ಬ್ಯಾಡಗಿ: ರೈತರ ನಿರಂತರ ಹೋರಾಟದ ಬಳಿಕ ಸಹ ಹಾಲಿನ ದರದಲ್ಲಿನ ವ್ಯತ್ಯಾಸ ಸರಿಪಡಿಸುವ ನಾಟಕವಾಡಿ, ಅದರಲ್ಲಿ ಮತ್ತೆ ಪ್ರತಿ ಲೀ. ಹಾಲಿಗೆ ₹1.50 ಕಡಿಮೆ ಮಾಡಿ ರೈತರಿಗೆ ಮತ್ತೆ ಮೋಸ ಮಾಡಿದ ಹಾವೆಮುಲ್ ಧೋರಣೆ ಖಂಡಿಸಿ ಉಳಿದ ಹಣವನ್ನು ಕೂಡಲೇ ರೈತರಿಗೆ ನೀಡುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ(ಪುಟ್ಟಣ್ಣಯ್ಯ ಬಣ) ಕಾರ‍್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಈ ವೇಳೆ ಮಾತನಾಡಿದ ತಾಲೂಕಾಧ್ಯಕ್ಷ ರುದ್ರನಗೌಡ್ರ ಕಾಡನಗೌಡ್ರ, ಹಾವೆಮುಲ್‌ನಲ್ಲಿ ನಡೆಯುತ್ತಿರುವ ರಾಜಕೀಯ ಬಡಿದಾಟಕ್ಕೆ ಕಳೆದ ಕೆಲ ವರ್ಷದಿಂದ ಲಾಭದಲ್ಲಿದ್ದ ಒಕ್ಕೂಟವು ಏಕಾಏಕಿ ಒಂದೇ ವರ್ಷದಲ್ಲಿ ₹18 ಕೋಟಿ ನಷ್ಟದಲ್ಲಿದೆ ಎನ್ನಲಾಗುತ್ತಿದೆ. ಇದೊಂದು ವದಂತಿ ಎಂದ ಅವರು, ಹಾವೆಮುಲ್‌ನಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ಕೂಡಲೇ ತನಿಖೆ ನಡೆಸಿ ಕಡಿತ ಮಾಡಿರುವ ₹1.50 ಹಣ ರೈತರಿಗೆ ನೀಡುವಂತೆ ಆಗ್ರಹಿಸಿದರು.ಮೌನೇಶ ಕಮ್ಮಾರ ಮಾತನಾಡಿ, ನಷ್ಟದ ನೆಪವೊಡ್ಡಿ ರೈತರನ್ನು ಲೂಟಿ ಮಾಡುವುದನ್ನು ಬಿಟ್ಟು ಉಳಿದ ಹಣವನ್ನು ಕೂಡಲೇ ರೈತರಿಗೆ ನೀಡಬೇಕು. ಇಲ್ಲದಿದ್ದಲ್ಲಿ ಹೋರಾಟ ತೀವ್ರಗೊಳ್ಳಲಿದೆ ಎಂದು ಎಚ್ಚರಿಸಿದರು.
ಚಿಕ್ಕಪ್ಪ ಛತ್ರದ, ಶೇಖಪ್ಪ ಕಾಶಿ, ಕಿರಣ ಗಡಿಗೊಳ, ಮಂಜು ತೋಟದ, ಮಲ್ಲೇಶಪ್ಪ ಡಂಬಳ, ಹನುಮಂತಪ್ಪ ಕುರಡಮ್ಮನವರ ಸೇರಿದಂತೆ ನೂರಾರು ರೈತರು ಉಪಸ್ಥಿತರಿದ್ದರು.ಹಾಲಿನ ದರ ಹೆಚ್ಚಳ ಜಿಲ್ಲೆಯ ರೈತರಿಗೂ ನೀಡಲು ಆಗ್ರಹರಾಣಿಬೆನ್ನೂರು: ಸರ್ಕಾರ ರೈತರಿಗೆ ನೀಡುವ ಹಾಲಿನ ದರ ಹೆಚ್ಚಳವನ್ನು ಜಿಲ್ಲೆಯ ರೈತರಿಗೂ ಕೊಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಕಾರ್ಯಕರ್ತರು ಸೋಮವಾರ ಗ್ರೇಡ್- 2 ತಹಸೀಲ್ದಾರ್ ಅರುಣ ಕಾರಗಿ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.ರಾಜ್ಯ ಸರ್ಕಾರ ಪ್ರತಿ ಲೀಟರ್ ಹಾಲಿಗೆ ₹4 ಏರಿಕೆ ಮಾಡಿದ್ದರೂ ಜಿಲ್ಲೆಯ ರೈತರಿಗೆ ಕೇವಲ ₹2.50 ಹೆಚ್ಚಳ ಮಾಡಿರುವುದು ಸರಿಯಲ್ಲ. ಹಾವೆಮುಲ್ ನಷ್ಟಕ್ಕೆ ಹಿಂದಿನ ಆಡಳಿತ ಮಂಡಳಿ ದುರಾಡಳಿತ ಕಾರಣವಾಗಿದ್ದು, ಅದನ್ನು ರೈತರ ಮೇಲೆ ಹಾಕುತ್ತಿರುವುದು ನ್ಯಾಯಸಮ್ಮತವಲ್ಲ. ಜಿಲ್ಲೆಯ ಉಸ್ತುವಾರಿ ಸಚಿವರು, ಶಾಸಕರು ತನಿಖೆ ನಡೆಸಿ ಇದರ ಬಗ್ಗೆ ಸೂಕ್ತ ತನಿಖೆ ನಡೆಸಿ ನಷ್ಟಕ್ಕೆ ಕಾರಣವಾದರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.