ಮಂಡ್ಯ ಜಿಲ್ಲೆಯಲ್ಲಿ ಹಿಂಗಾರು ಚುರುಕು: ೨೭ ಮನೆಗಳು ಭಾಗಶಃ ಹಾನಿ

KannadaprabhaNewsNetwork | Published : Oct 25, 2024 12:59 AM

ಸಾರಾಂಶ

ಮಂಡ್ಯ ಜಿಲ್ಲೆಯ ನಾಗಮಂಗಲ, ಮಳವಳ್ಳಿ ತಾಲೂಕಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿರುವುದು ಕಂಡುಬಂದಿದೆ. ಮದ್ದೂರು ಹಾಗೂ ಶ್ರೀರಂಗಪಟ್ಟಣ ತಾಲೂಕಿನಲ್ಲಿ ವಾಡಿಕೆಯಷ್ಟು ಮಳೆಯಾಗಿದೆ. ಉಳಿದಂತೆ ಕೆ.ಆರ್.ಪೇಟೆ, ಪಾಂಡವಪುರ, ಮಂಡ್ಯ ತಾಲೂಕುಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿರುವುದು ಕಂಡುಬಂದಿದೆ.

ಎಚ್.ಕೆ.ಅಶ್ವಥ್ ಹಳುವಾಡಿ

ಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲೆಯಲ್ಲಿ ಹಿಂಗಾರು ಮಳೆ ಚುರುಕುಗೊಂಡಿದೆ. ಮಳೆಯಿಂದ ೨೭ ಮನೆಗಳಿಗೆ ಭಾಗಶಃ ಹಾನಿ ಉಂಟಾಗಿದ್ದರೆ, ಜಿಲ್ಲೆಯ ಬಹುತೇಕ ಕೆರೆಗಳು ನೀರಿನಿಂದ ಮೈದುಂಬಿಕೊಂಡಿವೆ. ಹಿಂಗಾರು ಮಳೆ ವಾಡಿಕೆಗಿಂತ ಶೇ.೧೪ರಷ್ಟು ಹೆಚ್ಚುವರಿ ಮಳೆಯಾಗುವುದರೊಂದಿಗೆ ರೈತರಲ್ಲಿ ಸಂತಸ ಮೂಡಿಸಿದೆ.

ಜಿಲ್ಲೆಯ ನಾಗಮಂಗಲ, ಮಳವಳ್ಳಿ ತಾಲೂಕಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿರುವುದು ಕಂಡುಬಂದಿದೆ. ಮದ್ದೂರು ಹಾಗೂ ಶ್ರೀರಂಗಪಟ್ಟಣ ತಾಲೂಕಿನಲ್ಲಿ ವಾಡಿಕೆಯಷ್ಟು ಮಳೆಯಾಗಿದೆ. ಉಳಿದಂತೆ ಕೆ.ಆರ್.ಪೇಟೆ, ಪಾಂಡವಪುರ, ಮಂಡ್ಯ ತಾಲೂಕುಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿರುವುದು ಕಂಡುಬಂದಿದೆ.

ಹಿಂಗಾರು ಮಳೆಯಿಂದಾಗಿ ಜಿಲ್ಲೆಯಲ್ಲಿ ೨೭ ಮನೆಗಳಿಗೆ ಭಾಗಶಃ ಹಾನಿ ಸಂಭವಿಸಿದೆ. ಮದ್ದೂರು ತಾಲೂಕಿನಲ್ಲಿ ೧, ಮಳವಳ್ಳಿ-೧, ಪಾಂಡವಪುರ -೫, ನಾಗಮಂಗಲ-೧೩, ಕೆ.ಆರ್.ಪೇಟೆ-೩ ಹಾಗೂ ಶ್ರೀರಂಗಪಟ್ಟಣ ತಾಲೂಕಿನಲ್ಲಿ ೪ ಮನೆಗಳಿಗೆ ಹಾನಿ ಉಂಟಾಗಿದೆ. ಇನ್ನೂ ಈ ಮನೆಗಳಿಗೆ ಜಿಲ್ಲಾಡಳಿತ ಯಾವುದೇ ಪರಿಹಾರವನ್ನು ನೀಡಿಲ್ಲದಿರುವುದು ಕಂಡುಬಂದಿದೆ.

ಜೂ.೧ರಿಂದ ಸೆಪ್ಟೆಂಬರ್ ೩೧ರವರೆಗೆ ಜಿಲ್ಲೆಯಲ್ಲಿ ಸುರಿದ ಮಳೆಯಿಂದ ೫ ಮನೆಗಳಿಗೆ ಪೂರ್ಣ ಹಾನಿ, ೬ ಮನೆಗಳಿಗೆ ಶೇ..೭೫ರಷ್ಟು, ೪೩ ಮನೆಗಳಿಗೆ ಶೇ..೫೦ರಷ್ಟು, ೧೧ ಮನೆಗಳಿಗೆ ಶೇ.೨೦ರಷ್ಟು ಸೇರಿ ೬೫ ಮನೆಗಳಿಗೆ ಹಾನಿಯಾಗಿತ್ತು. ಮಳೆಯಿಂದ ಪೂರ್ಣ ಹಾನಿಗೊಳಗಾದ ಮನೆಗಳಿಗೆ ೧.೨೦ ಲಕ್ಷ ರು., ಭಾಗಶಃ ಹಾನಿಗೆ ೫೦ ಸಾವಿರ ರು., ಅರ್ಧದಷ್ಟು ಹಾನಿಗೆ ೩೦ ಸಾವಿರ ರು., ಅಲ್ಪ ಹಾನಿಗೆ ೬೫೦೦ ರು.ನಂತೆ ಜಿಲ್ಲಾಡಳಿತ ವಿತರಿಸಿರುವುದಾಗಿ ವರದಿಯಾಗಿದೆ.

ಹಿಂಗಾರು ಮಳೆಯಿಂದ ಯಾವುದೇ ಮಾನವ, ಪ್ರಾಣಿಗಳ ಜೀವಕ್ಕೆ ಅಪಾಯವಾಗಿಲ್ಲ. ಜೊತೆಗೆ ಬೆಳೆಗಳಿಗೂ ಯಾವುದೇ ವಿಧವಾದ ಹಾನಿ ಉಂಟಾಗಿಲ್ಲ. ರಸ್ತೆಗಳು, ಸೇತುವೆ, ಸಂಪರ್ಕ ರಸ್ತೆ ಸೇರಿದಂತೆ ಇನ್ನಾವುದೇ ಮೂಲಸೌಲಭ್ಯಗಳಿಗೂ ಧಕ್ಕೆಯಾಗಿಲ್ಲ ಎಂದು ತಿಳಿದುಬಂದಿದೆ.

ಹಿಂಗಾರು ಮಳೆಯಿಂದ ಜಿಲ್ಲೆಯ ಬಹುತೇಕ ಕೆರೆಗಳು ಮೈದುಂಬಿಕೊಂಡಿವೆ. ಒಟ್ಟು ೯೬೯ ಕೆರೆಗಳ ಪೈಕಿ ೪೧೨ ಕೆರೆಗಳಲ್ಲಿ ಶೇ.೧೦೦ರಷ್ಟು, ೧೨೩ ಕೆರೆಗಳಲ್ಲಿ ಶೇ.೭೫, ೧೨೬ ಕೆರೆಗಳಲ್ಲಿ ಶೇ.೫೦, ೧೪೭ ಕೆರೆಗಳಲ್ಲಿ ಶೇ.೨೫ ಹಾಗೂ ೧೬೦ ಕೆರೆಗಳಲ್ಲಿ ಶೇ.೨೫ರಷ್ಟು ನೀರು ತುಂಬಿಕೊಂಡಿರುವುದು ಕಂಡುಬಂದಿದೆ. ಭಾರೀ ಮಳೆಯಾದರೆ ಕೆರೆಗಳು ಒಡೆದಿಲ್ಲ, ಏರಿಗಳಿಗೂ ಹಾನಿಯಾಗಿಲ್ಲ. ನೀರಾವರಿ ಹಾಗೂ ಮಳೆಯಾಶ್ರಿತ ಪ್ರದೇಶದ ಕೆರೆಗೂ ತುಂಬಿರುವುದು ರೈತರಿಗೆ ಆಶಾದಾಯಕವಾಗಿದೆ.

ಕೆಆರ್‌ಎಸ್ ಜಲಾಶಯದಲ್ಲೂ ಪೂರ್ಣ ಪ್ರಮಾಣದ ನೀರಿದ್ದು, ೮೬೪೭ ಕ್ಯುಸೆಕ್ ಒಳಹರಿವಿದ್ದರೆ, ೭೩೧೯ ಕ್ಯುಸೆಕ್ ನೀರನ್ನು ನದಿಗೆ ಹರಿಯಬಿಡಲಾಗಿದ್ದರೆ, ನಾಲೆಗಳಿಗೆ ೧೦೬೮ ಕ್ಯುಸೆಕ್ ನೀರನ್ನು ಹರಿಸಲಾಗುತ್ತಿದೆ.

ತಾಲೂಕುವಾರು ಮಳೆಯ ವಿವರ (ಮಿಲಿ ಮೀಟರ್‌ಗಳಲ್ಲಿ)

(೧.೧೦.೨೦೨೪ರಿಂದ ಈ ದಿನದವರೆಗೆ)

ತಾಲೂಕುವಾಡಿಕೆವಾಸ್ತವಕೊರತೆ/ಹೆಚ್ಚು

ಕೆ.ಆರ್.ಪೇಟೆ೧೧೬.೫೯೩.೪-೨೦

ಮದ್ದೂರು ೧೧೧.೭೧೧೧.೧-೧

ಮಳವಳ್ಳಿ ೯೪.೬೧೬೨.೦೭೧

ಮಂಡ್ಯ೯೭.೧೮೮.೪-೯

ನಾಗಮಂಗಲ೧೦೭.೨೧೨೫.೪೪೨

ಪಾಂಡವಪುರ೧೦೬.೬೭೦.೦-೩೪

ಶ್ರೀರಂಗಪಟ್ಟಣ೮೮.೦೮೮.೦೦

ಕೆಆರ್ ಎಸ್ ನೀರಿನ ಮಟ್ಟ

ಗರಿಷ್ಠ ಮಟ್ಟ - 124.80 ಅಡಿ

ಇಂದಿನ ಮಟ್ಟ – 124.80 ಅಡಿ

ಒಳ ಹರಿವು – 17,299 ಕ್ಯುಸೆಕ್

ಹೊರ ಹರಿವು – 17,039 ಕ್ಯುಸೆಕ್

ನೀರಿನ ಸಂಗ್ರಹ – 49.452 ಟಿಎಂಸಿ

Share this article