ಬೆಳ್ತಂಗಡಿ: ಒಂಟಿ ಸಲಗವೊಂದು ಆಗ್ಗಾಗೆ ಚಾರ್ಮಾಡಿ ಕಣಿವೆ ರಸ್ತೆಯಲ್ಲಿ ಓಡಾಡುತ್ತಿರುವುದು ವಾಹನ ಸವಾರರನ್ನು ಆತಂಕಕ್ಕೆ ದೂಡಿದೆ. ಕಳೆದ ಮೂರು ದಿನಗಳಿಂದ ಸಲಗವು ಅತ್ತಿಂದಿತ್ತ ಸಂಚರಿಸುತ್ತಿರುವುದು ಕಂಡು ಬಂದಿದೆ.ಭಾನುವಾರ ರಾತ್ರಿ ಒಂದನೇ ತಿರುವಿನ ಸಮೀಪ ಕಾಡಾನೆ ಕಂಡುಬಂದಿತ್ತು. ಬಳಿಕ ಸೋಮವಾರ ರಾತ್ರಿ ಎರಡು ಹಾಗೂ ಮೂರನೇ ತಿರುವಿನ ಬಳಿಯು ಕಾಡಾನೆಯನ್ನು ವಾಹನ ಸವಾರರು ಕಂಡಿದ್ದಾರೆ. ಮಂಗಳವಾರ ಬೆಳಿಗ್ಗೆ 2ನೇ ತಿರುವಿನ ಬಳಿ ಆನೆ ರಸ್ತೆ ಮಧ್ಯೆ ನಿಂತು ಈಚಲ ಮರವನ್ನು ತಿನ್ನುತ್ತಿರುವುದು ಕಂಡುಬಂದಿದೆ. ಈ ಹಿಂದೆಯೂ ಎರಡು ಮೂರು ಬಾರಿ ಒಂಟಿ ಸಲಗ ಚಾರ್ಮಾಡಿ ಘಾಟಿಯಲ್ಲಿ ಕಂಡು ಬಂದಿದ್ದು ವಾಹನ ಸವಾರರಿಗೆ ತೊಂದರೆ ಉಂಟಾಗಿತ್ತು.
ಪ್ರಸ್ತುತ ಕಾಡಾನೆ ಪದೇ ಪದೇ ಘಾಟಿ ರಸ್ತೆ ವ್ಯಾಪ್ತಿಯಲ್ಲಿ ಕಾಣಿಸುತ್ತಿದೆ ಪ್ರತಿದಿನ ಸಾವಿರಾರು ವಾಹನಗಳು ಓಡಾಟ ನಡೆಸುವ ಇಲ್ಲಿ ಕಾಡಾನೆ ರಸ್ತೆ ಬದಿ ಕಂಡುಬರುವುದರಿಂದ ಹಲವು ಕಾಲ ವಾಹನಗಳು ಸರದಿ ನಿಲ್ಲಬೇಕಾದ ಸ್ಥಿತಿ ಇದೆ ಹಾಗೂ ಈ ಹೊತ್ತಿನಲ್ಲಿ ಜೀವ ಭಯದೊಂದಿಗೆ ಕಾಯಬೇಕು.ಚಾರ್ಮಾಡಿ ಘಾಟಿ ವ್ಯಾಪ್ತಿಯಲ್ಲಿ ಕಾಡಾನೆ ನಿರಂತರ ಕಂಡು ಬರುತ್ತಿದ್ದು ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಳ್ಳದ ಕುರಿತು ಜನರು ಪ್ರಶ್ನಿಸುತ್ತಿದ್ದಾರೆ.
ಇದುವರೆಗೆ ಕಾಡಾನೆ ವಾಹನ ಅಥವಾ ಪ್ರಯಾಣಿಕರಿಗೆ ಯಾವುದೇ ರೀತಿಯ ತೊಂದರೆ ನೀಡಿಲ್ಲ ಆದರೆ ಕೆಲವರು ಆನೆಯನ್ನು ಓಡಿಸುವ ಸಲುವಾಗಿ ಕಲ್ಲುಗಳನ್ನು ಬೀರುವುದು, ಫೋಟೋ ಕ್ಲಿಕ್ಕಿಸಲು ಮುಂದಾಗುವುದು, ಬೊಬ್ಬೆ ಹಾಕುವುದು ಇತ್ಯಾದಿ ಮಾಡುತ್ತಾರೆ. ಇದರಿಂದ ಆನೆ ಕೋಪಗೊಳ್ಳುವ ಸಂಭವವಿದ್ದು, ಈ ಸಮಯ ಜನ ವಾಹನದ ಮೇಲೆ ದಾಳಿಗೂ ಮುಂದಾಗಬಹುದು.ಒಟ್ಟಿನಲ್ಲಿ ಘಾಟಿ ಪ್ರಯಾಣಕ್ಕೆ ಸೂಕ್ತ ಮುನ್ನೆಚ್ಚರಿಕೆ ಕೈಗೊಳ್ಳಬೇಕಾಗಿದ್ದು ರಾತ್ರಿ ಪ್ರಯಾಣವನ್ನು ಆದಷ್ಟು ಮುಂದೂಡಿದರೆ ಉತ್ತಮ.