ಸಂತೋಷ ದೈವಜ್ಞ
ಮುಂಡಗೋಡ: ಉರಿಬಿಸಿಲಿನ ತಾಪಮಾನದಿಂದ ಅರಣ್ಯ ಪ್ರದೇಶದ ಜಲಾಶಯ, ಕೆರೆ, ಹಳ್ಳ ಗುಂಡಿಗಳೆಲ್ಲ ಬತ್ತಿದ್ದು, ಕಾಡುಪ್ರಾಣಿಗಳು ದಾಹ ತೀರಿಸಿಕೊಳ್ಳಲು ಊರಂಚಿನ ಕೆರೆ- ಕಟ್ಟೆಗಳಿಗೆ ಬಂದು ಬೇಟೆಗಾರರ ಬಲೆಗೆ ಬಲಿಯಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ.ತಾಲೂಕಿನ ಬಹುತೇಕ ಭಾಗ ಅರಣ್ಯದಿಂದ ಕೂಡಿದ್ದು, ಇಲ್ಲಿ ಜಿಂಕೆ, ಸಾರಂಗ, ಕರಡಿ, ಕಾಡುಹಂದಿ, ನರಿ ಸೇರಿದಂತೆ ಅಪಾರ ಪ್ರಮಾಣದಲ್ಲಿ ವನ್ಯಜೀವಿಗಳು ವಾಸಿಸುತ್ತಿವೆ. ಈ ಹಿಂದೆ ಕಾಡುಗಳ್ಳ ಬೇಟೆಗಾರರ ಕೈಗೆ ಸಿಕ್ಕು ಮಾತ್ರ ಬಲಿಯಾಗುತ್ತಿದ್ದ ಪ್ರಾಣಿಗಳೀಗ ದಾಹ ತಣಿಸಿಕೊಳ್ಳಲು ನಾಡಿಗೆ ಬಂದು ಪ್ರಾಣ ಕಳೆದುಕೊಳ್ಳುತ್ತಿವೆ.
ರಣ ಬಿಸಿಲಿನ ಕಾವಿನಿಂದ ಕಂಗೆಟ್ಟಿರುವ ಪ್ರಾಣಿಗಳು ನೀರನ್ನು ಅರಸಿ ಅರಣ್ಯದಂಚಿನ ಗ್ರಾಮಗಳಿಗೆ ಪ್ರವೇಶ ಮಾಡುತ್ತಿವೆ. ಈ ಸಂದರ್ಭದಲ್ಲಿ ಗ್ರಾಮದ ಬೀದಿನಾಯಿಗಳು ಇವುಗಳನ್ನು ಬೆನ್ನಟ್ಟಿ ಕಚ್ಚಿ ಗಾಯಗೊಳಿಸುತ್ತವೆ. ಇದರಿಂದ ಜಿಂಕೆಗಳು ಸಾವಿಗೀಡಾಗುತ್ತಿವೆ. ಕೆಲ ವರ್ಷಗಳಿಂದ ಜಿಂಕೆಗಳು ನೀರು ಅರಸಿ ನಾಡಿಗೆ ಬಂದು ಸಾವಿಗೀಡಾದ ಉದಾಹರಣೆ ಸಾಕಷ್ಟಿವೆ. ಇದು ಮಾತ್ರವಲ್ಲದೇ ಇತ್ತೀಚೆಗೆ ಬೇಟೆಗಾರರ ಹಾವಳಿಗೆ ಸಾಕಷ್ಟು ಪ್ರಾಣಿಗಳು ಬಲಿಯಾಗುತ್ತಿವೆ.ತಾಲೂಕಿನ ಬಾಚಣಕಿ ಗ್ರಾಮದಂಚಿನ ಕೆರೆಯಲ್ಲಿ ಸಂಶಯಾಸ್ಪದವಾಗಿ ಕಂಡ ನಾಡಬಾಂಬ್ ಮುಟ್ಟಿದ ಪರಿಣಾಮ ಸ್ಫೋಟಗೊಂಡು ಕುರಿಗಾಹಿಯೋರ್ವ ಗಾಯಗೊಂಡಿದ್ದ. ಅದು ಬೇಟೆಗಾರರು ಪ್ರಾಣಿ ಬೇಟೆಗಾಗಿಯೇ ಬಳಸಿದ ಅಸ್ತ್ರ ಎನ್ನಲಾಗುತ್ತಿದೆ. ಅದೇ ರೀತಿ ತಾಲೂಕಿನಲ್ಲಿ ಹಲವು ಜಲಾಶಯ ಮತ್ತು ಕೆರೆಗಳಿದ್ದು, ಅಲ್ಲಿಯೂ ಕೂಡ ಇದೇ ರೀತಿ ಬೇಟೆಗಾರರ ಕರಾಮತ್ತು ನಡೆಯುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಅಲ್ಲದೇ ೨ ದಿನಗಳ ಹಿಂದೆ ತಾಲೂಕಿನ ಪಾಳಾ ಕ್ರಾಸ್ ಬಳಿ ಶಿರಸಿ ಮೂಲದ ನಾಲ್ವರು ಬಂದೂಕಿನಿಂದ ಜಿಂಕೆಯನ್ನು ಬೇಟೆಯಾಡಿ ಕಾರಿನಲ್ಲಿ ಸಾಗಿಸುವಾಗ ಗ್ರಾಮದ ಯುವಕರು ಅವರನ್ನು ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ ಘಟನೆ ಕೂಡ ನಡೆದಿದ್ದು, ಇದಕ್ಕೆಲ್ಲ ಅರಣ್ಯ ಇಲಾಖೆ ನಿರ್ಲಕ್ಷ್ಯತನವೇ ಕಾರಣ ಎನ್ನಲಾಗುತ್ತಿದೆ.ಮುಂಜಾಗ್ರತೆ ಕೊರತೆ: ಅನಾವೃಷ್ಟಿಯಿಂದಾಗಿ ಕೆರೆ- ಕಟ್ಟೆಗಳೆಲ್ಲ ಬತ್ತಿದ್ದು, ನೀರಿನ ಸಮಸ್ಯೆ ಎದುರಾಗುತ್ತಿರುವ ವಿಷಯ ಮನಗಂಡರೂ ಕೂಡ ವನ್ಯಜೀವಿಗಳ ರಕ್ಷಣೆ ದೃಷ್ಟಿಯಿಂದ ಅರಣ್ಯ ಪ್ರದೇಶಗಳಲ್ಲಿ ಪ್ರಾಣಿಗಳಿಗೆ ಅಗತ್ಯ ಕುಡಿಯಲು ನೀರಿನ ವ್ಯವಸ್ಥೆಗಾಗಿ ಸಮರ್ಪಕ ಬೋರ್‌ವೆಲ್ ಅಥವಾ ಸಮರ್ಪಕ ಗುಂಡಿಗಳನ್ನು ತೆಗೆಸಿ ನೀರು ತುಂಬಿಸುವ ಕೆಲಸವಾಗಿಲ್ಲ. ಕೆಲವೇ ಕೆಲ ಭಾಗಗಳಲ್ಲಿ ಮಾತ್ರ ಕಾಟಾಚಾರಕ್ಕೆ ನೀರಿನ ಗುಂಡಿ ಮಾಡಿ ಕೈ ತೊಳೆದುಕೊಳ್ಳಲಾಗುತ್ತಿದೆ ಎಂದು ಸಾರ್ವಜನಿಕರು ಆರೊಪಿಸಿದ್ದಾರೆ. ಕಾಡ್ಗಿಚ್ಚು ಆತಂಕ: ಬೇಸಿಗೆ ಪ್ರಾರಂಭವಾದಾಗಿನಿಂದ ತಾಲೂಕಿನ ಬಹುತೇಕ ಭಾಗದ ಅರಣ್ಯ ಪ್ರದೇಶದಲ್ಲಿ ಬೆಂಕಿ ಕಾಣಿಸಿಳ್ಳುತ್ತಿರುವುದು ಕೂಡ ಕಾಡುಪ್ರಾಣಿಗಳು ಭೀತಿಗೊಂಡು ನಾಡಿನತ್ತ ಮುಖ ಮಾಡಲು ಒಂದು ಕಾರಣವಾಗಿದ್ದು, ಇನ್ನೂ ೨-೩ ತಿಂಗಳು ಬೇಸಿಗೆಯನ್ನು ಕಳೆಯುವುದು ಹೇಗೆ ಎಂಬ ಪ್ರಶ್ನೆ ಕಾಡತೊಡಗಿದೆ.ನೀರಿನ ತೊಟ್ಟಿ ನಿರ್ಮಾಣ: ಆಹಾರ ಹಾಗೂ ನೀರಿನ ಕೊರತೆಯಿಂದ ನಾಡಿಗೆ ಬರುತ್ತಿರುವ ಪ್ರಾಣಿಗಳ ಸಂಖ್ಯೆ ಹೆಚ್ಚಿದೆ. ಅರಣ್ಯ ಪ್ರದೇಶದೊಳಗೆ ನೀರಿನ ತೊಟ್ಟಿ ನಿರ್ಮಾಣಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈಗ ಅದಕ್ಕೆ ಅನುದಾನ ಮಂಜೂರಿಯಾಗಿದ್ದು, ಶೀಘದಲ್ಲಿ ತೊಟ್ಟಿಗಳನ್ನು ನಿರ್ಮಿಸಿ ಪ್ರಾಣಿಗಳಿಗೆ ಕುಡಿಯಲು ನೀರು ನಿಲ್ಲಿಸಲಾಗುವುದು ಎಂದು ಕಾತೂರ ವಲಯ ಅರಣ್ಯಾಧಿಕಾರಿ ಮಂಜುನಾಥ ನಾಯ್ಕ ತಿಳಿಸಿದರು.ವ್ಯವಸ್ಥೆ ಕಲ್ಪಿಸಿ: ಸಾಕಷ್ಟು ಬರಗಾಲದಿಂದಾಗಿ ಅರಣ್ಯ ಪ್ರದೇಶದಲ್ಲಿ ಪ್ರಾಣಿಗಳಿಗೆ ಕುಡಿಯಲು ಕಿಂಚಿತ್ತೂ ನೀರಿಲ್ಲದಂತಾಗಿರುವುದಕ್ಕೆ ಪ್ರಾಣಿ, ಪಕ್ಷಿಗಳು ನಾಡಿನತ್ತ ಮುಖ ಮಾಡುತ್ತಿವೆ. ಸರ್ಕಾರ ಕೂಡಲೇ ಕಾಡುಪ್ರಾಣಿಗಳಿಗೆ ಅಗತ್ಯ ನೀರಿನ ವ್ಯವಸ್ಥೆ ಕಲ್ಪಿಸಬೇಕಿದೆ ಎಂದು ತಾಲೂಕು ಕೃಷಿಕ ಸಮಾಜ ಅಧ್ಯಕ್ಷ ಸಂಗಮೇಶ ಬಿದರಿ ಆಗ್ರಹಿಸಿದರು.