ಹೈಕಮಾಂಡ್ ಟಿಕೆಟ್ ಕೊಟ್ಟರೆ ಸ್ಪರ್ಧಿಸುವೆ: ಬೆಮೆಲ್‌

KannadaprabhaNewsNetwork | Published : Feb 18, 2024 1:37 AM

ಸಾರಾಂಶ

ಮುಂಬರುವ ಏಪ್ರಿಲ್ ನಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಹೈಕಮಾಂಡ್ ತುಮಕೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ಕೊಟ್ಟರೆ ನಾನು ರೆಡಿ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಬೆಮಲ್ ಕಾಂತರಾಜ್ ತಿಳಿಸಿದ್ದಾರೆ.

ಕನ್ನಡಪ್ರಭವಾರ್ತೆ ತುರುವೇಕೆರೆ

ಮುಂಬರುವ ಏಪ್ರಿಲ್ ನಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಹೈಕಮಾಂಡ್ ತುಮಕೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ಕೊಟ್ಟರೆ ನಾನು ರೆಡಿ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಬೆಮಲ್ ಕಾಂತರಾಜ್ ತಿಳಿಸಿದ್ದಾರೆ.

ಪಟ್ಟಣದಲ್ಲಿರುವ ತಮ್ಮ ಕಚೇರಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಜನರಲ್ಲಿ ಆಕ್ರೋಶವಿದೆ. ಬಿಜೆಪಿಯವರು ಅಭಿವೃದ್ಧಿ ಮಂತ್ರ ಜಪಿಸದೇ, ದೇವರು, ಧರ್ಮ ಮುಂತಾದ ವಿಷಯಗಳನ್ನು ಮುಂದಿಟ್ಟುಕೊಂಡು ಜನರ ಭಾವನೆಯೊಂದಿಗೆ ಆಟವಾಡಿ ಗೆಲುವು ಕಾಣುವ ಕನಸು ಕಾಣುತ್ತಿದ್ದಾರೆ. ಇದು ಎಲ್ಲಾ ಸಮಯದಲ್ಲೂ ನಡೆಯದು. ಕೇಂದ್ರ ಸರ್ಕಾರ ಜನವಿರೋಧಿ ಸರ್ಕಾರವಾಗಿತ್ತು, ಜನರು ಚುನಾವಣೆಯನ್ನು ಎದುರು ನೋಡುತ್ತಿದ್ದಾರೆ. ಈ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಶಾಸ್ತಿ ಮಾಡುವುದು ನಿಶ್ಚಿತ ಎಂದು ಬೆಮಲ್ ಕಾಂತರಾಜ್ ಹೇಳಿದರು.

ತುಮಕೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಅಲೆ ಇದೆ. ಕಾಂಗ್ರೆಸ್ ನಿಂದ ಯಾರೇ ಕಣಕ್ಕಿಳಿದರೂ ಸಹ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸುವುದರಲ್ಲಿ ಸಂಶಯವಿಲ್ಲ. ಜಿಲ್ಲೆಯಿಂದ ಸ್ಪರ್ಧಿಸಲು ಹಲವಾರು ಮಂದಿ ಉತ್ಸುಕರಾಗಿದ್ದಾರೆ. ಎಲ್ಲರೂ ಅರ್ಹರೇ. ಆದರೂ ಸಹ ತಮಗೆ ಹೈಕಮಾಂಡ್ ಟಿಕೆಟ್ ನೀಡಿದಲ್ಲಿ ಸ್ಪರ್ಧಿಸುವುದಾಗಿ ಹೇಳಿದರು.

ರಾಜ್ಯದಿಂದ ಸಾಕಷ್ಟು ತೆರಿಗೆ ಹಣವನ್ನು ಸಂದಾಯ ಮಾಡುತ್ತಿದ್ದರೂ ಸಹ ಕೇಂದ್ರ ಸರ್ಕಾರ ರಾಜ್ಯಕ್ಕೆ ಕಡಿಮೆ ಅನುದಾನ ನೀಡುತ್ತಿದೆ. ಇತರೆ ರಾಜ್ಯಗಳಿಗೆ ಹೆಚ್ಚು ಅನುದಾನ ನೀಡುವ ಕೇಂದ್ರ ಸರ್ಕಾರ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದೆ ಎಂಬ ಕಾರಣಕ್ಕೆ ಕಡಿಮೆ ಅನುದಾನ ಬಿಡುಗಡೆ ಮಾಡುವ ಮೂಲಕ ಮಲತಾಯಿ ಧೋರಣೆ ತಳೆದಿದೆ ಎಂದು ಬೆಮಲ್ ಕಾಂತರಾಜ್ ಕಿಡಿಕಾರಿದರು.

ಕೊಬ್ಬರಿ ನೋಂದಣಿ ಪ್ರಕ್ರಿಯೆ ಕೇವಲ ಮೂರು ದಿನಗಳಲ್ಲಿ ಮುಗಿದೇ ಹೋಗಿರುವುದರಿಂದ ಉಳಿದಿರುವ ರೈತರು ನೋಂದಣಿ ಮಾಡಿಸಲು ಸಾಧ್ಯವಾಗಿಲ್ಲ. ಆದುದರಿಂದ ಕೂಡಲೇ ಕೇಂದ್ರ ಸರ್ಕಾರ ನೋಂದಣಿ ಮಾಡಿಸಲು ಸಮಯಾವಕಾಶ ನೀಡಬೇಕೆಂದು ಬೆಮಲ್ ಕಾಂತರಾಜ್ ಆಗ್ರಹಿಸಿದರು.

ಈ ಸಂಧರ್ಭದಲ್ಲಿ ತುರುವೇಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುಡ್ಡೇನಹಳ್ಳಿ ಪ್ರಸನ್ನ ಕುಮಾರ್‌, ಸಿ.ಎಸ್. ಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೊಳಾಲ ನಾಗರಾಜು, ಮುಖಂಡರಾದ ರಾಜಣ್ಣ, ನಂಜುಂಡಪ್ಪ, ಕೆಂಪರಾಜ್, ಮಾಳೆಕೃಷ್ಣಪ್ಪ, ಫೋಟೋ ಮಹೇಂದ್ರ ಇನ್ನಿತರರು ಇದ್ದರು.

Share this article