ಕನ್ನಡಪ್ರಭ ವಾರ್ತೆ ಚನ್ನಗಿರಿ
ರಾಜಕಾರಣದಲ್ಲಿ ಅಧಿಕಾರ ಬರುತ್ತೆ ಹೋಗುತ್ತೆ ಚುನಾವಣೆ ಸಮಯದಲ್ಲಿ ಟೀಕೆ-ಟಿಪ್ಪಣಿ ಸಹಜ ನನ್ನ ಮತ್ತು ಮಾಜಿ ಶಾಸಕ ವಿರೂಪಾಕ್ಷಪ್ಪ ಸಂಬಂಧ ಗುರು ಶಿಷ್ಯರ ಬಾಂಧವ್ಯ. ರಾಜಕಾರಣ ಮತ್ತು ಕ್ಷೇತ್ರದ ಅಭಿವೃದ್ಧಿ ಬಗ್ಗೆ ಅವರು ನನಗೆ ಮಾರ್ಗದರ್ಶನ ನೀಡುವ ಗುರುಗಳು ಎಂದು ಶಾಸಕ ಬಸವರಾಜ ವಿ.ಶಿವಗಂಗಾ ಬಣ್ಣಿಸಿದರು.ತಾಲೂಕಿನ ಪಾಂಡೋಮಟ್ಟಿ ಗ್ರಾಮದಲ್ಲಿನ ವಿರಕ್ತ ಮಠದಲ್ಲಿ ಭಾನುವಾರ ಏರ್ಪಡಿಸಿದ್ದ ಲಿಂಗೈಕ್ಯ ಶ್ರೀ ಸಂಗಮನಾಥ ಸ್ವಾಮೀಜಿ 62ನೇ ವರ್ಷದ ಸ್ಮರಣೋತ್ಸವ ಹಾಗೂ ಲಿಂಗೈಕ್ಯ ಶ್ರೀ ಚನ್ನಬಸವ ಸ್ವಾಮೀಜಿ 17ನೇ ವರ್ಷದ ಸ್ಮರಣೋತ್ಸವ ಮತ್ತು ಬಸವ ತತ್ವ ಸಮ್ಮೇಳನದಲ್ಲಿ ಮಾತನಾಡಿ ರಾಜ್ಯ ಬರಗಾಲ ಪರಿಸ್ಥಿತಿ ಎದುರಿಸುತ್ತಿದ್ದು ತಾಲೂಕಿನ ಅಡಿಕೆ ಬೆಳೆಗಾರ ರೈತರು ತಮ್ಮ ತೋಟಗಳ ಉಳಿಸಿಕೊಳ್ಳಲು ಹೋರಾಡುತ್ತಿದ್ದು ಇದನ್ನು ಗಮನಿಸಿ ವಿಧಾನಸಭೆ ಅಧಿವೇಶನ ಬದಲು ತಾಲೂಕಿನ ಜನರಿಗೆ ನೀರು ತರುವ ಉದ್ದೇಶದಿಂದ ಸಂಬಂಧಿಸಿದ ಅಧಿಕಾರಿಗಳು ಮತ್ತು ಸಚಿವರ ಕಚೇರಿಗಳಿಗೆ ತೆರಳಿ ಪರಿಹಾರ ಕಲ್ಪಿಸಲು ಯತ್ನಿಸುತ್ತೇದ್ದೇನೆ. ಮುಂದಿನ 2-3 ದಿನಗಳಲ್ಲಿ ತಾಲೂಕಿನ ರೈತರಿಗೆ ನೀರು ಸಿಗುವಂತೆ ಮಾಡುತ್ತೇನೆ ಎಂದರು. ವಿರೂಪಾಕ್ಷಪ್ಪರ ಸಲಹೆಯಂತೆ ಭದ್ರಾ ನಾಲೆಯಲ್ಲಿ 200ರಿಂದ 300ಕ್ಯೂಸೆಕ್ ನೀರು ಹೆಚ್ಚುವರಿ ಬಿಡಿಸಿ ಕೊನೆಯ ಭಾಗದ ರೈತರು ಸೇರಿದಂತೆ ಎಲ್ಲಾ ರೈತರಿಗೂ ನೀರು ಸಿಗುವಂತೆ ಮಾಡಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ ಎಂದರು.
ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಮಾತನಾಡಿ ಅಧಿಕಾರ ಇದ್ದಾಗ ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಕ್ಷೇತ್ರದ ಶಾಸಕ ಶಿವಗಂಗಾ ಬಸವರಾಜರ ಮೇಲಿದೆ. ನೀರಾವರಿ ಸಚಿವ ಡಿ.ಕೆ.ಶಿವಕುಮಾರ್ ಆತ್ಮೀಯರಾದ ಶಾಸಕ ಬಸವರಾಜ್ ಮಾತುಕತೆ ನಡೆಸಿ ಉಬ್ರಾಣಿ ಏತ ನೀರಾವರಿ ಯೋಜನೆಗೆಯ ಕೆರೆಗಳ ತುಂಬಿಸಲು ಅವರಿಂದ ಅನುಮತಿ ಪಡೆದು ನೀರು ಬಿಡಿಸಬೇಕು. ನಾನು ಶಾಸಕನಾಗಿದ್ದಾಗ ಬರಗಾಲದ ಸಂದರ್ಭದಲ್ಲಿ ಜೂನ್ ತಿಂಗಳವರೆಗೂ ಏತ ನೀರಾವರಿ ಯೋಜನೆ ನೀರು ಬಿಡಿಸಿದ್ದೆ ಎಂದರು.ಮಾಜಿ ಶಾಸಕ ಮಹಿಮಾ ಜೆ.ಪಟೇಲ್ ಮಾತನಾಡಿ ನನ್ನ ಪ್ರಕಾರ ಸೇವೆ ಪ್ರಮುಖವಾಗಿ ಇಟ್ಟುಕೊಳ್ಳುವುದು ರಾಜಕಾರಣ. ಸೇವೆ ಹೊರತುಪಡಿಸಿ ಬೇರೆ ಉದ್ದೇಶವಿಟ್ಟುಕೊಂಡರೆ ಅದನ್ನು ದಂಧೆ ಎನ್ನಬಹುದು, ಚುನಾವಣೆಗಳಲ್ಲಿ ಗೆಲುವು, ಸೋಲು ಮುಖ್ಯವಲ್ಲ ಜನರೊಂದಿಗೆ ನಿಕಟ ಸಂಪರ್ಕ ಹೊಂದಿ ಜನರಿಗೆ ಪ್ರೀತಿ ಹಂಚುವುದು ರಾಜಕಾರಣ ಎಂದರು. ರಾಜಕಾರಣಿಗಳು ಸಂತೋಷ, ಸಮಾಧಾನ, ಶಾಂತಿಯಿಂದ ಇದ್ದಾಗ ಮಾತ್ರ ಜನರಿಗೆ ಪ್ರೀತಿ ಹಂಚಲು ಸಾಧ್ಯ ಯಾವುದೇ ಸರ್ಕಾರಗಳು ಉಚಿತವಾಗಿ ಏನನ್ನೇ ನೀಡದರೂ ಅದು ಜನರ ದಾರಿತಪ್ಪಿಸುವ ಒಂದು ಮಾರ್ಗವಾಗಿದೆ ಎಂದರು.ಸಮಾರಂಭದ ಅಧ್ಯಕ್ಷತೆ ಶ್ರೀಮಠದ ಡಾ.ಗುರುಬಸವ ಸ್ವಾಮೀಜಿ ಭಕ್ತ ಸಮೂಹಕ್ಕೆ ಆಶೀರ್ವಚನ ನೀಡಿದರು. ಬಾಲ್ಕಿಯ ಹಿರೇಮಠ ಸಂಸ್ಥಾನದ ನಾಡೋಜ ಡಾ.ಬಸವಲಿಂಗ ಪಟ್ಟದ ದೇವರು ಸಾನ್ನಿಧ್ಯ ವಹಿಸಿದ್ದರು. ಪಂಚಮ ಶಿವಲಿಂಗೇಶ್ವರ ಸ್ವಾಮೀಜಿಗಳಿದ್ದರು.
ಮುಖ್ಯ ಅತಿಥಿಗಳಾಗಿ ಡಾ.ಧನಂಜಯ್ ಸರ್ಜಿ, ಕಾಂಗ್ರೆಸ್ ಮುಖಂಡ ಹೊದಿಗೆರೆ ರಮೇಶ್, ರಾಘವೇಂದ್ರ ತಾಯ್ನಾಡ್, ಹನುಮಲಿ ಷಣ್ಮುಖಪ್ಪ, ಎಂ.ಬಿ.ನಾಗರಾಜ್, ನಟರಾಜ್ ಬೂದಾಳ್ ಸೇರಿ ಮುಂತಾದವರಿದ್ದರು.ರೈತರಿಗೆ ತೊಂದರೆಯಾಗದಂತೆ ಶಾಸಕರು ಗಮನಹರಿಸಲಿ
ಫೆ.16ರಿಂದ ಭದ್ರಾ ಡ್ಯಾಂನಿಂದ ನಾಲೆಗಳಿಗೆ ನೀರು ಹರಿಸುತ್ತಿದ್ದು ರೈತರು ಪಂಪ್ ಸೆಟ್ ಮೂಲಕ ತಮ್ಮ ತೋಟ, ಗದ್ದೆಗಳಿಗೆ ನೀರು ಹರಿಸಿಕೊಳ್ಳುತ್ತಿದ್ದಾರೆ ಇವರಿಗೆ ತೊಂದರೆಯಾಗದಂತೆ ಗಮನ ಹರಿಸಬೇಕಾದ ಜವಾಬ್ದಾರಿ ಶಾಸಕರ ಮೇಲಿದೆ. ಜೂನ್ ವರೆಗೆ ಮಳೆ ಬರುವುದಿಲ್ಲ ನಾಲೆಯ ಅಚ್ಚುಕಟ್ಟು ಪ್ರದೇಶದ ರೈತರು ಸುಮಾರು 200ರಿಂದ 300ಕ್ಯೂಸೆಕ್ ನೀರು ತಮ್ಮ ಬೆಳೆಗಳಿಗೆ ಬಳಸಬಹುದು ಈ ನೀರನ್ನು ಡ್ಯಾಂನಿಂದ ಹೆಚ್ಚುವರಿಯಾಗಿ ಬಿಡಿಸಲು ಶಾಸಕರು ಗಮನ ಹರಿಸಬೇಕು ಎಂದು ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಸಲಹೆ ನೀಡಿದರು.