ಕಾಡಾನೆ ದಾಳಿಗೆ ಮಾವು, ಸೋಲಾರ್‌ ಫೆನ್ಸಿಂಗ್ ನಾಶ

KannadaprabhaNewsNetwork |  
Published : May 31, 2025, 12:52 AM IST
ಕಾಡಾನೆ ದಾಳಿಗೆ ಮಾವು,ತೆಂಗು,ತಂತಿ ಕಲ್ಲು,ಸೋಲಾರ್‌ ಫೆನ್ಸಿಂಗ್ ನಾಶ | Kannada Prabha

ಸಾರಾಂಶ

ಗುಂಡ್ಲುಪೇಟೆ ತಾಲೂಕಿನ ಕುರುಬರಹುಂಡಿಯ ರೈತ ಕೆ.ಆರ್.ಲೋಕೇಶ್‌ಗೆ ಸೇರಿದ ಸೋಲಾರ್‌ ಫೆನ್ಸಿಂಗ್‌ ಮುರಿದು ಹಾಕಿರುವ ಕಾಡಾನೆಗಳು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಕಾಡಂಚಿನ ಗ್ರಾಮವಾದ ತಾಲೂಕಿನ ಕುರುಬರಹುಂಡಿ ರೈತರ ಜಮೀನಿಗೆ ಗುರುವಾರ ರಾತ್ರಿ ತೆಂಗು, ಮಾವು, ಜೋಳ, ಕೋಸು, ಸೋಲಾರ್‌ ಫೆನ್ಸಿಂಗ್‌, ತಂತಿ ಕಲ್ಲಿನ ಕಂಬಗಳನ್ನು ತುಳಿದು ನಾಶಪಡಿಸಿದ್ದು, ರೈತರಿಗೆ ಲಕ್ಷಾಂತರ ರು. ನಷ್ಟವಾದ ಘಟನೆ ನಡೆದಿದೆ.

ಕುರುಬರಹುಂಡಿ ಗ್ರಾಮದ ರೈತರಾದ ಕೆ.ಆರ್.ಲೋಕೇಶ್‌, ಪಿ.ಬಾಬು, ನಂಜುಂಡಸ್ವಾಮಿಗೆ ಸೇರಿದ ಜಮೀನಿಗೆ ಕಾಡಾನೆಗಳು ದಾಳಿಯಿಟ್ಟು ಕೆ.ಆರ್.ಲೋಕೇಶ್‌ ಗೆ ಸೇರಿದ 9 ಮಾವಿನ ಮರ ಒದ್ದು ಮುರಿದರೆ ಮಾವಿನ ಹಣ್ಣು ಹಾಗೂ ಎಲೆ ಕೋಸು ತಿಂದು, ಸೋಲಾರ್‌ ತಂತಿ ತುಳಿದಿವೆ.ಪಿ. ಬಾಲುಗೆ ಸೇರಿದ ಬೋರ್‌ವೆಲ್‌ ಕಿತ್ತು ಹಾಕಿದ್ದು, ತೆಂಗಿನ ಮರಗಳನ್ನು ಉರುಳಿಸಿವೆ. ನಂಜುಂಡಸ್ವಾಮಿಗೆ ಸೇರಿದ ಜೋಳದ ಫಸಲು ನಾಶಪಡಿಸಿದ್ದು ಅಲ್ಲದೆ 13 ತಂತಿ ಕಲ್ಲಿನ ಕಂಬ ಮುರಿದು ಹಾಕಿವೆ ಎಂದು ರೈತರು ಕನ್ನಡಪ್ರಭದೊಂದಿಗೆ ಅಳಲು ತೋಡಿಕೊಂಡಿದ್ದಾರೆ.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ ವಲಯ ಕಚೇರಿ ಅಂಚಿನಲ್ಲಿರುವ ಕುರುಬರಹುಂಡಿ ಗ್ರಾಮದ ಬಳಿ ಕಾಡಾನೆಗಳ ಹಾವಳಿ ಹಾಗೂ ದಾಳಿಗೆ ಮೂವರು ರೈತರ ಲಕ್ಷಾಂತರ ರು. ಮೌಲ್ಯ ಫಸಲು ಹಾಳಾಗಿದೆ ಎಂದು ರೈತ ಕೆ.ಆರ್.ಲೋಕೇಶ್‌ ಹೇಳಿದ್ದಾರೆ. ಓಂಕಾರ ವಲಯದಲ್ಲಿ ಕಾಡಾನೆಗಳಿಗೇನು ಬರವಿಲ್ಲ. ಮಂಚಹಳ್ಳಿ, ಆಲತ್ತೂರು, ಕೋಟೆಕೆರೆ, ಹಸಗೂಲಿ, ಹಂಚೀಪುರ, ಕುರುಬರಹುಂಡಿ ಸುತ್ತಮುತ್ತ ದಿನಂಪ್ರತಿ ಒಂದಲ್ಲ ಒಂದು ಹಳ್ಳಿಗಳಲ್ಲಿ ದಾಳಿ ನಡೆಸುತ್ತಲೇ ಇವೆ ಎಂದು ರೈತರು ದೂರಿದ್ದಾರೆ.

ಅರಣ್ಯ ಇಲಾಖೆ ಕಾಡಾನೆಗಳ ಹಾವಳಿ ಹಾಗೂ ರೈತರ ಫಸಲಿನ ಮೇಲೆ ದಾಳಿ ತಡೆಗಟ್ಟಲು ಸಂಪೂರ್ಣ ವಿಫಲವಾಗಿದೆ ಎಂದು ಕಾಡಂಚಿನ ಗ್ರಾಮಗಳ ರೈತರು ಆರೋಪಿಸಿದ್ದಾರೆ.

ಅರಣ್ಯ ಇಲಾಖೆ ಕಾಡಾನೆಗಳ ದಾಳಿ ಹಾಗೂ ಹಾವಳಿಗೆ ಕಡಿವಾಣ ಹಾಕಲು ವಿಫಲವಾಗಿದೆ. ಕಾರಣ ಅರಣ್ಯ ಇಲಾಖೆಯ ಮೇಲಾಧಿಕಾರಿಗಳಲ್ಲಿ ಕೆಲಸ ಮಾಡುವ ಗಡಸುತನ ಇಲ್ಲದಿರುವುದು ಕಾಡಾನೆ ದಾಳಿಗೆ ಪ್ರಮುಖ ಕಾರಣ ಎಂದು ರೈತಸಂಘದ ಬೆಟ್ಟೇಗೌಡ ಹೇಳಿದ್ದಾರೆ.

ರೈತರು ಕಷ್ಟಪಟ್ಟು, ಸಾಲ, ಸೋಲ ಮಾಡಿ ಬೆಳೆದ ಫಸಲು ಕಾಪಾಡಲು ರೈತರು ಪ್ರಾಣದ ಹಂಗು ತೊರೆದು ಕಾವಲು ಕಾಯುತ್ತಿದ್ದಾರೆ. ಆದರೆ ಅರಣ್ಯ ಇಲಾಖೆ ಸಿಬ್ಬಂದಿಗಳ ಹಿಡಿತದಲ್ಲಿ ಹಿಡಿದಿಟ್ಟುಕೊಳ್ಳಲು ಅರಣ್ಯ ಇಲಾಖೆ ಅಧಿಕಾರಿಗಳು ವಿಫಲರಾಗಿವುದೇ ಬೆಳೆ ನಾಶಕ್ಕೆ ಮತ್ತೊಂದು ಪ್ರಮುಖ ಕಾರಣ ಎಂದಿದ್ದಾರೆ.ಸಿಎಫ್‌ ಕಚೇರಿಗೆ ಮುತ್ತಿಗೆ:

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ ವಲಯದಲ್ಲಿ ಕಾಡಾನೆಗಳ ಹಾವಳಿ ತಡೆಗಟ್ಟಲು ವಿಫಲವಾದ ಅರಣ್ಯ ಇಲಾಖೆ ಕ್ರಮ ಖಂಡಿಸಿ ಸದ್ಯದಲ್ಲೇ ಬಂಡೀಪುರ ಸಿಎಫ್‌ ಕಚೇರಿಗೆ ರೈತರು ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌