ಕಾಮಗಾರಿ ಪೂರ್ಣಗೊಳಿಸದೆ ಟೋಲ್ ಏಕೆ: ಸಿಎಂ ಸಿದ್ದರಾಮಯ್ಯ

KannadaprabhaNewsNetwork |  
Published : Jul 22, 2024, 01:20 AM IST
ಶಿರೂರು ಗುಡ್ಡ ಕುಸಿತ ಪ್ರದೇಶಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಪರಿಶೀಲನೆ ನಡೆಸಿದರು. | Kannada Prabha

ಸಾರಾಂಶ

ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಇನ್ನೂ ಮಳೆಯಾಗುವ ಸಾಧ್ಯತೆಗಳಿದ್ದು, ಈ ರೀತಿಯಾಗಿ ಗುಡ್ಡ ಕುಸಿತ ಸೇರಿದಂತೆ ಯಾವುದೇ ರೀತಿಯ ಅಪಾಯವಾಗದಂತೆ ಜಿಲ್ಲಾಡಳಿತದಿಂದ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದರು.

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ರಾಷ್ಟ್ರಿಯ ಹೆದ್ದಾರಿ ಕಾಮಗಾರಿಯನ್ನು ಪೂರ್ಣಗೊಳಿಸದೇ ಸಾರ್ವಜನಿಕರಿಂದ ಟೋಲ್ ಏಕೆ ಸಂಗ್ರಹ ಮಾಡುತ್ತಿದ್ದೀರಿ? ಇದು ಸರಿಯಿಲ್ಲ. ಕಾಮಗಾರಿ 2016ಕ್ಕೆ ಮುಕ್ತಾಯಗೊಳಿಸಬೇಕಿದ್ದರೂ ಇದುವರೆಗೆ ಮುಕ್ತಾಯಗೊಳಿಸದೇ ಈ ಕಾಮಗಾರಿ ಬಗ್ಗೆ ಕೇಂದ್ರ ಸಚಿವರಿಗೂ ಹಾಗೂ ರಾಜ್ಯ ಸರ್ಕಾರಕ್ಕೂ ತಪ್ಪು ಮಾಹಿತಿ ನೀಡುತ್ತಿದ್ದೀರಿ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಗರಂ ಆದರು.

ಜಿಪಂ ಸಭಾಭವನದಲ್ಲಿ ಪ್ರಗತಿ ಪರಿಶೀಲನೆ ನಡೆಸಿದ ಅವರು, ಇಲ್ಲಿ ರಸ್ತೆ ಮಾಡಲು ನಮ್ಮ ಜಾಗ ನೀಡಿದ್ದೇವೆ. ನೀರು ನೀಡಿದ್ದೇವೆ. ನೀವು ಹೇಳಿದ ಹಾಗೆ ಕೇಳುವುದಕ್ಕೆ ನಾವಿಲ್ಲ. ರಸ್ತೆ ಕಾಮಗಾರಿ ಆರಂಭಿಸುವ ಮುನ್ನ ಇಲ್ಲಿ ಸಂಭವಿಸಬಹುದಾದ ಗುಡ್ಡ ಕುಸಿತದಂತಹ ಅನಾಹುತಗಳ ಬಗ್ಗೆ ವೈಜ್ಞಾನಿಕ ವರದಿ ಪಡೆದಿದ್ದಿರಾ ಎಂದು ಪ್ರಶ್ನಿಸಿದ ಮುಖ್ಯಮಂತ್ರಿ, ಹೆದ್ದಾರಿ ಕಾಮಗಾರಿಗಳ ಕುರಿತಂತೆ ಜಿಲ್ಲಾಧಿಕಾರಿಗಳಿಂದ ವರದಿ ಪಡೆದು, ರಾಜ್ಯ ಸರ್ಕಾರದಿಂದ ಕೇಂದ್ರ ಹೆದ್ದಾರಿ ಸಚಿವರಿಗೆ ತೀಕ್ಷ್ಣ ಪತ್ರ ಬರೆಯುವುದಾಗಿ ಹೇಳಿದರು.ಪ್ರಸ್ತುತ ಜಿಯಾಜಿಕಲ್ ಸರ್ವೇ ಆಫ್ ಇಂಡಿಯಾ ಸಿದ್ಧಪಡಿಸಿರುವ ಜಿಲ್ಲೆಯ ಗುಡ್ಡ ಕುಸಿತ ಪ್ರದೇಶಗಳ ಕುರಿತ ವರದಿಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ಪರಿಶೀಲಿಸಿ, ಹೆದ್ದಾರಿಯಾದ್ಯಂತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.

ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಇನ್ನೂ ಮಳೆಯಾಗುವ ಸಾಧ್ಯತೆಗಳಿದ್ದು, ಈ ರೀತಿಯಾಗಿ ಗುಡ್ಡ ಕುಸಿತ ಸೇರಿದಂತೆ ಯಾವುದೇ ರೀತಿಯ ಅಪಾಯವಾಗದಂತೆ ಜಿಲ್ಲಾಡಳಿತದಿಂದ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದ ಮುಖ್ಯಮಂತ್ರಿಗಳು ಜಿಲ್ಲೆಯಲ್ಲಿರುವ ಅಪಾಯಕಾರಿ ಪ್ರದೇಶಗಳಲ್ಲಿನ ಗ್ರಾಮಗಳನ್ನು ಗುರುತಿಸಿ, ಇಲ್ಲಿ ಗ್ರಾಮಮಟ್ಟದ ಟಾಸ್ಕ್‌ಫೋರ್ಸ್ ಸಮಿತಿಗಳನ್ನು ರಚಿಸಿಕೊಂಡು ಅಲ್ಲಿನ ಪರಿಸ್ಥಿತಿಯ ಕುರಿತು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕು ಎಂದರು.ಮಳೆಯಲ್ಲಿಯೇ ಪರಿಶೀಲನೆ

ಅಂಕೋಲಾ: ಶಿರೂರು ಗುಡ್ಡ ಕುಸಿತ ಪ್ರದೇಶಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ಮಳೆಯ ನಡುವೆಯು ಭಾನುವಾರ ಪರಿಶೀಲನೆ ನಡೆಸಿ, ಅಧಿಕಾರಿಗಳಿಂದ ಘಟನೆಯ ಕುರಿತು ಮಾಹಿತಿ ಮತ್ತು ಮುಂದಿನ ಕಾರ್ಯಾಚರಣೆಯ ಬಗ್ಗೆ ಅಧಿಕಾರಿ ಹಾಗೂ ಸಚಿವರೊಡನೆ ಚರ್ಚೆ ನಡೆಸಿದರು. ಭಾನುವಾರ ಮಧ್ಯಾಹ್ನ 2.35ಕ್ಕೆ ಶಿರೂರಿಗೆ ಆಗಮಿಸಿದ ಅವರು ಸುಮಾರು ಅರ್ಧ ಗಂಟೆಗಳ ಕಾಲ ಅಪಾಯಕಾರಿ ಘಟನಾ ಸ್ಥಳದಲ್ಲಿದ್ದು ಸುದೀರ್ಘ ಚರ್ಚೆ ನಡೆಸಿದರು. ನಂತರ ಶಿರೂರಿನಿಂದ ನೇರವಾಗಿ ಅಂಕೋಲಾದ ಹೆದ್ದಾರಿಯಲ್ಲಿರುವ ಪರಿವೀಕ್ಷಣಾ ಮಂದಿರಕ್ಕೆ ತೆರಳಿದರು. ಶಿರೂರಿನ ಬಸ್ ನಿಲ್ದಾಣ ಬಳಿ ಶಿರೂರಿನ ಗ್ರಾಮಸ್ಥರು ಹಾಗೂ ನಾಪತ್ತೆಯಾದ ಜಗನ್ನಾಥ ನಾಯ್ಕ ಅವರ ಕುಟುಂಬ ತಮ್ಮ ಅಹವಾಲನ್ನು ತೋಡಿಕೊಳ್ಳಲು ನಿಂತಿದ್ದರು. ಆದರೆ ಸಿಎಂ ಅವರು ಇದ್ದ ಕಾರು ನಿಲ್ಲಿಸದೇ ಇರುವುದರಿಂದ, ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.ಕದ್ರಾ ಸಂತ್ರಸ್ತರಿಗೆ ಶಾಶ್ವತ ಪರಿಹಾರ: ಸಿಎಂ ಸಿದ್ದರಾಮಯ್ಯ

ಕಾರವಾರ: ಕದ್ರಾ ಡ್ಯಾಂನಿಂದ ಹೊರಬಿಡುವ ನೀರಿನಿಂದ ಸಂತ್ರಸ್ತರಾಗುವವರಿಗೆ ಶಾಶ್ವತ ಪರಿಹಾರ ಹಾಗೂ ಮಳೆಯಿಂದ ಕೃಷಿ ಮತ್ತು ತೋಟಗಾರಿಕೆ ಬೆಳೆ ಅನಾಹುತಕ್ಕೆ ಎನ್‌ಡಿಆರ್‌ಎಫ್ ಪ್ರಕಾರ ಪರಿಹಾರ ಒಗದಿಸುವ ಕುರಿತು ತಕ್ಷಣ ಹಾನಿಯ ವರದಿ ಸಲ್ಲಿಸುವಂತೆ ಮುಖ್ಯಮಂತ್ರಿ‌ ಸಿದ್ದರಾಮಯ್ಯ ಸೂಚನೆ ನೀಡಿದರು.ಭಾನುವಾರ ಶಿರೂರು ಗುಡ್ಡ ಕುಸಿತದ ಸ್ಥಳ ಪರಿಶೀಲನೆ ಬಳಿಕ ಇಲ್ಲಿನ ಜಿಪಂ ಸಭಾಭವನದಲ್ಲಿ ಕಾರ್ಯದರ್ಶಿಗಳು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳ ಜತೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಕದ್ರಾ ಅಣೆಕಟ್ಟೆಯಿಂದ ಹೊರಬಿಡುವ ನೀರಿನಿಂದ ತೊಂದರೆಗೊಳಗಾಗುವ ಸಂತ್ರಸ್ತರಿಗೆ ಶಾಶ್ವತ ಪರಿಹಾರ ಒದಗಿಸುವ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳುವಂತೆ ಸೂಚಿಸಿದರು.ಮಳೆ ಅನಾಹುತ ಮತ್ತು‌ ಪ್ರವಾಹದಿಂದ ಆದ ಜೀವಹಾನಿಗೆ ನೀಡಲಾಗಿರುವ ಪರಿಹಾರದ ಕುರಿತು ಮಾಹಿತಿ ಪಡೆದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಳಿದವರಿಗೆ ತುರ್ತಾಗಿ ಕೊಡಬೇಕು ಎಂದರು‌.

ಕೋಸ್ಟಲ್ ಲೈನ್‌ನಲ್ಲಿ ವಿದ್ಯುತ್ ಕಂಬಗಳ ಅಳವಡಿಕೆ, ಅಗತ್ಯ ಇರುವ ಕಡೆ ವೈರ್‌ಗಳ ದುರಸ್ತಿ ಮತ್ತು ಬದಲಾವಣೆಗೆ ಸೂಚಿಸಿದರು.ಕಂದಾಯ ಸಚಿವ ಕೃಷ್ಣ ಬೈರೇಗೌಡ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ, ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ, ಶಾಸಕರಾದ ಸತೀಶ್ ಸೈಲ್, ಶಿವರಾಮ ಹೆಬ್ಬಾರ್, ಭೀಮಣ್ಣ ನಾಯ್ಕ್, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಾದ ಶಾಲಿನಿ ರಜನೀಶ್, ಮುಖ್ಯಮಂತ್ರಿ ಅವರ ಅಪರ ಮುಖ್ಯ ಕಾರ್ಯದರ್ಶಿ ಅತೀಕ್, ಉಸ್ತುವಾರಿ ಕಾರ್ಯದರ್ಶಿ ರಿತೇಶಕುಮಾರ ಸಿಂಗ್, ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ, ಜಿಪಂ ಸಿಇಒ ಈಶ್ವರ ಕುಮಾರ್ ಕಾಂದೂ, ಎಸ್ಪಿ ನಾರಾಯಣ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಿನಲ್ಲಿ ಕಾಳು ಹಾಕಿ ಕಲಬೆರಿಕೆ ಪತ್ತೆ ಮಾಡಿ
ಭಾಷಣ ಮಾಡಿಕೊಂಡು ಹೋದವನಲ್ಲ, ಪಕ್ಷದ ಎಲ್ಲಾ ಕೆಲ್ಸ ಮಾಡಿದ್ದೇನೆ: ಡಿಕೆಶಿ