ವಿರಾಜಪೇಟೆ ಪಟ್ಟಣದ ಶಿಥಿಲ ಕಟ್ಟಡಗಳಿಗೆ ಮೋಕ್ಷ ಎಂದು?

KannadaprabhaNewsNetwork | Published : Jul 4, 2024 1:07 AM

ಸಾರಾಂಶ

ಪಟ್ಟಣದಲ್ಲಿ ಶತಮಾನಗಳಿಂದ ಉಳಿದುಕೊಂಡು ಶಿಥಿಲ ಅವಸ್ಥೆಗೆ ತಲುಪಿದ ಕಟ್ಟಡಗಳ ಸುರಕ್ಷತೆಯ ಬಗ್ಗೆ ಪರಿಶೀಲನೆ ನಡೆಸಿ ಅಪಾಯಕಾರಿ ಆಗಿದ್ದಲ್ಲಿ ವ್ಯಾಪಾರ ನಡೆಸದಂತೆ ಕ್ರಮ ತೆಗೆದುಕೊಳ್ಳಬೇಕಾದ ಅಗತ್ಯ ಪುರಸಭೆ ಎದುರು ಸವಾಲಾಗಿ ನಿಂತಿದೆ. ಇಂತಹ ಕಟ್ಟಡಗಳಲ್ಲಿ ಅಂಗಡಿ ಮಳಿಗೆಗಳನ್ನು ನಡೆಸುತ್ತಿರುವವರು ಕಟ್ಟಡದ ಮಾಲೀಕರಲ್ಲಿ ಭದ್ರತೆಯ ಬಗ್ಗೆ ಪ್ರಶ್ನೆಗಳನ್ನು ನಾಗರಿಕರು ಮುಂದಿಡುತ್ತಿದ್ದಾರೆ.

ಮಂಜುನಾಥ್ ಟಿ.ಎನ್‌.

ಕನ್ನಡಪ್ರಭವಾರ್ತೆ ವಿರಾಜಪೇಟೆ

ಗೋಣಿಕೊಪ್ಪ ಪಟ್ಟಣದ ಹೃದಯ ಬಾಗದ ಶಿಥಿಲ ಕಟ್ಟಡ ಕುಸಿದ ಬೆಳವಣಿಗೆಯ ಹಿನ್ನೆಲೆ ವಿರಾಜಪೇಟೆ ಪಟ್ಟಣದಲ್ಲಿರುವ ಹಳೆಯ ಕಟ್ಟಡಗಳ ಸುರಕ್ಷತೆಯ ಬಗ್ಗೆ ಜನರಲ್ಲಿ ಚಿಂತೆಯಾಗಿ ಕಾಡುತ್ತಿದೆ. ಇಂತಹ ಕಟ್ಟಡಗಳಲ್ಲಿ ಅಂಗಡಿ ಮಳಿಗೆಗಳನ್ನು ನಡೆಸುತ್ತಿರುವವರು ಕಟ್ಟಡದ ಮಾಲೀಕರಲ್ಲಿ ಭದ್ರತೆಯ ಬಗ್ಗೆ ಪ್ರಶ್ನೆಗಳನ್ನು ಮುಂದಿಡುತ್ತಿದ್ದಾರೆ.

ಹೀಗೆ ಪಟ್ಟಣದಲ್ಲಿ ಶತಮಾನಗಳಿಂದ ಉಳಿದುಕೊಂಡು ಶಿಥಿಲ ಅವಸ್ಥೆಗೆ ತಲುಪಿದ ಕಟ್ಟಡಗಳ ಸುರಕ್ಷತೆಯ ಬಗ್ಗೆ ಪರಿಶೀಲನೆ ನಡೆಸಿ ಅಪಾಯಕಾರಿ ಆಗಿದ್ದಲ್ಲಿ ವ್ಯಾಪಾರ ನಡೆಸದಂತೆ ಕ್ರಮ ತೆಗೆದುಕೊಳ್ಳಬೇಕಾದ ಅಗತ್ಯ ಪುರಸಭೆ ಎದುರು ಸವಾಲಾಗಿ ನಿಂತಿದೆ. ಪಟ್ಟಣ ಒಂದೆಡೆ ವೇಗವಾಗಿ ಅಭಿವೃದ್ಧಿಯ ಕಡೆ ತೆರೆದುಕೊಳ್ಳುತ್ತಾ ಬಹುಮಹಡಿಯ ಕಟ್ಟಡಗಳ ನಿರ್ಮಾಣವಾಗುತಿದೆ ಎಂಬುವುದು ಸಂತೋಷವಾದರೂ, ಉಳಿದಂತೆ ಇರುವ ಬಹುತೇಕ ಕಟ್ಟಡಗಳು ಶಿಥಿಲಾವಸ್ಥೆ ತಲುಪಿರುವುದಂತು ಖಂಡಿತ. ಈ ವಿಚಾರವನ್ನು ನಿರ್ಲಕ್ಷಿಸದೇ ತಕ್ಷಣ ಮುಂಜಾಗ್ರತೆ ವಹಿಸಬೇಕಾಗಿದೆ.

ಸಿದ್ದಾಪುರದಿಂದ ಕೇರಳಕ್ಕೆ ತೆರಳುವ ರಾಜ್ಯ ಹೆದ್ದಾರಿಯ ಪುರಸಭೆ ವ್ಯಾಪ್ತಿಯ ಎರಡು ಕಿ.ಮೀ. ಅಂತರದಲ್ಲಿ ಎರಡು ಕಡೆಗಳಲ್ಲಿ ಅರ್ಧಕ್ಕಿಂತ ಹೆಚ್ಚು ಕಟ್ಟಡಗಳು ಸಂಪೂರ್ಣವಾಗಿ ಶಿಥಿಲವಾಗಿರುವುದು ಕಂಡು ಬರುತ್ತದೆ.

ಈ ಕಟ್ಟಡಗಳು ಎಷ್ಟರ ಮಟ್ಟಿಗೆ ಸುರಕ್ಷತೆ ಕಾಪಾಡಿಕೊಂಡಿದೆ ಎಂಬುವುದನ್ನು ಪರಿಶೀಲಿಸದೆ ಇದ್ದಲ್ಲಿ ಮುಂದೆ ಬಹುದೊಡ್ಡ ಅನಾಹುತವ ಎದುರಿಸಬೇಕಾಗಬಹುದು. ಕೂಡಲೇ ಅಧಿಕಾರಿಗಳು, ಪಂಚಾಯಿತಿ ಈ ಬಗ್ಗೆ ದಿಟ್ಟ ನಿರ್ಧಾರ ತೆಗೆದುಕೊಂಡು ಪಟ್ಟಣದ ಸುಭಿಕ್ಷೆಯ ಕಡೆ ಕಾಳಜಿ ತೋರಬೇಕಾಗಿದೆ.ರಸ್ತೆ ಅಗಲೀಕರಣ:

ಪಂಜರುಪೇಟೆಯಿಂದ ದೊಡ್ಡೌಟಿ ಚೌಕಿಯವರೆಗೆ ರಸ್ತೆ ಅಗಲಿಕರಣವಾದ ಸಂಧರ್ಭದಲ್ಲಿ ಇದ್ದಂತಹ ಹಳೆಯ ಕಟ್ಟಡಗಳು ಇದೀಗ ದೊಡ್ಡದಾದ ಕಾಂಪ್ಲೆಕ್ಸ್ಗಳಾಗಿ ಮಾರ್ಪಟ್ಟಿವೆ.

ವಿರಾಜಪೇಟೆ ಯಲ್ಲಿ ಸುಮಾರು ೧೦೦ಕ್ಕೂ ಹೆಚ್ಚು ವಾಣಿಜ್ಯ ಮಳಿಗೆಗಳಿವೆ. ಅವುಗಳಲ್ಲಿ ಬಹುತೇಕ ಅಂದರೂ ೬೫ಕ್ಕೂ ಹೆಚ್ಚು ಮಳಿಗೆಗಳಿಗೆ ೫೦ ಹರೆಯ ಕಳೆದಿವೆ. ಇನ್ನು ಕೆಲವು ಕಟ್ಟಡ ಶತಮಾನ ಪೂರೈಸಿದೆ.

ವಿರಾಜಪೇಟೆ ಪುರಸಭೆಯ ಅಧೀನದಲ್ಲಿರುವ ತರಕಾರಿ ಮಾರುಕಟ್ಟೆಗೆ ಶತಮಾನ ದಾಟಿದೆ. ಮಾರುಕಟ್ಟೆ ಸಂಪೂರ್ಣವಾಗಿ ಸೋರುತ್ತಿದ್ದು ಕೆಲವೊಂದು ಕಡೆ ಕಳೆದ ಬಾರಿಯ ಸಾಮಾನ್ಯ ಮಳೆಗೆ ಕುಸಿತವಾಗಿದೆ. ಇನ್ನುಳಿದ ಭಾಗ ಇವತ್ತೊ ನಾಳೆಯೊ ಎನ್ನುವಂತಿದೆ.

ಈ ಭಾಗದಲ್ಲಿ ದಿನಂಪ್ರತಿ ಜನಸಂದಣಿ ಅಧಿಕವಾಗಿದ್ದು ಮಳೆ ಗಾಳಿಗೆ ಕಟ್ಟಡಗಳು ಕುಸಿತಗೊಂಡರೆ ಭಾರಿ ಪ್ರಮಾಣದ ಸಾವು ನೋವುಗಳು ಉಂಟಾಗುತ್ತವೆ.

ಖಾಸಗಿ ಬಸ್ ನಿಲ್ದಾಣ ದಲ್ಲಿರುವ ಖಾಸಗಿ ಕಟ್ಟಡವೊಂದು ಸಂಪೂರ್ಣವಾಗಿ ೭೫ಕ್ಕೂ ವರ್ಷ ಹಳೆಯದಾಗಿದೆ. ಇದರ ಗೋಡೆಗಳು ಮಣ್ಣಿನಿಂದ ರಚನೆಯಾಗಿದ್ದು, ಮೇಲ್ಛಾವಣಿಯಲ್ಲಿ ಮರದ ದಿಮ್ಮಿಗಳನ್ನು ಇಟ್ಟು ಪುನಃ ಎರಡನೇ ಬಾಗವಾಗಿ ಇನ್ನೊಂದು ಅಂತಸ್ತು ಕಟ್ಟಲ್ಪಟ್ಟಿದೆ.

ಈಗಾಗಲೆ ಮೇಲಂತಸ್ತಿನ ವಾಣಿಜ್ಯ ಮಳಿಗೆಗಳು, ಕಚೇರಿಗಳು ತೆರವಾಗಿದ್ದು ಸಂಪೂರ್ಣವಾಗಿ ವಾಣಿಜ್ಯ ಉಪಯೋಗಕ್ಕೆ ದೊರಕದಂತದಾಗಿದೆ. ಈ ವಾಣಿಜ್ಯ ಸಂಕೀರ್ಣದಲ್ಲಿ ಸುಮಾರು ೨೯ಕ್ಕೂ ಹೆಚ್ಚು ಮಳಿಗೆಗಳು ಕಾರ್ಯನಿರ್ವಹಿಸುತ್ತಿದ್ದು ನೂರಾರು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ.

ಇದರಲ್ಲಿ ಬಹುತೇಕ ದಿನಸಿ ವ್ಯಾಪಾರಿಗಳೆ ಹೆಚ್ಚಾಗಿರುವದರಿಂದ ಜನಸಂದಣಿ ಹೆಚ್ಚಾಗಿರುತ್ತದೆ.

ಇದರ ವಿರಾಜಪೇಟೆ ಪುರಸಭೆ, ಜಿಲ್ಲಾಡಳಿತ ಸಂಬಂಧ ಪಟ್ಟ ವಾಣಿಜ್ಯ ಸಂಕೀರ್ಣದ ಮಾಲಿಕರಿಗೆ ನೋಟಿಸ್ ನೀಡಿ ಕ್ರಮ ಕೈಗೊಂಡರೆ ಮುಂದಾಗುವ ಸಾವು ನೋವುಗಳನ್ನು ತಡೆಗಟ್ಟಬಹುದು ಎಂದು ಸಾರ್ವಜನಿಕರ ಆಗ್ರಹ.

----------------------

ಈಗಾಗಲೆ ಅಪಾಯದಲ್ಲಿರುವ ಎಲ್ಲಾ ಕಟ್ಟಡಗಳ ಮಾಲೀಕರಿಗೆ ನೋಟಿಸ್‌ ಜಾರಿ ಮಾಡಿದ್ದು, ಏನಾದರೂ ಅನಾಹುತ ಜರುಗಿದಲ್ಲಿ ನೀವೆ ಹೊಣೆಗಾರರು, ಆದುದರಿಂದ ನೀವೇ ಇದರ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ತಿಸಿದ್ದೇವೆ. ಇನ್ನೂ ಪುರಸಭೆ ಮಾಲಿಕತ್ವದ ತರಕಾರಿ ಮಾರುಕಟ್ಟೆ ಮಳಿಗೆಗಳಲ್ಲಿ ವ್ಯಾಪಾರ ಮಾಡುತ್ತಿರುವ ಮಾಲಿಕರಿಗೆ ಕೂಡ ನೋಟಿಸ್ ನೀಡಿದ್ದು ಮುಂದಿನ ದಿನಗಳಲ್ಲಿ ಅದನ್ನು ಒಡೆದು ಹಾಕಲಾಗುತ್ತದೆ. ಅ ಜಾಗದಲ್ಲಿ ಉತ್ತಮ ಮಾರುಕಟ್ಟೆ ನಿರ್ಮಾಣ ಮಾಡಲು ಸರ್ಕಾರಕ್ಕೆ ಡಿಪಿಆರ್ ತಯಾರಿಸಿ ಮನವಿ ಮಾಡಲಾಗಿದೆ.

ಮುಖ್ಯಾಧಿಕಾರಿ, ವಿರಾಜಪೇಟೆ ಪುರಸಭೆ.

---------------

ವಿರಾಜಪೇಟೆ ಪಟ್ಟಣದಲ್ಲಿ ಸಾಕಷ್ಟು ಕಟ್ಟಡಗಳು ಶಿಥಿಲಾವಸ್ಥೆಯಲ್ಲಿದ್ದು ಅವುಗಳನ್ನು ತೆರವು ಮಾಡಿಸಬೇಕು. ಖಾಸಗಿ ಬಸ್ ನಿಲ್ಲಾಣದಲ್ಲಿರುವ ಖಾಸಗಿ ಕಟ್ಟಡ ಹಾಗೂ ತರಕಾರಿ ಮಾರುಕಟ್ಟೆಯನ್ನು ಆದಷ್ಟು ಬೇಗ ತೆರವುಗೊಳಿಸಬೇಕು. ತಪ್ಪಿದಲ್ಲಿ ಮುಂದೆ ಭಾರಿ ಅನಾಹುತ ನೋಡಬೇಕಾಗಿದೆ.

-ಜೂಡಿವಾಜ್, ಖಾಸಗಿ ಬಸ್ ಏಜೆಂಟ್.

Share this article