ಕನ್ನಡಪ್ರಭ ವಾರ್ತೆ ಬೇಲೂರು ಮಲೆನಾಡು ಭಾಗದಲ್ಲಿ ದಿನದಿಂದ ದಿನಕ್ಕೆ ಕಾಡಾನೆಗಳ ಉಪಟಳ ವ್ಯಾಪಕವಾಗಿದ್ದು, ಪ್ರತೀ ದಿನ ನಡೆಯುವ ಕಾಡಾನೆ ದಾಳಿಗೆ ಮಲೆನಾಡಿನ ಕೂಲಿ ಕಾರ್ಮಿಕರು ಜೀವ ಕೈಯಲ್ಲಿ ಹಿಡಿದುಕೊಂಡೆ ಕಾಫಿ ತೋಟಗಳಲ್ಲಿ ಕೆಲಸ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕೂಡಲೇ ಅರಣ್ಯ ಸಚಿವರು ಮತ್ತು ಅರಣ್ಯ ಅಧಿಕಾರಿಗಳು ಎಚ್ಚೆತ್ತುಕೊಂಡು ಆನೆ ಕಾರಿಡಾರ್ ನಿರ್ಮಾಣ ಮಾಡಿ ಶಾಶ್ವತ ಪರಿಹಾರ ನೀಡಬೇಕೆಂದು ರೈತ ಮುಖಂಡ ಮಲ್ಲಪುರ ಹೇಮಂತ್ ಕುಮಾರ್ ಮನವಿ ಮಾಡಿದ್ದಾರೆ. ಬೇಲೂರು ತಾಲ್ಲೂಕಿನ ಬಿಕ್ಕೋಡು - ಅರೇಹಳ್ಳಿ ಭಾಗಗಳಲ್ಲಿ ಎಗ್ಗಿಲ್ಲದೆ ರೈತರು ಬೆಳೆದು ಬೆಳೆಗಳನ್ನು ಹಾವಳಿ ಮಾಡುತ್ತಿರುವ ಕುರಿತು ಮಾತನಾಡಿದ ಅವರು, ಕಳೆದ ಒಂದು ತಿಂಗಳಿನಿಂದ ಸರಿಸುಮಾರು 20ಕ್ಕೂ ಹೆಚ್ಚು ಕಾಡಾನೆಗಳು ಫಸಲಿಗೆ ಬಂದಿರುವ ಬಾಳೆ, ತೆಂಗು, ಅಡಿಕೆ ಸೇರಿದಂತೆ ಕಾಫಿ ತೋಟಗಳನ್ನು ಹಾಳು ಮಾಡುತ್ತಿವೆ, ಕಾಡಾನೆಗಳ ಹಿಂಡು ಈ ರೀತಿಯಾಗಿ ಮುಖ್ಯರಸ್ತೆಯಲ್ಲಿ ಸಂಚಾರ ಮಾಡಿ ಪಕ್ಕದ ತೋಟಗಳಿಗೆ ತೆರಳುತ್ತಿರುವುದರಿಂದ ಬೆಳೆಗಾರನ ಬೆಳೆ ಹಾಗೂ ಬಾಳು ಸರ್ವನಾಶವಾಗುತ್ತಿದೆ. ಆನೆಗಳನ್ನು ಓಡಿಸುವುದು ಈ ಸಮಸ್ಯೆಗೆ ಪರಿಹಾರವಲ್ಲ. ಅರಣ್ಯಗಳು ಹೆಚ್ಚಿರುವ ಪ್ರದೇಶಗಳಿಗೆ ಕಾಡಾನೆಗಳನ್ನು ಸ್ಥಳಾಂತರ ಮಾಡಿದರೆ ರೈತರು ನಿಟ್ಟುಸಿರು ಬಿಡುತ್ತಾರೆ. ಕಾಡಾನೆಗಳ ಭಯದಿಂದ ಕೂಲಿ ಕಾರ್ಮಿರು ತೋಟಗಳಿಗೆ ಹೋಗಲು ಭಯಪಡುತ್ತಿದ್ದಾರೆ. ಕಾರ್ಮಿಕರು ಸತ್ತಾಗ ಬಂದು ಸಾಂತ್ವನ ಹೇಳುವ ಅಧಿಕಾರಿಗಳು ಮತ್ತು ರಾಜಕಾರಣಿಗಳಿಂದ ಸಮಸ್ಯೆಗೆ ಪರಿಹಾರ ದೊರೆತಿಲ್ಲ. ಅರಣ್ಯ ಇಲಾಖೆ ಹಾಗೂ ಸರಕಾರ ಶಾಶ್ವತ ಪರಿಹಾರ ಒದಗಿಸದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.