ಮನೆ ಬಿಟ್ಟು ಹೋಗಿ ಪರಪುರುಷನೊಂದಿಗೆ ಸಹಜೀವನ ನಡೆಸುತ್ತಿರುವ ಮಹಿಳೆ ತನ್ನ ಪತಿಯಿಂದ ಜೀವನಾಂಶ ಕೋರುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು ವಿವಾಹಿತ ಮಹಿಳೆಯು ಪತಿಯನ್ನು ತೊರೆದು ಪರ ಪುರುಷನೊಂದಿಗೆ ಸಹಜೀವನ ಜೀವನ ನಡೆಸುತ್ತಿರುವ ಸಂದರ್ಭದಲ್ಲಿ ಪತಿಯಿಂದ ಜೀವನಾಂಶ ಕೋರುವ ಪರಿಸ್ಥಿತಿ ಉದ್ಭವಿಸುವುದಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ. ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯ ರಕ್ಷಣೆ ಕಾಯ್ದೆಯಡಿ ತನಗೆ ಜೀವನಾಂಶ ಮಂಜೂರು ಮಾಡಿದ್ದ ಮ್ಯಾಜಿಸ್ಟ್ರೇಟ್ ಆದೇಶ ರದ್ದುಪಡಿಸಿದ್ದ ಚಿಕ್ಕಮಗಳೂರು 2ನೇ ಸೆಷನ್ಸ್ ನ್ಯಾಯಾಲಯದ ಆದೇಶ ಪ್ರಶ್ನಿಸಿ ಮಹಿಳೆಯೊಬ್ಬರು ಸಲ್ಲಿಸಿದ್ದ ಕ್ರಿಮಿನಲ್ ಪುನರ್ ಪರಿಶೀಲನಾ ಅರ್ಜಿ ಸಂಬಂಧ ಹೈಕೋರ್ಟ್ ಈ ಆದೇಶ ಮಾಡಿದೆ. ಪ್ರಕರಣದಲ್ಲಿ ಅರ್ಜಿದಾರ ಮಹಿಳೆಯು ಪತಿಯನ್ನು ತ್ಯಜಿಸಿ ಪರ ಪುರುಷನೊಂದಿಗೆ ಮನೆಬಿಟ್ಟು ಹೋಗಿದ್ದಾರೆ. ಆತನ ಒತ್ತಡದ ಮೇಲೆ ಪತಿ ವಿರುದ್ಧ ಕೌಟುಂಬಿಕ ದೌರ್ಜನ್ಯ ಕಾಯ್ದೆಯಡಿ ಪೊಲೀಸರಿಗೆ ದೂರು ದಾಖಲಿಸಿದ್ದಾರೆ. ಪತಿಯೊಂದಿಗೆ ಮತ್ತೆ ಸೇರುವುದಿಲ್ಲ. ಪ್ರಿಯಕರನೊಂದಿಗೇ ನೆಲೆಸುವುದಾಗಿ ಪೊಲೀಸರು ಮುಂದೆ ಅರ್ಜಿದಾರೆ ಹೇಳಿಕೆ ನೀಡಿದ್ದಾರೆ. ಇದೇ ಕಾರಣಕ್ಕೆ ಕೌಟುಂಬಿಕ ನ್ಯಾಯಾಲಯ ಅರ್ಜಿದಾರೆ ಮತ್ತು ಆಕೆಯ ಪತಿಯ ವಿವಾಹವನ್ನು ಅನೂರ್ಜಿತಗೊಳಿಸಿ ವಿಚ್ಛೇದನ ಮಂಜೂರು ಮಾಡಿದೆ ಎಂದು ಹೈಕೋರ್ಟ್ ಆದೇಶದಲ್ಲಿ ಉಲ್ಲೇಖಿಸಿದೆ. ತಮ್ಮ ಭಾವ (ಮಹಿಳೆಯ ಪತಿ) ಎಂದೂ ಸಹ ವರದಕ್ಷಿಣೆಗೆ ಒತ್ತಾಯಿಸಿ ಅರ್ಜಿದಾರೆಯನ್ನು ಕೆಟ್ಟದಾಗಿ ನಡೆಸಿಕೊಂಡಿಲ್ಲ. ಪ್ರಿಯಕರನೊಂದಿಗೇ ಆಕೆ ನೆಲೆಸಿದ್ದಾರೆ. ಆತನೇ ಅರ್ಜಿದಾರೆಯ ಜೀವನ ನಿರ್ವಹಣೆ ಮಾಡುತ್ತಿದ್ದಾರೆ ಎಂಬುದಾಗಿ ಅರ್ಜಿದಾರೆಯ ಸಹೋದರ ಸಾಕ್ಷ್ಯ ನುಡಿದಿದ್ದಾರೆ. ಇನ್ನು ಮನೆಬಿಟ್ಟು ಹೋಗಿರುವ ವಿಚಾರವನ್ನು ಅರ್ಜಿದಾರೆಯ ಪುತ್ರ ಸಹ ಒಪ್ಪಿಕೊಂಡಿದ್ದಾನೆ. ಇದರಿಂದ ಅರ್ಜಿದಾರೆಯು ತನ್ನ ಪತಿಗೆ ಪ್ರಾಮಾಣಿಕಳಾಗಿ ಇಲ್ಲ ಮತ್ತು ಪ್ರಿಯಕರನೊಂದಿಗೆ ಸಹಜೀವನ ಜೀವನ ನಡೆಸುತ್ತಿದ್ದಾರೆ. ಹೀಗಿರುವಾಗ ಪತಿಯಿಂದ ಜೀವನಾಂಶ ಕೋರುವ ಪರಿಸ್ಥಿತಿಯೇ ಉದ್ಭವಿಸುವುದಿಲ್ಲ ಎಂದು ಹೈಕೋರ್ಟ್ ಆದೇಶದಲ್ಲಿ ಸ್ಪಷ್ಟಪಡಿಸಿದೆ. ಇದೇ ವೇಳೆ ಪತಿ ಸಹ ತನ್ನ ನಾದಿನಿಯ ಮಗಳ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಅರ್ಜಿದಾರೆ ಮಾಡಿದ ಆರೋಪಕ್ಕೆ ಪ್ರತಿಕ್ರಿಯಿಸಿರುವ ಹೈಕೋರ್ಟ್, ಈ ಅಂಶವು ವಿವಾದಾಸ್ಪದವಾಗಿದ್ದರೂ ಜೀವನಾಂಶವನ್ನು ಕೋರುತ್ತಿರುವಾಗ ಅರ್ಜಿದಾರೆ ತನ್ನ ಪ್ರಾಮಾಣಿಕತೆಯನ್ನು ಸಾಬೀತುಪಡಿಸಬೇಕಾಗುತ್ತದೆ. ಸ್ವತಃ ತಾನೇ ಪ್ರಾಮಾಣಿಕಳಾಗಿ ಇರದಿದ್ದಾಗ ಪತಿಯತ್ತ ಬೆರಳು ತೋರಿಸಲು ಸಾಧ್ಯವಿಲ್ಲ. ಆದ್ದರಿಂದ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶ ರದ್ದುಪಡಿಸಿದ ಸೆಷನ್ಸ್ ನ್ಯಾಯಾಲಯದ ಕ್ರಮ ನ್ಯಾಯಬದ್ಧವಾಗಿದೆ. ಅದರಲ್ಲಿ ಮಧ್ಯಪ್ರವೇಶ ಮಾಡುವ ಅಗತ್ಯತೆ ಕಂಡುಬರುತ್ತಿಲ್ಲ ಎಂದು ಅಭಿಪ್ರಾಯಪಟ್ಟ ನ್ಯಾಯಮೂರ್ತಿ ರಾಜೇಂದ್ರ ಬಾದಾಮಿಕರ್ ಅವರ ಪೀಠ ಮಹಿಳೆಯ ಅರ್ಜಿಯನ್ನು ವಜಾಗೊಳಿಸಿದೆ. ಪ್ರಕರಣವೇನು?: ಚಿಕ್ಕಮಗಳೂರಿನ ಅರ್ಜಿದಾರೆ, ತನ್ನದೇ ಜಿಲ್ಲೆಯ ವ್ಯಕ್ತಿಯನ್ನು ವಿವಾಹವಾಗಿದ್ದರು. ಕೆಲ ವರ್ಷ ಸಂಸಾರ ನಡೆಸಿದ ಬಳಿಕ ಅರ್ಜಿದಾರೆ ಪರಪುರುಷನೊಂದಿಗೆ ಅಕ್ರಮ ಸಂಬಂಧ ಬೆಳೆಸಿ, ಮನೆಬಿಟ್ಟು ಹೋಗಿದ್ದರು. ಗ್ರಾಮದ ಪಂಚಾಯತಿಯಲ್ಲಿ ರಾಜೀ ನಡೆಸಿ, ಪತ್ನಿ-ಪತಿಯನ್ನು ಒಂದು ಮಾಡಲಾಗಿತ್ತು. ಇದಾದ ನಂತರವೂ ಪತ್ನಿ ಮನೆಬಿಟ್ಟು ಪ್ರಿಯಕರನೊಂದಿಗೆ ಹೋಗಿದ್ದರು. ನಂತರ ಪತಿಯ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪದಡಿ ದೂರು ದಾಖಲಿಸಿದ್ದರು. ನಂತರ ತನ್ನ ಸಂಬಂಧಿಕಳೊಂದಿಗೆ ಪತಿ ಅಕ್ರಮ ಸಂಬಂಧ ಹೊಂದಿದ್ದು, ತನ್ನ ಜೀವನ ನಿರ್ವಹಣೆಗೆ ಜೀವನಾಂಶ ಪಾವತಿಸಲು ಆದೇಶಿಸುವಂತೆ ಕೋರಿ ಕೌಟುಂಬಿಕ ದೌರ್ಜನ್ಯದಿಂದ ಮಹಿಳೆ ರಕ್ಷಣೆ ಕಾಯ್ದೆಯಡಿ ಪರಿಹಾರ ಕೋರಿ ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ 2009ರಲ್ಲಿ ಪತ್ನಿ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿ ಪುರಸ್ಕರಿಸಿದ್ದ ಮ್ಯಾಜಿಸ್ಟ್ರೇಟ್ ನ್ಯಾಯಾಲಯ, ಪತ್ನಿಯ ಜೀವನ ನಿರ್ವಹಣೆಗೆ ಮಾಸಿಕ 1,500 ರು., ಮನೆ ಬಾಡಿಗೆಗೆ ಒಂದು ಸಾವಿರ, ಪರಿಹಾರವಾಗಿ ಐದು ಸಾವಿರ ನೀಡುವಂತೆ ಪತಿಗೆ 2013ರಲ್ಲಿ ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಪತಿ ಮೇಲ್ಮನವಿ ಸಲ್ಲಿಸಿದ್ದರು. ಅದನ್ನು ಪುರಸ್ಕರಿಸಿದ್ದ ಸೆಷನ್ಸ್ ನ್ಯಾಯಾಲಯವು ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶ ರದ್ದುಪಡಿಸಿ 2015ರಲ್ಲಿ ಆದೇಶ ಮಾಡಿತ್ತು. ಇದರಿಂದ ಪತ್ನಿ 2016ರಲ್ಲಿ ಹೈಕೋರ್ಟ್‌ಗೆ ಕ್ರಿಮಿನಲ್ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿ, ಅರ್ಜಿದಾರೆಯು ಪತಿಯನ್ನು ಕಾನೂನುಬದ್ಧವಾಗಿ ಮದುವೆಯಾಗಿದ್ದಾರೆ. ಪತ್ನಿಯ ಜೀವನ ನಿರ್ವಹಣೆ ಮಾಡುವುದು ಪತಿಯ ಜವಾಬ್ದಾರಿ. ಇನ್ನು ಪತಿಯು ತನ್ನ ಸಂಬಂಧಿಕ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿರುವುದರಿಂದ ಕೌಟುಂಬಿಕ ಹಿಂಸೆಯನ್ನು ಊಹಿಸಬಹುದು. ಹಾಗಾಗಿ, ಜೀವನಾಂಶ ನೀಡಲು ಪತಿಗೆ ಆದೇಶಿಸಬೇಕು ಎಂದು ಕೋರಿದ್ದರು. ಈ ವಾದವನ್ನು ಹೈಕೋರ್ಟ್ ತಿರಸ್ಕರಿಸಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.