ಹಾಸ್ಟೆಲ್‌ ಪ್ರಕ್ರಿಯೆ ವಿಳಂಬಕ್ಕೆ ವ್ಯಾಪಕ ಖಂಡನೆ

KannadaprabhaNewsNetwork |  
Published : Jul 05, 2024, 12:52 AM IST
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಲಬುರಗಿ ಮಹಾನಗರ ವತಿಯಿಂದ ಹಾಸ್ಟೆಲ್ ಗಳ ಆಯ್ಕೆ ಪ್ರಕ್ರಿಯೆಯಲ್ಲಿ ವಿಳಂಬ ಹಾಗೂ ಕಳೆದ ವರ್ಷದ ವಿದ್ಯಾರ್ಥಿ ವೇತನವನ್ನು ಸರಿಯಾಗಿ ಬಿಡುಗಡೆ ಮಾಡದ ಕಾರಣ ಆರ್ ಟಿ ಓ ವೃತ್ತದಲ್ಲಿ ರಸ್ತೆ ತಡೆದು ಬೃಹತ್ ಪ್ರತಿಭಟನೆ ಮಾಡಲಾಯಿತು.  | Kannada Prabha

ಸಾರಾಂಶ

ಹಾಸ್ಟೆಲ್‌ಗಳಿಗೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ಕೂಡಲೇ ಪೂರ್ಣಗೊಳಿಸಿ ಹಾಸ್ಟೆಲ್‌ಗಳಿಗೆ ಪ್ರವೇಶಾತಿ ನೀಡಬೇಕು.

ಕನ್ನಡಪ್ರಭ ವಾರ್ತೆ ಕಲಬುರಗಿ

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಲಬುರಗಿ ಮಹಾನಗರ ವತಿಯಿಂದ ಹಾಸ್ಟೆಲ್‌ಗಳ ಆಯ್ಕೆ ಪ್ರಕ್ರಿಯೆಯಲ್ಲಿ ವಿಳಂಬ ಹಾಗೂ ಕಳೆದ ವರ್ಷದ ವಿದ್ಯಾರ್ಥಿ ವೇತನವನ್ನು ಸರಿಯಾಗಿ ಬಿಡುಗಡೆ ಮಾಡದ ಕಾರಣ ನಗರದ ಆರ್‌ಟಿಒ ವೃತ್ತದಲ್ಲಿ ರಸ್ತೆ ತಡೆದು ಬೃಹತ್ ಪ್ರತಿಭಟನೆ ಮಾಡಲಾಯಿತು.

ಈ ಸಂದರ್ಭದಲ್ಲಿ ವಿಭಾಗ ಸಂಘಟನಾ ಕಾರ್ಯದರ್ಶಿ ಪಾಂಡು ಮೋರೆ ಮಾತನಾಡಿ, ವಿದ್ಯಾರ್ಥಿಗಳ ಹಾಸ್ಟೆಲ್‌ ಪ್ರವೇಶಾತಿ ಆಯ್ಕೆ ಪ್ರಕ್ರಿಯೆಯಲ್ಲಿ ವಿಳಂಬ ಹಾಗೂ ವಿದ್ಯಾರ್ಥಿ ವೇತನವನ್ನು ನೀಡದ ರಾಜ್ಯ ಸರಕಾರದ ವಿರುದ್ಧ ಪ್ರತಿಭಟನೆಗೆ ಕರೆ ನೀಡಿದರು.

ಗ್ರಾಮೀಣ ಭಾಗದಿಂದ ಬಡ ಮತ್ತು ಪ್ರತಿಭಾವಂತ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣವನ್ನು ಪಡೆಯಬೇಕೆಂಬ ಆಶಯವನ್ನ ಇಟ್ಟುಕೊಂಡು ನಗರ ಪ್ರದೇಶಗಳಿಗೆ ಬರುತ್ತಾರೆ, ಆ ವಿದ್ಯಾರ್ಥಿಗಳಿಗೆ ಸರ್ಕಾರಗಳು ಮೂಲ ಸೌಲಭ್ಯಗಳನ್ನ ಒದಗಿಸುವುದು ಆದ್ಯ ಕರ್ತವ್ಯವಾಗಿದೆ. ಆದರೆ, ಕರ್ನಾಟಕ ರಾಜ್ಯದಲ್ಲಿ ಕಾಲೇಜು ಮತ್ತು ಪ್ರೌಢ ಶಾಲೆಗಳು ಪ್ರಾರಂಭವಾದ ಮೂರು ತಿಂಗಳಗಳ ವರೆಗೆ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ ಪ್ರವೇಶಾತಿ ಸಿಗುತ್ತಿಲ್ಲ, ಜೂನ್ ತಿಂಗಳಲ್ಲಿ ಶಾಲೆ- ಕಾಲೇಜುಗಳು ಪ್ರಾರಂಭವಾದರೂ ಸಹಿತ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌್ ಪ್ರವೇಶಾತಿ ಸಿಗುವುದರಲ್ಲಿ ಸೆಪ್ಟಂಬರ್ ವರೆಗೂ ತಲುಪುವ ಹಂತವನ್ನು ಸರ್ಕಾರ ಮತ್ತು ಅಧಿಕಾರಿಗಳು ಮಾಡುತ್ತಿರುವುದರಿಂದ ಸಾವಿರಾರು ವಿದ್ಯಾರ್ಥಿಗಳು ಮೂರು ತಿಂಗಳುಗಳ ಕಾಲ ಎಲ್ಲಿ ಉಳಿದುಕೊಂಡು ಶಿಕ್ಷಣವನ್ನ ಪಡೆಯಬೇಕು ಎಂಬುವ ಸಾಮಾನ್ಯ ಜ್ಞಾನವು ಸರ್ಕಾರಗಳಿಗೆ ಇಲ್ಲದಂತಾಗಿದೆ ಎಂದು ವಿಷಾದಿಸಿದರು.

ರಾಜ್ಯ ಸರ್ಕಾರ ಕೂಡಲೇ ಈ ವರ್ಷದ ಹಾಸ್ಟೆಲ್‌ಗೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ತಕ್ಷಣವೇ ಪೂರ್ಣಗೊಳಿಸಿ, ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ ಪ್ರವೇಶಾತಿ ಕಲ್ಪಿಸಬೇಕೆಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ರಾಜ್ಯ ಸರ್ಕಾರವನ್ನ ಹೋರಾಟಗಾರರು ಆಗ್ರಹಿಸಿದರು.

ಹಾಸ್ಟೆಲ್‌ಗಳಿಗೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಲ್ಲಿ ಶೇ.೪೦ರಷ್ಟು ವಿದ್ಯಾರ್ಥಿಗಳಿಗೆ ಮಾತ್ರ ವಸತಿ ನಿಲಯಗಳನ್ನ ಕಲ್ಪಿಸಿಕೊಡುವ ವ್ಯವಸ್ಥೆ ಈಗ ನಮ್ಮ ರಾಜ್ಯದ ಜಿಲ್ಲಾ ಕೇಂದ್ರಗಳಲ್ಲಿ ಲಭ್ಯವಿದೆ. ಆದರೆ, ಇನ್ನುಳಿದ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಈ ವ್ಯವಸ್ಥೆಯಿಂದ ವಂಚಿತರಾಗಿ ತಮ್ಮ ಉನ್ನತ ಶಿಕ್ಷಣವನ್ನ ಪಡೆಯಲು ಕಷ್ಟಕರವಾಗುತ್ತಿದೆ, ಸರ್ಕಾರ ಕೂಡಲೇ ಹಾಸ್ಟೆಲ್‌ಗಳ ಸಂಖ್ಯೆಯನ್ನು ಹೆಚ್ಚಳ ಮಾಡುವ ನಿಟ್ಟಿನಲ್ಲಿ ವಿಶೇಷ ಅನುದಾನವನ್ನ ನೀಡಿ ಹಾಸ್ಟೆಲ್‌ಗಳ ಸಂಖ್ಯೆಗಳನ್ನ ಹೆಚ್ಚಳ ಮಾಡಬೇಕು ಹಾಗೂ ಈಗಿರುವ ಹಾಸ್ಟೆಲ್‌ಗಳಿಗೆ ಮೂಲ ಸೌಲಭ್ಯ ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ಎಬಿವಿಪಿ ಒತ್ತಾಯಿಸಿತು.

ಲಕ್ಷಾಂತರ ಬಡ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನವನ್ನು ನಂಬಿ ಶಿಕ್ಷಣವನ್ನ ಪಡೆಯುತ್ತಿದ್ದಾರೆ, ತಮ್ಮ ಶಿಕ್ಷಣಕ್ಕೆ ಸರ್ಕಾರಗಳು ನೀಡುವ ವಿದ್ಯಾರ್ಥಿವೇತನ ಸಹಕಾರಿಯಾಗಲಿದೆ ಎಂಬ ಭಾವನೆಯೊಂದಿಗೆ ಅರ್ಜಿ ಸಲ್ಲಿಸಿದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಕಳೆದ ವರ್ಷದ ವಿದ್ಯಾರ್ಥಿವೇತನ ಜಮೆಯಾಗದೆ ಬಹಳಷ್ಟು ತೊಂದರೆಯನ್ನು ಅನುಭವಿಸುತ್ತಿದ್ದಾರೆ.

ಕಾರ್ಮಿಕರ ಮಕ್ಕಳ ವಿದ್ಯಾರ್ಥಿ ವೇತನವನ್ನು ಕಡಿತಗೊಳಿಸಿರುವುದು, ವಿದ್ಯಾಸಿರಿ ವಿದ್ಯಾರ್ಥಿ ವೇತನ ಸರಿಯಾಗಿ ಜಮೆಯಾಗದೇ ಇರುವುದು, ರೈತ ವಿದ್ಯಾನಿಧಿಯನ್ನ ರದ್ದುಗೊಳಿಸಿರುವುದು, ಹಾಗೂ ಇನ್ನುಳಿದ ವಿದ್ಯಾರ್ಥಿ ವೇತನವು ಸರಿಯಾಗಿ ವಿದ್ಯಾರ್ಥಿಗಳಿಗೆ ಜಮೆ ಮಾಡದೆ ವಿದ್ಯಾರ್ಥಿ ವಿರೋಧಿ ನೀತಿಯನ್ನ ಅನುಸರಿಸುತ್ತಿರುವ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಸಂಬಧಿಸಿದ ಸಚಿವರು ತಕ್ಷಣವೇ ವಿದ್ಯಾರ್ಥಿವೇತನವನ್ನು ವಿದ್ಯಾರ್ಥಿಗಳ ಖಾತೆಗೆ ಜಮೆ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ವಿದ್ಯಾರ್ಥಿ ಪರಿಷತ್ ಹೋರಾಟಗಾರರು ಆಗ್ರಹಿಸಿದರು.

ವಿದ್ಯಾರ್ಥಿಗಳ ಪ್ರಮುಖ ಬೇಡಿಕೆಗಳು: ಹಾಸ್ಟೆಲ್‌ಗಳಿಗೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ಕೂಡಲೇ ಪೂರ್ಣಗೊಳಿಸಿ ಹಾಸ್ಟೆಲ್‌ಗಳಿಗೆ ಪ್ರವೇಶಾತಿ ನೀಡಬೇಕು.

ರಾಜ್ಯದಲ್ಲಿ ಸಮಾಜ ಕಲ್ಯಾಣ ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತ ಇಲಾಖೆಗಳ ಹಾಸ್ಟೆಲ್‌ಗಳ ಸಂಖ್ಯೆಯನ್ನು ಹೆಚ್ಚಳ ಮಾಡಬೇಕು.

ಬಾಕಿ ಉಳಿದಿರುವ ಹಿಂದಿನ ವರ್ಷದ ವಿದ್ಯಾರ್ಥಿ ವೇತನವನ್ನು ತಕ್ಷಣವೇ ವಿದ್ಯಾರ್ಥಿಗಳ ಖಾತೆಗೆ ಜಮೆ ಮಾಡಬೇಕು.

ಈ ಸಂದರ್ಭದಲ್ಲಿ ಪ್ರಾಂತ ಸಹ ಸಂಘಟನಾ ಕಾರ್ಯದರ್ಶಿ ಗಂಗಾಧರ ಹಂಜಗಿ, ರಾಷ್ಟ್ರೀಯ ಕ ಕಾರ್ಯಕಾರಣಿ ಸದಸ್ಯ ಹನುಮಂತ ಬಗಲಿ, ಅರುಣಾ, ಶಿವಾನಿ,ದಿಲೀಪ್, ಅನಿಕೇತ್ ತರುಣ್ ,ಸಂತೋಷ,ಅರ್ಜುನ್ ಮತ್ತು ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಹಾ ಜಿಪಂ ಎಲೆಕ್ಷನ್‌ಗೆ ಮೈಸೂರು ಇಂಕ್‌ ಬಳಕೆ
ಮಾಜಿ ಸಚಿವ ರಾಜಣ್ಣಗೆ ಸಿಹಿ ಸುದ್ದಿ : ಮುಖ್ಯಮಂತ್ರಿ ಸಿದ್ಧರಾಮಯ್ಯ