ರೈತರ ಸಮಸ್ಯೆ ಪರಿಹರಿಸದಿದ್ದಲ್ಲಿ ಪ್ರತಿಭಟನೆ: ಭಾರತೀಯ ಕಿಸಾನ್ ಸಂಘ

KannadaprabhaNewsNetwork |  
Published : Oct 03, 2026, 03:00 AM IST
ಫೋಟೋ: ೨೯ಪಿಟಿಆರ್-ಪ್ರೆಸ್ಸುದ್ಧಿಗೋಷ್ಟಿಯಲ್ಲಿ ದಿವ್ಯಪ್ರಸಾದ್ ಮಾತನಾಡಿದರು. | Kannada Prabha

ಸಾರಾಂಶ

: ಕೃಷಿಗೆ ಕಾಡು ಪ್ರಾಣಿಗಳ ಉಪಟಳ ತಡೆ, ಕೋವಿ ಪರವಾನಿಗೆ ನವೀಕರಣ, ವಿದ್ಯುತ್ ಸಮಸ್ಯೆ ಪರಿಹಾರ ಸೇರಿದಂತೆ ರೈತರ ವಿವಿಧ ಬೇಡಿಕೆಗಳನ್ನು ಸರ್ಕಾರವು ನ.೧೫ರ ಒಳಗಾಗಿ ಪರಿಹರಿಸದಿದ್ದಲ್ಲಿ ಭಾರತೀಯ ಕಿಸಾನ್ ಸಂಘದ ವತಿಯಿಂದ ಪುತ್ತೂರಿನ ತಾಲೂಕು ಆಡಳಿತ ಸೌಧದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಸಂಘದ ಉಪಾಧ್ಯಕ್ಷ ದಿವ್ಯ ಪ್ರಸಾದ್ ತಿಳಿಸಿದ್ದಾರೆ.

ಪುತ್ತೂರು: ಕೃಷಿಗೆ ಕಾಡು ಪ್ರಾಣಿಗಳ ಉಪಟಳ ತಡೆ, ಕೋವಿ ಪರವಾನಿಗೆ ನವೀಕರಣ, ವಿದ್ಯುತ್ ಸಮಸ್ಯೆ ಪರಿಹಾರ ಸೇರಿದಂತೆ ರೈತರ ವಿವಿಧ ಬೇಡಿಕೆಗಳನ್ನು ಸರ್ಕಾರವು ನ.೧೫ರ ಒಳಗಾಗಿ ಪರಿಹರಿಸದಿದ್ದಲ್ಲಿ ಭಾರತೀಯ ಕಿಸಾನ್ ಸಂಘದ ವತಿಯಿಂದ ಪುತ್ತೂರಿನ ತಾಲೂಕು ಆಡಳಿತ ಸೌಧದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಸಂಘದ ಉಪಾಧ್ಯಕ್ಷ ದಿವ್ಯ ಪ್ರಸಾದ್ ತಿಳಿಸಿದ್ದಾರೆ.

ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಜಿಲ್ಲೆಯಲ್ಲಿ ಕೃಷಿ ತೋಟಗಳಿಗೆ ಆನೆ, ಮಂಗ ಮತ್ತು ಕಾಡುಹಂದಿಯ ಹಾವಳಿ ಹೆಚ್ಚಾಗಿದ್ದು, ರೈತರಿಗೆ ಅನೇಕ ಕಷ್ಟ ನಷ್ಟಗಳು ಉಂಟಾಗುತ್ತಿದೆ. ಆನೆಯನ್ನು ಬೆನ್ನಟ್ಟುವ ಕಾರ್ಯ ಸಮರ್ಪಕವಾಗಿ ನಡೆಯಬೇಕು. ಮಂಗ ಮತ್ತು ಕಾಡು ಹಂದಿಯ ನಿಯಂತ್ರಿಸಿ ಬೆಳೆಯನ್ನು ರಕ್ಷಿಸುವ ಕೆಲಸ ಮಾಡಬೇಕು. ಈ ಹಿಂದೆ ಕಾಡು ಹಂದಿ ಮತ್ತು ಮಂಗಗಳು ಡಿ ಷೆಡ್ಯೂಲ್‌ನಲ್ಲಿತ್ತು ಅದನ್ನು ಬಿ ಷೆಡ್ಯೂಲ್‌ಗೆ ವರ್ಗಾವಣೆ ಮಾಡಲಾಗಿದೆ. ಇದರಿಂದಾಗಿ ನಿಯಂತ್ರಣಕ್ಕೆ ಸಮಸ್ಯೆ ಆಗಿದೆ. ಅದನ್ನು ಮೊದಲಿನಂತೆ ಡಿ ಷೆಡ್ಯೂಲ್‌ಗೆ ವರ್ಗಾಯಿಸಬೇಕು.

ಕಸ್ತೂರಿ ರಂಗನ್ ವರದಿ ಅನುಷ್ಠಾನದಲ್ಲಿ ರೈತರು ತನ್ನ ಕೃಷಿ ಚಟುವಟಿಕೆ ನಡೆಸಲು ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು. ರೈತರ ಕೃಷಿ ಸಂರಕ್ಷಣೆಗಾಗಿ ಬಳಸುವ ಕೋವಿಗಳ ನವೀಕರಣೆಕ್ಕೆ ಇರುವ ಅಡೆತಡೆಗಳನ್ನು ನಿವಾರಿಸಬೇಕು. ಚುನಾವಣೆ ಸಂದರ್ಭದಲ್ಲಿ ಕ್ರಿಮಿನಲ್ ಮೊಕದ್ದಮೆ ಇಲ್ಲದಿರುವ ರೈತರ ಕೋವಿಗಳನ್ನು ಡೆಪಾಸಿಟ್ ಮಾಡುವ ವ್ಯವಸ್ಥೆಯನ್ನು ತೆಗೆದು ಹಾಕಿ ರೈತರಿಗೆ ಅನುಕೂಲ ಒದಗಿಸಬೇಕು. ರೈತರಿಗೆ ಮನೆ, ಹಟ್ಟಿ ಇನ್ನಿತರ ಅವಶ್ಯಕ ಕಟ್ಟಡ ನಿರ್ಮಾಣಕ್ಕೆ ಮರಳು, ಕೆಂಪುಕಲ್ಲು ದೊರಕಿಸಿ ಕೊಡಬೇಕು. ಅಲ್ಲದೆ ನದಿ ತೋಡುಗಳಿಂದ ಮರಳು ತೆಗೆಯಲು ಅಡ್ಡಿ ಪಡಿಸುತ್ತಿರುವ ಕಾರಣದಿಂದಾಗಿ ಪ್ರವಾಹ ಭೀತಿ, ಕೃಷಿ ತೋಟ ನಾಶಗಳಂತಹ ಸಮಸ್ಯೆಗಳು ಅನುಭವಿಸಬೇಕಾಗಿದೆ. ಮರಳು ತೆಗೆಯುವ ಎಲ್ಲಾ ಹಕ್ಕುಗಳನ್ನು ಗ್ರಾಮ ಪಂಚಾಯತ್‌ಗೆ ನೀಡಿ ಗಣಿ ಇಲಾಖೆಯ ಹಸ್ತಕ್ಷೇಪವನ್ನು ತಪ್ಪಿಸಬೇಕು. ಮರಳಿಗೆ ೩ ಯುನಿಟ್‌ಗೆ ಸಾಗಾಟ ವೆಚ್ಚ ಸೇರಿ ೧೧ ಸಾವಿರಕ್ಕಿಂತ ಕನಿಷ್ಠ ಬೆಲೆ ನಿಗದಿಪಡಿಸಬೇಕು.

ಈ ಬಾರಿ ಬರಗಾಲವಿದ್ದು ಈಗಾಗಲೇ ವಿದ್ಯುತ್ ಸಮಸ್ಯೆ ಆರಂಭಗೊಂಡಿದೆ. ಈ ನಿಟ್ಟಿನಲ್ಲಿ ಸರ್ಕಾರವು ವಿದ್ಯುತ್ ಸಮಸ್ಯೆಗೆ ಸೂಕ್ತ ಪರ್ಯಾಯ ವ್ಯವಸ್ಥೆ ಕೈಗೊಂಡು ರೈತರ ಬೆನ್ನಿಗೆ ನಿಲ್ಲಬೇಕು. ಬರಗಾಲದ ಹಿನ್ನಲೆಯಲ್ಲಿ ಈ ಸಾಲಿನ ರೈತರ ಬೆಳೆ ಸಾಲವನ್ನು ಪಾವತಿ ಮಾಡಲು ಕನಿಷ್ಟ ೧ ವರ್ಷ ಬಡ್ಡಿ ರಹಿತಗೊಳಿಸಬೇಕು ಎಂಬ ಬೇಡಿಕೆಯನ್ನು ಕಿಸಾನ್ ಸಂಘವು ಸರ್ಕಾರದ ಮುಂದಿಟ್ಟಿದೆ ಎಂದು ತಿಳಿಸಿದ ಅವರು ಈ ಬಗ್ಗೆ ಈಗಾಗಲೇ ಪುತ್ತೂರು ಉಪವಿಭಾಗದ ಸಹಾಯಕ ಕಮೀಷನರ್ ಅವರಿಗೆ ಮನವಿ ಸಲ್ಲಿಕೆ ಮಾಡಿದ್ದೇವೆ. ಸಮಸ್ಯೆ ಪರಿಹಾರ ಮಾಡದಿದ್ದಲ್ಲಿ ಕಾನೂನು ಚೌಕಟ್ಟಿನಲ್ಲಿ ಪ್ರತಿಭಟನೆ ನಡೆಸಲಿದ್ದೇವೆ ಎಂದು ತಿಳಿಸಿದರು.

ಸುದ್ಧಿಗೋಷ್ಟಿಯಲ್ಲಿ ಕಿಸಾನ್ ಸಂಘದ ಜಿಲ್ಲಾ ಕಾರ್ಯದರ್ಶಿ ರಾಮ್ ಪ್ರಸಾದ್, ತಾಲೂಕು ಘಟಕದ ಅಧ್ಯಕ್ಷ ಜನಾರ್ಧನ ರೈ, ಕಾರ್ಯದರ್ಶಿ ಮಹಾಬಲ ರೈ, ಉಪಾಧ್ಯಕ್ಷ ಪುನೀತ್ ರೈ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮತಪಟ್ಟಿಯಿಂದ ಹೆಸರು ತೆಗೆಯಲು ಪತ್ರ ನೀಡಿಲ್ಲ
ಯುವ ಪೀಳಿಗೆ ಬಾಪೂಜಿ ತತ್ವ ಅಳವಡಿಸಿಕೊಳ್ಳಿ