ಬಜೆಟ್‌ನಲ್ಲಿ ಕಂಪ್ಲಿಯ ಜ್ವಲಂತ ಸಮಸ್ಯೆಗೆ ಸಿಗುವುದೇ ಪರಿಹಾರ?

KannadaprabhaNewsNetwork |  
Published : Mar 07, 2025, 12:46 AM IST
1. ಫೋಟೋ ತುಂಗಭದ್ರಾ ಜಲಾಶಯದಿಂದ ಅಧಿಕ ಪ್ರಮಾಣದಲ್ಲಿ ನೀರು ಹರಿಬಿಟ್ಟಾಗ ಮುಳುಗಡೆಗೊಂಡ ಕಂಪ್ಲಿ-ಗಂಗಾವತಿ ಸಂಪರ್ಕ ಸೇತುವೆಯ ದೃಶ್ಯ.2. ಫೋಟೋ  ನಿರ್ಮಾಣ ಹಂತದಲ್ಲಿರುವ ಕಂಪ್ಲಿಯ ಮಿನಿ ವಿಧಾನಸೌಧ ಕಟ್ಟಡದ ದೃಶ್ಯ | Kannada Prabha

ಸಾರಾಂಶ

ಸಕ್ಕರೆ ಕಾರ್ಖಾನೆ ಪುನಾರಂಭ, ಕಂಪ್ಲಿ ಸೇತುವೆ ನಿರ್ಮಾಣ, ತಾಲೂಕು ಕಚೇರಿಗಳ ಆರಂಭ ಸೇರಿದಂತೆ ಅನೇಕ ಜ್ವಲಂತ ಸಮಸ್ಯೆಗಳಿಗೆ ಹಲವು ವರ್ಷಗಳಿಂದ ಪರಿಹಾರ ದೊರಕದೇ ಕಂಪ್ಲಿ ಅಭಿವೃದ್ಧಿಯಾಗುವುದಾದರೂ ಯಾವಾಗ ಎಂಬ ಯಕ್ಷ ಪ್ರಶ್ನೆ ತಾಲೂಕಿನ ಜನತೆಯಲ್ಲಿ ಮೂಡಿದೆ.

ಹಿಂದುಳಿದ ತಾಲೂಕಿಗೆ ಬೇಕಿಗೆ ವಿಶೇಷ ಅನುದಾನ । ಜಿಲ್ಲಾ ಉಸ್ತುವಾರಿ ಸಚಿವರ ಮನವಿಗೆ ಮನ್ನಣೆ ಸಿಗಲಿಬಿ.ಎಚ್.ಎಂ. ಅಮರನಾಥ ಶಾಸ್ತ್ರಿ

ಕನ್ನಡಪ್ರಭ ವಾರ್ತೆ ಕಂಪ್ಲಿ

ಸಕ್ಕರೆ ಕಾರ್ಖಾನೆ ಪುನಾರಂಭ, ಕಂಪ್ಲಿ ಸೇತುವೆ ನಿರ್ಮಾಣ, ತಾಲೂಕು ಕಚೇರಿಗಳ ಆರಂಭ ಸೇರಿದಂತೆ ಅನೇಕ ಜ್ವಲಂತ ಸಮಸ್ಯೆಗಳಿಗೆ ಹಲವು ವರ್ಷಗಳಿಂದ ಪರಿಹಾರ ದೊರಕದೇ ಕಂಪ್ಲಿ ಅಭಿವೃದ್ಧಿಯಾಗುವುದಾದರೂ ಯಾವಾಗ ಎಂಬ ಯಕ್ಷ ಪ್ರಶ್ನೆ ತಾಲೂಕಿನ ಜನತೆಯಲ್ಲಿ ಮೂಡಿದೆ. ಅಲ್ಲದೇ ಇಂದು ಮಂಡನೆಗೊಳ್ಳಲಿರುವ ಬಜೆಟ್‌ನಲ್ಲಿ ತಾಲೂಕಿನ ಅಭಿವೃದ್ಧಿಗೆ ಎಷ್ಟೆಲ್ಲಾ ಅನುದಾನ ಬಿಡುಗಡೆಗೊಳ್ಳಬಹುದು ಎಂಬ ಕುತೂಹಲ ಹೆಚ್ಚಾಗಿದೆ.

ಹೌದು. ಕಂಪ್ಲಿ ತಾಲೂಕು ಕೇಂದ್ರವಾದಾಗಿನಿಂದ ಈವರೆಗೂ ಸರಿಯಾದ ಅಭಿವೃದ್ಧಿ ಕಾರ್ಯ ಜರುಗದೆ, ಅತ್ತ ಅಭಿವೃದ್ಧಿ ಹೊಂದಿದ ಪಟ್ಟಣವೂ ಅಲ್ಲ ಇತ್ತ ಹಿಂದುಳಿದ ಹಳ್ಳಿಯೂ ಅಲ್ಲ ಎಂಬಂತಿದೆ. 2018ರಲ್ಲಿ ಕಂಪ್ಲಿ ನೂತನ ತಾಲೂಕಾಗಿ ಘೋಷಣೆಯಾಗಿದ್ದು ಇದೀಗ 7 ವರ್ಷಗಳು ಗತಿಸಿದರು, ವಿವಿಧ ಇಲಾಖೆಗಳ ತಾಲೂಕು ಕಚೇರಿಗಳು ಹಾಗೂ ಸಮರ್ಪಕ ಅಭಿವೃದ್ಧಿಯೂ ಕಾಣದೆ ಹಿಂದುಳಿದ ತಾಲೂಕಿನಂತಿರುವುದು ದುರಂತವೇ ಸರಿ.

ಸಕ್ಕರೆ ಕಾರ್ಖಾನೆ?:

ಈ ಹಿಂದೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸರ್ಕಾರಿ ಒಡೆತನದಲ್ಲಿದ್ದ 176 ಎಕರೆಯ ಇಲ್ಲಿನ ಸಕ್ಕರೆ ಕಾರ್ಖಾನೆಯನ್ನು ಖಾಸಗಿ ಒಡೆತನಕ್ಕೆ ನೀಡಿ ಬಿಜೆಪಿ ಸರ್ಕಾರ ರೈತರಿಗೆ ಅನ್ಯಾಯ ಮಾಡುತ್ತಿದೆ ಎಂದು ಹಲವು ಬಾರಿ ಶಾಸಕ ಜೆ.ಎನ್. ಗಣೇಶ್ ಆರೋಪಿಸಿದ್ದರು. ಅಲ್ಲದೇ ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕಾರ್ಖಾನೆಯನ್ನು ಸರ್ಕಾರಿ ಅಥವಾ ಸಹಕಾರಿ ಒಡೆತನದಲ್ಲಿ ಆರಂಭಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಶಾಸಕ ಜೆ.ಎನ್. ಗಣೇಶ್ ಭರವಸೆ ನೀಡಿದ್ದರಲ್ಲದೆ ಬಿಜೆಪಿ ಸರ್ಕಾರ ವಿರುದ್ಧ ಆಕ್ರೋಶ ಹೊರ ಹಾಕಿದ್ದರು. ಇದೀಗ ಕಾಂಗ್ರೆಸ್ ಅಧಿಕಾರಕ್ಕೆ ಬಂದು 2 ವರ್ಷಗಳು ಸಮೀಪಸುತ್ತಿದ್ದರೂ ಶಾಸಕರು ಕಾರ್ಖಾನೆ ಹೆಸರನ್ನೂ ಎತ್ತದ ಗೋಜಿಗೆ ತೆರಳದಿರುವುದು ಸರಿಯಲ್ಲ. ಇನ್ನು ಈ ಬಾರಿಯ ಬಜೆಟ್‌ನಲ್ಲಿ ಏನಾದರು ಕಾರ್ಖಾನೆ ವಿಚಾರ ಪ್ರಸ್ತಾಪವಾಗಬಹುದಾ ರೈತರ ಬಹುದಿನದ ಬೇಡಿಕೆ ಈಡೇರಬಹುದಾ ಎಂದು ಕಾದು ನೋಡಬೇಕಿದೆ.

ನೂತನ ಸೇತುವೆ:

ತುಂಗಭದ್ರಾ ನದಿಯಿಂದ ಅಧಿಕ ನೀರು ಹರಿಬಿಟ್ಟಾಗ ಕಂಪ್ಲಿ- ಗಂಗಾವತಿ ಸಂಪರ್ಕ ಸೇತುವೆ ಮುಳುಗಡೆಗೊಂಡು ಸಂಚಾರ ಸ್ಥಗಿತಗೊಳ್ಳುವುದರಿಂದ ಈ ಭಾಗದ ಜನತೆಗೆ ತೀರ ಸಮಸ್ಯೆಯಾಗುತ್ತದೆ. ಹೀಗಾಗಿ ನೂತನ ಸೇತುವೆ ನಿರ್ಮಾಣವಾಗಬೇಕು ಎಂಬುದು ಬಹು ವರ್ಷಗಳ ಬೇಡಿಕೆಯಾಗಿತ್ತು. ಈವರೆಗಿನ ಎಲ್ಲ ಪಕ್ಷಗಳ ಸಚಿವರು, ಶಾಸಕರು ಸೇತುವೆ ನಿರ್ಮಾಣದ ಭರವಸೆ ನೀಡುವುದರಲ್ಲಿಯೇ ಸೀಮಿತರಾಗಿದ್ದಾರೆಯೇ ಹೊರೆತು ಯಾವ ಸರ್ಕಾರವೂ ಸೇತುವೆ ನಿರ್ಮಾಣದಲ್ಲಿ ದಿಟ್ಟ ನಿರ್ಧಾರಕ್ಕೆ ಮುಂದಾಗದೆ ಇರುವುದರಿಂದ ಸೇತುವೆ ನಿರ್ಮಾಣ ಕನಸಾಗಿಯೇ ಉಳಿದಿದೆ.

ತಾಲೂಕು ಅಭಿವೃದ್ಧಿ:

ತಾಲೂಕಿಗೆ ಅಗತ್ಯವಾದ ಕಚೇರಿ ತೆರೆಯುವುದು, ತಾಲೂಕು ಕ್ರೀಡಾಂಗಣ, ಬಸ್ ಡಿಪೋ, ವಿವಿಧೆಡೆ ಏತ ನೀರಾವರಿ ಕಲ್ಪಿಸುವುದು ಸೇರಿದಂತೆ ತಾಲೂಕಿನ ವಿವಿಧ ಜ್ವಲಂತ ಸಮಸ್ಯೆಗಳಿಗೆ ಇನ್ನೂ ಪರಿಹಾರ ದೊರೆತಿಲ್ಲ.

ಬಳ್ಳಾರಿ ಜಿಲ್ಲೆಗೆ ₹415 ಕೋಟಿ ವಿಶೇಷ ಅನುದಾನ ಕೋರಿ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದಾರೆ. ಇನ್ನು ಈ ಮನವಿಯಲ್ಲಿ ಕಂಪ್ಲಿ ಸೇತುವೆ ನಿರ್ಮಾಣಕ್ಕೆ ₹80 ಕೋಟಿ, ಜಿಲ್ಲಾ ಕೃಷಿ ತರಬೇತಿ ಕೇಂದ್ರ ಹಾಗೂ ಬೀಜ ಉತ್ಪಾದನಾ ಸಂಶೋಧನೆ ಕೇಂದ್ರಕ್ಕೆ ₹100 ಕೋಟಿ, ಕುರುಗೋಡು ತಾಲೂಕಿನ ಬೈಲೂರಿನಲ್ಲಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ನಿರ್ಮಾಣಕ್ಕೆ ₹100 ಕೋಟಿ ನೀಡುವಂತೆ ಒತ್ತಾಯಿಸಿರುವ ಕುರಿತು ವರದಿಯಾಗಿದ್ದು, ಬಜೆಟ್ ನಲ್ಲಿ ಸಚಿವರ ಮನವಿಗೆ ಮನ್ನಣೆ ಸಿಗುವುದೇ ಹಾಗೂ ಕಂಪ್ಲಿ ತಾಲೂಕು ಅಭಿವೃದ್ಧಿಗೆ ಏನೆಲ್ಲಾ ಅನುದಾನಗಳು ದೊರೆಯಲಿವೆ ಎನ್ನುವುದನ್ನ ಕಾದು ನೋಡಬೇಕಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಣಸೆ, ಹಲಸು, ನೇರಳೆಗೆ ಮಂಡಳಿ ರಚಿಸಿ: ದೇವೇಗೌಡ
ಗುಮ್ಮ ಬಂದ ಗುಮ್ಮ, ಮಕ್ಕಳಿಗೆ ಹೊಡೆಯೋ ಗುಮ್ಮ!