ಮೋದಿ ಸಂಪುಟದಲ್ಲಿ ಮಂತ್ರಿ ಆಗ್ತಾರಾ ಗೋವಿಂದ ಕಾರಜೋಳ?

KannadaprabhaNewsNetwork |  
Published : Jun 09, 2024, 01:32 AM IST
ಚಿತ್ರದುರ್ಗ ಮೂರನೇ ಪುಟದ ಲೀಡ್ | Kannada Prabha

ಸಾರಾಂಶ

ಚಿತ್ರದುರ್ಗ ಲೋಕಸಭೆ ಕ್ಷೇತ್ರದ ನೂತನ ಸದಸ್ಯ ಗೋವಿಂದಕಾರಜೋಳ ದೆಹಲಿಯಲ್ಲಿ ಕೇಂದ್ರದ ಮಾಜಿ ಸಚಿವ ನಿತಿನ್ ಗಡ್ಕರಿ ಭೇಟಿ ಮಾಡಿ ಗೆಲವಿನ ಸಂತಸ ಹಂಚಿಕೊಂಡರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಚಿತ್ರದುರ್ಗ ಲೋಕಸಭೆ ಕ್ಷೇತ್ರದಿಂದ ಮೊದಲ ಬಾರಿಗೆ ಗೆದ್ದು ಲೋಕಸಭೆಗೆ ಎಂಟ್ರಿ ಕೊಟ್ಟಿರುವ ಗೋವಿಂದ ಕಾರಜೋಳ ಅವರಿಗೆ ಕೇಂದ್ರದಲ್ಲಿ ಸಚಿವ ಸ್ಥಾನ ಸಿಗುವುದು ಬಹುತೇಕ ಗ್ಯಾರಂಟಿಯಾಗಿದ್ದು ಅಧೀಕೃತ ಆಹ್ವಾನ ಮಾತ್ರ ಬಾಕಿ ಇದೆ ಎನ್ನಲಾಗಿದೆ.

ದಕ್ಷಿಣ ಭಾರತದಲ್ಲಿ ಪರಿಶಿಷ್ಟ ಸಮುದಾಯದ ಇಬ್ಬರು ಮಾತ್ರ ಗೆದ್ದಿದ್ದಾರೆ. ವಿಜಯಪುರದಲ್ಲಿ ರಮೇಶ್ ಜಿಗಜಿಣಗಿ ಹಾಗೂ ಚಿತ್ರದುರ್ಗದಿಂದ ಗೋವಿಂದ ಕಾರಜೋಳ. ಉಳಿದಂತೆ ಮಹರಾಷ್ಟ್ರ, ತಮಿಳುನಾಡು, ಆಂದ್ರ, ತೆಲಂಗಾಣ, ಕೇರಳ ಎಲ್ಲಿಯೂ ಕೂಡಾ ಎಸ್ಸಿ ಕ್ಷೇತ್ರದಿಂದ ಗೆದ್ದಿರುವ ಸದಸ್ಯರಿಲ್ಲ. ಹಾಗಾಗಿಯೇ ಪರಿಶಿಷ್ಟರಿಗೆ ಜಾಗ ಕಲ್ಪಿಸಬೇಕಾದರೆ ಬಿಜೆಪಿ ಹೈಕಮಾಂಡ್ ಅನಿವಾರ್ಯವಾಗಿ ಕರ್ನಾಟಕದ ಕಡೆ ಮುಖ ಮಾಡಬೇಕಿದೆ. ಜಿಗಜಿಣಗಿ ಈಗಾಗಲೇ ಒಮ್ಮೆ ಕೇಂದ್ರದಲ್ಲಿ ಸಚಿವರಾಗಿದ್ದು ಹಿರಿತನದ ಆಧಾರದ ಮೇಲೆ ಗೋವಿಂದ ಕಾರಜೋಳರಿಗೆ ಅವಕಾಶಗಳು ಜಾಸ್ತಿ ಎಂದು ತಿಳಿದು ಬಂದಿದೆ.

ಎನ್‌ಡಿಎ ಒಕ್ಕೂಟದ ಸಂಸದರ ಸಭೆಯಲ್ಲಿ ಭಾಗವಹಿಸಲು ದೆಹಲಿಗೆ ತೆರಳಿದ್ದ ಗೋವಿಂದ ಕಾರಜೋಳ ಅಲ್ಲಿಯೇ ಉಳಿದುಕೊಂಡಿದ್ದಾರೆ. ಒಟ್ಟು 82 ಸಚಿವರ ಪೈಕಿ ಭಾನುವಾರ 26 ಮಂದಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಪಟ್ಟಿಯಲ್ಲಿ ಗೋವಿಂದ ಕಾರಜೋಳ ಅವರ ಹೆಸರಿದೆ. ಆದರೆ ಮೊದಲ ಹಂತದಲ್ಲಿ ಅವಕಾಶವಾಗುತ್ತದೆಯೇ ಎಂಬ ಬಗ್ಗೆ ಭಾನುವಾರ ಬೆಳಗ್ಗೆಯಷ್ಟೇ ಅಧೀಕೃತವಾಗಬೇಕಿದೆ. ಉಪ ಮುಖ್ಯಮಂತ್ರಿಯಾಗಿ ಆಡಳಿತದ ಅನುಭವ ಹೊಂದಿರುವ ಗೋವಿಂದ ಕಾರಜೋಳ ಅವರ ಸೇವೆ ಕೇಂದ್ರಕ್ಕೂ ಬೇಕಾಗುತ್ತದೆ ಎಂಬ ಮನೋಭಾವ ಬಿಜೆಪಿ ವರಿಷ್ಟರದಲ್ಲಿ ಇದೆ ಎನ್ನಲಾಗಿದೆ.

ಕಳೆದ ಚುನಾವಣೆಯಲ್ಲಿ ಚಿತ್ರದುರ್ಗ ಕ್ಷೇತ್ರದಿಂದ ಗೆದ್ದಿದ್ದ ಎ.ನಾರಾಯಣಸ್ವಾಮಿ ಕೇಂದ್ರದಲ್ಲಿ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಚಿವರಾಗಿದ್ದರು. ಈ ಬಾರಿ ಮತ್ತೆ ಚಿತ್ರದುರ್ಗಕ್ಕೆ ಈ ಅವಕಾಶದ ಬಾಗಿಲು ತೆಗೆದಂತೆ ಕಾಣಿಸುತ್ತಿದೆ. ಕಾರಜೋಳ ಅವರ ಅನುಯಾಯಿಗಳಲ್ಲಿ ಸಚಿವ ಸ್ಥಾನ ಸಿಗುತ್ತದೆ ಎಂಬ ವಿಶ್ವಾಸ ಪ್ರಬಲವಾಗಿದೆ. ಅವರ ಬೆಂಬಲಿಗರೂ ಕೂಡಾ ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ.

ಹಾಗೆ ನೋಡಿದರೆ ಚಿತ್ರದುರ್ಗ ಕ್ಷೇತ್ರದಲ್ಲಿ ಗೋವಿಂದ ಕಾರಜೋಳರ ಗೆಲವು ಅಚ್ಚರಿಯದೆಂದೇ ಭಾವಿಸಲಾಗಿದೆ. ಬಿಜೆಪಿಯಲ್ಲಿದ್ದ ಹಲವು ಮುಖಂಡರು ಅಸಹಕಾರ ತೋರಿದ್ದರಿಂದ ಗೆಲವಿನ ಬಗ್ಗೆ ಸಹಜ ಅನುಮಾನ ಮೂಡಿತ್ತು. ಮತ್ತೊಂದೆಡೆ ಕಾಂಗ್ರೆಸ್ ಗೆಲ್ಲಬಹುದಾದ ಪಟ್ಟಿಯಲ್ಲಿ ಚಿತ್ರದುರ್ಗ ಸೇರಿತ್ತು. ಒಂದರ್ಥದಲ್ಲಿ ತೂಗುಯ್ಯಾಲೆಯಂತಿದ್ದ ಕ್ಷೇತ್ರ ಕೊನೆಗೆ ಗೋವಿಂದ ಕಾರಜೋಳರಿಗೆ ಒಲಿದು ಎನ್‌ಡಿಎ ಕೂಟದಲ್ಲಿನ ಸಂಖ್ಯೆ ಜಾಸ್ತಿ ಮಾಡಿತ್ತು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ