ಮೂಡುಬಿದಿರೆ: ತಾಲೂಕಿನ ವಿವಿಧೆಡೆ ಮಳೆಯ ಆರ್ಭಟ ಮುಂದುವರಿದಿದ್ದು, ಅಪಾರ ಹಾನಿಯಾಗಿದೆ. ನೆಲ್ಲಿಕಾರಿನ ಬೋರುಗುಡ್ಡೆ ಜನತಾ ಕಾಲನಿಯಲ್ಲಿ ಮನೆ ಕುಸಿದು ಬಿದ್ದು ಮಹಿಳೆ ಮೃತಪಟ್ಟಿದ್ದಾರೆ. ತಾಕೋಡೆ ಹನ್ನೆರಡು ಕವಲಿನಲ್ಲಿ ಜಲ ವಿದ್ಯುತ್ ಕಿರುಘಟಕ ಮುಳುಗಡೆಯಾಗಿ ಅಪಾರ ನಷ್ಟವಾಗಿದೆ.
ಗುಂಪಲದಲ್ಲಿ ಮಾಂಟ್ರಾಡಿ ನೆಲ್ಲಿಕಾರನ್ನು ಸಂಪರ್ಕಿಸುವ ರಸ್ತೆಯ ಮೋರಿ ಕುಸಿದು ಸಂಚಾರ ಸ್ಥಗಿತಗೊಂಡಿದೆ. ಮಾರೂರು- ಹೊಸಂಗಡಿಗಡಿ ಪ್ರದೇಶದ ಹೊಸಂಗಡಿ ಸೇತುವೆ ಬಳಿ ತಗ್ಗು ಪ್ರದೇಶದಲ್ಲಿರುವ ಸುಮಾರು ೨೦ ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿವೆ .ದರೆಗುಡ್ಡೆ ಗ್ರಾಪಂ ವ್ಯಾಪ್ತಿಯ ವಿವಿಧ ಕಡೆಗಳಲ್ಲಿ ಮಳೆಗೆ ಹಾನಿಯಾಗಿದ್ದು ಸೇತುವೆ, ರಸ್ತೆ ಕುಸಿತ, ೧೦ ಎಕರೆಯಷ್ಟು ಗದ್ದೆಗೆ ಮಣ್ಣು ಸೇರಿಕೊಂಡು ಅಪಾರ ನಷ್ಟಉಂಟಾಗಿದೆ.
ಜಲ ವಿದ್ಯುತ್‌ಘಟಕ ಮುಳುಗಡೆ: ಬೆಳ್ತಂಗಡಿ ತಾಲೂಕು ಅರಂಬೋಡಿ ಗ್ರಾಮಗಡಿ ಪ್ರದೇಶದಲ್ಲಿರುವ ಮೂಡುಬಿದಿರೆ ತಾಲೂಕು ವ್ಯಾಪ್ತಿಯ ತಾಕೊಡೆ ಹನ್ನೆರಡು ಕವಲುವಿನಲ್ಲಿ ಹರಿಯುವ ಫಲ್ಗುಣಿ ನದಿಗೆ ಅಡ್ಡವಾಗಿ ನಿರ್ಮಿಸಿರುವ ಜಲ ವಿದ್ಯುತ್ ಕಿರುಉತ್ಸಾದನಾ ಘಟಕದ ತಡೆ ಗೇಟುಗಳು ತೆರೆದಿದ್ದರೂ ನೀರಿನ ರಭಸಕ್ಕೆ ಎಲ್ಲವೂ ಧ್ವಂಸವಾಗಿವೆ. ಸಂಪೂರ್ಣ ಮುಳುಗಡೆಯಾಗಿ ಕೋಟ್ಯಂತರ ರು. ನಷ್ಟವಾಗಿದೆ. ಮನೆಗಳು ಸ್ಥಳಾಂತರ: ಮುನ್ನೆಚ್ಚರಿಕೆ ಕ್ರಮವಾಗಿ ಕೋಟೆಬಾಗಿಲು ಹಾಗೂ ಉಳಿಯಾದಲ್ಲಿ ತಲಾ ೩ ಮನೆಗಳು, ಹೊಸಂಗಡಿಯಲ್ಲಿ ೨೫ ಹಾಗೂ ಕಲ್ಲಬೆಟ್ಟುನಲ್ಲಿ ೧ ಮನೆ ಸ್ಥಳಾಂತರಕ್ಕೆ ಪುರಸಭೆ ಮುಖ್ಯಾಧಿಕಾರಿ ಇಂದು ಸೂಚನೆ ನೀಡಿದ್ದಾರೆ.ನೆಲ್ಲಿಕಾರಿನ ಡೆಂಜಾರು ಎಂಬಲ್ಲಿ ಪ್ರಕಾಶ್ ಮಳೆ ನೀರು ಕೊಟ್ಟಿಗೆಗೆ ನುಗ್ಗಿ ಐದು ಹಸುಗಳು ನೀರಿನಲ್ಲಿ ಕೊಚ್ಚಿಹೋಗಿದ್ದವು. ಈ ಪೈಕಿ ಎರಡು ಹಸುಗಳು ನೆರೆಯಿಂದ ಮೆಲೆ ಬಂದು ಬಚಾವಾಗಿವೆ. ಒಂದು ಹಸುವಿನ ಶವ ಪತ್ತೆಯಾಗಿದ್ದು, ಇನ್ನೆರಡು ಹಸುಗಳು ಕಾಣೆಯಾಗಿವೆ.ಮಳೆ ಹಾನಿಗೀಡಾದ ಪ್ರದೇಶಗಳಿಗೆ ಶಾಸಕ ಉಮನಾಥ ಕೋಟ್ಯಾನ್ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬೋರುಗುಡ್ಡೆಯಲ್ಲಿ ಮನೆ ಕುಸಿದು ಮೃತಪಟ್ಟ ಗೋಪಿ ಮನೆಗೆ ಭೇಟಿ ನೀಡಿ ಸ್ಥಳೀಯರಿಂದ ಮಾಹಿತಿ ಪಡೆದುಕೊಂಡರು. ಸರ್ಕಾರದ ಪ್ರಕೃತಿ ವಿಕೋಪ ನಿಧಿಯಿಂದ ೫ ಲಕ್ಷ ಪರಿಹಾರ ಹಾಗೂ ಮನೆ ನವೀಕರಣಕ್ಕೆ ೧.೨೦ ಲಕ್ಷ ಒದಗಿಸುವಂತೆ ತಹಸೀಲ್ದಾರ್‌ಗೆ ಸೂಚಿಸಿದರು.ಕಾರ್ಕಳ- ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿಯಅಲಂಗಾರು ಬಡಗುಬಸದಿ ಬಳಿ ಕಿರು ಸೇತುವೆ ಕುಸಿತವಾಗಿದ್ದು ರಾಷ್ಟ್ರೀಯ ಹೆದ್ದಾರಿಯ ಸೇತುವೆಗೂ ಹಾನಿಯಾಗಿದ್ದು ಪುನರ್ ನಿರ್ಮಿಸಲು ಯೋಜನೆ ರೂಪಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.ಉದ್ಯಮಿಗಳಾದ ಮಹೇಂದ್ರ ವರ್ಮ, ಅಬುಲ್ ಅಲಾ, ಡೆನ್ನಿಸ್ ಪಿರೇರಾ, ರೊನಾಲ್ಡ್ ಫೆರ್ನಾಂಡಿಸ್ ಮತ್ತಿತರರು ಈ ಭಾಗದಲ್ಲಿ ವಸತಿ ಸಮುಚ್ಛಯಗಳು ಮತ್ತು ಕಾಲೋನಿ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಶಾಸಕರ ಗಮನ ಸೆಳೆದರು.
ಪಣಪಿಲ- ಬೋರುಗುಡ್ಡೆ ಸಂಪರ್ಕರಸ್ತೆಯ ಬಿರ್ಮರಬೈಲು ಎಂಬಲ್ಲಿ ಕುಸಿದ ಸೇತುವೆಯನ್ನು ಪರಿಶೀಲಿಸಿ ಹೊಸ ಸೇತುವೆ ನಿರ್ಮಿಸಲುಯೋಜನೆರೂಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಪುರಸಭೆ ಎಂಜಿನಿಯರ್ ಇಂದು ಎಂ., ತಹಸೀಲ್ದಾರ್ ಪ್ರದೀಪ್‌ಕುರ್ಡೇಕರ್, ನೆಲ್ಲಿಕಾರು ಪಂಚಾಯಿತಿ ಅಧ್ಯಕ್ಷ ಉದಯ ಪೂಜಾರಿ, ಮಾಜಿ ಅಧ್ಯಕ್ಷ ಜಯಂತ ಹೆಗ್ಡೆ, ದರೆಗುಡ್ಡೆ ಪಂಚಾಯಿತಿ ಅಧ್ಯಕ್ಷ ಅಶೋಕ ಶೆಟ್ಟಿ, ಬಿಜೆಪಿ ಮಂಡಲ ಅಧ್ಯಕ್ಷ ರಂಜಿತ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.