ರಾಮನಗರ: ತಾಲೂಕಿನ ಕೈಲಾಂಚ ಹೋಬಳಿ ಸೇರಿದಂತೆ ಹಲವು ಭಾಗಗಳ ರೈತರ ಪಹಣಿಯಲ್ಲಿ ನೈಸ್ ಹೆಸರು ಬರುತ್ತಿದ್ದು, ಅದನ್ನು ತೆಗೆದು ಹಾಕುವ ಸಂಬಂಧ ಮುಖ್ಯಮಂತ್ರಿ ಮತ್ತು ಕಂದಾಯ ಸಚಿವರೊಂದಿಗೆ ಚರ್ಚೆ ನಡೆಸುವುದಾಗಿ ಶಾಸಕ ಇಕ್ಬಾಲ್ ಹುಸೇನ್ ಭರವಸೆ ನೀಡಿದರು.
ಕೈಲಾಂಚ ಹೋಬಳಿಯ ವಿಭೂತಿಕೆರೆಯಲ್ಲಿ 131 ಎಕರೆ, ಲಕ್ಕೋಜನಹಳ್ಳಿ 152, ಶಿವನಹಳ್ಳಿ ಗ್ರಾಮದಲ್ಲಿ 58 ಎಕರೆ ಕೃಷಿ ಭೂಮಿ ಪಹಣಿ ನೈಸ್ ಹೆಸರಿನಲ್ಲಿ ಬರುತ್ತಿದೆ. ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರರಿಗೆ ಆ ಭೂಮಿ ಹಸ್ತಾಂತರ ಮಾಡಲಾಗಿತ್ತು. ಈಗ ರೈತರು ಅನುಭೋಗದಲ್ಲಿದ್ದರು ಮಾರಾಟ ಮಾಡಲು ಆಗುತ್ತಿಲ್ಲ. ಪಹಣಿಯಲ್ಲಿ ನೈಸ್ ಎಂದು ದಾಖಲಾಗಿರುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಂದಾಯ ಸಚಿವ ಕೃಷ್ಣಭೈರೇಗೌಡ ಅವರೊಂದಿಗೆ ಚರ್ಚೆ ನಡೆಸಿ ರೈತರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುತ್ತೇನೆ ಎಂದು ಹೇಳಿದರು.
ಕಂದಾಯ ತೆಗೆದುಕೊಳ್ಳುವುದಷ್ಟೆ ಗ್ರಾಪಂ ಅಧಿಕಾರಿ ಮತ್ತು ಸಿಬ್ಬಂದಿಗಳ ಕರ್ತವ್ಯ ಆಗಬಾರದು. ಜನರಿಗೆ ಸರ್ಕಾರದ ಸವಲತ್ತು ತಲುಪಿಸುವುದು ನಿಮ್ಮ ಕೆಲಸ. ಜನರಿಗೆ ಅನುಕೂಲವಾಗುವ ನರೇಗಾ ಯೋಜನೆ ಸದ್ಭಳಕೆ ಮಾಡಬಹುದಿತ್ತು, ಆದರೆ, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಆಸಕ್ತಿ ತೋರಿಲ್ಲ. ಕನಿಷ್ಠ 6 ಕೋಟಿ ರು.ಗಳಷ್ಟು ಖರ್ಚು ಮಾಡಲು ಅವಕಾಶವಿದೆ. ಮೊದಲು ಜನರಿಗೆ ಸಹಾಯ ಮಾಡುವುದನ್ನು ಕಲಿಯಿರಿ ಎಂದರು.ಗ್ರಾಮೀಣ ಮಕ್ಕಳಿಗೆ ಒಂದೇ ಸೂರಿನಡಿ ಹಲವು ಸವಲತ್ತು ಕೊಟ್ಟು ಗುಣಮಟ್ಟದ ಶಿಕ್ಷಣ ನೀಡಬೇಕೆಂದು ಕರ್ನಾಟಕ ಪಬ್ಲಿಕ್ ಶಾಲೆಯನ್ನು ಬನ್ನಿಕುಪ್ಪೆ ಗ್ರಾಮದಲ್ಲಿ ನಿರ್ಮಿಸಲಾಗುತ್ತಿದೆ. ವಿಭೂತಿಕೆರೆ ಮತ್ತು ಬನ್ನಿಕುಪ್ಪೆ ಗ್ರಾಪಂ ವ್ಯಾಪ್ತಿಯ ಎಲ್ಲಾ ಶಾಲೆಗಳು ಈ ಹೈಟೆಕ್ ಶಾಲೆಗೆ ವಿಲೀನವಾಗಲಿವೆ. ತೆಂಗಿನಕಲ್ಲು, ಅವ್ವೇರಹಳ್ಳಿ ಕೆರೆ ತುಂಬಿಸುವ ಯೋಜನೆ ನಡೆಯುತ್ತಿದೆ.
ಸರ್ಕಾರ ಬಂದು ಎರಡು ವರ್ಷ ಆಗುತ್ತಿದ್ದು, ಸರ್ಕಾರದಿಂದ ಈ ಗ್ರಾಪಂ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ 2 ಕೋಟಿ ಅನುದಾನ ಬಂದಿದೆ. ಜಕ್ಕನಹಳ್ಳಿ ಕೆರೆ 50 ಲಕ್ಷದಲ್ಲಿ ಅಭಿವೃದ್ಧಿ ಕಾರ್ಯ ನಡೆಯುತ್ತಿದ್ದು, ಈಗ 3 ಕೋಟಿ ವೆಚ್ಚದ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಲಾಗುತ್ತಿದೆ ಎಂದು ಇಕ್ಬಾಲ್ ಹುಸೇನ್ ಹೇಳಿದರು.
ಪ್ರತಿಪಕ್ಷದವರು ಶಾಸಕರ ಅಭಿವೃದ್ಧಿ ಕಾರ್ಯಗಳನ್ನು ಸಹಿಸದೆ ಇಲ್ಲಸಲ್ಲದ ಟೀಕೆಗಳಲ್ಲಿ ತೊಡಗಿದ್ದಾರೆ. ಜಾತಿ ಧರ್ಮಗಳ ವಿಷ ಬೀಜ ಬಿತ್ತುತ್ತಿದ್ದಾರೆ ಎಂದು ಹೇಳಿದರು.
ಕೋಟ್............
-ಇಕ್ಬಾಲ್ ಹುಸೇನ್ , ಶಾಸಕರು, ರಾಮನಗರ ಕ್ಷೇತ್ರ
ರಾಮನಗರ ತಾಲೂಕಿನ ಕೈಲಾಂಚ ಹೋಬಳಿಯ ಬನ್ನಿಕುಪ್ಪೆ (ಕೈ) ಗ್ರಾಮ ಪಂಚಾಯಿತಿ ಆವರಣದಲ್ಲಿ ನಡೆದ ಜನಸಂಪರ್ಕ ಕಾರ್ಯಕ್ರಮವನ್ನು ಶಾಸಕ ಇಕ್ಬಾಲ್ ಹುಸೇನ್ ಉದ್ಘಾಟಿಸಿದರು.