ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಬಂಡೀಪುರ ಸಿಎಫ್ ಕಚೇರಿ, ವೈಲ್ಡ್ ಲೈಫ್ ರಿಸರ್ಚ್ ಸೆಂಟರ್, ತರಬೇತಿ ಕೇಂದ್ರ ಹಾಗೂ ಕಾಡಂಚಿನ ಗ್ರಾಮದ ಫಲಾನುಭವಿಗಳಿಗೆ ಸಲವತ್ತು ವಿತರಣೆ ಕಾರ್ಯಕ್ರಮದಲ್ಲಿ ಬಂಡೀಪುರ ಸಿಎಫ್‌ರಿಂದ ಶಿಷ್ಟಾಚಾರ ಉಲ್ಲಂಘನೆಯಾಗಿದೆ ಎಂದು ಕನ್ನಡಪ್ರಭ ಮನವಿ ಹಾಗೂ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್‌ರ ಮನವಿಗೆ ಸ್ಪಂದಿಸಿ ಅರಣ್ಯ ಸಚಿವ ಈಶ್ವರ್ ಬಿ ಖಂಡ್ರೆ ಮಾ.೧೦ ರ ಭಾನುವಾರ ಮಧ್ಯಾಹ್ನ ನಡೆಯಬೇಕಿದ್ದ ಕಾರ್ಯಕ್ರಮವನ್ನು ರದ್ದುಪಡಿಸಿದ್ದಾರೆ.ಬಂಡೀಪುರ ಸಿಎಫ್ ಡಾ.ಪಿ. ರಮೇಶ್ ಕುಮಾರ್ ತಮ್ಮ ಮೂಗಿನನೇರಕ್ಕೆ ಸ್ಥಳೀಯ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಅವರ ಗಮನಕ್ಕೂ ತರದೆ ಕಾರ್ಯಕ್ರಮ ಆಯೋಜಿಸಿ, ಬೇಕಾಬಿಟ್ಟಿಗೆ ಆಹ್ವಾನಿಸಿದಂತೆ ಸಿಎಫ್ ಲೆಟರ್ ಹೆಡ್‌ನ ಪತ್ರದಲ್ಲಿ ಕಾರ್ಯಕ್ರಮಕ್ಕೆ ಉಪಸ್ಥಿತರಿರಬೇಕು ಎಂದು ಕಾಟಾಚಾರಕ್ಕೆ ಕೋರಿದ್ದರು. ಬಂಡೀಪುರ ಸಿಎಫ್ ಡಾ.ಪಿ.ರಮೇಶ್ ಕುಮಾರ್ ಸರ್ಕಾರಿ ಕಾರ್ಯಕ್ರಮವನ್ನು ಸ್ವಂತ ಕಾರ್ಯಕ್ರಮದಂತೆ ತಮಗಿಷ್ಟ ಬಂದಂತೆ ಕಾಡಂಚಿನ ಗ್ರಾಮಗಳ ಫಲಾನುಭವಿಗಳಿಗೆ ಸವಲತ್ತು ಆಯ್ಕೆಯಲ್ಲೂ ಶಾಸಕರ ಗಮನಕ್ಕೆ ತಂದಿರಲಿಲ್ಲ. ಜೊತೆಗೆ ಸಿಎಫ್ ಕಚೇರಿ, ವೈಲ್ಡ್ ಲೈಫ್ ರಿಸರ್ಚ್ ಸೆಂಟರ್, ತರಬೇತಿ ಕೇಂದ್ರಗಳ ಉದ್ಘಾಟನೆಗೆ ಮುಂದಾಗಿದ್ದರು. ಬಂಡೀಪುರ ಸಫಾರಿ ಕೇಂದ್ರದ ಬಳಿ ಭಾನುವಾರ ಮಧ್ಯಾಹ್ನ ೩.೩೦ ಕ್ಕೆ ಕಾರ್ಯಕ್ರಮ ನಿಗದಿಪಡಿಸಿ ಶಾಮಿಯಾನ ಹಾಕಿಸಿದ್ದರು. ಐಷಾರಾಮಿ ಊಟದ ಶಾಮಿಯಾನ ಕೂಡ ಹಾಕಿಸಿ ಫಲಾನುಭವಿಗಳ ಕರೆತರಲು ಆಯಾಯ ಆರ್‌ಎಫ್‌ಒಗಳಿಗೆ ಸೂಚನೆ ನೀಡಿದ್ದರು.ಹಠಕ್ಕೆ ಬಿದ್ದಿದ್ದ ಸಿಎಫ್:
ಬಂಡೀಪುರ ಸಿಎಫ್ ಕಚೇರಿ, ವೈಲ್ಡ್ ಲೈಫ್ ರಿಸರ್ಚ್ ಸೆಂಟರ್, ತರಬೇತಿ ಕೇಂದ್ರ ಉದ್ಘಾಟನೆ ಮಾಡಿಸಿ ತಮ್ಮ ಹೆಸರು ಕಲ್ಲಿನಲ್ಲಿ ಬರೆಸಬೇಕು ಎಂದು ಹಠಕ್ಕೆ ಬಿದ್ದವರಂತೆ ಕೆಲ ಅಧಿಕಾರಿಗಳೊಂದಿಗೆ ವರ್ತಿಸಿದ್ದರು. ಸಿಎಫ್ ಡಾ.ಪಿ.ರಮೇಶ್ ಕುಮಾರ್ ಆಸೆಗೆ ಕನ್ನಡಪ್ರಭ, ಸಚಿವ ಈಶ್ವರ್ ಬಿ ಖಂಡ್ರೆ, ಶಾಸಕ ಎಚ್.ಎಂ.ಗಣೇಶ್ ಪ್ರಸಾದ್‌ರ ಗಮನಕ್ಕೆ ತಂದು ಶಿಷ್ಟಾಚಾರ ಉಲ್ಲಂಘಿಸಿ ನಿಗದಿಗೊಂಡಿರುವ ಕಾರ್ಯಕ್ರಮ ನಡೆಯದಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿತ್ತು.ಮಾ.೧೦ ರ ಕನ್ನಡಪ್ರಭದಲ್ಲಿ ಬಂಡೀಪುರ ಸಿಎಫ್‌ರಿಂದ ಶಿಷ್ಠಾಚಾರ ಉಲ್ಲಂಘನೆ ವರದಿ ಗಮನಿಸಿದ ಅರಣ್ಯ ಸಚಿವರು, ಹಿರಿಯ ಅಧಿಕಾರಿಗಳು ಸಿಎಫ್ ಡಾ.ಪಿ.ರಮೇಶ್ ಕುಮಾರ್ ಕಾರ್ಯಕ್ರಮ ರದ್ದು ಪಡಿಸಿ ಎಂದು ಸೂಚನೆ ನೀಡಿದ್ದರು. ಶನಿವಾರ ಸಂಜೆ ಬಂಡೀಪುರ ವಲಯ ಡಿಆರ್‌ಎಫ್‌ಒ ಯೊಬ್ಬರು ಭಾನುವಾರ (ಮಾ.೧೦) ಮಧ್ಯಾಹ್ನ ೩ ಗಂಟೆಗೆ ಸಿಎಫ್ ಕಚೇರಿ, ವೈಲ್ಡ್ ಲೈಫ್ ರಿಸರ್ಚ್ ಸೆಂಟರ್, ತರಬೇತಿ ಕೇಂದ್ರ ಹಾಗೂ ಫಲಾನುಭವಿಗಳಿಗೆ ಸಲವತ್ತು ವಿತರಣೆ ಸಮಾರಂಭವಿದೆ ಎಂದು ಪತ್ರಕರ್ತರಿಗೆ ಮಾಹಿತಿ ನೀಡಿದ್ದರು. ಭಾನುವಾರ ಬೆಳಗ್ಗೆ ಡಿಆರ್‌ಎಫ್‌ಒ ಒಬ್ಬರು ಕನ್ನಡಪ್ರಭಕ್ಕೆ ಕರೆ ಮಾಡಿ ಭಾನುವಾರ ನಡೆಯಬೇಕಿದ್ದ ಕಾರ್ಯಕ್ರಮ ರದ್ದಾಗಿದೆ ಎಂದು ತಿಳಿಸಿದರು.