ಕರಾವಳಿಯಲ್ಲಿ ಈ ಬಾರಿ ಓಟು ಸೆಳೆಯಲಿದೆಯೇ ‘ನೋಟಾ’?

KannadaprabhaNewsNetwork | Updated : Apr 22 2024, 12:14 PM IST

ಸಾರಾಂಶ

ಕರಾವಳಿಯಲ್ಲಿ ನೋಟಾ ಅಭಿಯಾನ ಹೊಸ ಮಗ್ಗುಲಿಗೆ ಹೊರಳಿದೆ. ಮಾತ್ರವಲ್ಲದೆ, ಇದೇ ಮೊದಲ ಬಾರಿಗೆ ರಾಜಕೀಯ ಪಕ್ಷಗಳನ್ನು ಗಂಭೀರ ಆಲೋಚನೆಗೆ ತಳ್ಳಿರುವುದಂತೂ ಸತ್ಯ.

ಸಂದೀಪ್‌ ವಾಗ್ಲೆ

  ಮಂಗಳೂರು :  ಕರಾವಳಿಯಲ್ಲಿ ಇದೇ ಮೊದಲ ಬಾರಿಗೆ ಪರಿಸರ ವಿಚಾರ ಹೊರತುಪಡಿಸಿ ಭಿನ್ನ ವಿಷಯದ ‘ನೋಟಾ’ ಅಭಿಯಾನಕ್ಕೆ ಈ ಲೋಕಸಭಾ ಚುನಾವಣೆ ಸಾಕ್ಷಿಯಾಗುತ್ತಿದೆ.

ಈ ಹಿಂದಿನ ಚುನಾವಣೆಗಳಲ್ಲಿ ಕೇವಲ ಪರಿಸರಕ್ಕೆ ಪೂರಕವಾದ ವಿಚಾರಗಳ ಕುರಿತು ನೋಟಾ ಅಭಿಯಾನಗಳು ನಡೆದಿದ್ದವು. ಆದರೆ ಈ ಬಾರಿ ಪರಿಸರ ವಿಚಾರ ಹಿಂದೆ ಸರಿದಿದ್ದು, ಇತರ ವಿಷಯಗಳು, ಆಯಾಮಗಳು ಮುನ್ನೆಲೆಗೆ ಬಂದು ‘ನೋಟಾ’ ಭಿನ್ನವಾಗಿ ಗಮನ ಸೆಳೆದಿದೆ. ಈ ಕಾರಣದಿಂದಲೇ ಗಂಭೀರ ರಾಜಕೀಯ ಲೆಕ್ಕಾಚಾರಗಳಿಗೂ ಎಡೆಯಾಗಿದೆ.

ಜಿಲ್ಲೆಯಲ್ಲಿ ನೋಟಾ ಅಭಿಯಾನ ಆರಂಭಿಸಿದ್ದು ಪರಿಸರ ಹೋರಾಟಗಾರರು. ನೋಟಾ ಓಟಿನ ಬಗ್ಗೆ ಬಹಳಷ್ಟು ಮಂದಿಗೆ ಈ ಅಭಿಯಾನವು ಅರಿವು ಮೂಡಿಸಿತ್ತು. ಅದೆಲ್ಲವನ್ನು ಮೀರಿ ಕೆಲವು ಸಂಘಟನೆಗಳು ನೋಟಾ ಅಭಿಯಾನ ಕೈಗೆತ್ತಿಕೊಂಡಿದ್ದು, ಅಭಿಯಾನ ಹೊಸ ಆಯಾಮಕ್ಕೆ ಹೊರಳಿದೆ.28 ಸಾವಿರ ನೋಟಾ ಬಿದ್ದಿತ್ತು:

ದ.ಕ.ದಲ್ಲಿ 2014 ಹಾಗೂ 2019ರ ಲೋಕಸಭೆ ಚುನಾವಣೆ ಮಾತ್ರವಲ್ಲದೆ, 2017ರ ಜಿಲ್ಲಾ ಪಂಚಾಯ್ತಿ ಚುನಾವಣೆ ಸಂದರ್ಭವೂ ಎತ್ತಿನಹೊಳೆ ಯೋಜನೆ ವಿರುದ್ಧದ ಹೋರಾಟಗಾರರು ನೋಟಾ ಅಭಿಯಾನ ಕೈಗೊಂಡಿದ್ದರು. ಜಿಲ್ಲಾದ್ಯಂತ ತಿರುಗಾಟ ನಡೆಸಿ ಎತ್ತಿನಹೊಳೆ ಜಾರಿಯಾದರೆ ಜಿಲ್ಲೆಯ ಜೀವನದಿಗಳು ಬತ್ತಿಹೋಗಿ ಬರಗಾಲದ ಪರಿಸ್ಥಿತಿ ತಾಂಡವವಾಡಲಿದೆ ಎಂದು ಎಚ್ಚರಿಕೆಯ ಗಂಟೆ ಮೊಳಗಿಸಿ ನೋಟಾಗೆ ಓಟು ಒತ್ತುವಂತೆ ಮತದಾರರ ಓಲೈಸಿದ್ದರು. ಎರಡೂ ಲೋಕಸಭೆ ಚುನಾವಣೆಗಳಲ್ಲಿ 7 ಸಾವಿರ ಆಸುಪಾಸಿನ ಓಟುಗಳು ನೋಟಾಕ್ಕೆ ಸಿಕ್ಕಿತ್ತು. ಆದರೆ 2017ರ ಜಿ.ಪಂ. ಚುನಾವಣೆಯಲ್ಲಿ ಬರೋಬ್ಬರಿ 28,817 ಮತಗಳು ಚಲಾವಣೆಯಾಗಿ ನೋಟಾ ಬಲ ಸಾಬೀತಾಗಿತ್ತು.

ನೋಟಾ ಓಟಿನ ಬೇಟೆ:

ಈ ಬಾರಿ ಕೆಲ ಹೋರಾಟಗಾರರು ನೋಟಾ ಓಟಿನ ಬೇಟೆಗೆ ಇಳಿದಿದ್ದಾರೆ. ಮತದಾರರನ್ನು ಸೆಳೆಯುವ ನಿಟ್ಟಿನಲ್ಲಿ ವ್ಯಾಪಕ ಪ್ರಚಾರ ಕಾರ್ಯವನ್ನೂ ನಡೆಸುತ್ತಿದ್ದಾರೆ.ಪಕ್ಷಗಳಿಗೆ ತಲೆಬಿಸಿ:

ಇದುವರೆಗಿನ ಚುನಾವಣೆಗಳಲ್ಲಿ ನೋಟಾ ಅಭಿಯಾನದ ಕುರಿತು ರಾಜಕೀಯ ಪಕ್ಷಗಳು ತಲೆ ಕೆಡಿಸಿಕೊಂಡದ್ದೇ ಇಲ್ಲ. ಪರಿಸರ ಹೋರಾಟಗಾರರು ಎತ್ತಿನಹೊಳೆ ಯೋಜನೆ ಮುಂದಿಟ್ಟು ಜನಪ್ರತಿನಿಧಿಗಳು, ಸರ್ಕಾರಗಳ ಹುಳುಕಿನ ಬಗ್ಗೆ ಎಗ್ಗಿಲ್ಲದೆ ಮಾತನಾಡಿದರೂ ‘ಕ್ಯಾರೇ’ ಎನ್ನುತ್ತಿರಲಿಲ್ಲ. ತನ್ನ ಪಾಡಿಗೆ ನೋಟಾ ಅಭಿಯಾನ ನಡೆಯುತ್ತಿತ್ತು.

ಆದರೆ ಇದೇ ಮೊದಲ ಬಾರಿ ಪ್ರಬಲ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಈ ಬಾರಿಯ ನೋಟಾ ಅಭಿಯಾನದಿಂದ ತಲೆಬಿಸಿ ಆರಂಭವಾಗಿದ್ದು, ರಾಜಕೀಯ ಲೆಕ್ಕಾಚಾರ ಜೋರಾಗಿಯೇ ನಡೆಯುತ್ತಿದೆ. ಯಾವ ಪಕ್ಷದ ಎಷ್ಟು ಓಟುಗಳನ್ನು ನೋಟಾ ಸೆಳೆಯಲಿದೆ ಎನ್ನುವುದೇ ಈ ಲೆಕ್ಕಾಚಾರದ ಹೂರಣ.

ಏನೇ ಇರಲಿ, ಕರಾವಳಿಯಲ್ಲಿ ನೋಟಾ ಅಭಿಯಾನ ಹೊಸ ಮಗ್ಗುಲಿಗೆ ಹೊರಳಿದೆ. ಮಾತ್ರವಲ್ಲದೆ, ಇದೇ ಮೊದಲ ಬಾರಿಗೆ ರಾಜಕೀಯ ಪಕ್ಷಗಳನ್ನು ಗಂಭೀರ ಆಲೋಚನೆಗೆ ತಳ್ಳಿರುವುದಂತೂ ಸತ್ಯ. 

ಪರಿಸರ ಹೋರಾಟ ನಿರಂತರ

ಈ ನಡುವೆ, ಹಿಂದಿನ ಚುನಾವಣೆಗಳಂತೆ ಈ ಬಾರಿಯೂ ಪರಿಸರಕ್ಕೆ ಸಂಬಂಧಿಸಿದ ನೋಟಾ ಅಭಿಯಾನ ನಡೆಯುತ್ತಿದೆ. ‘ನಮ್ಮದು ಕೇವಲ ಪರಿಸರ ಕಾಳಜಿಯ ಹೋರಾಟ. ಹಿಂದಿನ ಚುನಾವಣೆಗಳಂತೆ ಈ ಬಾರಿಯೂ ನೋಟಾ ಅಥವಾ ಚುನಾವಣಾ ಬಹಿಷ್ಕಾರ ಮಾಡಲು ಪರಿಸರ ಸಂಘಟನೆಗಳಿಗೆ ಕರೆ ನೀಡಿದ್ದೇವೆ. ಕರಾವಳಿ ಹೊರತುಪಡಿಸಿ ಬೇರೆ ಜಿಲ್ಲೆಗಳಲ್ಲೂ ಅಲ್ಲಿನ ಪರಿಸರ ವಿಚಾರಗಳಿಗೆ ಸಂಬಂಧಿಸಿ ನೋಟಾ ಅಭಿಯಾನ ನಡೆಯುತ್ತಿದೆ. ಇದನ್ನು ಮುಂದುವರಿಸಲಿದ್ದೇವೆ’ ಎಂದು ಪರಿಸರ ಹೋರಾಟಗಾರ ದಿನೇಶ್‌ ಹೊಳ್ಳ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ಈ ನಡುವೆ, ಹಿಂದಿನ ಚುನಾವಣೆಗಳಂತೆ ಈ ಬಾರಿಯೂ ಪರಿಸರಕ್ಕೆ ಸಂಬಂಧಿಸಿದ ನೋಟಾ ಅಭಿಯಾನ ನಡೆಯುತ್ತಿದೆ. ‘ನಮ್ಮದು ಕೇವಲ ಪರಿಸರ ಕಾಳಜಿಯ ಹೋರಾಟ. ಹಿಂದಿನ ಚುನಾವಣೆಗಳಂತೆ ಈ ಬಾರಿಯೂ ನೋಟಾ ಅಥವಾ ಚುನಾವಣಾ ಬಹಿಷ್ಕಾರ ಮಾಡಲು ಪರಿಸರ ಸಂಘಟನೆಗಳಿಗೆ ಕರೆ ನೀಡಿದ್ದೇವೆ. ಕರಾವಳಿ ಹೊರತುಪಡಿಸಿ ಬೇರೆ ಜಿಲ್ಲೆಗಳಲ್ಲೂ ಅಲ್ಲಿನ ಪರಿಸರ ವಿಚಾರಗಳಿಗೆ ಸಂಬಂಧಿಸಿ ನೋಟಾ ಅಭಿಯಾನ ನಡೆಯುತ್ತಿದೆ. ಇದನ್ನು ಮುಂದುವರಿಸಲಿದ್ದೇವೆ’ ಎಂದು ಪರಿಸರ ಹೋರಾಟಗಾರ ದಿನೇಶ್‌ ಹೊಳ್ಳ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

Share this article