- ಪುರಸಭೆಯಲ್ಲಿ ವನಿತಾಮಧು ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ । ಸದಸ್ಯರಿಂದ ಆರೋಪ
ಕನ್ನಡಪ್ರಭ ವಾರ್ತೆ, ಬೀರೂರು.ಪಟ್ಟಣದ ಮಾರ್ಗದ ಕ್ಯಾಂಪಿನಲ್ಲಿರುವ ಎಸ್.ಎಂ.ಕೃ಼ಷ್ಣ ಸಮುದಾಯಭವನದ ಬಾಡಿಗೆ ಹಾಗೂ ಪಟ್ಟಣದಲ್ಲಿ ಕಳೆದ ಎರಡುವರೆ ವರ್ಷದಿಂದ ಚಾಲನೆಯಲ್ಲಿರುವ ಯುಜಿಡಿ ಕಾಮಗಾರಿಗೆ ಪುರಸಭೆ ಅಧಿಕಾರಿಗಳು ಸಾರ್ವಜನಿಕರ ತೆರಿಗೆ ಹಣದ ಯಾವುದೇ ಮಾಹಿತಿಯನ್ನು ಪುರಸಭಾ ಸದಸ್ಯರಿಗೆ ನೀಡದೆ ಲೋಪವೆಸಗುತ್ತಿದ್ದಾರೆ ಎಂದು 6ನೇ ವಾರ್ಡ ಸದಸ್ಯ ಜಿಮ್ ರಾಜು ಆರೋಪಿಸಿದರು.ಪುರಸಭಾ ಸಭಾಂಗಣದಲ್ಲಿ ಅಧ್ಯಕ್ಷೆ ವನಿತಾಮಧು ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿ. ಪಟ್ಟಣದಲ್ಲಿ ಯುಜಿಡಿ ಸಂಪರ್ಕಕ್ಕೆ ಸಾರ್ವಜನಿಕರಿಂದ ಒಂದು ಸಾವಿರ ತೆರಿಗೆ ಕಟ್ಟಿಸಿಕೊಳ್ಳಲಾಗುತ್ತಿದೆ. ಜೊತೆಗೆ ಶೌಚಾಲಯ ಸ್ವಚ್ಛಗೊಳಿಸಲು ಇರುವ ಸಕ್ಕಿಂಗ್ ಯಂತ್ರದಿಂದ ಬಂದ ಆದಾಯದ ಮಾಹಿತಿಯನ್ನು ಕಳೆದ ಎರಡುವರೆ ವರ್ಷಗಳ ಆಡಳಿತಾವಧಿಯಲ್ಲಿ ಅಧಿಕಾರಿಗಳು ಸದಸ್ಯರಿಗೆ ನೀಡಿಲ್ಲ ಏಕೆ. ಜನನ ಮರಣ, ಅಲಭ್ಯ ಪ್ರಮಾಣ ಪತ್ರಗಳಿಗೆ ಸಾರ್ವಜನಿ ಕರಿಂದ ಎಷ್ಟು ಹಣ ಪಡೆಯುತ್ತಿದ್ದೀರಿ ತಿಳಿಸಿ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.ಹಿರಿಯ ಆರೋಗ್ಯ ನಿರೀಕ್ಷಕ ವೈ.ಎಂ.ಲಕ್ಷ್ಮಣ್, ಸಕ್ಕಿಂಗ್ ಯಂತ್ರದ ಸ್ವಚ್ಛತೆ ಮತ್ತು ಯುಜಿಡಿ ಸಂಪರ್ಕಕ್ಕೆ ಕೇವಲ ಒಂದು ಸಾವಿರ ಕಟ್ಟಿಸಿಕೊಳ್ಳಲಾಗುತ್ತಿದೆ. ಎಲ್ಲಾ ದಾಖಲೆಗಳು ಇವೆ. ಮುಂದಿನ ದಿನಗಳಲ್ಲಿ ಎಲ್ಲಾ ಸದಸ್ಯರ ಗಮನಕ್ಕೆ ತರಲಾಗುವುದು ಎಂದರು.ಪುರಸಭೆ ಸದಸ್ಯೆ ಜ್ಯೋತಿ ವೆಂಕಟೇಶ್ ಮಾತನಾಡಿ, ನಮ್ಮ ಬಡಾವಣೆಯಲ್ಲಿ ರಾಜ್ಯ ಸರ್ಕಾರ ನೀಡಿರುವ ನಮ್ಮ ಕ್ಲಿನಿಕ್ ಚಾಲನೆ ಯಲ್ಲಿದ್ದು, ಮಾಹಿತಿ ಕೊರತೆಯಿಂದ ಇಲ್ಲಿ ಜನರು ಆಗಮಿಸುತ್ತಿಲ್ಲ. ಇಲ್ಲಿಗೆ ಸಂಪರ್ಕ ನೀಡುವ ಪ್ರಮುಖ ರಸ್ತೆಗೆ ಮಾಹಿತಿ ಫಲಕ ಹಾಕಿ, ಪ್ರಚಾರ ನೀಡುವಂತೆ ಕೋರಿದರು.ಪಟ್ಟಣದಲ್ಲಿ ದಿನದಿನಕ್ಕೆ ಬೀದಿನಾಯಿಗಳ ಹಾವಳಿ ಹೆಚ್ಚಾಗುತ್ತಿದೆ. ಅವುಗಳ ಹಿಂಡು ಪಟ್ಟಣದೆಲ್ಲೆಡೆ ಹೆಚ್ಚಾಗುತ್ತಿದ್ದು. ಸಾರ್ವ ಜನಿಕರು ಮತ್ತು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಕಳೆದ ಸಭೆಯಲ್ಲಿ ಇದೇ ವಿಷಯವಾಗಿ ಚರ್ಚೆ ನಡೆದಿದ್ದರೂ ಸಹ ಅಧಿಕಾರಿಗಳು ತಲೆ ಕೆಡಿಸಿಕೊಳ್ಳುತ್ತಿಲ್ಲ. ಸಾರ್ವಜನಿಕರಿಗೆ ತೊಂದರೆ ಆದರೆ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು. ಕೆಲವು ನಾಯಿಗಳು ರೋಗಪೀಡಿತವಾಗಿದ್ದು ಮೈಮೇಲಿನ ಕೂದಲು ಉದುರುವ ರೋಗ ಕಾಣಿಸಿಕೊಳ್ಳುತ್ತಿದೆ. ಇದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಅಧಿಕಾರಿಗಳು ತಾತ್ಸಾರ ಮಾಡಿದರೇ ಬೀದಿ ನಾಯಿ ಗಳನ್ನು ಹಿಡಿಸಿ ಪುರಸಭೆಗೆ ಕಟ್ಟಿಹಾಕಿಸಿ ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದರು.ಇದಕ್ಕೆ ಉತ್ತರಿಸಿದ ಪರಿಸರ ಅಭಿಯಂತರ ನೂರುದ್ದೀನ್, ಬೀರೂರು ಪಟ್ಟಣ ವ್ಯಾಪ್ತಿಯ ಬೀದಿ ನಾಯಿ ನಿಯಂತ್ರಣಕ್ಕೆ ಕೇವಲ 2 ಲಕ್ಷ ರು. ಮಾತ್ರ ಇಟ್ಟಿದ್ದೇವೆ. ಒಂದು ನಾಯಿ ಸಂತಾನಹರಣ ಚಿಕಿತ್ಸೆಗೆ ₹1800 ಬೇಕಾಗುತ್ತದೆ. ಇದಕ್ಕಾಗಿ ಟೆಂಡರ್ ಕರೆಯಲಾಗಿದೆ. ಯಾರು ಟೆಂಡರ್ ನಲ್ಲಿ ಭಾಗವಹಿಸಿಲ್ಲ. ಇದನ್ನು ಆದಷ್ಟು ಬೇಗಾ ಬಗೆಹರಿಸಲಾಗುವುದು ಎಂದರು.ಪುರಸಭೆ ಸದಸ್ಯ ಎಂ.ಪಿ.ಸುದರ್ಶನ್ ಮಾತನಾಡಿ, ಹೊಸ ಅಜ್ಜಂಪುರ ರಸ್ತೆಗೆ ಫುಟ್ ಪಾತ್ ಮಾಡುವಂತೆ ಸಾರ್ವಜನಿಕರು ಪ್ರತಿಭಟನೆ ನಡೆಸಿದರೂ ಸಹ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ ಏಕೆ? ಸರ್ಕಾರ ಹಣ ನೀಡಿ ನಿವೇಶನ ಮಾಲೀಕರಿಂದ ಜಾಗ ಪಡೆದಿದೆ. ನಿಮ್ಮ ಕಳ್ಳಾಟ ಬದಿಗಿರಿಸಿ ಮೊದಲು ಫುಟ್ ಪಾತ್ ತೆರವುಗೊಳಿಸಿ ಎಂದಿದ್ದಕ್ಕೆ ಧ್ವನಿಗೂಡಿಸಿದ ಸದಸ್ಯ ಲೋಕೇ ಶಪ್ಪ, ನಮಗೆ ಇತ್ತೀಚೆಗಷ್ಟೆ ಅಲ್ಲಿನ ಭೂ ಮಾಲೀಕರು ಅಧಿಕಾರಿಗಳನ್ನು ಬುಟ್ಟಿಗೆ ಹಾಕಿಕೊಂಡು ಎಷ್ಟು ಹಣ ಪಡೆದಿದ್ದಾರೆ ಎಂದು ತಿಳಿಯುತ್ತಿದೆ. ನೀವು ಭೂ ಮಾಲೀಕರೊಂದಿಗೆ ಶಾಮೀಲಾಗಿ ಪಾದಚಾರಿ ರಸ್ತೆ ಬಿಡಿಸುತ್ತಿಲ್ಲ ಎಂದು ಆರೋಪಿಸಿದರು. ಮುಖ್ಯಾಧಿಕಾರಿ ಜಿ.ಪ್ರಕಾಶ್ ಫುಟ್ ಪಾತ್ ತೆರವುಗೊಳಿಸಲು ಕೆಶಿಫ್ ಅಧಿಕಾರಿಗಳು ಭೇಟಿ ನೀಡಿ ಜಾಗ ಪಡೆದ ಮಾಹಿತಿ ತೆಗೆದುಕೊಂಡಿದ್ದು, ಶೀಘ್ರ ಪಿಡಬ್ಲ್ಯಡಿ ಅಧಿಕಾರಿಗಳ ಸಹಕಾರದಿಂದ ತೆರವುಗೊಳಿಸಲಾಗುವುದು ಎಂದರು.ಪುರಸಭೆ ಅಧ್ಯಕ್ಷೆ ವನಿತಾಮಧು ಮಾತನಾಡಿ, ಈ ಹಿಂದಿನ ಸ್ಥಾಯಿ ಸಮಿತಿ ಅಧ್ಯಕ್ಷರ ರಾಜಿನಾಮೆಯಿಂದ ಆ ಹುದ್ದೆ ಖಾಲಿ ಇದ್ದು ಸ್ಥಾಯಿ ಸಮಿತಿ ರಚನೆಗೆ ಸದಸ್ಯರ ಆಯ್ಕೆಪಟ್ಟಿ ಮಾಡಲಾಗಿದೆ. ಬರುವ ಸೋಮವಾರ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆಯಾಗಲಿದೆ ಎಂದರು.ಈ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷ ಎನ್.ಎಂ.ನಾಗರಾಜ್, ಸದಸ್ಯರಾದ ಮಾನಿಕ್ ಭಾಷ, ಬಿ.ಆರ್.ಮೋಹನ್ ಕುಮಾರ್, ಶಾರದರುದ್ರಪ್ಪ, ಎಲೆರವಿಕುಮಾರ್, ಲಕ್ಷ್ಮಣ್, ಸಹನಾ ವೆಂಕಟೇಶ್, ಸುಮಿತ್ರಾ ಕೃಷ್ಣಮೂರ್ತಿ, ರೋಹಿಣಿ ವಿನಾಯಕ್ ಸೇರಿದಂತೆ ಪುರಸಭಾ ಸದಸ್ಯರು ಹಾಗೂ ಸಿಬ್ಬಂದಿ ಇದ್ದರು.12 ಬೀರೂರು 1ಬೀರೂರಿನ ಪುರಸಭಾ ಸಭಾಂಗಣದಲ್ಲಿ ಗುರುವಾರ ಪುರಸಭಾ ಅಧ್ಯಕ್ಷೆ ವನಿತಮಧು ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು. ಪುರಸಭೆಉಪಾಧ್ಯಕ್ಷ ಎನ್.ಎಂ.ನಾಗರಾಜ್, ಮುಖ್ಯಾಧಿಕಾರಿ ಪ್ರಕಾಶ್ ಇದ್ದರು.