ಭದ್ರಾ ಡ್ಯಾಂನಲ್ಲಿ ನೀರಿದ್ದರೂ ನಾಲೆಗೆ ಹರಿಸುತ್ತಿಲ್ಲ ಏಕೆ?

KannadaprabhaNewsNetwork | Published : Jul 28, 2024 2:04 AM

ಸಾರಾಂಶ

ಭದ್ರಾ ಜಲಾನಯನ ಪ್ರದೇಶದಲ್ಲಿ ನಿರಂತರ ಮಳೆಯಿಂದಾಗಿ ಒಳ ಹರಿವಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಪರಿಸ್ಥಿತಿಯಲ್ಲಿ ಪರಿಸ್ಥಿತಿಯ ಅರಿವೇ ಇಲ್ಲದ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರು ಜು.28ರಂದು ಭದ್ರಾ ಕಾಡಾ ಸಮಿತಿ ಸಭೆ ಕರೆದಿರುವುದು ಮೂರ್ಖತನದ ಪರಮಾವಧಿಯಾಗಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ, ರೈತ ಮುಖಂಡ ಬಿ.ಎಂ.ಸತೀಶ ಕೊಳೇನಹಳ್ಳಿ ಆಕ್ಷೇಪಿಸಿದ್ದಾರೆ.

- ಐಸಿಸಿ ಸಭೆ ಕರೆದಿದ್ದು ಶಿವಮೊಗ್ಗ ಸಚಿವರ ಮೂರ್ಖತನ ಪರಮಾವಧಿ: ಬಿ.ಎಂ.ಸತೀಶ ಕೆಂಡಾಮಂಡಲ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ

ಭದ್ರಾ ಜಲಾನಯನ ಪ್ರದೇಶದಲ್ಲಿ ನಿರಂತರ ಮಳೆಯಿಂದಾಗಿ ಒಳ ಹರಿವಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಪರಿಸ್ಥಿತಿಯಲ್ಲಿ ಪರಿಸ್ಥಿತಿಯ ಅರಿವೇ ಇಲ್ಲದ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರು ಜು.28ರಂದು ಭದ್ರಾ ಕಾಡಾ ಸಮಿತಿ ಸಭೆ ಕರೆದಿರುವುದು ಮೂರ್ಖತನದ ಪರಮಾವಧಿಯಾಗಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ, ರೈತ ಮುಖಂಡ ಬಿ.ಎಂ.ಸತೀಶ ಕೊಳೇನಹಳ್ಳಿ ಆಕ್ಷೇಪಿಸಿದ್ದಾರೆ.

ತುಂಗಾ ಮತ್ತು ಭದ್ರಾ ಅಣೆಕಟ್ಟೆಗಳ ಜಲಾನಯನ ಪ್ರದೇಶದಲ್ಲಿ ಕಳೆದ ಕೆಲ ದಿನಗಳಿಂದ ವ್ಯಾಪಕ ಮಳೆಯಾಗುತ್ತಿದೆ. ಯಾವುದೇ ಸಂದರ್ಭದಲ್ಲಿ ಜಲಾಶಯನದ ಕ್ರೆಸ್ಟ್ ಗೇಟ್‌ಗಳನ್ನು ತೆಗೆದು, ನೀರು ಬಿಡಬೇಕಾದ ಪರಿಸ್ಥಿತಿ ಇದೆ. ವಾಸ್ತವತೆಯ ಅರಿವಿಲ್ಲದ ಶಿವಮೊಗ್ಗ ಉಸ್ತುವಾರಿ ಮಂತ್ರಿ ಮಹೋದಯರು, ಅಧಿಕಾರಿಗಳು ಸೋಮವಾರ ಐಸಿಸಿ ಸಭೆ ಕರೆದಿದ್ದು ಆಳುವ ಮಂತ್ರಿಗಳು, ಅಧಿಕಾರಿಗಳ ಮೂರ್ಖತನದ ಪ್ರದರ್ಶನವಾಗಿದೆ ಎಂದಿದ್ದಾರೆ.

ಅಣೆಕಟ್ಟೆಯಲ್ಲಿ ನೀರು ಸಂಗ್ರಹವಿದ್ದರೂ ನೀರು ಹರಿಸುತ್ತಿಲ್ಲ. "ದೇವರು ವರ ಕೊಟ್ಟರೂ ಪೂಜಾರಿ ಕೊಡಲಿಲ್ಲ " ಎಂಬಂತಹ ಅಸಹಾಯಕ ಸ್ಥಿತಿ ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರದಾಗಿದೆ. ಈಗ ಭದ್ರಾ ಡ್ಯಾಂ ನೀರಿನ ಮಟ್ಟವು 178 ಅಡಿಗಳಿದ್ದು, ಭಾನುವಾರದ ಹೊತ್ತಿಗೆ 182 ಅಥವಾ 183 ಅಡಿಗೆ ತಲುಪುವ ಸಾಧ್ಯತೆ ಇದೆ. 49,801 ಕ್ಯುಸೆಕ್ ಒಳಹರಿವು ಇದೆ. ಆದರೂ, ನೀರನ್ನು ಬಿಡದೇ, ಸೋಮವಾರ ಐಸಿಸಿ ಸಭೆ ಕರೆದಿರುವುದು ದುರಂತ ಎಂದಿದ್ದಾರೆ.

ಮುನ್ನೆಚ್ಚರಿಕೆ ಕ್ರಮವಾಗಿ ನದಿಗೆ ನೀರು ಬಿಡಲೇಬೇಕಾಗುತ್ತದೆ. ಈ ವಿಚಾರದಲ್ಲಿ ಅಧಿಕಾರಶಾಹಿ ಮನಃಸ್ಥಿತಿ ಕಾಣುತ್ತಿದೆ. ಭದ್ರಾ ಅಣೆಕಟ್ಟೆಯ ಶೇ.70ರಷ್ಟು ಅಚ್ಚುಕಟ್ಟು ಪ್ರದೇಶವಿರುವ ದಾವಣಗೆರೆ ಜಿಲ್ಲೆ ವ್ಯಾಪ್ತಿಯಲ್ಲಿ ರೈತರ ಸಂಕಷ್ಟ ಹೇಳತೀರದಾಗಿದೆ ಎಂದು ಬಿ.ಎಂ. ಸತೀಶ ತಿಳಿಸಿದ್ದಾರೆ.

- - -

ಬಾಕ್ಸ್‌

* ಮಧು ಬಂಗಾರಪ್ಪಗೆ ಭದ್ರಾ ಡ್ಯಾಂ ಬಗ್ಗೆ ಗೊತ್ತಿಲ್ಲ

ಐಸಿಸಿ ಅಧ್ಯಕ್ಷರಾದ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರಿಗೆ ಭದ್ರಾ ಅಣೆಕಟ್ಟೆಯ ಬಗ್ಗೆ ಮಾಹಿತಿಯೇ ಇಲ್ಲ. ಮೊನ್ನೆಯಿಂದ ದಿನಕ್ಕೆ 2 ಸಾವಿರ ಕ್ಯುಸೆಕ್‌ ನೀರು ಬಿಟ್ಟಿದ್ದರೆ ಬೇಸಿಗೆಯಲ್ಲಿ ಬರಿದಾಗುವಂತಹ ಕೆರೆ ಕಟ್ಟೆಗಳು ತುಂಬುತ್ತಿದ್ದವು. ರೈತರು ಬತ್ತದ ಸಸಿ ಮಡಿ ತಯಾರು ಮಾಡಿಕೊಳ್ಳುತ್ತಿದ್ದರು. ಇದೆಲ್ಲದರ ಬಗ್ಗೆ ತಿಳಿವಳಿಕೆ, ಮಾಹಿತಿ ಇಲ್ಲದವರಿಂದ ರೈತರ ಶೋಷಣೆ ನಡೆಯುತ್ತಿದೆ ಎಂದು ಬಿ.ಎಂ.ಸತೀಶ ಕೊಳೇನಹಳ್ಳಿ ಹೇಳಿಕೆಯಲ್ಲಿ ಕಿಡಿಕಾರಿದ್ದಾರೆ.

ಅತಿ ಹೆಚ್ಚು ಅಚ್ಚುಕಟ್ಟು ಪ್ರದೇಶವಿರುವ ದಾವಣಗೆರೆ ಜಿಲ್ಲೆಯವರೇ ಭದ್ರಾ ಕಾಡಾ ಸಮಿತಿ ಅಧ್ಯಕ್ಷರಾಗಬೇಕು. ಆದರೆ, ಕಾಡಾ ಅಧ್ಯಕ್ಷರಾಗುವವರು ಮತ್ತು ಐಸಿಸಿ ಅಧ್ಯಕ್ಷರಾಗುವವರು ಸದಾ ಶಿವಮೊಗ್ಗ ಜಿಲ್ಲೆಯವರಾಗಿದ್ದಾರೆ. ಐಸಿಸಿ ಮತ್ತು ಕಾಡಾ ಸಭೆ ನಡೆಸುವುದೂ ಶಿವಮೊಗ್ಗ ಜಿಲ್ಲೆಯಲ್ಲೇಯ ರೈತರ ಕಾಳಜಿ ಇಲ್ಲದ ನಮ್ಮ ಜಿಲ್ಲೆಯ ಜನ ಪ್ರತಿನಿಧಿಗಳು ಸಭೆಗೆ ಹೋಗುವುದು ಸಹ ವಿರಳ. ಇಂಥವರಿಂದ ರೈತರ ಹಿತಾಸಕ್ತಿ ಎಂಬುದು ಕನಸಿನ ಮಾತು ಎಂದಿದ್ದಾರೆ.

- - - -7ಕೆಡಿವಿಜಿ1: ಬಿ.ಎಂ.ಸತೀಶ ಕೋಳೇನಹಳ್ಳಿ

Share this article