- ದಾವಣಗೆರೆಯಲ್ಲಿ ಕಾಂಗ್ರೆಸ್ ಗೆಲ್ಲಿಸುವುದೇ ನಮ್ಮೆಲ್ಲರ ಗುರಿ - - - ಕನ್ನಡಪ್ರಭ ವಾರ್ತೆ, ದಾವಣಗೆರೆ
ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಅವರನ್ನು ಭಾರಿ ಮತಗಳ ಅಂತರದಿಂದ ಗೆಲ್ಲಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಕೈ ಬಲಪಡಿಸುವಂತೆ ಮಾಜಿ ಸಚಿವ ಎಚ್.ಎಂ. ರೇವಣ್ಣ ಮತದಾರರಿಗೆ ಮನವಿ ಮಾಡಿದರು.ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಲಿದ್ದು, ಸಮಸ್ತ ಮತದಾರರು ಕಾಂಗ್ರೆಸ್ಸಿಗೆ ಮತ ನೀಡುವ ಮೂಲಕ ದಾವಣಗೆರೆಯಲ್ಲಿ ಮತ್ತೆ ನಮ್ಮ ಪಕ್ಷವನ್ನು ಗೆಲ್ಲಿಸಬೇಕು. ನುಡಿದಂತೆ ನಡೆಯುತ್ತಿರುವ ಸರ್ಕಾರ ನಮ್ಮದಾಗಿದೆ. ಇಂದಿರಾಗಾಂಧಿ, ದೇವರಾಜು ಅರಸು ಕಾಲದಿಂದಲೂ ಬಡವರ ಪರ ಕೆಲಸ ಮಾಡುತ್ತಾ ಬಂದ ಪಕ್ಷ ನಮ್ಮದು ಎಂದರು.
20 ಅಂಶ ಕಾರ್ಯಕ್ರಮ, ಭೂ ಸುಧಾರಣಾ ಕಾಯ್ದೆ, ವೃದ್ಧಾಪ್ಯ ವೇತನ, ವಿಕಲಚೇತನರಿಗೆ ಮಾಸಾಶನ, ಬಡವರಿಗೆ ಸೂರು, ನಿವೇಶನ, ಅನ್ನ ನೀಡುವ ಕೆಲಸ ಹೀಗೆ ಜನರಿಗೆ ಬದುಕನ್ನು ಕಟ್ಟಿಕೊಡುವ ಕೆಲಸ ಕಾಂಗ್ರೆಸ್ ಮಾಡಿದೆ. ರೈತರ ಕೃಷಿ ಪಂಪ್‌ಸೆಟ್‌ಗೆ 10 ಎಚ್‌ಪಿ ವಿದ್ಯುತ್ ಉಚಿತವಾಗಿ ನೀಡಿದ್ದು ಎಸ್.ಬಂಗಾರಪ್ಪ. ವೀರಪ್ಪ ಮೊಯ್ಲಿ ಸಿಎಂ ಆಗಿದ್ದಾಗ ಸಿಇಟಿ ಪರೀಕ್ಷೆ ಆರಂಭಿಸಿದ್ದು, ಇಡೀ ದೇಶಕ್ಕೆ ವಿಸ್ತರಣೆಯಾಯಿತು. ಎಸ್.ಎಂ.ಕೃಷ್ಣ ಅಧಿಕಾರಾವದಿಯಲ್ಲಿ ಐಟಿ ಬಿಟಿ ಮೂಲಕ ಕರ್ನಾಟಕವು ದೇಶ, ವಿದೇಶದಲ್ಲಿ ಗಮನ ಸೆಳೆಯುವಂತಹ ಸಾಧನೆ ಮಾಡಿತು. 2013ರಲ್ಲಿ ಸಿಎಂ ಆಗಿ ಅಧಿಕಾರ ವಹಿಸಿಕೊಂಡ ಸಿದ್ದರಾಮಯ್ಯ 165 ಭರವಸೆ ಪೈಕಿ 160 ಈಡೇರಿಸಿದ್ದಾರೆ ಎಂದರು.ದೇಶವ್ಯಾಪಿ ಇಂದು ಕಾಂಗ್ರೆಸ್ ಗ್ಯಾರಂಟಿ ಯೋಜನೆ ಭರವಸೆ ನೀಡಿದೆ. ಗ್ಯಾರಂಟಿ ಯೋಜನೆ ಬಗ್ಗೆ ಮೂಗು ಮುರಿಯುತ್ತಿದ್ದ ಬಿಜೆಪಿಯವರು ವಿಶೇಷವಾಗಿ ನರೇಂದ್ರ ಮೋದಿ ಸಹ ನಮ್ಮದೇ ಪಕ್ಷದ ಗ್ಯಾರಂಟಿ ತತ್ವವನ್ನೇ ಅನುಸರಿಸುವಷ್ಟರ ಮಟ್ಟಿಗೆ ನಮ್ಮ ಬದ್ಧತೆ ಗ್ಯಾರಂಟಿ ಜನಮನ್ನಣೆ ಗಳಿಸಿದೆ. ಸುಳ್ಳು ಹೇಳುವುದೇ ಬಿಜೆಪಿ ಕೆಲಸ. ಬೆಲೆ ಏರಿಕೆ ಕಡಿಮೆ ಮಾಡುತ್ತೇವೆಂದು ಹೇಳಿದ್ದರು, ಆಗಲಿಲ್ಲ. ರೈತವಿರೋಧಿ ಕೃತಿ ತಿದ್ದುಪಡಿ ಕಾಯ್ದೆಗಳ ತಂದರು. ಪ್ರತಿಭಟಿಸಿದ ರೈತರ ಮೇಲೆ ಗುಂಡು ಹೊಡೆದಿದ್ದು ಮೋದಿ ಸರ್ಕಾರ ಎಂದು ಆರೋಪಿಸಿದರು.
ಪಕ್ಷದ ಮುಖಂಡರಾದ ಮಾಜಿ ಶಾಸಕ ಎಸ್.ರಾಮಪ್ಪ, ಬಿಬಿಎಂಪಿ ಮಾಜಿ ಮೇಯರ್ ರಾಮಚಂದ್ರಪ್ಪ, ವೆಂಕಟೇಶ, ನಂದಿಗಾವಿ ಶ್ರೀನಿವಾಸ, ನಂಜಪ್ಪ, ವೆಂಕಟೇಶ, ಶ್ರೀನಿವಾಸ, ಎಸ್.ಎಸ್. ಗಿರೀಶ, ಮಂಜುನಾಥ ಕಂಬಳಿ ಇತರರು ಇದ್ದರು.- - - ಕೋಟ್ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ನಾವು ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ ಪರವಾಗಿ ಕೆಲಸ ಮಾಡುತ್ತೇವೆ. ಡಾ.ಪ್ರಭಾ ಮಲ್ಲಿಕಾರ್ಜುನ ಅವರನ್ನು ಗೆಲ್ಲಿಸಲು ನಮ್ಮ ಪ್ರಯತ್ನವಿದೆಯೇ ಹೊರತು, ನಮ್ಮ ಸಮುದಾಯದ ಅಭ್ಯರ್ಥಿ (ವಿನಯಕುಮಾರ) ಪರ ಕೆಲಸ ಮಾಡುವುದಿಲ್ಲ
- ಎಚ್.ಎಂ.ರೇವಣ್ಣ, ಮಾಜಿ ಸಚಿವ- - - -3ಕೆಡಿವಿಜಿ4:
ದಾವಣಗೆರೆಯಲ್ಲಿ ಕಾಂಗ್ರೆಸ್ಸಿನ ಮಾಜಿ ಸಚಿವ ಎಚ್.ಎಂ.ರೇವಣ್ಣ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.