿಕವಾಗಿದ್ದು, ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ಎಲ್ಲಾ ಜಾತಿ, ಸಮುದಾಯಗಳಲ್ಲಿ ಒಳ ಜಗಳ ಮತ್ತು ಒಡಕುಂಟು ಮಾಡುವ ಉದ್ದೇಶವಿರುವುದು ಮೇಲ್ನೋಟಕ್ಕೆ ಸ್ಪಷ್ಟ. ಈಗಾಗಲೇ ಆಯೋಗದ ವರದಿ ಬಗ್ಗೆ ಎಲ್ಲಾ ಮೂಲಗಳಿಂದಲೂ ಭಿನ್ನಾಭಿಪ್ರಾಯ ವ್ಯಕ್ತವಾಗುತ್ತಿರುವುದು ಸರ್ಕಾರ ಮರೆಯಬಾರದು ಎಂದರು.

ಆಯೋಗದ ವರದಿ ಬಗ್ಗೆ ಸಾರ್ವಜನಿಕರಿಂದ ಕರೆಯಲಾದ ಅಭಿಪ್ರಾಯದಲ್ಲಿ 99 ಜಾತಿ, ಸಮುದಾಯಗಳು ಬಲವಾಗಿ ತಮ್ಮ ನಿಲುವು ಮತ್ತು ತಕರಾರು ಸಲ್ಲಿಸಿವೆ. ಈ ವರದಿಯು ಗೊಂದಲದಿಂದ ಕೂಡಿದ್ದು, ಅದರ ಬಗ್ಗೆ ಸಾರ್ವಜನಿಕವಾಗಿ ಇನ್ನೂ ಚರ್ಚೆಯೇ ಆಗಿಲ್ಲ.ಯಥಾವತ್ ಜಾರಿಗೊಳಿಸಲು ಪಾಲುದಾರ ಸಮುದಾಯಗಳು ಹೋರಾಟ ನಡೆಸುತ್ತಿರುವುದು ನೋವಿನ ಸಂಗತಿ ಎಂದು ದೂರಿದರು.

ಸಮಿತಿಯ ರಾಜ್ಯಾಧ್ಯಕ್ಷ ರವಿ ಮಾಕಳಿ, ಭೋವಿ ಸಮಾಜದ ಮುಖಂಡ, ಮಾಜಿ ಸಚಿವ ಅರವಿಂದ ಲಿಂಬಾವಳಿ, ಡಾ.ವೈ.ರಾಮಪ್ಪ, ಲಂಬಾಣಿ ಸಮಾಜದ ವಕೀಲರಾದ ಜಯದೇವ ನಾಯ್ಕ, ರಾಘವೇಂದ್ರ ನಾಯ್ಕ, ಅನಂತ ನಾಯ್ಕ, ಎಸ್.ನಂಜಾನಾಯ್ಕ, ಶ್ರೀನಿವಾಸ ಪಿ.ಭೋವಿ, ಕೆ.ಜಿ.ಮಂಜುನಾಥ, ಕೆ.ಆರ್.ಮಲ್ಲೇಶ ನಾಯ್ಕ, ಚಿನ್ನಸಮುದ್ರ ಶೇಖರ ನಾಯ್ಕ, ನಾಗರತ್ನಬಾಯಿ, ಮಂಜಾನಾಯ್ಕ, ಹನುಮಂತ ನಾಯ್ಕ, ಲಕ್ಷ್ಮಣ ರಾಮಾವತ್, ರಮೇಶ ನಾಯ್ಕ, ಧರ್ಮಾನಾಯ್ಕ ಸೇರಿ ಕೊರಚ, ಕೊರಮ ಇತರೆ ಸಮಾಜಗಳ ಮುಖಂಡರಿದ್ದರು. ಅಧಿವೇಶನ ವೇಳೆ ಬೆಳಗಾವಿ ಚಲೋ ಆಂದೋಲನ

ಸದಾಶಿವ ಆಯೋಗದ ವರದಿ ಯಥಾವತ್ ಜಾರಿಗಾಗಿ ಸೋದರ ಸಮುದಾಯಗಳು ಡಿಸೆಂಬರ್ ನಲ್ಲಿ ಅಧಿವೇಶನದ ವೇಳೆ ಬೆಳಗಾವಿ ಚಲೋ ಆಂದೋಲನ ಹಮ್ಮಿಕೊಂಡಿವೆ. ಅದಕ್ಕೆ ಪ್ರತಿಯಾಗಿ ರಾಜ್ಯ ಹಕ್ಕು ಹೋರಾಟ ಸಮಿತಿ ಅಧ್ಯಕ್ಷ ರವಿ ಮಾಕಳಿ ನೇತೃತ್ವದಲ್ಲಿ ರಾಜ್ಯವ್ಯಾಪಿ ಜನಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ. ಯಾವುದೇ ಒತ್ತಡಕ್ಕೆ ಮಣಿಯದಂತೆ ಅಧಿವೇಶನದಲ್ಲಿ ಯಾವ ರೀತಿ ಸಮಿತಿ ನಿಲುವು ಬಿಗಿಗೊಳಿಸಿ, ಹೋರಾಟ ನಡೆಸಬೇಕೆಂಬ ಬಗ್ಗೆ ಅಭಿಪ್ರಾಯ, ಸಲಹೆ ಸಂಗ್ರಹಿಸಲು ರಾಜ್ಯಾದ್ಯಂತ ಸಂಚಾರ ಮಾಡಿ, ಮಾಹಿತಿ ಕಲೆ ಹಾಕಲಿದೆ ಎಂದು ಸಮಿತಿ ಘೋಷಿಸಿದೆ.

Share this article