ರಾಣಿಬೆನ್ನೂರಿನಲ್ಲಿ ರತಿ-ಮನ್ಮಥರನ್ನು ನಗಿಸಿ ₹ 6 ಲಕ್ಷ ಗೆಲ್ಲಿ

KannadaprabhaNewsNetwork |  
Published : Mar 26, 2024, 01:16 AM IST
ಫೋಟೊ ಶೀರ್ಷಿಕೆ: 25ಆರ್‌ಎನ್‌ಆರ್2ರಾಣಿಬೆನ್ನೂರು ನಗರದ ದೊಡ್ಡಪೇಟೆ ರಾಮಲಿಂಗೇಶ್ವರ ದೇವಸ್ಥಾನದ ಬಳಿ ಹೋಳಿ ಹಬ್ಬದ ಮುನ್ನಾದಿನ ರಾತ್ರಿ ಕುಳ್ಳರಿಸುವ ಜೀವಂತ ರತಿ ಮನ್ಮಥರು. | Kannada Prabha

ಸಾರಾಂಶ

ಯಾಂತ್ರಿಕತೆ ಹಾಗೂ ಒತ್ತಡದ ಜೀವನಶೈಲಿಯಿಂದ ಬಳಲಿ ಬೆಂಡಾಗಿರುವ ಮನುಷ್ಯನಿಗೆ ನಗು ಚಿಂತೆಯನ್ನು ದೂರ ಮಾಡಿ ಶಾಂತಿ ನೆಮ್ಮದಿ ನೀಡುತ್ತದೆ. ಈ ನಿಟ್ಟಿನಲ್ಲಿ ಪ್ರತಿ ವರ್ಷ ಹಾವೇರಿ ಜಿಲ್ಲೆ ರಾಣಿಬೆನ್ನೂರು ನಗರದಲ್ಲಿ ಹೋಳಿ ಹಬ್ಬದ ಮುನ್ನಾದಿನ ಪ್ರತಿಷ್ಠಾಪಿಸಲಾಗುವ ಜೀವಂತ ರತಿ-ಮನ್ಮಥರ ನಗಿಸುವ ಕಾರ್ಯಕ್ರಮ ಬಹುವೈಶಿಷ್ಟ್ಯಪೂರ್ಣವಾಗಿದೆ. ಅದನ್ನು ಕಣ್ತುಂಬ ನೋಡಿದಾಗಲೇ ಅದರ ವೈಶಿಷ್ಟ್ಯತೆ ಅರಿವಿಗೆ ಬರುತ್ತದೆ.

ಬಸವರಾಜ ಸರೂರ

ಕನ್ನಡಪ್ರಭ ವಾರ್ತೆ ರಾಣಿಬೆನ್ನೂರು

ಯಾಂತ್ರಿಕತೆ ಹಾಗೂ ಒತ್ತಡದ ಜೀವನಶೈಲಿಯಿಂದ ಬಳಲಿ ಬೆಂಡಾಗಿರುವ ಮನುಷ್ಯನಿಗೆ ನಗು ಚಿಂತೆಯನ್ನು ದೂರ ಮಾಡಿ ಶಾಂತಿ ನೆಮ್ಮದಿ ನೀಡುತ್ತದೆ. ಈ ನಿಟ್ಟಿನಲ್ಲಿ ಪ್ರತಿ ವರ್ಷ ಹಾವೇರಿ ಜಿಲ್ಲೆ ರಾಣಿಬೆನ್ನೂರು ನಗರದಲ್ಲಿ ಹೋಳಿ ಹಬ್ಬದ ಮುನ್ನಾದಿನ ಪ್ರತಿಷ್ಠಾಪಿಸಲಾಗುವ ಜೀವಂತ ರತಿ-ಮನ್ಮಥರ ನಗಿಸುವ ಕಾರ್ಯಕ್ರಮ ಬಹುವೈಶಿಷ್ಟ್ಯಪೂರ್ಣವಾಗಿದೆ. ಅದನ್ನು ಕಣ್ತುಂಬ ನೋಡಿದಾಗಲೇ ಅದರ ವೈಶಿಷ್ಟ್ಯತೆ ಅರಿವಿಗೆ ಬರುತ್ತದೆ. ಈ ಬಾರಿ ಮಾ. 26ರಂದು ಸಂಜೆ 7.30ರಿಂದ ರಾತ್ರಿ 12ರ ವರೆಗೆ ನಗರದ ಶ್ರೀ ರಾಮಲಿಂಗೇಶ್ವರ ಸೇವಾ ಸಮಿತಿ, ಶ್ರೀ ಭೀಮಲಿಂಗೇಶ್ವರ ಸೇವಾ ಸಮಿತಿ, ಶ್ರೀ ಶಕ್ತಿ ಯುವಕ ಸಂಘ ಹಾಗೂ ಜೆಬಿಸಿಸಿ ಯುವಕ ಮಂಡಳಿ ವತಿಯಿಂದ ದೊಡ್ಡಪೇಟೆ ರಾಮಲಿಂಗೇಶ್ವರ ದೇವಸ್ಥಾನದ ಬಳಿ ಜೀವಂತ ರತಿ ಮನ್ಮಥರನ್ನು ಕುಳ್ಳರಿಸಲಾಗುತ್ತದೆ.

ವೈವಿಧ್ಯಮಯ ಮಾತುಗಳು:ರತಿ ಮನ್ಮಥರನ್ನು ನಗಿಸಲು ಜನರು ಮಾಡುವ ಕಸರತ್ತುಗಳು ವೈವಿಧ್ಯಮಯವಾಗಿರುತ್ತದೆ. ಆದರೆ ಅವರ ಪ್ರಯತ್ನ ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತಾಗುತ್ತದೆಯೇ ಹೊರತು ನಗಿಸಲು ಸಾಧ್ಯವಾಗುವುದಿಲ್ಲ. ಕಾಮಣ್ಣಾ ಸ್ವಲ್ಪ ನಕ್ಕರ ನಗಪಾ, ಯಾತಕ್ಕ್ ಚಿಂತಿ ಮಾಡತಿ? ಆರ್‌ಸಿಬಿ ಕಪ್ ಗೆಲ್ಲೋ ಚಿಂತಿ ಐತ್ಯೇನ್? ಈ ಸಲ ನಮ್ಮ ಹೆಣ್ಮಕ್ಕಳ್ ಕಪ್ ಗೆದ್ದಾರ! ಮುಂದಕ್ಕ್ ನಮ್ಮ ಹುಡುಗರು ಗೆಲ್ತಾರ ಬಿಡು! ಯವ್ವಾ ರತಿದೇವಿ ನೀನರ್ ಸ್ವಲ್ಪ ನಕ್ಕರ ನಗು, ಸುಮ್ನಾ ಯಾಕ್ ಗಂಟು ಮೋರೆ ಹಾಕ್ಕೊಂಡ ಕುಂದರಿತಿ?

ಎಂಬ ವೈವಿಧ್ಯಮಯ ಮಾತುಗಳು ಇಲ್ಲಿಗೆ ಆಗಮಿಸುವ ಜನರಿಂದ ಕೇಳಿ ಬರುತ್ತವೆ. ನಗೆಪಾಟಲಿಗೆ ಈಡಾಗುವ ಜನತೆ:ರತಿ ಕಾಮಣ್ಣರನ್ನು ನಗಿಸಲು ಉತ್ಸಾಹದಿಂದ ಇಲ್ಲಿಗೆ ಬರುವ ಜನ ತಾವೇ ನಗೆಪಾಟಲಿಗಿಡಾಗುವ ಪ್ರಸಂಗಗಳು ನೋಡುಗರಲ್ಲಿ ಮೋಜು ಉಂಟು ಮಾಡುತ್ತವೆ. ವಯಸ್ಸು ಹಾಗೂ ಲಿಂಗ ಬೇಧವಿಲ್ಲದೆ ಅನೇಕರು ವಿಚಿತ್ರ ಹಾವಭಾವ ಕೂಡ ಪ್ರದರ್ಶಿಸುತ್ತಾ ಹಾಸ್ಯ ಚಟಾಕಿಗಳನ್ನು ಹಾರಿಸುತ್ತಾ ಬಹುಮಾನ ಗೆಲ್ಲಲು ಪ್ರಯತ್ನ ಪಟ್ಟರೂ ಫಲಿತಾಂಶ ಮಾತ್ರ ಶೂನ್ಯ. ಕೆಲವರು ರಿಮಿಕ್ಸ್ ಮಾಡಿದ ಚಲನಚಿತ್ರ ಗೀತೆಗಳನ್ನು ಹಾಡುವ ಮೂಲಕ ನಗಿಸಲು ಪ್ರಯತ್ನಿಸಿದರೂ ಫಲಿತಾಂಶ ಮಾತ್ರ ಶೂನ್ಯ. ಏಕೆಂದರೆ ರತಿ ಮನ್ಮಥರು ಮಾತ್ರ ಇದಾವುದಕ್ಕೂ ತಲೆಕೆಡಿಸಿಕೊಳ್ಳದೆ ಪರಕಾಯ ಪ್ರವೇಶ ಮಾಡಿದಂತೆ ತಮ್ಮ ಪಾಡಿಗೆ ತಾವು ತದೇಕಚಿತ್ತದಿಂದ ಗಂಭೀರವದನರಾಗಿ ಕುಳಿತುಕೊಂಡಿರುತ್ತಾರೆ. ಜಾತ್ರೆಯ ಅನುಭವ:ಮಹಿಳೆಯರು ಸೇರಿದಂತೆ ಸಹಸ್ರಾರು ಸಂಖ್ಯೆಯಲ್ಲಿ ಜನರು ಜೀವಂತ ರತಿ ಮನ್ಮಥರನ್ನು ನೋಡಲು ಸೇರಿರುತ್ತಾರೆ. ವಿವಿಧ ಪ್ರದೇಶಗಳ ಯುವಕರು ಹಲಗೆ ಬಾರಿಸುತ್ತ ಇಲ್ಲಿಗೆ ಬಂದು ಹೋಗುವುದನ್ನು ಕಂಡರೆ ಇಲ್ಲಿ ಒಂದು ಜಾತ್ರೆ ನಡೆದಿದೆಯೇನೋ ಎಂದೆನೆಸುತ್ತದೆ. ಜನರನ್ನು ನಿಯಂತ್ರಿಸುವ ಸಲುವಾಗಿ ಬಿಗಿಯಾದ ಪೊಲೀಸ್ ಬಂದೋಬಸ್ತ್ ಮಾಡಲಾಗುತ್ತದೆ.ಹಾಗೆ ಉಳಿಯುತ್ತಿರುವ ಬಹುಮಾನ: ನಗಿಸಿದವರಿಗೆ ವಿವಿಧ ಸಂಘ ಸಂಸ್ಥೆಗಳು ಸುಮಾರು ಲಕ್ಷಕ್ಕೂ ಅಧಿಕ ನಗದು ಬಹುಮಾನ ನೀಡುವುದಾಗಿ ತಿಳಿಸಿದರೂ ಸಹ ಕಳೆದ 66 ವರ್ಷಗಳಿಂದ ಯಾರೊಬ್ಬರೂ ಜೀವಂತ ರತಿ ಕಾಮಣ್ಣರನ್ನು ನಗಿಸಿದ ಉದಾಹರಣೆಗಳಿಲ್ಲ. (ಈ ಬಾರಿ ಬಹುಮಾನದ ಮೊತ್ತ ಆರು ಲಕ್ಷ: ಅಜ್ಜಪ್ಪ ಜಂಬಗಿ ಎರಡು ಲಕ್ಷ, ಎ.ಬಿ.ಪಾಟೀಲ, ಮಹೇಶ ಕುದರಿಹಾಳ, ಅನಿಲ ಸಿದ್ದಾಳಿ ತಲಾ ಒಂದು ಲಕ್ಷ, ಕೊಟ್ರೇಶ ಕೆಂಚಪ್ಪನವರ ಮತ್ತು ಈಶ್ವರ ಚಿನ್ನಿಕಟ್ಟಿ ತಲಾ 50 ಸಾವಿರ ರು. ಒಟ್ಟು ಆರು ಲಕ್ಷ) ನಿಜಕ್ಕೂ ಇದೊಂದು ದಾಖಲೆಯಾಗಿ ಮುಂದುವರೆದಿದೆ. ಇದರ ಮರ್ಮವನ್ನು ಅರಿಯಲು ಸ್ಥಳೀಯ ಜನತೆ ಮಾತ್ರವಲ್ಲದೆ ರಾಜ್ಯದ ವಿವಿಧ ಮೂಲೆಗಳಿಂದ ಸಾಕಷ್ಟು ಜನ ಇಲ್ಲಿಗೆ ಆಗಮಿಸಿ ಬರಿಗೈಯಲ್ಲಿ ಹಿಂದಿರುಗುವಂತಾಗಿದೆ.

ಅಚ್ಚರಿಯ ಸಂಗತಿ: ಕಳೆದ 25 ವರ್ಷಗಳಿಂದ ಕಾಮನ ವೇಷವನ್ನು ಗದಿಗೆಪ್ಪ ರೊಡ್ಡನವರ ಹಾಗೂ 34 ವರ್ಷಗಳಿಂದ ರತಿ ವೇಷವನ್ನು ಕುಮಾರ ಹಡಪದ ಯಶಸ್ವಿಯಾಗಿ ನಿರ್ವಹಿಸುತ್ತಾ ಬಂದಿರುತ್ತಾರೆ. ಉಳಿದ ದಿನಗಳಲ್ಲಿ ಇವರಿಬ್ಬರೂ ಸಾಕಷ್ಟು ಹಾಸ್ಯಪ್ರಜ್ಞೆ ಹೊಂದಿದ್ದು ರತಿ ಮನ್ಮಥರಾದಾಗ ಪರಕಾಯ ಪ್ರವೇಶ ಮಾಡಿದಂತೆ ನಗೆಯ ಲವಲೇಶವೂ ತಮ್ಮ ಹತ್ತಿರ ಸುಳಿಯದಂತೆ ಕುಳಿತುಕೊಳ್ಳುವ ರೀತಿ ಸಾರ್ವಜನಿಕರಿಗೆ ಕುತೂಹಲದ ಜತೆಗೆ ಅಚ್ಚರಿ ಉಂಟು ಮಾಡುತ್ತದೆ. ನೀವೇಕೆ ಮಾ. 26ರಂದು ರಾಣಿಬೆನ್ನೂರಿಗೆ ಆಗಮಿಸಿ ರತಿ-ಮನ್ಮಥರನ್ನು ನಗಿಸಿ ಬಹುಮಾನ ನಿಮ್ಮದಾಗಿಸಿಕೊಳ್ಳಬಾರದು!

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೀರ್ಘಾವಧಿ ಸಿಎಂ ಸಂಭ್ರಮಕ್ಕೆ ಗೃಹಲಕ್ಷ್ಮಿ ಹಣ ನೀಡಿದ ಮಹಿಳೆ!
4 ಜಿಲ್ಲೆಗಳಲ್ಲಿ 13 ಸಾವಿರ ಕೇಸ್‌ ಬಾಕಿ : ಸಚಿವ ತರಾಟೆ