ನಾವು ಇದನ್ನೆಲ್ಲ ಎದುರಿಸಲು ಸಿದ್ಧರಾಗಿದ್ದೇವೆ. ತಪ್ಪು ಮಾಡಿದ್ದರೇ ತಾನೆ ಹೆದರೋದು
ಕನ್ನಡಪ್ರಭ ವಾರ್ತೆ ಮೈಸೂರು
ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆ ಆಗಿದ್ದಾರೆ. ಜೆಡಿಎಸ್, ಬಿಜೆಪಿ ಕೈಗೊಂಬೆಯಾಗಿ ವರ್ತಿಸಿದ್ದಾರೆ ಎಂದು ರಾಜ್ಯಪಾಲರ ನಡೆ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದರು.
ತಮಗೆ ರಾಜ್ಯಪಾಲರು ಶೋಕಾಸ್ ನೋಟಿಸ್ ನೀಡಿರುವ ವಿಚಾರ ಕುರಿತು ಮೈಸೂರು ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇದಕ್ಕೆಲ್ಲ ನಾನು ಹೆದರುವುದಿಲ್ಲ, ನಾವು ಇದನ್ನೆಲ್ಲ ಎದುರಿಸಲು ಸಿದ್ಧರಾಗಿದ್ದೇವೆ. ತಪ್ಪು ಮಾಡಿದ್ದರೇ ತಾನೆ ಹೆದರೋದು ಎಂದರು.
ನಾನು 136 ಶಾಸಕರ ಬೆಂಬಲದಿಂದ ಮುಖ್ಯಮಂತ್ರಿ ಆಗಿರುವವನು. ಆದರೆ, ನನ್ನ ಪಾತ್ರ ಇಲ್ಲದಿದ್ದರೂ ಸರ್ಕಾರ ಅಸ್ಥಿರಗೊಳಿಸುವುದಕ್ಕೆ ಯತ್ನಿಸಿದ್ದಾರೆ. ರಾಜ್ಯಪಾಲರಿಗೆ ಸಲಹೆ ನೀಡುವವರು ಯಾರು? ರಾಜಭವನ ಹಾಗೂ ರಾಜ್ಯಪಾಲರ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ. ರಾಜ್ಯಪಾಲರ ನೋಟಿಸ್ ಗೆ ನಾನ್ಯಾಕೆ ಹೆದರಲಿ? ಅಶೋಕ್ ಹೆದರಿರಬೇಕು, ಅವರಿಗೆ ಭಯ, ನನಗಲ್ಲ ಎಂದು ಅವರು ವಾಗ್ದಾಳಿ ನಡೆಸಿದರು.
ಟಿ.ಜೆ. ಅಬ್ರಹಾಂ ಬ್ಲಾಕ್ ಮೇಲರ್
ಟಿ.ಜೆ. ಅಬ್ರಹಾಂ ಒಬ್ಬ ಬ್ಲಾಕ್ ಮೇಲರ್. ಜುಲೈ 26ಕ್ಕೆ ಬೆಳಗ್ಗೆ 11.30ಕ್ಕೆ ದೂರು ಕೊಡ್ತಾನೆ, ಆ ದೂರಿನ ಪರಾಮರ್ಶೆ ಮಾಡದೇ ಆ ದಿನ ಸಂಜೆಯೇ ಶೋಕಾಸ್ ನೋಟಿಸ್ ರೆಡಿ ಇದೆ ಬಂದು ಪಡೆದುಕೊಳ್ಳಿ ಎಂದು ನಮ್ಮ ಅಧಿಕಾರಿ ಎಲ್.ಕೆ. ಅತೀಕ್ ಗೆ ಹೇಳಿದ್ದಾರೆ. ಜೊಲ್ಲೆ, ಮುರುಗೇಶ್ ನಿರಾಣಿ, ಜನಾರ್ಧನ ರೆಡ್ಡಿ ವಿರುದ್ಧದ ದೂರು ಇನ್ನೂ ಹಾಗೆಯೇ ಇವೆ. ಅವರಿಗೆ ಶೋಕಾಸ್ ನೋಟಿಸ್ ಕೊಟ್ಟಿಲ್ಲ. ನನಗೆ ಯಾಕೆ ತರಾತುರಿಯಲ್ಲಿ ನೋಟಿಸ್ ಕೊಟ್ಟಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
----
ಬಾಕ್ಸ್...
ಕುಮಾರಸ್ವಾಮಿ ಸ್ವ ಇಚ್ಛೆಯಿಂದ ಮಾಡ್ತಾ ಇಲ್ಲ
ಬಿಜೆಪಿ ಪಾದಯಾತ್ರೆಗೆ ಎಚ್.ಡಿ. ಕುಮಾರಸ್ವಾಮಿ ಬೆಂಬಲ ನೀಡಿರುವ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕುಮಾರಸ್ವಾಮಿ ಕೇಂದ್ರದ ಮಂತ್ರಿ, ಜೆಡಿಎಸ್ ನಾಯಕ. ಈ ಕೇಸ್ ನಲ್ಲಿ ಏನು ಇಲ್ಲ, ಪಾದಯಾತ್ರೆ ಬೇಡ ಅಂದ್ರು. ಮಳೆ ಜಾಸ್ತಿಯಾಗಿ ಪ್ರವಾಹ ಬಂದಿದೆ ಅದರ ಕಡೆ ಗಮನ ಕೊಡಬೇಕು ಅಂದ್ರು. ಈಗ ಪ್ರವಾಹ ಎಲ್ಲಾ ಹೋಗಿದ್ಯಾ? ಕುಮಾರಸ್ವಾಮಿ ಇದನ್ನು ಸ್ವ ಇಚ್ಛೆಯಿಂದ ಮಾಡ್ತಾ ಇಲ್ಲ. ಇದನ್ನೆಲ್ಲಾ ನಾವು ಎದುರಿಸಲು ಸಿದ್ಧರಿದ್ದೇವೆ ಎಂದು ತಿಳಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.