ಶಿವಮೊಗ್ಗ: ಕಾಡಾನೆ ಉಪಟಳದಿಂದ ಹಾನಿಗೊಳಗಾದ ಭತ್ತದ ಸಸಿ, ಅಡಕೆ ಸಸಿ, ಬಾಳೆ, ಕಬ್ಬು ಹಾಗೂ ಮೆಕ್ಕೆಜೋಳವನ್ನು ತಂದು ಶಿವಮೊಗ್ಗ ವನ್ಯಜೀವಿ ವಲಯದ ಉಪಸಂರಕ್ಷಣಾಧಿಕಾರಿ ಕಚೇರಿ ಎದುರು ಸುರಿದು ಪುರದಾಳು ಗ್ರಾಮದ ರೈತರು ಮಂಗಳವಾರ ವಿಭಿನ್ನವಾಗಿ ಪ್ರತಿಭಟನೆ ನಡೆಸಿದರು.ಶಿವಮೊಗ್ಗ ತಾಲೂಕು ಪುರದಾಳು ಗ್ರಾಮದಲ್ಲಿ ಕಳೆದ ಹಲವು ತಿಂಗಳಿನಿಂದ ಕಾಡಾನೆಗಳ ಹಿಂಡು ರೈತರ ಹೊಲ, ಗದ್ದೆಗಳ ಮೇಲೆ ದಾಳಿ ನಡೆಸಿ ನಾಟಿ ಮಾಡಿದ್ದ ಭತ್ತದ ಗದ್ದೆ, ಅಡಕೆ ಸಸಿ, ಸಲಿಗೆ ಬಂದಿದ್ದ ಬಾಳೆ ಹಾಗೂ ಮೆಕ್ಕೆಜೋಳವನ್ನು ನಾಶ ಮಾಡುತ್ತಿವೆ. ಕಳೆದ ಕೆಲವು ದಿನಗಳಿಂದ ಊರಿನ ಒಳಗೂ ಕಾಡಾನೆಗಳು ಪ್ರವೇಶ ಮಾಡುತ್ತಿವೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪ್ರತಿಭಟನಾನಿರತ ರೈತರು ಆಕ್ರೋಶ ವ್ಯಕ್ತಪಡಿಸಿದರು.
ಪುರದಾಳು ಗ್ರಾಮದಲ್ಲಿ ಶರಾವತಿ ಮುಳುಗಡೆ ಸಂತ್ರಸ್ತರು ಹೆಚ್ಚು ವಾಸಿಸುತ್ತಿದ್ದು, ರೈತರು ಪುನರ್ವಸತಿ ಕಲ್ಪಿಸಿಕೊಂಡು ಜೀವನ ಸಾಗಿಸುತ್ತಿದ್ದೇವೆ. ಅಲ್ಪಸ್ವಲ್ಪ ಪ್ರಮಾಣದಲ್ಲಿ ಜಮೀನು ಸಾಗುವಳಿ ಮಾಡಿಕೊಂಡು ತೆಂಗು, ಅಡಕೆ, ಭತ್ತ, ಬಾಳೆ, ಜೋಳ ಇತ್ಯಾದಿ ಬೆಳೆಗಳನ್ನು ಬೆಳೆಯುತ್ತಾ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿರುವಾಗಲೇ, ಕಳೆದ ಮೂರು ನಾಲ್ಕು ವರ್ಷಗಳಿಂದ ಕಾಡಾನೆಗಳು ಜಮೀನುಗಳಿಗೆ ನುಗ್ಗಿ ಬೆಳೆಗಳನ್ನು ನಾಶ ಮಾಡುತ್ತಿವೆ. ಆನೆಗಳು ಗ್ರಾಮದೊಳಗೆ ಮತ್ತು ಜಮೀನುಗಳಿಗೆ ನುಗ್ಗದಂತೆ ತಡೆಯಲು ಅರಣ್ಯ ಇಲಾಖೆಯವರಿಗೆ ಹಲವು ಬಾರಿ ಮನವಿ ಮಾಡಿದ್ದರೂ ಅರಣ್ಯ ಇಲಾಖೆಯವರು ನಾಮಕಾವಸ್ತೇ ಕಾರ್ಯಗಳನ್ನು ಮಾಡುತ್ತಿದ್ದಾರೆ. ಸಂಪೂರ್ಣವಾಗಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಪುರದಾಳು ಗ್ರಾಪಂ ಮಾಜಿ ಉಪಾಧ್ಯಕ್ಷ ಪ್ರದೀಪ್ ಎಸ್.ಹೆಬ್ಬೂರು ಆಕ್ರೋಶ ವ್ಯಕ್ತಪಡಿಸಿದರು.
ಶಾಸಕಿ ಭೇಟಿ:ಪ್ರತಿಭಟನಾ ನಿರತ ಸ್ಥಳಕ್ಕೆ ಆಗಮಿಸಿದ ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯಾನಾಯ್ಕ್ ಅವರು ಪ್ರತಿಭಟನೆಯಲ್ಲಿ ಪಾಲ್ಗೊಂಡು, ಅಧಿಕಾರಿಗಳ ನೀತಿಯನ್ನು ಖಂಡಿಸಿದರು. ನಂತರ ಅಧಿಕಾರಿಗಳೊಂದಿಗೆ ಸಮಾಲೋಚಿಸಿದ ಶಾಸಕರು, ತಕ್ಷಣ ಸಮಸ್ಯೆ ಪರಿಹಾರಕ್ಕಾಗಿ ಡಿಸಿಎಫ್ ಪ್ರಸನ್ನ ಪಟಗಾರ್ ಅವರಿಗೆ ಆಗ್ರಹಿಸಿದರು.
ಎಸಿಎ- ಮಾತಿಗೆ ಗರಂ ಆದ ರೈತರು:
ಅಧಿಕಾರಿಗಳು ಈ ರೀತಿ ಮಾತನಾಡುವುದು ಸಮಂಜಸವಲ್ಲ, ಸರ್ಕಾರವೇ ಮುಳುಗಡೆ ಮಾಡಿ ನಮ್ಮನ್ನು ಕಾಡಿಗೆ ಬಿಟ್ಟಿದೆ. ಇಲ್ಲಿಯವರೆಗೂ ಪುರ್ನವಸತಿ ಕಲ್ಪಿಸಿಲ್ಲ, ಮುಳುಗಡೆ ರೈತರು ಒತ್ತುವರಿದಾರರಲ್ಲ, ಈ ರೀತಿಯ ಉಡಾಫೆ ಹೇಳಿಕೆ ನೀಡಬಾರದು ಎಂದು ತರಾಟೆಗೆ ತೆಗೆದುಕೊಂಡರು.
ಪುರದಾಳು ಗ್ರಾ.ಪಂ ಉಪಾಧ್ಯಕ್ಷರಾದ ಕುಸುಮಾ ಜಗದೀಶ್, ಸದಸ್ಯರಾದ ಮಾನಸ ಹೆಬ್ಬೂರು, ಗ್ರಾಮಸ್ಥರಾದ ಪ್ರಭಾಕರ್ ಸಂಪೋಡಿ, ಆಶೋಕ್, ಗೋಪಾಲ್, ಮುಕುಂದಪ್ಪ ಕಿಡದುಂಬೆ, ಮುಕುಂದ ಎಂ.ಜಿ,ಕೃಷ್ಣಮೂರ್ತಿ ಹಿಳ್ಳೋಡಿ, ನಾಗರಾಜ್, ಸುರೇಶ್.ಜಿ, ವಸಂತ ಹಿಳ್ಳೋಡಿ, ಬಸವರಾಜ್, ರವಿ ಸಂಪೋಡಿ, ಕೋದಂಡ, ಶಿವಪ್ಪ ಸೇರಿದಂತೆ ನೂರಾರು ರೈತರು ಇದ್ದರು.
ವನ್ಯಜೀವಿ ವಿಭಾಗ, ಶಿವಮೊಗ್ಗಪುರದಾಳು ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ರೈತರು ಬೆಳೆದ ಬೆಳೆಯನ್ನು ಕಾಡಾನೆಗಳ ಹಿಂಡು ನಾಶ ಮಾಡುತ್ತಿವೆ. ಅರಣ್ಯ ಇಲಾಖೆಯವರು ತತಕ್ಷಣವಾಗಿ ರೈತರ ಸಾಗುವಳಿ ಭೂಮಿಗೆ ತೊಂದರೆಯಾಗದ ರೀತಿಯಲ್ಲಿ ಇಪಿಟಿ ಟ್ರಂಚ್ ತೆಗೆಯಬೇಕು. ಆನೆಗಳನ್ನು ಓಡಿಸಲು ಕ್ರಮ ಕೈಗೊಳ್ಳಬೇಕು.- ಶಾರದಾ ಪೂರ್ಯಾನಾಯ್ಕ್, ಶಾಸಕಿ, ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ.