ಕನ್ನಡಪ್ರಭ ವಾರ್ತೆ ನಾಪೋಕ್ಲು
ಇಲ್ಲಿಗೆ ಸಮೀಪದ ನೆಲಜಿ ಗ್ರಾಮದಲ್ಲಿ ಕಾಡಾನೆಗಳ ಉಪಟಳ ಮುಂದುವರಿದಿದ್ದು ರೈತರು ಆತಂಕಕ್ಕೆ ಈಡಾಗಿದ್ದಾರೆ. ಗ್ರಾಮದ ರೈತ ಚೀಯಕಪೂವಂಡ ನವೀನ್ ಗದ್ದೆಯಲ್ಲಿ ಸೋಮವಾರ ರಾತ್ರಿ ಅಡ್ಡಾಡಿರುವ ಕಾಡಾನೆಗಳು ಭತ್ತದ ಪೈರುಗಳನ್ನು ತುಳಿದು ನಾಶಪಡಿಸಿವೆ.ಈ ವ್ಯಾಪ್ತಿಯಲ್ಲಿ ಕಾಡಾನೆಗಳು ಅಡ್ಡಾಡುತ್ತಿದ್ದು ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಅರಣ್ಯ ಅಧಿಕಾರಿಗಳಿಗೆ ಕಾಡಾನೆಗಳನ್ನು ಕಾಡಿಗಟ್ಟುವಂತೆ ಮನವಿ ಸಲ್ಲಿಸಿದರೂ ನಿರ್ಲಕ್ಷ ವಹಿಸುತ್ತಿದ್ದಾರೆ. ರೈತರಿಗೆ ಸಂಕಷ್ಟ ಎದುರಾಗಿದೆ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದರು. ಕಳೆದ ವಾರ ಇಲ್ಲಿಯ ಸುಬ್ಬಯ್ಯ ಎಂಬವರ ಗದ್ದೆಗು ಕಾಡಾನೆ ದಾಳಿ ಮಾಡಿ ಭತ್ತದ ಪೈರು ನಾಶ ಮಾಡಿತ್ತು.
ನಿರಂತರ ಕಾಡಾನೆಗಳ ಹಾವಳಿಯಿಂದ ಗ್ರಾಮದಲ್ಲಿ ಕೂಲಿ ಕಾರ್ಮಿಕರು ತೋಟದ ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಿದ್ದು ಜೀವ ಭಯದ ವಾತಾವರಣ ನಿರ್ಮಾಣವಾಗಿದೆ. ಗ್ರಾಮದ ಇತರ ಕುಟುಂಬಗಳ ರೈತರು ಕಷ್ಟಪಟ್ಟು ಬೆಳೆಸಿದ ಭತ್ತದ ಪೈರುಗಳು ಆನೆಗಳ ದಾಳಿಗೆ ತುತ್ತಾಗಲಿದೆ ಎಂಬ ಆತಂಕ ಗ್ರಾಮಸ್ಥರಲ್ಲಿ ಮನೆಮಾಡಿದೆ.ಮಂಡ್ಯದ ರೈಲು ನಿಲ್ದಾಣದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ವ್ಯಕ್ತಿ ಪತ್ತೆ:ಕೊಡಗಿನ ವ್ಯಕ್ತಿಯೋರ್ವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಮಂಡ್ಯದ ರೈಲು ನಿಲ್ದಾಣದಲ್ಲಿ ಪತ್ತೆಯಾದ ಘಟನೆ ಸೋಮವಾರ ಸಂಜೆ ನಡೆದಿದೆ.ಮಡಿಕೇರಿ ತಾಲೂಕಿನ ಕಾರಗುಂದ ಗ್ರಾಮದ ನಾಪಂಡ ಸೋಮಯ್ಯ ಎಂಬವರ ಪುತ್ರ ನಾಪಂಡ ಗೌತಮ್ ಗಣಪತಿ (32) ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾದ ವ್ಯಕ್ತಿ. ಮೈಸೂರಿನಲ್ಲಿ ಹೋಟೆಲ್ ಮ್ಯಾನೇಜ್ಮೆಂಟ್ ಉದ್ಯೋಗದಲ್ಲಿದ್ದು ಕಾರ್ಯನಿಮಿತ್ತ ಬೆಂಗಳೂರಿಗೆ ಹೋಗಿದ್ದರು. ರೈಲಿನಲ್ಲಿ ಹಿಂತಿರುಗುವ ಸಂದರ್ಭ ಅಸ್ವಸ್ಥರಾಗಿ ಬಿದ್ದಿದ್ದರು. ಇದನ್ನು ಕಂಡ ಸಹ ಪ್ರಯಾಣಿಕರು ಮಂಡ್ಯ ಪೊಲೀಸರಿಗೆ ವಿಷಯವನ್ನು ತಿಳಿಸಿದ್ದಾರೆ. ಪರಿಶೀಲಿಸಿದಾಗ ಅವರ ಮೊಬೈಲ್ ನಾಪತ್ತೆಯಾಗಿದ್ದು ಆಧಾರ್ ಕಾರ್ಡ್ ಪರಿಶೀಲಿಸಿದಾಗ ಯುವಕ ನಾಪಂಡ ಗೌತಮ್ ಗಣಪತಿ ಎಂದು ಮಾಹಿತಿ ಲಭ್ಯವಾಗಿದೆ.ಬಳಿಕ ಪೊಲೀಸರು ಅವರ ಕುಟುಂಬದವರನ್ನು ಸಂಪರ್ಕಿಸಿ ಮಾಹಿತಿಯನ್ನು ನೀಡಿದ್ದಾರೆ. ಇದೀಗ ಅವರ ಪೋಷಕರು ಮೈಸೂರಿನ ಜೆ ಎಸ್ ಎಸ್ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ದಾಖಲಿಸಿದ್ದು ಬುಧವಾರ ಪರಿಶೀಲಿಸಿ ತುರ್ತು ಚಿಕಿತ್ಸೆ ನೀಡಲಾಗುವುದು ಎಂದು ತಿಳಿದುಬಂದಿದೆ.