ಹಾನಗಲ್ಲ ತಾಲೂಕಿನಲ್ಲಿ ಭತ್ತ ಬೆಳೆಯತ್ತ ಕೃಷಿಕರ ಚಿತ್ತ

KannadaprabhaNewsNetwork |  
Published : Feb 20, 2025, 12:47 AM IST
ಫೋಟೋ : 19ಎಚ್‌ಎನ್‌ಎಲ್6 | Kannada Prabha

ಸಾರಾಂಶ

ಈ ಬೇಸಿಗೆಯಲ್ಲಿ 2100ಕ್ಕೂ ಅಧಿಕ ಹೆಕ್ಟೇರ್‌ ಕೃಷಿ ಭೂಮಿಯಲ್ಲಿ ನಾಟಿ ಮಾಡುವ ನಿರೀಕ್ಷೆ ಇದೆ.

ಮಾರುತಿ ಶಿಡ್ಲಾಪೂರಹಾನಗಲ್ಲ: ತಾಲೂಕಿನಲ್ಲಿ ಮತ್ತೆ ಭತ್ತ ಬೆಳೆಯುವತ್ತ ಕೃಷಿಕರು ಚಿತ್ತ ಹರಿಸಿದ್ದು, ಬೇಸಿಗೆ ಭತ್ತದ ನಾಟಿ ಕಾರ್ಯ ಚುರುಕುಗೊಂಡಿದೆ. ತಾಲೂಕಿನಲ್ಲಿ 2100 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬೆಳೆಯುವ ನಿರೀಕ್ಷೆ ಹೊಂದಲಾಗಿದೆ.ಹಾನಗಲ್ಲ ತಾಲೂಕು ಭತ್ತದ ನಾಡು ಎಂಬ ಭಾವನೆ ಮೊದಲಿತ್ತು. ತಾಲೂಕಿನಲ್ಲಿ ಹತ್ತಾರು ಅಕ್ಕಿ ಗಿರಣಿಗಳಿದ್ದವು. ಕಳೆದ ಎರಡು ದಶಕಗಳ ಈಚೆಗೆ ಮಳೆಯ ಕಣ್ಣುಮುಚ್ಚಾಲೆ ಆಟದಿಂದಾಗಿ ಭತ್ತಕ್ಕೆ ನೀರು ಸಾಲದೆ ಗೋವಿನ ಜೋಳ ಬೆಳೆಯಲು ರೈತರು ಮುಂದಾದರು. ಅತಿವೃಷ್ಟಿ, ಅನಾವೃಷ್ಟಿಯ ಹೊಡೆತಕ್ಕೆ ರೈತರು ನಲುಗಿದರು. ಹೀಗಾಗಿ ಭತ್ತದ ಮಿಲ್ಲುಗಳು ಮುಚ್ಚಿ ಹೋಗಿದ್ದು, ಹೆಸರಿಗೆ ಒಂದೆರಡು ಮಿಲ್ಲುಗಳು ಮಾತ್ರ ಈಗ ಉಳಿದಿವೆ.ಬಾಳಂಬೀಡ ಏತ ನೀರಾವರಿ ಯೋಜನೆ ಹಾಗೂ ಹಿರೇಕಾಂಸಿ ಏತ ನೀರಾವರಿ, ಬಸಾಪುರ ಏತ ನೀರಾವರಿ ಸೇರಿದಂತೆ ಹಲವು ನೀರಾವರಿ ಸೌಲಭ್ಯಗಳು ತಾಲೂಕಿನ ಕೃಷಿಕರಲ್ಲಿ ಭತ್ತದ ಬೆಳೆ ಬೆಳೆಯಲು ಒಂದಷ್ಟು ಉತ್ಸಾಹವನ್ನು ಮೂಡಿಸಿವೆ. ಧರ್ಮಾ ಜಲಾಶಯದಲ್ಲಿ ನೀರು ತುಂಬಿದ್ದರೆ ಮಾತ್ರ ಇದರ ಅಚ್ಚುಕಟ್ಟು ಪ್ರದೇಶವಾದ ಹಾನಗಲ್ಲ ತಾಲೂಕಿನಲ್ಲಿ ಭತ್ತ ಬೆಳೆಯಲು ಮುಂದಾಗುತ್ತಾರೆ.

ಈ ಬಾರಿ ಧರ್ಮಾ ಜಲಾಶಯದಲ್ಲಿ ಉತ್ತಮ ನೀರು ಸಂಗ್ರಹವೂ ಇದೆ. ಕಳೆದ ಮಳೆಗಾಲದಲ್ಲೂ ಉತ್ತಮ ಮಳೆಯಾಗಿರುವುದರಿಂದ ಕೊಳವೆ ಭಾವಿಗಳು ಕೂಡ ಉತ್ತಮ ಅಂತರ್ಜಲದಿಂದ ನೀರು ಪಡೆಯುವ ನಿರೀಕ್ಷೆ ಕೂಡ ರೈತರಲ್ಲಿದೆ.ಹಾನಗಲ್ಲ ತಾಲೂಕಿನಲ್ಲಿ 49500 ಹೆಕ್ಟೇರ್ ಕೃಷಿ ಭೂಮಿ ಇದೆ. ಮುಂಗಾರು ಹಂಗಾಮಿನಲ್ಲಿ 14000 ಹೆಕ್ಟೇರ್ ಕೃಷಿ ಭೂಮಿಯಲ್ಲಿ ಭತ್ತ ಬೆಳೆಯಲಾಗುತ್ತದೆ. ಇದರೊಂದಿಗೆ ಇತ್ತೀಚಿನ ವರ್ಷಗಳಿಂದ 24 ಸಾವಿರ ಹೆಕ್ಟೇರ್ ಗೋವಿನಜೋಳ ಬೆಳೆಯುವ ಮೂಲಕ ಭತ್ತದ ದಾಖಲೆಯನ್ನು ಗೋವಿನಜೋಳ ಮುರಿದಿದೆ. ಆದರೆ ಬೇಸಿಗೆ ಹಂಗಾಮಿಗೆ ಧರ್ಮಾ, ವರದಾ ನದಿ ಪಾತ್ರಗಳಲ್ಲಿ ಈ ನದಿಗಳ ನೀರನ್ನು ಅವಲಂಬಿಸಿಯೇ ಅಂದಾಜು 1500 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ನಾಟಿ ಮಾಡಲಾಗುತ್ತದೆ.

ಉಳಿದಂತೆ ಕೊಳವೆ ಬಾವಿ ಅವಲಂಬಿಸಿ 600 ಹೆಕ್ಟೇರ್‌ನಷ್ಟು ಭತ್ತದ ನಾಟಿ ಮಾಡಲಾಗುತ್ತದೆ. ಈ ಬೇಸಿಗೆಯಲ್ಲಿ 2100ಕ್ಕೂ ಅಧಿಕ ಹೆಕ್ಟೇರ್‌ ಕೃಷಿ ಭೂಮಿಯಲ್ಲಿ ನಾಟಿ ಮಾಡುವ ನಿರೀಕ್ಷೆ ಇದೆ. ಮಳೆಗಾಲದ ಭತ್ತಕ್ಕಿಂತ ಬೇಸಿಗೆಯ ಭತ್ತ ಉತ್ತಮ ಇಳುವರಿ ಕೊಡುತ್ತದೆ ಎಂಬ ಅನುಭವ ಕೂಡ ರೈತರದ್ದಾಗಿದೆ. ಈ ನಡುವೆ ಮಳೆ ಅಭಾವದಿಂದ ಬಹುತೇಕ ರೈತರು ತೋಟಗಾರಿಕಾ ಬೆಳೆಗಳತ್ತ ಚಿತ್ತ ಬೆಳೆಸಿದ್ದರಿಂದ, ಅದರಲ್ಲೂ ಅಡಕೆ ಬೆಳೆಯನ್ನು ಹೆಚ್ಚು ಬೆಳೆಯಲು ಮುಂದಾಗಿದ್ದಾರೆ. ಈ ಎಲ್ಲ ಕಾರಣಕ್ಕಾಗಿ ಬೇಸಿಗೆ ಭತ್ತ ಬೆಳೆಯುವ ರೈತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಕೆ ಆಗಿತ್ತು. ಆದಾಗ್ಯೂ ಈ ಬಾರಿ ಭತ್ತ ನಾಟಿ ಕಾರ್ಯ ಚೇತರಿಸಿಕೊಂಡಿದೆ. ಹಲವು ದಶಕಗಳಿಂದ ಧರ್ಮಾ ಜಲಾಶಯ ಹಾನಗಲ್ಲ ತಾಲೂಕಿನ ಸಹಸ್ರಾರು ರೈತರ ಜೀವನಾಡಿಯಾಗಿದೆ. ಈಗ ಧರ್ಮಾ ಜಲಾಶಯದಲ್ಲಿ 26 ಅಡಿಗಳಿಗೂ ಅಧಿಕ ನೀರಿನ ಸಂಗ್ರಹವಿದೆ. ಜಲಾಶಯದಿಂದ ಧರ್ಮಾ ಕಾಲುವೆ ಆರಂಭವಾಗುವ ಶೃಂಗೇರಿ ಗ್ರಾಮದಿಂದ ಹಿರೂರು, ಗೆಜ್ಜಿಹಳ್ಳಿ, ಡೊಳ್ಳೇಶ್ವರ ಹಾಗೂ ಸುರಳೇಶ್ವರ ಗ್ರಾಮಗಳ ಅಚ್ಚುಕಟ್ಟು ಪ್ರದೇಶದ ರೈತರು ಮಾತ್ರ ಭತ್ತ ಬೆಳೆಯಲು ಸಾಧ್ಯವಾಗುತ್ತದೆ.

ಜಲಾಶಯದಿಂದ ಭತ್ತ ಬೆಳೆಯಲು ಮೂರು ಬಾರಿ ನೀರು ಹರಿಸಲು ಬೃಹತ್ ನೀರಾವರಿ ಇಲಾಖೆಯ ಅಧಿಕಾರಿಗಳು ಒಪ್ಪಿಗೆ ಸೂಚಿಸಿದ್ದಾರೆ. ಹೀಗಾಗಿ ಧರ್ಮಾ ಕಾಲುವೆಯಡಿಯ ಈ ಗ್ರಾಮಗಳ ಎಲ್ಲ ರೈತರೂ ತಮ್ಮ ಹೊಲಗಳಲ್ಲಿ ಭತ್ತದ ಸಸಿ ಮಡಿಗಳನ್ನು ಹಾಕಿಕೊಂಡು, ಈಗಾಗಲೇ ಹೊಲಗಳಲ್ಲಿ ನಾಟಿ ಕಾರ್ಯದ ಸಿದ್ಧತೆ ಭರದಿಂದ ನಡೆದಿದೆ. ಇನ್ನು ಬಾಳಂಬೀಡ ಹಾಗೂ ಹಿರೆಕಾಂಸಿ, ಬಸಾಪುರ ಏತ ನೀರಾವರಿ ಯೋಜನೆಗಳಿಂದ ತಾಲೂಕಿನ ಬಹುತೇಕ ಕೆರೆಗಳಲ್ಲಿ ನೀರು ತುಂಬಿರುವುದರಿಂದ ಅಂತರ್ಜಲದ ಮೇಲಿನ ವಿಶ್ವಾಸ ಹಾಗೂ ಕೆರೆಗಳ ನೀರನ್ನು ಬಳಸಿಕೊಳ್ಳಬಹುದೆಂಬ ನಿರೀಕ್ಷೆಯಲ್ಲಿ ಭತ್ತದ ನಾಟಿ ಗರಿಗೆದರಿದೆ.

ಉತ್ತಮ ಮಳೆ: ಹಾನಗಲ್ಲ ತಾಲೂಕಿನಲ್ಲಿ ಮಳೆ ಕೊರತೆಯಿಂದ ದ್ವಿದಳ ಧಾನ್ಯ ಬೆಳೆಯುವ ಸಂಪ್ರದಾಯವು ಕಡಿಮೆ ಆಗಿದೆ. ಆದರೆ ಎರಡು ವರ್ಷಗಳಿಂದ ಉತ್ತಮ ಮಳೆಯಾಗಿದೆ. ಇದರಿಂದ ಜಲಾಶಯ, ಕೆರೆಗಳು ತುಂಬಿರುವುದರಿಂದ ಈ ಬಾರಿ ನೀರಿನ ಲಭ್ಯತೆ ಅನುಸರಿಸಿ ಬೇಸಿಗೆ ಭತ್ತ ಬೆಳೆಯಲು ರೈತರು ಹೆಚ್ಚು ಪಾಲು ಮುಂದಾಗಿದ್ದಾರೆ ಎಂದು ಹಾನಗಲ್ಕೃಲ ಷಿ ನಿರ್ದೇಶಕ ಮಾರುತಿ ಅಂಗರಗಟ್ಟಿ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹರ ಜಾತ್ರೆಗೆ ರಾಜ್ಯದಿಂದ 25 ಸಾವಿರ ಭಕ್ತರು
ಕರ್ನಾಟಕದಲ್ಲಿ ಕನ್ನಡಿಗರಿಗೆ ಮೊದಲ ಆದ್ಯತೆ ಸಿಗಲಿ: ಸಮ್ಮೇಳನಾಧ್ಯಕ್ಷ ಸುರೇಶ್ ಸಂಸ್ಕೃತಿ