ಕಾಡಾನೆಗಳು ಪ್ರತ್ಯಕ್ಷ: ಟಾಸ್ಕ್‌ ಪೋರ್ಸ್ ಕಾರ್ಯಾಚರಣೆ

KannadaprabhaNewsNetwork |  
Published : Dec 22, 2024, 01:35 AM IST
ನರಸಿಂಹರಾಜಪುರ ತಾಲೂಕಿನ ಕಡಹಿಬೈಲು ಗ್ರಾಮ ಪಂಚಾಯಿತಿಯ ಭದ್ರಾ ಕಾಲೋನಿ ಸಮೀಪದಲ್ಲಿ ಕಾಣಿಸಿಕೊಂಡಿದ್ದ ಕಾಡಾನೆ | Kannada Prabha

ಸಾರಾಂಶ

ನರಸಿಂಹರಾಜಪುರ, ತಾಲೂಕಿನ ಕಡಹಿನ ಬೈಲು ಗ್ರಾಮ ಪಂಚಾಯಿತಿಯ ಹಳ್ಳೂರಗದ್ದೆ, ಹಾರೇಕೊಪ್ಪ ಬಸ್ಸು ನಿಲ್ದಾಣ, ಚಿನ್ನಮಣಿ, ಜೇನುಕಟ್ಟು ಸರ, ಭದ್ರಾ ಕಾಲೋನಿಯಲ್ಲಿ ಶುಕ್ರವಾರ ಸಂಜೆ ಹಾಗೂ ಶನಿವಾರ ಬೆಳಿಗ್ಗೆ ಹಾಗೂ ಸಂಜೆ ಕಾಡಾನೆಗಳು ಕಾಣಿಸಿಕೊಂಡಿವೆ.

- ಗಾಂಧಿಗ್ರಾಮ, ಕಡಹಿನಬೈಲು, ಹಳ್ಳೂರ ಗದ್ದೆ,ಹಾರೇಕೊಪ್ಪ ಬಸ್ಸು ನಿಲ್ದಾಣ,ಭದ್ರಾ ಕಾಲೋನಿಯಲ್ಲಿ ಆನೆಗಳು । ಆರಂಬಳ್ಳಿ ಮೀಸಲು ಅರಣ್ಯಕ್ಕೆ ಹೋದ ಕಾಡಾನೆಗಳು

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ತಾಲೂಕಿನ ಕಡಹಿನ ಬೈಲು ಗ್ರಾಮ ಪಂಚಾಯಿತಿಯ ಹಳ್ಳೂರಗದ್ದೆ, ಹಾರೇಕೊಪ್ಪ ಬಸ್ಸು ನಿಲ್ದಾಣ, ಚಿನ್ನಮಣಿ, ಜೇನುಕಟ್ಟು ಸರ, ಭದ್ರಾ ಕಾಲೋನಿಯಲ್ಲಿ ಶುಕ್ರವಾರ ಸಂಜೆ ಹಾಗೂ ಶನಿವಾರ ಬೆಳಿಗ್ಗೆ ಹಾಗೂ ಸಂಜೆ ಕಾಡಾನೆಗಳು ಕಾಣಿಸಿಕೊಂಡಿವೆ.

ಶುಕ್ರವಾರ ಸಂಜೆ ಹಳ್ಳೂರ ಗದ್ದೆಯಲ್ಲಿ ಆನೆಗಳು ಕೌಲದ ಹಳ್ಳಕ್ಕೆ ಬಂದು ನೀರು ಕುಡಿದು ಬಿದಿರು ತಿನ್ನುತ್ತಿರುವುದನ್ನು ಕಂಡು ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಮೂಡಿಗೆರೆಯಿಂದ ಈಗಾಗಲೇ ತಾಲೂಕಿಗೆ ಆಗಮಿಸಿರುವ ಎಲಿಫಂಟ್ ಟಾಸ್ಕ್‌ ಪೋರ್ಸ ತಂಡದವರು ಪಟಾಕಿ ಸಿಡಿಸಿ ಆನೆಯನ್ನು ಮತ್ತೆ ಆರಂಬಳ್ಳಿ ಭದ್ರಾ ಅಭಯಾರಣ್ಯಕ್ಕೆ ಅಟ್ಟಿದ್ದಾರೆ. ಶನಿವಾರ ಬೆಳಿಗ್ಗೆ ಭದ್ರಾ ಕಾಲೋನಿಯಲ್ಲಿ 2 ಆನೆ ಕಾಣಿಸಿಕೊಂಡಿದ್ದು ಆ ಆನೆಗಳನ್ನು ಸಹ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಎಲಿಫೆಂಟ್‌ ಟಾಸ್ಕ್‌ ಪೋರ್ಸ್ ಸಿಬ್ಬಂದಿ ಜಂಟಿಯಾಗಿ ಕಾರ್ಯಾಚರಣೆ ಮಾಡಿ ಆರಂಬಳ್ಳಿ ಅಭಯಾರಣ್ಯಕ್ಕೆ ಓಡಿಸಿದ್ದಾರೆ. ಸಂಜೆ ಹೊತ್ತಿಗೆ ಮತ್ತೆ ಜೇನುಕಟ್ಟ ಸರ ಎಂಬ ಹಳ್ಳಿಯಲ್ಲಿ ಮತ್ತೆ ಆನೆ ಕಾಣಿಸಿಕೊಂಡಿದೆ.

ಬಾಳೆ, ಭತ್ತಕ್ಕೆ ದಾಳಿ:

ಕಡಹಿನಬೈಲು ಗ್ರಾಮ ಪಂಚಾಯಿತಿಯ ಕಡಹಿನಬೈಲು, ಜೇನುಕಟ್ಟು ಸರ, ಚೆನ್ನಮಣಿಯಲ್ಲಿ ಹೆಚ್ಚಾಗಿ ಬಾಳೆ, ಭತ್ತ ಇರುವುದರಿಂದ ಆನೆಗಳು ಈ ಭಾಗದಲ್ಲೇ ಹೆಚ್ಚಾಗಿ ಓಡಾಡುತ್ತಿವೆ ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು. ಈಗಾಗಾಲೇ ಮೂಡಿಗೆರೆಯಿಂದ ಎಲಿಫಂಟ್ ಟಾರ್ಸ್ ಪೋರ್ಸನ 4 ತಂಡಗಳು ಆಗಮಿಸಿದ್ದು 4 ಜೀಪುಗಳನ್ನು ನೀಡಲಾಗಿದೆ. ಹಗಲು ಹಾಗೂ ರಾತ್ರಿ ಶಿಫ್ಟ್‌ಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಟಾಸ್ಪ್‌ ಪೋರ್ಸ್ ನಡುವೆ ಸಮನ್ವಯತೆ ಸಾಧಿಸಲು ವಾಟ್ಸಾಪ್ ಗ್ರೂಪ್‌ ರಚಿಸಲಾಗಿದ್ದು ಕಾಡಾನೆ ಬಂದ ಸುದ್ದಿ ತಿಳಿಯುತ್ತಿದ್ದಂತೆ ಜಂಟಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.

23 ಕಾಡಾನೆ:

ಅರಣ್ಯ ಇಲಾಖೆ ಮಾಹಿತಿಯಂತೆ ತಾಲೂಕಿನ ವ್ಯಾಪ್ತಿಯಲ್ಲಿ 20 ರಿಂದ 23 ಕಾಡಾನೆಗಳು ಸುತ್ತಾಡುತ್ತಿವೆ. ಈಗ ಜನರು ಹಗಲು ಹೊತ್ತಿನಲ್ಲೂ ರಸ್ತೆಯಲ್ಲಿ ಓಡಾಡಲು ಭಯ ಪಡಬೇಕಾಗಿದೆ. ವಿಶೇಷವಾಗಿ ಈ ವರ್ಷ ಮುತ್ತಿನಕೊಪ್ಪ, ಕಡಹಿನಬೈಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೇ ಕಾಡಾನೆಗಳು ಸುತ್ತಾಡುತ್ತಿದೆ.

ಅರಣ್ಯ ಇಲಾಖೆ ಸೂಚನೆ:

ಮುತ್ತಿನಕೊಪ್ಪ, ಕಡಹಿನಬೈಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆನೆಗಳು ಸುತ್ತಾಟ ಮಾಡುತ್ತಿರುವುದರಿಂದ ಗ್ರಾಮಸ್ಥರು ಕಾಡಿನಕಡೆ ಹೋಗಬಾರದು. ಆನೆಗಳು ಕಂಡ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕು ಎಂದು ಅರಣ್ಯ ಇಲಾಖೆಯಿಂದ ಮೈಕ್ ಮೂಲಕ ಎಚ್ಚರಿಕೆ ನೀಡಲಾಗಿದೆ.

PREV

Recommended Stories

ವಿಶ್ವದಲ್ಲೇ ಮೊದಲ ಬಾರಿ ಬನ್ನೇರುಘಟ್ಟದಲ್ಲಿ ಕರಡಿಗೆ ಕೃತಕ ಕಾಲು ಜೋಡಣೆ
ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ