- ಜಗಳೂರು ತಾಲೂಕಿನಲ್ಲಿ ಅಡಕೆ ಬೆಳೆಗಾರರಿಗೆ ವಿಮಾ ಕಂಪನಿಗಳ ಶಾಕ್ । ಸಂಕಷ್ಟದಲ್ಲಿ ರೈತರಿಗೆ ನ್ಯಾಯ ಒದಗಿಸಲು ಆಗ್ರಹ
ಕನ್ನಡಪ್ರಭ ವಾರ್ತೆ ಜಗಳೂರು
ಪ್ರಾಕೃತಿಕ ವಿಕೋಪ ಹಾಗೂ ಸಾಂಕ್ರಾಮಿಕ ರೋಗಬಾಧೆಯಿಂದ ತತ್ತರಿಸಿರುವ ಜಗಳೂರು ತಾಲೂಕಿನ ಬಡ ಅನ್ನದಾತರಿಗೆ ವಿಮಾ ಕಂಪನಿಗಳು ಹಾಗೂ ಅಧಿಕಾರಿಗಳ ಧೋರಣೆ ಗಾಯದ ಮೇಲೆ ಬರೆ ಎಳೆದಂತಾಗಿದೆ.ಬಯಲುಸೀಮೆಯ ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿ ಹೊತ್ತಿರುವ ಜಗಳೂರಿನಲ್ಲಿ ೨೦೨೫-20೨೬ನೇ ಸಾಲಿನ ಅಡಕೆ ಬೆಳೆವಿಮೆ ಪರಿಹಾರ ಹಂಚಿಕೆಯಲ್ಲಿ ಗಂಭೀರ ತಾರತಮ್ಯ ಎಸಗಲಾಗಿದೆ ಎಂಬ ಆರೋಪ ಕೇಳಿಬಂದಿವೆ. ಈ ಕಾರಣಕ್ಕೆ ತಾಲೂಕಿನಾದ್ಯಂತ ಬೆಳೆಗಾರರ ಆಕ್ರೋಶ ಮುಗಿಲುಮುಟ್ಟಿದೆ.
ಕಳೆದೆರಡು ವರ್ಷಗಳಿಂದ ತಾಲೂಕಿನಾದ್ಯಂತ ಮಳೆ ಕೊರತೆ, ತೀವ್ರ ಬಿಸಿಲು, ಭೀಕರ ಎಲೆಚುಕ್ಕೆ ರೋಗ ಹಾಗೂ ಹಿಂಗಾರ ಒಣಗುವ ಮಹಾಮಾರಿಯಿಂದಾಗಿ ಅಡಕೆ ತೋಟಗಳು ಸಂಪೂರ್ಣ ನಾಶವಾಗಿವೆ. ಲಕ್ಷಾಂತರ ರುಪಾಯಿ ಹೂಡಿಕೆ ಮಾಡಿ ಕಂಗಾಲಾಗಿದ್ದ ರೈತರು, ಮರು ವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆವಿಮೆ (ಡಬ್ಲ್ಯುಬಿಸಿಐಎಸ್) ಅಡಿಯಲ್ಲಿ ಹೆಕ್ಟೇರ್‌ಗೆ ₹೬,೪೦೦ ದುಬಾರಿ ಪ್ರೀಮಿಯಂ ಹಣವನ್ನು ಕಷ್ಟಪಟ್ಟು ಪಾವತಿಸಿದ್ದರು. ಆದರೆ, ಈಗ ವಿಮಾ ಮೊತ್ತ ಜಮಾ ಆಗುವ ವೇಳೆಗೆ ಗ್ರಾಮ ಪಂಚಾಯಿತಿವಾರು ತಾರತಮ್ಯ ಎಸಗಲಾಗಿದೆ. ತಾಲೂಕಿನ ಎಲ್ಲ ರೈತರು ಒಂದೇ ಪ್ರಮಾಣದ ಪ್ರೀಮಿಯಂ ಕಟ್ಟಿದ್ದರೂ, ಪರಿಹಾರದ ಮೊತ್ತ ಮಾತ್ರ ಹಳ್ಳಿಗೊಂದು ನ್ಯಾಯ ಎಂಬಂತೆ ವಿತರಣೆಯಾಗಿದೆ.
ಗ್ರಾಮ ಪಂಚಾಯಿತಿ ಜಮೆಯಾದ ವಿಮಾ ಮೊತ್ತ ವಿವರಿಸುವುದಾದರೆ, ಹಿರೇಮಲ್ಲನಹೊಳೆ- ₹೭೨,೬೭೪ (ಗರಿಷ್ಠ), ಸೊಕ್ಕೆ- ₹೬೫,೪98, ಹೊಸಕೆರೆ- ₹೬೦,೬೨೦, ದಿದ್ದಿಗೆ ಮತ್ತು ಪಲ್ಲಾಗಟ್ಟೆಗೆ ತಲಾ ₹೫೮,೬೪೦, ಕೆಚ್ಚೇನಹಳ್ಳಿ- ₹೫೭,೭೨೦, ಹನುಮಂತಾಪುರ- ₹೫೬,೨೨೦, ಅಣಬೂರು- ₹೫೪,೮೦೦, ಬಸವನಕೋಟೆ- ₹೫೩,೮೫೦, ಹಾಲೇಕಲ್ಲು- ₹೫೩,೫೫0, ಗುರುಸಿದ್ದಾಪುರ- ₹೫೨,೨೫0, ಬಿಳಿಚೋಡು- ₹೫೧,೭೫0, ಮುಸ್ಟೂರು- ₹೪೯,೩೯೦, ದೊಣೆಹಳ್ಳಿ- ₹೪೮,೧೯೦, ಬಿಸ್ತುವಳ್ಳಿ- ₹೪೮,೧೦0, ಕ್ಯಾಸೇನಹಳ್ಳಿ- ₹೪೫,೪೦0, ದೇವಿಕೆರೆ- ₹೪೨,೬೮೦, ಗುತ್ತಿದುರ್ಗ- ₹೪೧,೨೮0, ಬಿದರಕೆರೆ- ₹೪೦,೩೭೮, ಕಲ್ಲೇದೇವರಪುರ- ₹೩೮,೬೨0, ತೋರಣಗಟ್ಟೆ- ₹೩೭,೪೨೦, ಅಸಗೋಡು- ₹೩೫,೦೦೦, ಜಗಳೂರು ಟೌನ್- ₹೨೫,೭೫೪ (ಕನಿಷ್ಠ) ಬೆಳೆ ವಿಮಾ ಮೊತ್ತ ರೈತರಿಗೆ ನೀಡಲಾಗಿದೆ.
ಒಂದೇ ತಾಲೂಕಿನ ವ್ಯಾಪ್ತಿಯಲ್ಲಿದ್ದರೂ ಅಸಗೋಡು, ತೋರಣಗಟ್ಟೆ ಗ್ರಾಪಂ ಹಾಗೂ ಜಗಳೂರು ಪಟ್ಟಣ ವ್ಯಾಪ್ತಿಯ ಅಡಕೆ ಬೆಳೆಗಾರರಿಗೆ ಅತ್ಯಂತ ಕಡಿಮೆ ಪರಿಹಾರ ನೀಡಿ ವಂಚಿಸಲಾಗಿದೆ. ವಿಜ್ಞಾನ ಆಧಾರಿತ ಮರುಪರಿಶೀಲನೆ ನಡೆಸಬೇಕು. ಹವಾಮಾನ ವರದಿ ನೆಪವೊಡ್ಡಿ ವಿಮಾ ಕಂಪನಿಗಳು ಮಾಡಿರುವ ಅಸಮಾನ ಹಂಚಿಕೆಯನ್ನು ತಕ್ಷಣವೇ ಮರುಪರಿಶೀಲಿಸಬೇಕು. ಒಂದೇ ತಾಲೂಕಿನ ವ್ಯಾಪ್ತಿಯಲ್ಲಿ ಬೆಳೆನಷ್ಟ ಅನುಭವಿಸಿದ ಎಲ್ಲ ರೈತರಿಗೂ ಗರಿಷ್ಠ ಪ್ರಮಾಣದ ಸಮಾನ ವಿಮಾ ಪರಿಹಾರ ತಕ್ಷಣ ಬಿಡುಗಡೆ ಆಗಬೇಕು. ತೋಟಗಾರಿಕೆ ಹಾಗೂ ಕೃಷಿ ಇಲಾಖೆ ಹಿರಿಯ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ವಿಮಾ ಕಂಪನಿಯ ಧೋರಣೆಯನ್ನು ಪ್ರಶ್ನಿಸಿ, ರೈತರಿಗೆ ನ್ಯಾಯ ಒದಗಿಸಬೇಕು ಎಂಬ ಆಗ್ರಹ ವ್ಯಕ್ತವಾಗಿದೆ.
(ಕೋಟ್)
- ಕರಿಬಸಪ್ಪ ಕಟ್ಟಿಗೆಹಳ್ಳಿ, ಸಿದ್ದೇಶ್ ಅರಿಶಿಣಗುಂಡಿ, ರೈತರು
(ಫೋಟೋಗಳಿವೆ)