ವಿಕಸಿತ ಭಾರತಕ್ಕಾಗಿ ಕಾಗೇರಿ ಗೆಲ್ಲಿಸಿ: ಸುನೀಲ ಹೆಗಡೆ

KannadaprabhaNewsNetwork | Published : May 3, 2024 1:07 AM

ಸಾರಾಂಶ

ಭ್ರಷ್ಟಾಚಾರ ಮತ್ತು ಕಳಂಕರಹಿತವಾದ ಆಡಳಿತವನ್ನು ನೀಡಿರುವ ಪ್ರಧಾನಿ ಮೋದಿಯವರನ್ನು ಮತ್ತೆ ಮೂರನೇಯ ಅವಧಿಗೆ ಪ್ರಧಾನಿಯನ್ನಾಗಿಸುವ ಅವಶ್ಯಕತೆಯು ದೇಶಕ್ಕಿದೆ ಎಂದು ಮಾಜಿ ಶಾಸಕ ಸುನೀಲ ಹೆಗಡೆ ತಿಳಿಸಿದರು.

ಹಳಿಯಾಳ: ವಿಕಸಿತ ಭಾರತಕ್ಕಾಗಿ ಹಾಗೂ ಕರ್ನಾಟಕದ ಸಮೃದ್ಧಿಗಾಗಿ ಉತ್ತರ ಕನ್ನಡ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಗೆಲ್ಲಿಸುವ ಮೂಲಕ ಮೋದಿ ಅವರಿಗೆ ಇನ್ನಷ್ಟು ಶಕ್ತಿಯನ್ನು ತುಂಬಬೇಕಿದೆ ಎಂದು ಮಾಜಿ ಶಾಸಕ ಸುನೀಲ ಹೆಗಡೆ ತಿಳಿಸಿದರು.

ಗುರುವಾರ ತಾಲೂಕಿನ ಕಾವಲವಾಡ ಮತ್ತು ಯಡೋಗಾ ಗ್ರಾಮದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಕೆನರಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಪರ ಮತಯಾಚಿಸಿದರು.ಕೇಂದ್ರದಲ್ಲಿ ಬಿಜೆಪಿ ಸರ್ಕಾರವು ಕಳೆದ ಹತ್ತು ವರ್ಷಗಳಲ್ಲಿ ದೇಶಕ್ಕೆ ಅತಿ ವೇಗದ ಅಭಿವೃದ್ಧಿಯನ್ನು ನೀಡಿದೆ. ಜಾಗತಿಕವಾಗಿ ಭಾರತದ ಘನತೆ, ಗೌರವವನ್ನು ಹೆಚ್ಚಿಸಿದೆ ಎಂದರು.

ಭ್ರಷ್ಟಾಚಾರ ಮತ್ತು ಕಳಂಕರಹಿತವಾದ ಆಡಳಿತವನ್ನು ನೀಡಿರುವ ಪ್ರಧಾನಿ ಮೋದಿಯವರನ್ನು ಮತ್ತೆ ಮೂರನೇಯ ಅವಧಿಗೆ ಪ್ರಧಾನಿಯನ್ನಾಗಿಸುವ ಅವಶ್ಯಕತೆಯು ದೇಶಕ್ಕಿದೆ. ಅದಕ್ಕಾಗಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕಾಗೇರಿಯವರನ್ನು ಬಹುಮತದಿಂದ ಗೆಲ್ಲಿಸೋಣ, ತನ್ಮೂಲಕ ವಿಕಸಿತ ಭಾರತ ಮತ್ತು ಸಮೃದ್ಧ ಕರ್ನಾಟಕ ನಿರ್ಮಾಣದ ಕಾಯಕದಲ್ಲಿ ಭಾಗಿಯಾಗೋಣ ಎಂದರು.

ಬಿಜೆಪಿ ಘಟಕ ಅಧ್ಯಕ್ಷ ವಿಠ್ಠಲ ಸಿದ್ದನ್ನವರ, ಜಿಲ್ಲಾ ಎಸ್‌ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಹನುಮಂತ ಚಿನಗಿನಕೊಪ್ಪ, ಪ್ರಮುಖರಾದ ತಾಪಂ ಮಾಜಿ ಉಪಾಧ್ಯಕ್ಷ ಪಾಂಡು ಪಾಟೀಲ, ಸಂಜಯ ಹಿರೇಕರ, ಸಹದೇವ ಮಿರಾಶಿ, ಸುಭಾಸ್ ಪಾಟೀಲ, ನಾಗೇಂದ್ರ ಕುರುಬುರ, ತಿಮ್ಮಣ್ಣ ವಡ್ಡರ, ಶಾನುರ ವಡ್ಡರ ಹಾಗೂ ಸ್ಥಳೀಯ ಗ್ರಾಮಸ್ಥರು, ಕಾರ್ಯಕರ್ತರು ಇದ್ದರು.ಉತ್ತರಕನ್ನಡಕ್ಕೆ ಕಾಂಗ್ರೆಸ್‌ ಕೊಡುಗೆ ಏನು?: ಸದಾನಂದ ಭಟ್‌

ಶಿರಸಿ: ನರೇಂದ್ರ ಮೋದಿ ಮೇಲೆ, ಕೇಂದ್ರ ಸರ್ಕಾರದ ಮೇಲೆ ವಿನಾಕಾರಣ ಆರೋಪ ಮಾಡುವ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಉತ್ತರ ಕನ್ನಡ ಜಿಲ್ಲೆಗೆ ರಾಜ್ಯ ಕಾಂಗ್ರೆಸ್ ಸರ್ಕಾರದ ಕೊಡುಗೆ ಏನು ಎಂಬುದನ್ನು ತಿಳಿಸಲಿ ಎಂದು ಬಿಜೆಪಿ ಜಿಲ್ಲಾ ವಕ್ತಾರ ಸದಾನಂದ ಭಟ್ ಆಗ್ರಹಿಸಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಬರಗಾಲ ಮತ್ತು ನೀರಿನ ಸಮಸ್ಯೆಗೆ ಜಿಲ್ಲೆಯ ಜನರಿಗೆ ಏನು ಪರಿಹಾರ ಕೊಟ್ಟಿದ್ದೀರಿ? ಬರಗಾಲದಿಂದ ಹಾನಿಗೊಳಗೊಂಡ ರೈತರಿಗೆ ಎಷ್ಟು ಬೆಳೆ ಪರಿಹಾರ ಕೊಟ್ಟಿದ್ದೀರಿ. ಈ ಹಿಂದೆ ರಾಜ್ಯ ಬಿಜೆಪಿ ಸರ್ಕಾರ ತನ್ನ ಬಜೆಟ್‌ನಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಘೋಷಣೆ ಮಾಡಿದ್ದ ಮುಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಪರಿಸರ ವಿಶ್ವವಿದ್ಯಾಲಯ ಸ್ಥಾಪನೆಯನ್ನು ಯಾಕೆ ಕೈ ಬಿಟ್ಟಿದ್ದೀರಿ. ಜಿಲ್ಲೆಯಲ್ಲಿ ಕಳೆದ ಒಂದು ವರ್ಷದ ಅವಧಿಯಲ್ಲಿ ಅಭಿವೃದ್ಧಿ ಕೆಲಸಗಳಿಗೆ ಎಷ್ಟು ಹೊಸ ಅನುದಾನವನ್ನು ನೀಡಿದ್ದೀರಿ. ಹಿಂದೂ ಅಮಾಯಕ ಕಾರ್ಯಕರ್ತರ ಮೇಲೆ ಅನವಶ್ಯಕವಾಗಿ ರಾಜಕೀಯ ಪ್ರೇರಿತವಾಗಿ ಪ್ರಕರಣಗಳನ್ನು ಏಕೆ ದಾಖಲಿಸುತ್ತಿದ್ದೀರಿ.ರೈತರಿಗೆ ನೀಡುತ್ತಿದ್ದ ಪ್ರೋತ್ಸಾಹಧನವನ್ನು ನಿಲ್ಲಿಸಿದ್ದು ಯಾಕೆ? ಜಿಲ್ಲೆಯ ಜ್ವಲಂತ ಸಮಸ್ಯೆಯಾದ ಅರಣ್ಯ ಅತಿಕ್ರಮಣದಾರರ ಹಿತರಕ್ಷಣೆಗಾಗಿ ಯಾವ ಕ್ರಮವನ್ನು ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದ್ದಾರೆ.

Share this article