ತೊಗರಿಗೆ ರಾಜ್ಯ ಸರ್ಕಾರದ ಬೆಂಬಲ ಸಿಗುವುದೇ?

KannadaprabhaNewsNetwork |  
Published : Jan 17, 2025, 12:45 AM IST
ಕಲಾದಗಿ ರೈತ ಲಕ್ಷ್ಮಣಗೌಡ ಪಾಟೀಲ ತಮ್ಮ ಹೊಲದಲ್ಲಿ ಬೆಳೆದ ತೊಗರಿ ಬೆಳೆ ರಾಶಿ ಮಾಡಲು ಸಜ್ಜಾಗಿರುವುದು. | Kannada Prabha

ಸಾರಾಂಶ

ಕೇಂದ್ರದಿಂದ ಪ್ರತಿ ಕ್ವಿಂಟಲ್‌ ತೊಗರಿಗೆ ₹7,550 ಹಾಗೂ ಕಡಲೆ ಬೆಳೆಗೆ ₹5,650 ನಿಗದಿ ಮಾಡಲಾಗಿದೆ. ಆದರೆ ರಾಜ್ಯ ಸರ್ಕಾರದಿಂದ ಯಾವುದೇ ಪ್ರೋತ್ಸಾಹ ಧನ ನಿಗದಿಯಾಗದಿರುವುದು ರೈತರ ಅಸಮಾಧಾನಕ್ಕೆ ಕಾರಣವಾಗಿದೆ.

ಚಂದ್ರಶೇಖರ ಶಾರದಾಳ

ಕನ್ನಡಪ್ರಭ ವಾರ್ತೆ ಕಲಾದಗಿಪ್ರಮುಖ ವಾಣಿಜ್ಯ ಬೆಳೆ ತೊಗರಿ ಸೇರಿದಂತೆ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನೀಡಿ ಖರೀದಿಸಲು ಖರೀದಿ ಕೆಂದ್ರ ತೆರೆಯಲಾಗಿದ್ದು, ಕೇಂದ್ರದಿಂದ ಪ್ರತಿ ಕ್ವಿಂಟಲ್‌ ತೊಗರಿಗೆ ₹7,550 ಹಾಗೂ ಕಡಲೆ ಬೆಳೆಗೆ ₹5,650 ನಿಗದಿ ಮಾಡಲಾಗಿದೆ. ಆದರೆ ರಾಜ್ಯ ಸರ್ಕಾರದಿಂದ ಯಾವುದೇ ಪ್ರೋತ್ಸಾಹ ಧನ ನಿಗದಿಯಾಗದಿರುವುದು ರೈತರ ಅಸಮಾಧಾನಕ್ಕೆ ಕಾರಣವಾಗಿದೆ.

ಈ ಹಿಂದೆ ಸಿದ್ದರಾಮಯ್ಯನವರ ಸರ್ಕಾರವಿದ್ದಾಗ ಕೇಂದ್ರದ ಬೆಂಬಲ ಬೆಲೆ ಜೊತೆಗೆ ರಾಜ್ಯ ಸರ್ಕಾರ ₹750 ಪ್ರೋತ್ಸಾಹ ಧನ ನೀಡಿ ಖರೀದಿ ಮಾಡಿತ್ತು. ಈ ವರ್ಷ ಕೇಂದ್ರ ಸರ್ಕಾರ ಕೇವಲ 30 ಲಕ್ಷ ಕ್ವಿಂಟಲ್‌ ಖರೀದಿಗೆ ಮಾತ್ರ ಅನುಮತಿ ನೀಡಿದೆ. ರಾಜ್ಯ ಸರ್ಕಾರದಿಂದ ಈ ವರ್ಷ ಕನಿಷ್ಠ ₹1500 ಪ್ರೋತ್ಸಾಹ ಧನ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದ ರೈತರಿಗೆ ನಿರಾಸೆಯಾಗಿದೆ. ಲಕ್ಷಾಂತರ ಹೇಕ್ಟರ್‌ ಭೂಮಿಯಲ್ಲಿ ಬೆಳೆದ ತೊಗರಿ ಬೆಳೆಯು ರೋಗಗಳು ಹಾಗೂ ಹವಾಮಾನ ವೈಪರಿತ್ಯಕ್ಕೆ ಸಂಪೂರ್ಣ ನಲುಗಿ ನಾಶವಾಗಿದೆ. ರಾಜ್ಯ ಸರ್ಕಾರವಾದರೂ ತಮ್ಮ ಸಹಾಯಕ್ಕೆ ನಿಲ್ಲಬಹುದೆಂದು ಅನ್ನುಕೊಂಡಿದ್ದ ರೈತರಿಗೆ ನಿರಾಸೆಯಾಗಿದೆ.

ಕಳೆದ 2-3 ತಿಂಗಳ ಹಿಂದೆ ತೊಗರಿ ಮಾರುಕಟ್ಟೆ ಬೆಲೆ ಕ್ವಿಂಟಲ್‌ಗೆ ₹11 ಸಾವಿರ ರವರೆಗೂ ಇತ್ತು. ಆದರೆ ಈಗ ಕೇಂದ್ರ ಸರ್ಕಾರ ₹7,550 ಬೆಂಬಲ ಬೆಲೆ ನಿಗದಿ ಮಾಡಿರುವುದರಿಂದ ಉತ್ತಮ ಗುಣಮಟ್ಟದ ತೊಗರಿಗೆ ಅಂದಾಜು ₹8,000 ಸಮತೋಲನ ಕಾಯ್ದುಕೊಳ್ಳಲಾಗಿದೆ. ರಾಜ್ಯ ಸರ್ಕಾರ ₹1,500 ಪ್ರೋತ್ಸಾಹ ಧನ ನಿಗದಿಮಾಡಿದರೆ ₹10 ಸಾವಿರ ರವರೆಗೆ ದರ ನಿಗದಿಯಾದ್ರೆ ಅನುಕೂಲವಾಗುತ್ತದೆ ಎನ್ನುತ್ತಾರೆ ರೈತರು .

ಈ ಹಂಗಾಮಿನಲ್ಲಿ ಮಳೆ ಹಾಗೂ ರೋಗಗಳಿಂದಾಗಿ ಇಳುವರಿ ಪ್ರಮಾಣವು ಕಡಿಮೆಯಾಗಿದೆ. ಇತ್ತ ಕಿರಾಣಿ ಅಂಗಡಿಗಳಲ್ಲಿ ತೊಗರಿ ಬೇಳೆ ಬೆಲೆ ಕೆಜಿಗೆ ₹200 ವರೆಗೂ ಆಗಿರುವುದಕ್ಕೆ ಗ್ರಾಹಕರೂ ಕೂಡ ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ. ಕೂಡಲೇ ರೈತರಿಗೆ ಅನ್ಯಾಯವಾಗದಂತೆ ಬೆಂಬಲ ಬೆಲೆ ಘೊಷಿಸಬೇಕೆಂದು ತೊಗರಿಬೆಳೆ ಬೆಳೆಯುವ ರೈತರು ಸರ್ಕಾರಕ್ಕೆ ಆಗ್ರಹಿಸುತ್ತಿದ್ದಾರೆ.

ನಾವು ರೈತಪರ ಎಂದು ಹೇಳುತ್ತಾ ಅಧಿಕಾರಕ್ಕೆ ಬಂದ ಸರ್ಕಾರಗಳು ರೈತರನ್ನು ಕಡೆಗಣಿಸುತ್ತಿವೆ. ರೈತರ ಬಗ್ಗೆ ಕಿಂಚಿತ್ತು ಕಾಳಜಿ ತೋರುತ್ತಿಲ್ಲ. ರೈತರು ತಮ್ಮ ಜಮೀನುಗಳಿಗೆ ಮಾಡಿರುವ ಖರ್ಚಿನಷ್ಟು ಹಣ ಬರದಿದ್ದರೆ ರೈತ ಸಾಲದ ಸುಳಿಯಲ್ಲಿ ಸಿಲುಕಬೇಕಾಗುತ್ತದೆ. ಕೂಡಲೇ ಸರ್ಕಾರಗಳು ಹೆಚ್ಚಿನ ಬೆಂಬಲ ಬೆಲೆ ಹಾಗೂ ಪ್ರೋತ್ಸಾಹ ಧನ ಕೊಟ್ಟು ರೈತರ ಹಿತ ಕಾಪಾಡಬೇಕು. ಇಲ್ಲದಿದ್ದರೆ ಎಲ್ಲ ರೈತಪರ ಸಂಘಟನೆಗಳು ಸೇರಿ ರಾಜ್ಯಾದ್ಯಂತ ಪ್ರತಿಭಟನೆ ಮಾಡಬೇಕಾಗುತ್ತದೆ.

ಚಂದ್ರಶೇಖರ ಹಡಪದ, ಭಾರತೀಯ ಕಿಸಾನ ಸಂಘ ತಾಲೂಕು ಅಧ್ಯಕ್ಷರು ಬಾಗಲಕೋಟೆ

ಸರ್ಕಾರದ ಕಣ್ಣಾ ಮುಚ್ಚಾಲೆ ಆಟದಲ್ಲಿ ರೈತರು ಬಡವಾಗುತ್ತಿದ್ದಾರೆ. ರೈತರ ಪರವಾಗಿ ವಿಪಕ್ಷಗಳು ನಿಲ್ಲಬೇಕು. ಹವಾಮಾನದ ವೈಪರಿತ್ಯದಿಂದಾಗಿ ಉತ್ತಮ ಫಸಲು ಬರದೇ ಕಷ್ಟದ ಪರಿಸ್ಥಿಯಲ್ಲಿರುವ ರೈತರಿಗೆ ಸರ್ಕಾರದಿಂದ ಸಹಾಯ ಸಿಗುತ್ತದೆ ಎಂದು ಆಶಾಭಾವನೆಯಲ್ಲಿದ್ದೇವೆ. ನಮ್ಮ ಮನವಿಗೆ ಕೃಷಿ ಸಚಿವರೂ ಕೂಡಲೇ ಸ್ಪಂದಿಸಲಿ.

ಲಕ್ಷ್ಮಣಗೌಡ ಪಾಟೀಲ, ಶಾರದಾಳ ಗ್ರಾಮದ ರೈತ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಾಷಣ ಮಾಡಿಕೊಂಡು ಹೋದವನಲ್ಲ, ಪಕ್ಷದ ಎಲ್ಲಾ ಕೆಲ್ಸ ಮಾಡಿದ್ದೇನೆ: ಡಿಕೆಶಿ
ರಾಗಾ-ವೈಷ್ಣವ್‌ ಉದ್ಯೋಗ ಸೃಷ್ಟಿ ‘ಕ್ರೆಡಿಟ್‌ ವಾರ್’