ಕೊಡಗಿನ ಸಿದ್ದಾಪುರ ಸಮೀಪ ಎಸ್ಟೇಟ್‌ನಲ್ಲಿ ದುರ್ಘಟನೆ । ರಸ್ತೆ ತಡೆದು ಸಾರ್ವಜನಿಕರಿಂದ ಪ್ರತಿಭಟನೆ
ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಎಸ್ಟೇಟ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕಾರ್ಮಿಕರಿಬ್ಬರ ಮೇಲೂ ಕಾಡಾನೆ ದಾಳಿ ನಡೆಸಿದೆ. ಪೊಲೀಸರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಸಾರ್ವಜನಿಕರ ಪ್ರತಿಭಟನೆ:
ಘಟನೆ ಖಂಡಿಸಿ ಸಾರ್ವಜನಿಕರು ಸಿದ್ದಾಪುರದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಅರಣ್ಯ ಇಲಾಖೆ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಕಾಡಾನೆಗಳಿರುವ ಪ್ರದೇಶಗಳನ್ನು ಗುರುತಿಸಿ, ಮುನ್ನೆಚ್ಚರಿಕೆ ಕ್ರಮ ಕೈಗೊಂಡ ಬಳಿಕವೇ ಕಾರ್ಮಿಕರನ್ನು ಕೆಲಸಕ್ಕೆ ಬಿಡಬೇಕು ಎಂದು ಒತ್ತಾಯಿಸಿದರು.ಕಾಡಾನೆ ದಾಳಿಯಿಂದ ಮೃತಪಟ್ಟ ಕಾರ್ಮಿಕನ ಮೃತದೇಹವನ್ನು ಮಡಿಕೇರಿಗೆ ಕೊಂಡೊಯ್ದಿರುವುದಕ್ಕೂ ಪ್ರತಿಭಟನಾಕಾರರು ಆಕ್ಷೇಪ ವ್ಯಕ್ತಪಡಿಸಿದರು. ಸಿದ್ದಾಪುರದಲ್ಲೇ ಮರಣೋತ್ತರ ಪರೀಕ್ಷೆ ನಡೆಸಲು ಸಾಧ್ಯವಿದ್ದರೂ ಮೃತದೇಹವನ್ನು ಮಡಿಕೇರಿಗೆ ಏಕೆ ಕೊಂಡೊಯ್ಯಲಾಗಿದೆ ಎಂದು ಪ್ರಶ್ನಿಸಿದರು.ತೋಟದ ಮಾಲೀಕರೊಂದಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ಎನ್.ಡಿ. ಕುಟ್ಟಪ್ಪ ಆರೋಪಿಸಿದರು. ಪಿ.ಆರ್. ಭರತ್ ಮಾತನಾಡಿ, ವನ್ಯಜೀವಿಗಳ ಹಾವಳಿ ನಿಯಂತ್ರಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಫಲವಾಗಿವೆ ಎಂದು ದೂರಿದ ಅವರುಕೊಡಗಿನಲ್ಲಿ ನಿರಂತರವಾಗಿ ಕಾಡಾನೆ ದಾಳಿ ನಡೆಯುತ್ತಿದ್ದರೂ ಅರಣ್ಯ ಇಲಾಖೆ ಕಾಟಾಚಾರಕ್ಕೆ ಒಂದು ತೋಟದಿಂದ ಮತ್ತೊಂದು ತೋಟಕ್ಕೆ ಆನೆಗಳನ್ನು ಅಟ್ಟಿಸುವ ಕೆಲಸ ಮಾಡುತ್ತಿದೆ. ಇದರಿಂದ ಸಮಸ್ಯೆ ಮತ್ತಷ್ಟು ಉಲ್ಬಣಿಸುತ್ತಿದೆ ಎಂದು ಆರೋಪಿಸಿದರು.
ಸಿದ್ದಾಪುರ ಪೋಲಿಸ್ ಠಾಣಾಧಿಕಾರಿ ಮಂಜುನಾಥ್ ಸ್ಥಳದಲ್ಲಿದ್ದು, ಪ್ರತಿಭಟನಕಾರರ ಮನವೊಲಿಸಿ ಪ್ರತಿಭಟನೆ ನಿಲ್ಲಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.