ಕನ್ನಡಪ್ರಭ ವಾರ್ತೆ ಪುತ್ತೂರು
ಕಳೆದ ಒಂದು ವಾರಗಳ ಹಿಂದೆ ಸುಳ್ಯದಲ್ಲಿ ಕಾಣಿಸಿಕೊಂಡಿದ್ದ ಜೋಡಿ ಕಾಡಾನೆಗಳು ಪುತ್ತೂರು ತಾಲೂಕಿಗೆ ಆಗಮಿಸಿದ್ದು, ತಾಲೂಕಿನ ಹಲವು ಪ್ರದೇಶಗಳಲ್ಲಿ ಸಂಚರಿಸುತ್ತಿವೆ. ಈ ಭಾಗದಲ್ಲಿ ಕೃಷಿಗಳಿಗೆ ಹಾನಿ ನಡೆಸಿ ರೈತರಿಗೆ ತೊಂದರೆ ನೀಡುತ್ತಿದೆ. ಜನರಲ್ಲಿ ಭೀತಿ ಮೂಡಿಸಿವೆ.ಸುಳ್ಯ ತಾಲೂಕು ವ್ಯಾಪ್ತಿಯಲ್ಲಿ ಮೊದಲು ಕಾಣಿಸಿಕೊಂಡಿದ್ದ ಜೋಡಿ ಸಲಗಗಳು ಜೂ.೫ರಿಂದ ಪುಣ್ಚಪ್ಪಾಡಿ, ಕೊಳ್ತಿಗೆ ಪೆರ್ಲಂಪಾಡಿ ಭಾಗದ ಮೂಲಕ ಪುತ್ತೂರು ತಾಲೂಕು ವ್ಯಾಪ್ತಿಗೆ ಪ್ರವೇಶಿಸಿವೆ. ಇದೀಗ ಪುತ್ತೂರು ತಾಲೂಕಿನ ಬೆಳ್ಳಿಪ್ಪಾಡಿ, ಕಟಾರ ಪರಿಸರಗಳಲ್ಲಿ ಕಾಣಿಸಿಕೊಂಡಿವೆ.
ಸವಣೂರು ಗ್ರಾಮದ ಪುಣ್ಚಪ್ಪಾಡಿಯಲ್ಲಿ ರಾತ್ರಿ ಕಾಣಿಸಿಕೊಂಡಿದ್ದ ಸಲಗಗಳು ಬಳಿಕ ಕೆಯ್ಯೂರು ಗ್ರಾಮದ ತೆಗ್ಗು, ಓಲೆಮುಂಡೋವು ಪರಿಸರದಲ್ಲಿ ಕಾಣಿಸಿಕೊಂಡು, ಅಲ್ಲಿ ಒಂದಷ್ಟು ಕೃಷಿ ಹಾನಿಯುಂಟು ಮಾಡಿತ್ತು. ತೆಗ್ಗು ಎರಬೈಲು ಗುಡ್ಡದಲ್ಲಿ ಹಗಲು ಹೊತ್ತು ಮಲಗಿದ್ದ ಆನೆಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬಿಬಂದಿ ವಾಪಸ್ ಕಳಿಸಿದ್ದರು. ಹಿಂದಿರುಗಿದ ಸಲಗಗಳು ಮತ್ತೆ ಸವಣೂರು ಗ್ರಾಮದ ಪುಣ್ಚಪ್ಪಾಡಿಗೆ ತೆರಳಿತ್ತು. ಆಹಾರಕ್ಕಾಗಿ ಅಲ್ಲಿನ ಕೆಲವು ರೈತರ ಕೃಷಿಯನ್ನು ನಾಶ ಮಾಡಿತ್ತು. ಆ ಬಳಿಕ ನರಿಮೊಗರು ಗ್ರಾಮದ ವೀರಮಂಗಲಕ್ಕೆ ಆನೆಗಳು ಅಲ್ಲಿಯೂ ಒಂದು ರಾತ್ರಿ ಕಳೆದಿತ್ತು. ಅಲ್ಲಿಂದ ಮುಂದುವರಿದು ಜೂ.೧೦ಕ್ಕೆ ಶಾಂತಿಗೋಡು ಗ್ರಾಮಕ್ಕೆ ಆಗಮಿಸಿದ್ದು, ಶಾಂತಿಗೋಡಿನ ಗೇರು ಅಭಿವೃದ್ಧಿ ಮತ್ತು ಸಂಶೋಧನಾ ಕೇಂದ್ರದ ಗೇರು ತೋಪಿನೊಳಗೆ ಒಂದು ರಾತ್ರಿಯನ್ನು ಕಳೆದಿತ್ತು. ಮಂಗಳವಾರ ಬೆಳಗ್ಗಿನ ಜಾವ ಬೆಳ್ಳಿಪ್ಪಾಡಿ ಗ್ರಾಮದ ಕೊಡಿಮರದ ಬಾರ್ತೋಲಿ ಎಂಬಲ್ಲಿನ ಅಡಕೆ ತೋಟದಲ್ಲಿ ಕಂಡು ಬಂದಿತ್ತು.ಮಂಗಳವಾರ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿ ಎರಡು ಆನೆಗಳು ಸಂಚಾರ ನಡೆಸಿರುವುದನ್ನು ಪತ್ತೆ ಹಚ್ಚಿದ್ದರು. ಈ ಆನೆಯನ್ನು ಕಾಡಿಗೆ ಹಿಂದಿರುಗುವಂತೆ ಮಾಡುವ ಪ್ರಯತ್ನಗಳು ಕೆಲ ದಿನಗಳಿಂದ ನಿರಂತರವಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ನಡೆಸಿದ್ದರೂ ಈ ಜೋಡಿ ಕಾಡಾನೆಗಳು ಹೋಗುತ್ತಿಲ್ಲ. ಮಂಗಳವಾರ ಕಟಾರದ ಕೋಡಿಮರ ನಿವಾಸಿ ಕೇಶವ ಎನ್ನುವವರ ಮನೆಯಂಗಳದವರೆಗೂ ಬಂದಿರುವ ಆನೆಗಳು ಅಂಗಳದಲ್ಲಿ ಬೆಳೆಸಿದ್ದ ಕಬ್ಬನ್ನು ತಿಂದಿದ್ದು, ಫಸಲಿಗೆ ಸಿದ್ಧವಾಗಿ ನಿಂತಿದ್ದ ಹತ್ತಕ್ಕೂ ಮಿಕ್ಕಿದ ತೆಂಗಿನ ಗಿಡಗಳನ್ನು ತಿಂದು ಬಳಿಕ ಕಿತ್ತೆಸೆದು ಹಾನಿಗೊಳಿಸಿವೆ.
ಬೆಳ್ಳಿಪ್ಪಾಡಿ ಗ್ರಾಮದ ಪರಿಸರಕ್ಕೆ ಪುತ್ತೂರು ಶಾಸಕ ಅಶೋಕ್ ರೈ, ಮಾಜಿ ಶಾಸಕ ಸಂಜೀವ ಮಠಂದೂರು ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿಗಳನ್ನು ಪಡೆದರು.ಕೋಟ್ಸ್
ಕಳೆದ ಒಂದು ವಾರದಿಂದ ಆನೆಗಳನ್ನು ಕಾಡಿಗೆ ಅಟ್ಟುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಸಿಡಿಮದ್ದುಗಳನ್ನು ಸಿಡಿಸಿ ಆನೆಗಳನ್ನು ಜನವಸತಿ ಪ್ರದೇಶಕ್ಕೆ ಬರದಂತೆ ಕಾರ್ಯಾಚರಣೆ ನಡೆಸಲಾಗುತ್ತಿದೆ. ಕುಶಾಲನಗರದ ದುಬಾರೆಯಿಂದ ಆನೆ ಓಡಿಸುವಲ್ಲಿ ನೈಪುಣ್ಯತೆಯನ್ನು ಹೊಂದಿರುವ ಸಿಬ್ಬಂದಿಯನ್ನೂ ಕಟಾರ ಪರಿಸರದಲ್ಲಿ ನಿಯೋಜಿಸಲು ನಿರ್ಧರಿಸಲಾಗಿದೆ. ಸದ್ಯಕ್ಕೆ ಆನೆಗಳು ಸುಮಾರು ೪ ಎಕ್ರೆ ವಿಸ್ತೀರ್ಣದ ಕಾಡು ತುಂಬಿದ ಭೂಮಿಯಲ್ಲಿವೆ. ಒಂದು ವೇಳೆ ಆನೆಗಳನ್ನು ಓಡಿಸಲು ಸಾಧ್ಯವಾಗದಿದ್ದರೆ ಆನೆಗಳನ್ನು ಹಿಡಿಯಲು ನುರಿತ ಆನೆಗಳನ್ನು ಪುತ್ತೂರಿಗೆ ತರಿಸಿಕೊಳ್ಳಲು ಅರಣ್ಯ ಇಲಾಖೆ ತೀರ್ಮಾನಿಸಿದೆಸುಬ್ಬಯ್ಯ ನಾಯ್ಕ್, ಎಸಿಎಫ್ ಪುತ್ತೂರು ವಿಭಾಗ