ಮೇ 31ಕ್ಕೆ ಬಂದು ವಿಚಾರಣೆ ಎದುರಿಸುವೆ: ಪ್ರಜ್ವಲ್‌ ರೇವಣ್ಣ

KannadaprabhaNewsNetwork |  
Published : May 28, 2024, 01:03 AM ISTUpdated : May 28, 2024, 05:26 AM IST
Prajwal Revanna education Qualification

ಸಾರಾಂಶ

  ಪ್ರಜ್ವಲ್ ರೇವಣ್ಣ ಸೋಮವಾರ ದಿಢೀರ್‌ ಪ್ರತ್ಯಕ್ಷವಾಗಿದ್ದು, ಸ್ವದೇಶಕ್ಕೆ ಇದೇ ತಿಂಗಳ 31ರಂದು ಶುಕ್ರವಾರ ಮರಳಿ ಬಂದು ವಿಶೇಷ ತನಿಖಾ ದಳದ (ಎಸ್‌ಐಟಿ) ಮುಂದೆ ಸ್ವಯಂ ಶರಣಾಗುವುದಾಗಿ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

 ಬೆಂಗಳೂರು :  ತಮ್ಮ ವಿರುದ್ಧದ ಲೈಂಗಿಕ ಹಗರಣ ಹೊರಬಂದ ಬಳಿಕ ಒಂದು ತಿಂಗಳಿಂದ ವಿದೇಶದಲ್ಲಿ ಅಜ್ಞಾತವಾಗಿದ್ದ ಹಾಸನ ಜೆಡಿಎಸ್‌ ಸಂಸದ ಪ್ರಜ್ವಲ್ ರೇವಣ್ಣ ಸೋಮವಾರ ದಿಢೀರ್‌ ಪ್ರತ್ಯಕ್ಷವಾಗಿದ್ದು, ಸ್ವದೇಶಕ್ಕೆ ಇದೇ ತಿಂಗಳ 31ರಂದು ಶುಕ್ರವಾರ ಮರಳಿ ಬಂದು ವಿಶೇಷ ತನಿಖಾ ದಳದ (ಎಸ್‌ಐಟಿ) ಮುಂದೆ ಸ್ವಯಂ ಶರಣಾಗುವುದಾಗಿ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಎಸ್‌ಐಟಿ ಕೋರಿಕೆ ಮೇರೆಗೆ ರಾಜತಾಂತ್ರಿಕ ಪಾಸ್ ಪೋರ್ಟ್ ರದ್ದತಿಗೆ ಪ್ರಜ್ವಲ್ ಅವರಿಗೆ ವಿದೇಶಾಂಗ ಇಲಾಖೆ ನೋಟಿಸ್ ಜಾರಿ ಮಾಡಿತ್ತು. ಎಸ್‌ಐಟಿ ಮುಂದೆ ಹಾಜರಾಗದಿದ್ದರೆ ಕುಟುಂಬದಿಂದ ಹೊರ ಹಾಕುವುದಾಗಿ ಅವರ ತಾತ ಮತ್ತು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಖಡಕ್‌ ಬಹಿರಂಗ ಪತ್ರ ಬರೆದಿದ್ದರು. ಈ ಬೆಳ‍ವಣಿಗೆ ಬೆನ್ನಲ್ಲೇ ಎಸ್‌ಐಟಿ ಮುಂದೆ ಸ್ವಯಂ ಹಾಜರಾಗುವುದಾಗಿ ಸೋಮವಾರ ಅಜ್ಞಾತ ಸ್ಥಳದಿಂದ ಬಿಡುಗಡೆಗೊಂಡ 2.57 ನಿಮಿಷದ ವಿಡಿಯೋದಲ್ಲಿ ಪ್ರಜ್ವಲ್‌ ತಿಳಿಸಿದ್ದಾರೆ.

ತಮ್ಮ ಮೇಲೆ ಕೇಳಿ ಬಂದಿರುವ ಅತ್ಯಾಚಾರ ಆರೋಪಗಳನ್ನು ನಿರಾಕರಿಸಿರುವ ಪ್ರಜ್ವಲ್, ತಮ್ಮ ರಾಜಕೀಯ ಬೆಳವಣಿಗೆ ಸಹಿಸದೆ ಕೆಲವು ವಿರೋಧಿಗಳು ರಾಜಕೀಯ ಪಿತೂರಿ ನಡೆಸಿದ್ದಾರೆ. ತಾವು ತಪ್ಪು ಮಾಡಿಲ್ಲ ಎಂದಿರುವ ಅವರು, ತಮ್ಮ ಕುಟುಂಬದವರು ಹಾಗೂ ಕಾರ್ಯಕರ್ತರಿಗೆ ಸಂಪರ್ಕ ತಪ್ಪಿದ್ದಕ್ಕೆ ಕ್ಷಮೆ ಸಹ ಕೋರಿದ್ದಾರೆ.

ಪ್ರಜ್ವಲ್ ಮಾತಿನ ಸಂಪೂರ್ಣ ವಿವರ:  ಎಲ್ಲರಿಗೂ ನಮಸ್ಕಾರ. ಮೊದಲನೆಯದಾಗಿ ನನ್ನ ತಂದೆ-ತಾಯಿಗೆ, ತಾತ (ದೇವೇಗೌಡರು) ಹಾಗೂ ಕುಮಾರಣ್ಣನಿಗೆ ಮತ್ತು ನಾಡಿನ ಜನತೆ ಹಾಗೂ ಎಲ್ಲ ನನ್ನ ಕಾರ್ಯಕರ್ತರಿಗೆ ಕ್ಷಮಾಪಣೆ ಕೇಳುತ್ತೇನೆ. ನಾನು ಫಾರಿನ್‌ನಲ್ಲಿ ಎಲ್ಲಿದ್ದೀನಿ ಎಂಬ ಸರಿಯಾದ ಮಾಹಿತಿ ಕೊಡದೆ ತಪ್ಪಾಗಿದೆ. ಇ‍ವತ್ತು ನಾನು ಮಾಹಿತಿ ಕೊಡಲು ಮುಂದೆ ಬಂದಿದ್ದೇನೆ. ಮೇ 26ರಂದು ಚುನಾವಣೆ ನಡೆದ ಸಂದರ್ಭದಲ್ಲಿ ಆ ದಿನ ನನ್ನ ಮೇಲೆ ಯಾವುದೇ ರೀತಿ ಪ್ರಕರಣವಾಗಲಿ, ದೂರಾಗಲಿ ಇರಲಿಲ್ಲ. ಎಸ್‌ಐಟಿ ಸಹ ರಚನೆಯಾಗಿರಲಿಲ್ಲ.

ನಾನು ವಿದೇಶಕ್ಕೆ ಹೋಗುವುದು ಸಹ ಪೂರ್ವನಿಗದಿಯಾಗಿತ್ತು. ಹಾಗಾಗಿ ನಾನು ವಿದೇಶಕ್ಕೆ ತೆರಳಿದೆ. ವಿದೇಶಕ್ಕೆ ಹೋಗಿ ಮೂರ್ನಾಲ್ಕು ದಿನಗಳ ಬಳಿಕ ಯೂಟ್ಯೂಬ್ ನೋಡುವಂತಹ ಸಂದರ್ಭದಲ್ಲಿ ಹಾಗೂ ನ್ಯೂಸ್ ಚಾನೆಲ್ ನೋಡಿದಾಗ ನನಗೆ ಎಸ್‌ಐಟಿ ಮಾಹಿತಿ ಸಿಕ್ಕಿತು. ನನಗೆ ಮಾಹಿತಿ ದೊರಕಿದ ಕೂಡಲೇ ಎಸ್‌ಐಟಿ ಸಹ ನೋಟಿಸ್‌ ನೀಡಿತ್ತು. ಆ ನೋಟಿಸ್‌ಗೆ ನನ್ನ ಎಕ್ಸ್ ಖಾತೆ ಹಾಗೂ ವಕೀಲರ ಮೂಲಕ ಏಳು ದಿನಗಳ ಸಮಯಾವಕಾಶ ಕೇಳಿದ್ದೆ. ಇದಾದ ಮಾರನೆ ದಿನವೇ ಕಾಂಗ್ರೆಸ್ಸಿನ ಹಿರಿಯ ನಾಯಕರಾದ ರಾಹುಲ್‌ ಗಾಂಧಿ ಸೇರಿ ಎಲ್ಲ ನಾಯಕರುಗಳು ಬಹಿರಂಗ ವೇದಿಕೆಗಳಲ್ಲಿ ಈ ವಿಚಾರಗಳನ್ನು ಪ್ರಚಾರ ಮಾಡಲು ಶುರು ಮಾಡಿದರು. ಚರ್ಚೆ ಮಾಡಲಾರಂಭಿಸಿದರು.

ಡಿಪ್ರೆಷನ್‌ ಹೋಗಿ ಏಕಾಂತವಾಗಿದ್ದೆ:

ನನ್ನ ವಿರುದ್ಧ ಒಂದು ರಾಜಕೀಯ ಪಿತೂರಿಯನ್ನು ಮಾಡಲಾರಂಭಿಸಿದರು. ಇದನ್ನೆಲ್ಲ ನೋಡಿದಾಗ ನಾನು ಡಿಪ್ರೆಷನ್‌ಗೆ ಹೋಗುವಂತಾಯಿತು. ನಾನು ಐಸೋಲೇಷನ್‌ಗೆ ಹೋಗುವ ಪರಿಸ್ಥಿತಿ ಬಂತು. ಹಾಗಾಗಿ ನಾನು ಮೊದಲನೆಯದಾಗಿ ನಿಮಗೆಲ್ಲ ಕ್ಷಮೆ ಕೋರಿದ್ದು. ದಯವಿಟ್ಟು ಕ್ಷಮಿಸಿ. ಅದಾದ ನಂತರ ಹಾಸನದಲ್ಲಿ ಕೂಡ ಕೆಲವು ಶಕ್ತಿಗಳು ಒಟ್ಟಾಗಿ ಸೇರಿಕೊಂಡು ನನ್ನ ವಿರುದ್ಧ ರಾಜಕೀಯ ಪಿತೂರಿ ಮಾಡಿದವು. ರಾಜಕೀಯದಲ್ಲಿ ನನ್ನ ಬೆಳವಣಿಗೆ ಸಹಿಸದೆ ನನ್ನನ್ನು ಕುಗ್ಗಿಸಲು ಯಾವ್ಯಾವುದೋ ಪ್ರಕರಣಗಳಲ್ಲಿ ಅವರೆಲ್ಲರೂ ಭಾಗಿಯಾಗುವ ಕೆಲಸ ಮಾಡಿದ್ದಾರೆ. ಹಾಗಾಗಿ ಇವೆಲ್ಲ ನೋಡಿದಾಗ ನನಗೆ ಆಘಾತವಾಯಿತು. ಹಾಗಾಗಿ ನಾನೇ ಇವೆಲ್ಲವುದರಿಂದ ಚೂರು ದೂರ ಇದ್ದೆ.

ಖಂಡಿತಾ ಮೇ 31ರಂದು ಬರುವೆ:

ಯಾರೂ ಕೂಡ ತಪ್ಪು ತಿಳಿಯುವುದು ಬೇಡ. ನಾನೇ ಖುದ್ದಾಗಿ ಮೇ 31ರಂದು ಶುಕ್ರವಾರ ಬೆಳಗ್ಗೆ 10 ಗಂಟೆಗೆ ಎಸ್‌ಐಟಿ ಮುಂದೆ ಹಾಜರಾಗುತ್ತೇನೆ. ತನಿಖೆಗೆ ಸಂಪೂರ್ಣ ಸಹಕಾರ ಕೊಡುತ್ತೇನೆ. ಎಲ್ಲ ಆರೋಪಗಳಿಗೆ ಉತ್ತರ ಕೊಡುತ್ತೇನೆ. ನ್ಯಾಯಾಲಯದ ಮೇಲೆ ನನಗೆ ನಂಬಿಕೆ ಇದೆ. ಖಂಡಿತವಾಗಿಯೂ ಸುಳ್ಳು ಪ್ರಕರಣಗಳಿಂದ ಆಚೆ ಬರಲು ನ್ಯಾಯಾಲಯದ ಮೂಲಕವೇ ಮನವಿ ಮಾಡಿಕೊಳ್ಳುತ್ತೇನೆ. ನನ್ನ ಮೇಲೆ ಜನರ ಆಶೀರ್ವಾದ, ದೇವರ ಆಶೀರ್ವಾದ ಹಾಗೂ ಕುಟುಂಬದ ಆಶೀರ್ವಾದ ಇರಲಿ ಎಂದು ಬೇಡಿಕೊಳ್ಳುತ್ತೇನೆ.

ಏನಿದು ಪ್ರಕರಣ?:

ಲೋಕಸಭಾ ಚುನಾವಣೆ ಮತದಾನಕ್ಕೂ ಮುನ್ನ ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಅವರಿಗೆ ಸಂಬಂಧಿಸಿದ್ದು ಎನ್ನಲಾದ ಆಶ್ಲೀಲ ವಿಡಿಯೋಗಳು ತುಂಬಿದ್ದ ಪೆನ್‌ಡ್ರೈವ್‌ ಬಹಿರಂಗವಾಗಿತ್ತು. ಬಳಿಕ ಏಪ್ರಿಲ್‌ 26ರಂದು ಮತದಾನ ಮುಗಿಸಿ ರಾತ್ರೋರಾತ್ರಿ ಜರ್ಮನಿಗೆ ಸಂಸದರು ತೆರಳಿದ್ದರು. ಆನಂತರ ಅವರ ವಿರುದ್ಧ ಅತ್ಯಾಚಾರ ಪ್ರಕರಣಗಳು ದಾಖಲಾಗಿ ತನಿಖೆಗೆ ಎಸ್‌ಐಟಿ ರಚನೆಯಾಯಿತು.

ಇನ್ನು ಲೈಂಗಿಕ ಪ್ರಕರಣದ ಸಂತ್ರಸ್ತೆಯನ್ನು ಅಪಹರಿಸಿದ ಪ್ರಕರಣದಲ್ಲಿ ಸಂಸದರ ತಂದೆ ಹಾಗೂ ಮಾಜಿ ಸಚಿವ ಎಚ್‌.ಡಿ.ರೇವಣ್ಣ ಸಹ ಜೈಲು ಸೇರುವಂತಾಯಿತು. ಪ್ರಜ್ವಲ್‌ ವಿರುದ್ಧ ಜನಾಕ್ರೋಶ ವ್ಯಕ್ತವಾದ ಬೆನ್ನಲ್ಲೇ ಎಸ್‌ಐಟಿ ತನಿಖೆಗೆ ಸಹಕರಿಸುವಂತೆ ಮೊಮ್ಮಗನಿಗೆ (ಪ್ರಜ್ವಲ್‌) ಮಾಜಿ ಪ್ರಧಾನ ಮಂತ್ರಿ ಎಚ್‌.ಡಿ.ದೇವೇಗೌಡರು ಪತ್ರ ಬರೆದು ತಾಕೀತು ಮಾಡಿದ್ದರು. ಇನ್ನೊಂದೆಡೆ ಅವರ ಪಾಸ್‌ಪೋರ್ಟ್ ರದ್ದತಿ ಸಂಬಂಧ ವಿದೇಶಾಂಗ ಇಲಾಖೆ ನೋಟಿಸ್ ಸಹ ನೀಡಿತ್ತು.

PREV

Recommended Stories

3ನೇ ಮಹಡಿಯಿಂದ ಆಯತಪ್ಪಿಬಿದ್ದು ಪಿಯು ವಿದ್ಯಾರ್ಥಿನಿ ಸಾವು
ಜೈಲೊಳಗೆ ಡ್ರಗ್ಸ್ ಸಾಗಿಸಲುಯತ್ನ: ವಾರ್ಡನ್ ಬಂಧನ