ನಿತ್ಯ ಹರಿದ್ವರ್ಣ ಪಶ್ಚಿಮಘಟ್ಟ, ಸಮೃದ್ಧ ಅರಣ್ಯ ಪ್ರದೇಶಗಳೊಂದಿಗೆ ವನ್ಯಜೀವಿ ಕಾರಿಡಾರ್‌ಗಳೂ ಇರುವ ರಾಜ್ಯದಲ್ಲಿ ವನ್ಯಪ್ರಾಣಿ-ಮಾನವ ಸಂಘರ್ಷ ತಾರಕಕ್ಕೇರಿದೆ.
ಸಂದೀಪ್ ವಾಗ್ಲೆ
ಕನ್ನಡಪ್ರಭ ವಾರ್ತೆ ಬೆಂಗಳೂರು
ನಿತ್ಯ ಹರಿದ್ವರ್ಣ ಪಶ್ಚಿಮಘಟ್ಟ, ಸಮೃದ್ಧ ಅರಣ್ಯ ಪ್ರದೇಶಗಳೊಂದಿಗೆ ವನ್ಯಜೀವಿ ಕಾರಿಡಾರ್‌ಗಳೂ ಇರುವ ರಾಜ್ಯದಲ್ಲಿ ವನ್ಯಪ್ರಾಣಿ-ಮಾನವ ಸಂಘರ್ಷ ತಾರಕಕ್ಕೇರಿದೆ. ಕಳೆದ ಐದೇ ವರ್ಷಗಳಲ್ಲಿ ಬರೋಬ್ಬರಿ 270 ಮಂದಿ ವನ್ಯಪ್ರಾಣಿಗಳ ದಾಳಿಯಿಂದ ಸಾವಿಗೀಡಾಗಿದ್ದಾರೆ. ಈ ಸಂಘರ್ಷ ಇಳಿಸಲು ವನ್ಯಪ್ರಾಣಿಗಳಿಂದ ಸುರಕ್ಷಿತ ಅಂತರ ಇರಿಸುವುದು, ಅವುಗಳ ವಾಸಸ್ಥಾನದಲ್ಲಿ ಹಸ್ತಕ್ಷೇಪ ಮಾಡದಿರುವುದೇ ಮುಖ್ಯ ದಾರಿ ಎಂದು ವನ್ಯಜೀವಿ-ಪರಿಸರ ತಜ್ಞರು ಸಲಹೆ ನೀಡಿದ್ದಾರೆ.
ಕಳೆದ 10 ದಿನಗಳಿಂದೀಚೆಗೆ ಪ್ರಾಣಿ ದಾಳಿಗೆ ಎರಡು ಬಲಿಯಾಗಿದೆ. ಮಲೆಮಹದೇಶ್ವರ ಬೆಟ್ಟದಲ್ಲಿ ಚಿರತೆಯೊಂದು ಬಾಲಕನನ್ನು ಬಲಿ ಪಡೆದಿದ್ದರೆ, ದುಬಾರೆಯಲ್ಲಿ ಆನೆಗಳ ಕಾದಾಟದ ನಡುವೆ ಮಹಿಳೆ ಮೃತಪಟ್ಟಿದ್ದಾರೆ. ಇದರ ಬೆನ್ನಲ್ಲೇ ರಾಜ್ಯದಲ್ಲಿ ವನ್ಯಜೀವಿ-ಮಾನವ ಸಂಘರ್ಷ ತಡೆಯುವುದರ ಜತೆಗೆ ವನ್ಯ ಪ್ರಾಣಿಗಳ ಆವಾಸಸ್ಥಾನ ರಕ್ಷಣೆಯ ಕೂಗೂ ಎದ್ದಿದೆ.
6 ಜಿಲ್ಲೆಗಳಲ್ಲಿ ಅತ್ಯಧಿಕ ಸಾವು:
ಅರಣ್ಯ ಇಲಾಖೆ ಅಂಕಿ-ಅಂಶಗಳ ಪ್ರಕಾರ, 2021-22ರಿಂದ ಈವರೆಗೆ ವನ್ಯಪ್ರಾಣಿಗಳಿಂದ ಮಾನವ ಸಾವಿನ 270 ಪ್ರಕರಣಗಳ ಪೈಕಿ ಆರು ಜಿಲ್ಲೆಗಳು ಅಗ್ರಸ್ಥಾನದಲ್ಲಿವೆ. ಕೊಡಗು 52 ಸಾವಿನೊಂದಿಗೆ ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದ್ದರೆ, ಚಾಮರಾಜನಗರ (48), ಮೈಸೂರು (29), ಹಾಸನ (26), ಚಿಕ್ಕಮಗಳೂರು (24) ರಾಮನಗರ (23) ಜಿಲ್ಲೆಗಳಲ್ಲೂ ಗಮನಾರ್ಹ ಸಂಖ್ಯೆಯಲ್ಲಿ ಸಾವು ಸಂಭವಿಸಿದೆ. ವಿಶೇಷವೆಂದರೆ, ಅರಣ್ಯ ಪ್ರದೇಶ ವಿಸ್ತಾರವಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾನವ ಸಾವಿನ ಪ್ರಕರಣಗಳು ಕೇವಲ ಎಂಟು!
ಆನೆ ದಾಳಿಯೇ ಅಧಿಕ:
ಈ ಪೈಕಿ ಆನೆಗಳಿಂದಲೇ ಶೇ.66ಕ್ಕೂ ಅಧಿಕ (188) ಸಾವು ಸಂಭವಿಸಿದ್ದರೆ, ಹುಲಿ ದಾಳಿಯಿಂದ 21, ಚಿರತೆ ದಾಳಿಯಿಂದ 15, ಕಾಡು ಹಂದಿಯಿಂದ 13, ಮೊಸಳೆಗಳಿಂದ 12, ಕರಡಿ 10, ಕಾಡೆಮ್ಮೆಗಳಿಂದ 7, ತೋಳ 2, ಜಿಂಕೆ 1, ಕಣಜಗಳಿಂದ ಒಬ್ಬರು ಸಾವಿಗೀಡಾಗಿದ್ದಾರೆ. ಮಂಗನಿಂದಲೂ ಒಂದು ಸಾವು ಸಂಭವಿಸಿದೆ.
ಏಕೆ ಈ ಸಂಘರ್ಷ?:
ಆನೆ ಮತ್ತು ಹುಲಿ ಸಂಘರ್ಷ ಪ್ರಕರಣಗಳ ಸಂಖ್ಯೆ ಏರಿಕೆಯಾಗಲು ಅವುಗಳ ನೈಸರ್ಗಿಕ ಆವಾಸ ಸ್ಥಾನಗಳನ್ನು ನಿರ್ವಹಿಸುತ್ತಿರುವ ಬಗೆಯೇ ಕಾರಣ ಎನ್ನುತ್ತಾರೆ ವನ್ಯಜೀವಿ ತಜ್ಞ ಸಂಜಯ್ ಗುಬ್ಬಿ. ಕೋರ್ಟ್ ಆದೇಶ, ತಜ್ಞರ ಸಲಹೆಗಳನ್ನು ಗಣನೆಗೆ ತೆಗೆದುಕೊಳ್ಳದೆ ಸಂಘರ್ಷದ ಯೋಜನೆಗಳನ್ನು ಅಳವಡಿಸಲಾಗುತ್ತಿದೆ. ಬೃಹತ್ ಅಭಿವೃದ್ಧಿ ಯೋಜನೆಗಳನ್ನು (ಶರಾವತಿ ಪಂಪ್ಡ್ ಸ್ಟೋರೇಜ್, ಮೇಕೆದಾಟು ಯೋಜನೆ ಹೊಸ ಹೆದ್ದಾರಿಗಳು, ಇನ್ನಿತರ) ವನ್ಯಜೀವಿಧಾಮ, ರಾಷ್ಟ್ರೀಯ ಉದ್ಯಾನ, ಹುಲಿ ಸಂರಕ್ಷಣಾ ಪ್ರದೇಶಗಳಿಂದ ಹೊರಗಿಡಬೇಕು ಎಂದವರು ಹೇಳುತ್ತಾರೆ.
ರಾಜ್ಯದ ಎರಡು ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಮಾತ್ರ ನಿರಂತರವಾಗಿ ಹುಲಿಗಳ ಹೆಚ್ಚಾಗುತ್ತಿದೆ. ಆದರೆ ಹುಲಿಗಳ ನೈಸರ್ಗಿಕ ಆವಾಸಸ್ಥಾನ ಅದಕ್ಕೆ ಅನುಗುಣವಾಗಿ ವಿಸ್ತಾರಗೊಂಡಿಲ್ಲ. ಹೀಗಾಗಿ ಹೆಚ್ಚಿನ ಸಂಖ್ಯೆಯ ಹುಲಿಗಳು ಕೃಷಿಭೂಮಿ, ಹಳ್ಳಗಳ ಪೊದೆಗಳಲ್ಲಿ ಆವಾಸಸ್ಥಾನ ಕಂಡುಕೊಳ್ಳುತ್ತಿವೆ. ಹುಲಿ ಯೋಜನಾ ಪ್ರದೇಶಗಳಲ್ಲಿ ಆವಾಸಸ್ಥಾನದ ಮಾರ್ಪಾಡು ನಿಲ್ಲಿಸಬೇಕು. ಅದೇ ರೀತಿ, ಚಿರತೆಗಳನ್ನು ಅನವಶ್ಯಕವಾಗಿ ಹಿಡಿದು ಬೇರೆಡೆಗೆ ಸ್ಥಳಾಂತರಿಸುವುದನ್ನು ನಿಲ್ಲಿಸಬೇಕು. ಮೈಸೂರು ಜಿಲ್ಲೆಯೊಂದರಲ್ಲೇ ಕಳೆದ 3 ವರ್ಷಗಳಲ್ಲಿ 200ಕ್ಕೂ ಹೆಚ್ಚು ಚಿರತೆಗಳನ್ನು ಸ್ಥಳಾಂತರಿಸಲಾಗಿದೆ. ಆದರೂ ಸಂಘರ್ಷ ಕಡಿಮೆಯಾಗಲಿಲ್ಲ ಎಂಬುದು ಈ ಕಾರ್ಯನೀತಿಯೇ ಸರಿಯಿಲ್ಲ ಎನ್ನುವುದನ್ನು ತೋರಿಸುತ್ತದೆ ಎಂದು ಸಂಜಯ್ ಗುಬ್ಬಿ ಅಭಿಪ್ರಾಯಪಡುತ್ತಾರೆ.ಕೋಟ್
ವನ್ಯಜೀವಿ-ಮಾನವ ಸಂಘರ್ಷ ತಡೆಗೆ ಅರಣ್ಯದಂಚಿನಲ್ಲಿ ಸೌರಶಕ್ತಿ ಬೇಲಿ, ಬ್ಯಾರಿಕೇಡ್ ಇತ್ಯಾದಿಗಳ ನಿರ್ಮಾಣ, ಆನೆ-ಚಿರತೆ ಕಾರ್ಯಪಡೆಗಳ ಸ್ಥಾಪನೆ, ಅರಣ್ಯದೊಳಗೆ ಜಲ ಸಂಪನ್ಮೂಲ ಅಭಿವೃದ್ಧಿ, ಪ್ರಾಣಿಗಳ ಆವಾಸಸ್ಥಾನ ಅಭಿವೃದ್ಧಿ, ಎಐ ಆಧಾರಿತ ಕ್ಯಾಮರಾಗಳು ಇತ್ಯಾದಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ದೇಶದಲ್ಲೇ ಅತಿ ಹೆಚ್ಚು ಆನೆಗಳು ಕರ್ನಾಟಕದಲ್ಲಿದ್ದರೂ ಆನೆಗಳು ಕಡಿಮೆ ಇರುವ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಮಾನವ ಸಾವಿನ ಪ್ರಕರಣಗಳು ಅತಿ ಕಡಿಮೆ. ಹೀಗಾಗಿ ಸಂಘರ್ಷ ಹೆಚ್ಚಾಗಿದೆ ಎಂದು ಹೇಳಲಾಗದು.
- ಕುಮಾರ್ ಪುಷ್ಕರ್, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಮತ್ತು ವನ್ಯಜೀವಿ ಪರಿಪಾಲಕಪಶ್ಚಿಮ ಘಟ್ಟದಲ್ಲಿ ರೆಸಾರ್ಟ್‌ಗಳ ಹಾವಳಿ:
ಪಶ್ಚಿಮಘಟ್ಟ ಸೇರಿ ವನ್ಯಜೀವಿಗಳು ಯಥೇಚ್ಛವಾಗಿರುವ ದಟ್ಟಾರಣ್ಯಗಳ ನಡುವೆ ರಸ್ತೆ, ರೆಸಾರ್ಟ್‌ಗಳು, ಖಾಸಗಿ ಎಸ್ಟೇಟ್, ಬೃಹತ್ ಯೋಜನೆಗಳಿಗೆ ಅವಕಾಶ ನೀಡುವುದರಿಂದ ವನ್ಯಜೀವಿ-ಮಾನವ ಸಂಘರ್ಷ ಹೆಚ್ಚುತ್ತಿದೆ. ಈ ಹಸ್ತಕ್ಷೇಪವನ್ನು ಮೊದಲು ನಿಲ್ಲಿಸಬೇಕು ಎನ್ನುತ್ತಾರೆ ಕರಾವಳಿಯ ಪರಿಸರವಾದಿ ದಿನೇಶ್ ಹೊಳ್ಳ.
ಬಾಕ್ಸ್‌ಚಾರಣ ಪಥ ಎಸ್‌ಒಪಿ ತಿಂಗಳಾಂತ್ಯದೊಳಗೆ ಜಾರಿ:
ಇತ್ತೀಚೆಗೆ ಕೊಡಗಿನಲ್ಲಿ ಚಾರಣಕ್ಕೆ ಒಂಟಿಯಾಗಿ ತೆರಳಿದ ಯುವತಿ ನಾಪತ್ತೆಯಾದ ಪ್ರಕರಣದ ಬಳಿಕ ಅರಣ್ಯ ಸಚಿವರು ಚಾರಣ ಪಥಗಳಿಗೆ ಪ್ರಮಾಣಿತ ಕಾರ್ಯಾಚರಣೆ ವಿಧಾನ (ಎಸ್‌ಒಪಿ) ಪಾಲಿಸಲು ಆದೇಶ ಹೊರಡಿಸಿದ್ದಾರೆ. ಇದನ್ನು ಚಾರಣ ಪಥಗಳಲ್ಲಿ ಜಾರಿಗೊಳಿಸಲಾಗುತ್ತಿದೆ. ಈ ತಿಂಗಳಾಂತ್ಯದೊಳಗೆ ಸಂಪೂರ್ಣವಾಗಿ ಜಾರಿಗೊಳಿಸಲಿದ್ದೇವೆ ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಕುಮಾರ್ ಪುಷ್ಕರ್ ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.